ನವೆಂಬರ್ ಅಂತ್ಯದವರೆಗೆ ಭದ್ರಾ ನಾಲೆಯಲ್ಲಿ ನೀರು ಸ್ಥಗಿತ ಮಾಡ್ಬೇಡಿ: ದಾವಣಗೆರೆ ರೈತರ ಆಗ್ರಹ
ದಾವಣಗೆರೆ, ನವೆಂಬರ್, 23: ಭದ್ರಾ ಜಲಾಶಯದಿಂದ ನವೆಂಬರ್ ಅಂತ್ಯದವರೆಗೆ ನಾಲೆಗಳಲ್ಲಿ ನೀರು ಹರಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಜಿಲ್ಲೆಯಲ್ಲಿ ರೈತರು ಸುಮಾರು 1.4 ಲಕ್ಷ ಎಕರೆಯಲ್ಲಿ ರೈತರು ಭತ್ತ ಬೆಳೆದಿದ್ದಾರೆ. ಈಗಾಗಲೇ ಶೇಕಡಾ 20ರಷ್ಟು ಕೊಯ್ಲಿಗೆ ಬಂದಿದ್ದು, ಕಟಾವು ಕಾರ್ಯ ಪ್ರಾರಂಭವಾಗಿದೆ. ಇನ್ನುಳಿದ ಶೇಕಡ 50ರಷ್ಟು ಭತ್ತದ ಬೆಳೆ ಇನ್ನು 8ರಿಂದ 10 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಆದರೆ ಇನ್ನುಳಿದ ಶೇಕಡಾ 30ರಷ್ಟು ಭತ್ತದ ಬೆಳೆ ಕಾಳು ಕಟ್ಟುವ ಹಂತದಲ್ಲಿದೆ. ಈ ಬೆಳೆ ಈ ತಿಂಗಳ ಅಂತ್ಯಕ್ಕೆ ಕೊಯ್ಲಿಗೆ ಬರುತ್ತದೆ. ಈ ಬೆಳೆ ಕಾಳು ಕಟ್ಟುವ ಹಂತದಲ್ಲಿರುವುದರಿಂದ ನಿತ್ಯವೂ ನೀರು ಬೇಕಾಗುತ್ತದೆ. ಇಲ್ಲವಾದರೆ ಕಾಳು ಸಂಪೂರ್ಣ ಜೊಳ್ಳಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತರಿಗೆ ಕೈಯಿಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತದೆ. ಆದ್ದರಿಂದ ಈ ತಿಂಗಳ ಅಂತ್ಯದವರೆಗೆ ಭದ್ರಾ ನೀರು ಹರಿಸಬೇಕು. ಈಗಾಗಲೇ ಭತ್ತದ ಪೈರು ಕೊಯ್ಲಿಗೆ ಬಂದಿರುವುದನ್ನು ಬಿಟ್ಟು ಕಾಳು ಕಟ್ಟುವ ಹಂತದಲ್ಲಿರುವ ಪೈರಿಗೆ ಮಾತ್ರ ನೀರು ಒದಗಿಸುವ ಕಾರ್ಯವಾಗಬೇಕು. ಪ್ರಸ್ತುತ ಈಗಾಗಲೇ ಕೊಯ್ಲಿಗೆ ಬಂದಿರುವ ಭಾಗಕ್ಕೂ ನೀರು ನಿರಂತರವಾಗಿ ಹರಿಸಲಾಗುತ್ತಿದೆ. ಇದರಿಂದ ನೀರು ವ್ಯರ್ಥವಾಗಿ ಹರಿದು ಪೋಲಾಗುತ್ತಿದೆ. ಆದ್ದರಿಂದ ನೀರಾವರಿ ಇಲಾಖೆ ಅಧಿಕಾರಿಗಳು ನೀರು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಮನವಿ ಮಾಡಿದರು.
ನೀರಿನ ಅವಶ್ಯಕತೆ ಇರುವ ಭಾಗಕ್ಕೆ ಮಾತ್ರ ನೀರು ಹರಿಸಬೇಕು. ಇಲ್ಲವಾದರೆ ನೀರು ವ್ಯರ್ಥವಾಗಿ ಹರಿದು ಪೋಲಾಗುತ್ತದೆ. ಇಂದು ರಾತ್ರಿ ನೀರು ನಿಲುಗಡೆ ಮಾಡಲಾಗುವುದು ಎಂದು ಭದ್ರಾ ನೀರಾವರಿ ಸಲಹಾ ಸಮಿತಿ ಕಾರ್ಯದರ್ಶಿ ಸುಜಾತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಂದಿನಿಂದಲೇ ನೀರು ನಿಲುಗಡೆ ಮಾಡಿದ್ರೆ ಕಾಳು ಕಟ್ಟುವ ಹಂತದಲ್ಲಿರುವ ಶೇಕಡಾ 30ರಷ್ಟು ಭತ್ತದ ಬೆಳೆ ಹಾನಿಯಾಗುತ್ತದೆ.
ಆದ್ದರಿಂದ ಇಂದು ನೀರು ನಿಲುಗಡೆ ಮಾಡದೆ, ಈ ತಿಂಗಳ ಅಂತ್ಯದವರೆಗೆ ಕಾಳು ಕಟ್ಟುವ ಹಂತದಲ್ಲಿರುವ ಶೇಕಡ 30ರಷ್ಟು ಭತ್ತದ ಬೆಳೆಗೆ ಮಾತ್ರ ನೀರು ಹರಿಸಲು ಕ್ರಮ ವಹಿಸಬೇಕು ಎಂದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಕೋರಿದರು.
ಜಿಲ್ಲಾಧಿಕಾರಿ ಭೇಟಿ ಮಾಡಿದ ಜಿಲ್ಲಾ ಬಿಜೆಪಿ ರೈತ ಮೋರ್ಚಾ ನಿಯೋಗದಲ್ಲಿ ಮೋರ್ಚಾದ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಕೊಳೇನಹಳ್ಳಿ ಬಿ.ಎಂ.ಸತೀಶ್, ರೈತ ಮುಖಂಡರಾದ ಆಲೂರು ನಿಂಗರಾಜ್, ಅಣಜಿ ಗುಡ್ಡೇಶ್, ಕಕ್ಕರಗೊಳ್ಳ ಕಲ್ಲಿಂಗಪ್ಪ, ಕೆ.ಎಸ್.ಮೋಹನ್, ಕೊಂಡಜ್ಜಿ ಪರಮೇಶ್ವರಪ್ಪ, ಮುದೇಗೌಡ್ರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳು ಹೇಳಿದ್ದೇನು?
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ರವರು ಇನ್ನೆರಡು ದಿನ ನೀರು ಹರಿಸಬೇಕು ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳೊಂದಿಗೆ ಮತ್ತು ಅವಶ್ಯಕತೆ ಕಂಡು ಬಂದರೆ ಐಸಿಸಿ ಅಧ್ಯಕ್ಷ ಮಧು ಬಂಗಾರಪ್ಪ ಅವರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.












Click it and Unblock the Notifications