ಫೆ.12ರಿಂದ ಮೈಸೂರಿನಲ್ಲಿ ಗೆಡ್ಡೆ- ಗೆಣಸು ಮೇಳಕ್ಕೆ ಚಾಲನೆ
ಮೈಸೂರು, ಫೆಬ್ರವರಿ 12: ಮೈಸೂರು ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಶನಿವಾರ ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ ಹಾಗೂ ರೋಟರಿ ಕ್ಲಬ್ ಆಫ್ ಮೈಸೂರು ಪಶ್ಚಿಮ ಆಶ್ರಯದಲ್ಲಿ ಆಯೋಜಿಸಿದ್ದ 'ಗೆಡ್ಡೆ-ಗೆಣಸು' ಮೇಳಕ್ಕೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಚಾಲನೆ ನೀಡಿದರು.
ಎರಡು ದಿನದ ಈ ಮೇಳವು ಶನಿವಾರ ಬೆಳಗ್ಗೆ 10.30ರಿಂದ ಸಂಜೆ 7 ಗಂಟೆವರೆಗೆ ನಡೆಯಲಿದೆ. ಈ ಬಾರಿ 120ಕ್ಕೂ ಹೆಚ್ಚು ವಿವಿಧ ಬಗೆಯ ಗೆಡ್ಡೆ-ಗೆಣಸುಗಳನ್ನು ಸಾರ್ವಜನಿಕರು ಸವಿಯಬಹುದಾಗಿದೆ. ವಿವಿಧ ಬಗೆಯ ಕಾಡು ಮತ್ತು ನಾಡಿನ ಗೆಡ್ಡೆ-ಗೆಣಸುಗಳು, ಮೌಲ್ಯವರ್ಧಿತ ಪದಾರ್ಥಗಳು, ಗೆಣಸಿನ ಅಡುಗೆ ಪ್ರದರ್ಶನ ಮತ್ತು ಮಾರಾಟ ಇದೆ.
ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆ
''ಫೆ.13ರ ಬೆಳಗ್ಗೆ 11.30ಕ್ಕೆ ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆ'ಯನ್ನು ಏರ್ಪಡಿಸಲಾಗಿದೆ. ಅಪರೂಪದ ಅಡುಗೆ ತಯಾರಿಸಿದವರಿಗೆ ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಲಾಗುವುದು. ಫಾಸ್ಟ್ ಫುಡ್ ಸಂಸ್ಕೃತಿಗೆ ಮಾರು ಹೋಗುತ್ತಿರುವ ಇಂದಿನ ಪೀಳಿಗೆಗೆ ಗೆಡ್ಡೆ ಗೆಣಸಿನ ಅಡುಗೆಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಸ್ಪರ್ಧೆ ಹಾಗೂ ಮೇಳ ಆಯೋಜಿಸಲಾಗಿದೆ,'' ಎಂದು ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ಜಿ. ಕೃಷ್ಣಪ್ರಸಾದ್ ತಿಳಿಸಿದ್ದಾರೆ.

25ಕ್ಕೂ ಹೆಚ್ಚು ಮಳಿಗೆ
ಕರ್ನಾಟಕದ ವಿವಿಧ ಭಾಗಗಳಿಂದ ಬರುವ 25ಕ್ಕೂ ಹೆಚ್ಚಿನ ಮಳಿಗೆಗಳು ಗೆಡ್ಡೆ- ಗೆಣಸಿನ ಮೌಲ್ಯವರ್ಧಿತ ಪದಾರ್ಥ ಮತ್ತು ಬಗೆ ಬಗೆಯ ಅಡುಗೆಗಳನ್ನು ಕಾಣಬಹುದು. ಪರ್ಪಲ್ ಯಾಮ್, ಮಾವಿನ ಶುಂಠಿ, ಕೂವೆ ಗೆಡ್ಡೆ, ಉತ್ತರಿ ಗೆಡ್ಡೆ, ಬೆಳೆ ಸಿಹಿ ಗೆಣಸು, ಬಳ್ಳಿ ಬಟಾಟೆ, ಕಪ್ಪು ಅರಿಶಿಣ, ಕಪ್ಪು ಶುಂಠಿ, ಕಾಡು ಗೆಣಸು, ಮುಳ್ಳು ಗೆಣಸು, ಸುವರ್ಣ ಗಡೆ, ಬಗೆ ಬಗೆಯ ಕೆಸುವಿನ ಬೀಜದ ಗೆಡ್ಡೆಗಳು ಬಿತ್ತನೆಗೆ ದೊರೆಯಲಿವೆ. ಕಪ್ಪು ಕ್ಯಾರೆಟ್, ದೇಸಿ ತರಕಾರಿ ಬೀಜಗಳು, ಸೋರೆ ಕಲಾಕೃತಿ ಮಾರಾಟ ಇರಲಿದ್ದು, ಜೇನು ಕುರುಬ ಸಮುದಾಯದ ಯುವಕರು ಕಾಡು ಗೆಣಸಿನ ಜೊತೆ ಸವಿಯಲು ಜೇನು ತಂದಿದ್ದಾರೆ.

Recommended Video
ಪುತ್ತೂರು, ಶಿರಸಿ, ಜೊಯಿಡಾ, ಮೈಸೂರು, ಪಿರಿಯಾಪಟ್ಟಣ, ಎಚ್.ಡಿ. ಕೋಟೆ, ಕುಂದಗೋಳ ಹಾಗೂ ಶಿಗ್ಗಾವಿ ತಾಲ್ಲೂಕಿನ ರೈತರ ಗುಂಪುಗಳು ಬಗೆ ಬಗೆಯ ಗೆಡ್ಡೆ ಗೆಣಸುಗಳನ್ನು ಪ್ರದರ್ಶನಕ್ಕೆ ತಂದಿವೆ. ವಿವಿಧ ಪ್ರಭೇದಕ್ಕೆ ಸೇರಿರುವ, ವೈವಿಧ್ಯಮಯ ಗಾತ್ರ ಹಾಗೂ ಆಕಾರದ ಗೆಡ್ಡೆ ಗೆಣಸುಗಳು ಮೇಳದಲ್ಲಿ ಗಮನ ಸೆಳೆಯುತ್ತಿವೆ. ಬುಡಕಟ್ಟು ಸಮುದಾಯಗಳು ಸಂರಕ್ಷಿಸಿಕೊಂಡು ಬಂದಿರುವ ಬೃಹತ್ ಗೆಡ್ಡೆ ಗೆಣಸುಗಳು ಮೇಳದ ಮುಖ್ಯ ಆಕರ್ಷಣೆಯಾಗಿವೆ. ಪರ್ಪಲ್ ಯಾಮ್ನಿಂದ ತಯಾರಿಸಿದ ಐಸ್ಕ್ರೀಮ್, ಬಗೆಬಗೆಯ ಗೆಣಸುಗಳ ತಿಂಡಿತಿನಿಸುಗಳು ಇಲ್ಲಿವೆ.











Click it and Unblock the Notifications