ಕೆಆರ್ ಪುರಂನ ಸಂತೇಮಾಳದಲ್ಲಿ ಮಾರಾಮಾರಿ
ಬೆಂಗಳೂರು, ಅ. 17: ಮಾರುಕಟ್ಟೆಗೆ ತರಕಾರಿ ಹೊತ್ತು ತಂದ ರೈತರು ಮತ್ತು ದಲ್ಲಾಳಿಗಳ ಮಧ್ಯೆ ಮಾರಾಮಾರಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿ ದಲ್ಲಾಳಿಗಳು ಇಬ್ಬರು ರೈತರ ಕುತ್ತಿಗೆಗೆ ಇರಿದಿದ್ದಾರೆ. ಕೆಆರ್‌ಪುರಂ ಸಂತೆಮಾಳದಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ.
ವಿಶ್ವ ಆಹಾರ ದಿನಾಚರಣೆ ದಿನ ಅನ್ನದಾತನ ಮೇಲೆ ಈ ಹಲ್ಲೆ ನಡೆದಿರುವುದು ನಿಜಕ್ಕೂ ಅಕ್ಷಮ್ಯ ಮತ್ತು ಆತಂಕಕಾರಿ. FDI ಅದೂ ಇದೂ ರೈತನ ತೋಟಕ್ಕೆ ಲಗ್ಗೆಯಿಟ್ಟಿರುವ ಈ ಹೊತ್ತಿನಲ್ಲಿ ಇಂತಹ ಹೇಯ ಕೃತ್ಯಗಳು ನಡೆಯುತ್ತಿರುವುದು ಅನ್ನದಾತನನ್ನು ಮತ್ತಷ್ಟು ಶೋಚನೀಯ ಸ್ಥಿತಿಗೆ ತಳ್ಳಿದೆ.

ಹಲ್ಲೆ ನಡೆದಿರುವುದು ಕೆಆರ್ ಪುರ ಸಮೀಪದ ಕಗ್ಗಲಹಳ್ಳಿಯ ರೈತರಾದ ಚನ್ನಕೇಶವ (34), ಜ್ಯೋತಿಪುರದ ಮೂರ್ತಿ (30) ಎಂಬವರು ಮೇಲೆ. ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಿನ್ನೆಲೆಯೇನು?: ಮಾರುಕಟ್ಟೆ ಜಾಗವಾದ ಸಂತೆಮಾಳದಲ್ಲಿನ ಮಾರಾಟ ಜಾಗದ ವಿಚಾರವಾಗಿ 8 ದಿನಗಳಿಂದ ರೈತರು ಹಾಗೂ ಮಧ್ಯವರ್ತಿಗಳ ನಡುವೆ ಜಗಳ ನಡೆಯುತ್ತಿತ್ತು. ಇಂದು ಮುಂಜಾನೆ ತರಕಾರಿ ಹೊತ್ತು ಬಂದ ರೈತರೊಂದಿಗೆ ಇದೇ ದ್ವೇಷದಲ್ಲಿ ಮಧ್ಯವರ್ತಿಗಳು ಕಡಿಮೆ ಬೆಲೆಗೆ ಮಾರುವಂತೆ ತಾಕೀತು ಮಾಡಿದ್ದಾರೆ.
ಇದರಿಂದ ಆಕ್ರೋಶಗೊಂಡ ರೈತರು ದಲ್ಲಾಳಿಗಳೊಂದಿಗೆ ಜಗಳಕ್ಕೆ ಇಳಿದಿದ್ದಾರೆ ಎನ್ನಲಾಗಿದೆ. ಇದನ್ನೇ ನೆಪ ಮಾಡಿಕೊಂಡು ಮಧ್ಯವರ್ತಿಗಳು ಮಾರಕಾಸ್ತ್ರಗಳಿಂದ ರೈತರ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಕೆಆರ್ ಪುರಂ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
ಪ್ರಕರಣದ ಸಂಬಂಧ ಎಲೆ ಶ್ರೀನಿವಾಸ್, ಶಿವಕುಮಾರ್ ಹಾಗೂ ಅಮರೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಬಾಬು ಮತ್ತು ಆಂಜಿನಪ್ಪ ಎಂಬ ವರ್ತಕರು ನಾಪತ್ತೆಯಾಗಿದ್ದಾರೆ.
World Food Day (WFD) ದಿನಾಚರಣೆ: ವಿಶ್ವಸಂಸ್ಥೆಯಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆಯು 1945ರಲ್ಲಿ ಅಸ್ತಿತ್ವಕ್ಕೆ ಬಂದ ಸಂದರ್ಭವಾಗಿ ಪ್ರತಿ ಅಕ್ಟೋಬರ್ 16ರಂದು ವಿಶ್ವ ಆಹಾರ ದಿನಾಚರಣೆ ಆಚರಿಸಲಾಗುತ್ತಿದೆ. 'ಕೃಷಿ ಸಹಕಾರಿಗಳು- ವಿಶ್ವಕ್ಕೆ ಆಹಾರ ಒದಗಿಸುವ ಮಹತ್ತರ ಜವಾಬ್ದಾರಿ' ಎಂಬ ವಿಷಯವು ಪ್ರಸಕ್ತ ಸಾಲಿನ ಧ್ಯೇಯವಾಗಿದೆ.












Click it and Unblock the Notifications