Drakshi Mela: ಇಂದಿನಿಂದ ದ್ರಾಕ್ಷಿ ಮೇಳ: ದ್ರಾಕ್ಷಿ, ಕಲ್ಲಂಗಡಿ ಹಣ್ಣಿನ ರುಚಿಯುಣಿಸಲು ಮುಂದಾದ ಹಾಪ್‌ಕಾಮ್ಸ್
ಬೆಂಗಳೂರು ಫೆಬ್ರವರಿ 19: ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣಿನ ರುಚಿಯುಣಿಸಲು ಹಾಪ್‌ಕಾಮ್ಸ್ ಇಂದಿನಿಂದ (ಫೆಬ್ರವರಿ 19) ಬೃಹತ್ ಮಟ್ಟದ ದ್ರಾಕ್ಷಿ ಮೇಳ ಆಯೋಜಿಸಿದೆ.
ರಾಜ್ಯದ ನಾನಾ ಭಾಗಗಳಲ್ಲಿ ಬೆಳೆದಿರುವ ದ್ರಾಕ್ಷಿ ಹಾಗೂ ಕಲ್ಲಂಗಡಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಬೇಸರಿ ಶುರುವಾಗುತ್ತಿದ್ದಂತೆ ಇದರ ಬೇಡಿಕೆ ಕೂಡ ಅಧಿಕವಾಗುತ್ತದೆ. ಹೀಗಾಗಿ ಹಾಪ್‌ಕಾಮ್ ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ಹಣ್ಣುಗಳನ್ನು ಒದಗಿಸಲು ಮುಂದಾಗಿದೆ. ಥಾಮ್ಸನ್ ಸೀಡ್‌ಲೆಸ್, ಶರದ್, ಕೃಷ್ಣ ಶರದ್, ಗ್ಲೋಬ್, ಸೋನಿಕಾ ಹೀಗೆ ಬೆಗ ಬಗೆಯ ರುಚಿಕರವಾದ ದ್ರಾಕ್ಷಿ ಹಣ್ಣು ಹಾಗೂ ಕಲ್ಲಂಗಡಿ ಹಣ್ಣುಗಳು ನಗರವನ್ನು ಪ್ರವೇಶಿಸಿವೆ.

ರಾಜ್ಯದ ಹಲವೆಡೆ ಈ ಬಾರಿ ನಿರೀಕ್ಷೆಯಂತೆ ಮಳೆಯಾಗಿಲ್ಲ. ಆದರೆ ಅಧಿಕ ಚಳಿ ವಾತಾವರಣವಿತ್ತು. ಅದಾಗ್ಯೂ ದ್ರಾಕ್ಷಿ ಬೆಳೆಗೆ ಯಾವುದೇ ಹಾನಿಯಾಗಿಲ್ಲ. ಹೀಗಾಗಿ ದ್ರಾಕ್ಷಿ ಹಾಗೂ ಕಲ್ಲಂಗಡಿ ಬೆಳೆ ಉತ್ತಮವಾಗಿ ಬಂದಿದೆ. ಬೆಳೆಗಾರರೂ ಅಧಿಕ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಹಾಪ್‌ಕಾಮ್ಸ್ ಇಂದಿನಿಂದ (ಫೆಬ್ರವರಿ 19) ಬೃಹತ್ ಮಟ್ಟದ ದ್ರಾಕ್ಷಿ ಮೇಳ ಆಯೋಜಿಸಿದೆ.
ಚಳಿಗಾಲದಲ್ಲಿ ದ್ರಾಕ್ಷಿ ಬೆಳೆ ಬೆಳೆಯಲು ಕೆಲ ಸಮಸ್ಯೆಗಳು ಎದುರಾಗುತ್ತವೆ. ಅಧಿಕ ಚಳಿ ಹಾಗೂ ಮಂಜು ಬಿದ್ದರೆ ದ್ರಾಕ್ಷಿ ಹಣ್ಣು ಹಾಳಾಗುವ ಸಾಧ್ಯತೆಗಳು ಹೆಚ್ಚು. ಆದರೀಬಾರಿ ಅಧಿಕ ಚಳಿ ಇದ್ದರೂ ಮಂಜು ಇಬ್ಬನಿ ದ್ರಾಕ್ಷಿ ಬೆಳೆಗೆ ತೊಂದರೆಯನ್ನುಂಟು ಮಾಡಿಲ್ಲ.ಹೀಗಾಗಿ ಬೆಳೆಗೆ ರೋಗ ಬಾಧಿಸಿಲ್ಲ. ಹಣ್ಣಿನ ಗುಣಮಟ್ಟವೂ ಉತ್ತಮವಾಗಿದೆ. ಬೆಳೆಯೂ ಚೆನ್ನಾಗಿ ಬಂದಿದೆ.

ಈ ಬಗ್ಗೆ ಮಾತನಾಡಿದ ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮಿರ್ಜಿ ಉಮೇಶ್ ಶಂಕರ್, ಹಣ್ಣಿನ ಸವಿ ಉಣಿಸಲು ಹಾಪ್‌ಕಾಮ್ಸ್‌ನಲ್ಲಿ ಫೆ 19ರಂದು ಅಂದರೆ ಇಂದಿಂದ ದ್ರಾಕ್ಷಿ ಮತ್ತು ಕಲ್ಲಂಗಡಿ ಮೇಳವನ್ನು ಆಯೋಜಿಸಿದ್ದು, ಶೇ.5ರಿಂದ ಶೇ.10 ರವಗೆ ಗ್ರಾಹಕರಿಗೆ ರಿಯಾಯಿತಿ ನೀಡಲಾಗುತ್ತಿದೆ ಎಂದು ಹೇಳಿದರು.
''ಫೆಬ್ರವರಿ 19ರಂದು ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರು ಹಡ್ಸನ್ ವೃತ್ತದಲ್ಲಿರುವ ಹಾಪ್‌ಕಾಮ್ಸ್ ಕಚೇರಿ ಆವರಣದಲ್ಲಿ ಮೇಳ ಉದ್ಘಾಟಿಸಲಿದ್ದಾರೆ. ಬಳಿಕ ಹಾಪ್‌ಕಾಮ್ಸ್‌ನ ಎಲ್ಲಾ ಮಳಿಗೆಗಳಲ್ಲಿನ ಒಂದು ವಾರ ಕಾಲ ರಿಯಾಯಿತಿ ದರದಲ್ಲಿ ಹಣ್ಣುಗಳನ್ನು ಮಾರಾಟ ಮಾಡಲಾಗುವುದು. ಹಣ್ಣುಗಳ ಋತುಮಾನ ಮುಗಿಯುವವರೆಗೂ ಮಾರಾಟ ಮುಂದುವರೆಯುತ್ತದೆ'' ಎಂದು ತಿಳಿಸಿದರು.

''ಕರ್ನಾಟಕದಲ್ಲಿ ವಿಜಯಪುರ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೊಪ್ಪಳ ಮತ್ತಿತರ ಜಿಲ್ಲೆಗಳಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಇದೀಗ ಕೆಲವು ಭಾಗಗಳಿಂದ ಹಣ್ಣು ಬರುತ್ತಿದೆ. ಹಾಪ್‌ಕಾಮ್ಸ್ ವತಿಯಿಂದ ಐದು ನೂರು ಟನ್ ದ್ರಾಕ್ಷಿ ಮಾರಾಟ ಮಾಡಲಾಗುವುದು. 900 ಸಾವಿರ ಟನ್fನಷ್ಟು ಕಲ್ಲಂಗಡಿ ಮಾರುವ ಉದ್ದೇಶ ಹೊಂದಲಾಗಿದೆ. ಮಧ್ಯವರ್ತಿಗಳ ಹಾವಳಿಯಿಲ್ಲದೆ ರೈತರಿಂದ ನೇರವಾಗಿ ಗ್ರಾಹಕರಿಗೆ ಸಲುಪಿಸುವ ಕಾರ್ಯವನ್ನು ಹಾಪ್‌ಕಾಮ್ಸ್ ಮಾಡುತ್ತಿದೆ'' ಎಂದು ಹಾಪ್‌ಕಾಮ್ಸ್ ಅಧ್ಯಕ್ಷ ಎನ್.ದೇವರಾಜ್ ವಿವರಿಸಿದರು.
ಗುಣಮಟ್ಟದ ದ್ರಾಕ್ಷಿಯನ್ನು ಕೆ.ಜಿಗೆ 60 ರೂನಿಂದ 80ವರೆಗೆ ಮಾರಲಾಗುತ್ತಿದೆ. ಸಾಮಾನ್ಯವಾಗಿ ಸೀಸನ್‌ನಲ್ಲಿ ಬರುವಂತಹ ಹಣ್ಣುಗಳನ್ನು ಹೆಚ್ಚಾಗಿ ತಿನ್ನಿ ಎಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ. ಈಗಂತೂ ದ್ರಾಕ್ಷಿ ಹಣ್ಣಿನ ಸೀಸನ್. ಹಾಗಾಗಿ ತಾಜಾ ಆಗಿರುವ ರುಚಿಕರ ದ್ರಾಕ್ಷಿ ಎಲ್ಲಿಯೂ ಸಿಗುತ್ತದೆ. ಸಾಕಷ್ಟು ಜನ ದ್ರಾಕ್ಷಿ ಇಷ್ಟಪಟ್ಟು ತಿನ್ನುತ್ತಾರೆ. ಅಲ್ಲದೇ ಇದನ್ನು ವೈನ್ ತಯಾರಿಕೆಯಲ್ಲಿಯೂ ಸಹ ಬಳಸಲಾಗುತ್ತದೆ. ಈ ಟೇಸ್ಟಿ ಮತ್ತು ಹೈಡ್ರೇಟಿಂಗ್ ಹಣ್ಣನ್ನು ಸಾವಿರಾರು ವರ್ಷಗಳಿಂದ ಬೆಳೆಯಲಾಗುತ್ತಿದ್ದು ಅವುಗಳಲ್ಲಿ ಹೆಚ್ಚಾಗಿ ಹಸಿರು, ಕೆಂಪು, ಕಪ್ಪು, ಹಳದಿ ಮತ್ತು ಗುಲಾಬಿ ಬಣ್ಣದ ದ್ರಾಕ್ಷಿಗಳನ್ನು ನೀವು ನೋಡಬಹುದಾಗಿದೆ. ಅಂದಹಾಗೆ ದ್ರಾಕ್ಷಿಯನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.












Click it and Unblock the Notifications