ಆಲೂಗಡ್ಡೆ ಬೆಳೆಗೆ ಆವರಿಸಿದ ಅಂಗಮಾರಿ ರೋಗ: ಚಿಕ್ಕಬಳ್ಳಾಪುರ ಜಿಲ್ಲೆಯ ಅನ್ನದಾತ ಕಂಗಾಲು
ಚಿಕ್ಕಬಳ್ಳಾಪುರ, ಜನವರಿ, 19: ಜಿಲ್ಲೆಯಲ್ಲಿ ಪ್ರಮುಖ ತೋಟಗಾರಿಕೆ ಬೆಳೆಗಳಲ್ಲಿ ಆಲೂಗಡ್ಡೆ ಬೆಳೆಯೂ ಒಂದಾಗಿದೆ. ಆದರೆ ಇದೀಗ ಆಲೂ ಬೆಳೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡಿರುವುದರಿಂದ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಜಿಲ್ಲೆಯ ಬಹುತೇಕ ರೈತರು ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಿಂದ ಜನವರಿ ಅಂತ್ಯದವರೆಗೂ ಆಲೂಗಡ್ಡೆ ಬಿತ್ತನೆ ಮಾಡುತ್ತಾರೆ. ಈ ಬಾರಿಯೂ ರೈತರು ನೂರಾರು ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿದ್ದಾರೆ. ಆದರೆ ಡಿಸೆಂಬರ್ ತಿಂಗಳ ಮಧ್ಯ ಭಾಗದಲ್ಲಿ ಕಾಣಿಸಿಕೊಂಡ ಮಾಂಡೋಸ್ ಜಡಿಮಳೆಯಿಂದಾಗಿ ಬಿತ್ತನೆ ಮಾಡಿದ್ದ ಆಲೂಗಡ್ಡೆ ಬೆಳೆಯಲ್ಲಿ ನೀರು ನಿಂತು ಕೊಳೆಯಲಾರಂಭಿಸಿತು. ಇದರಿಂದ ಬೆಳೆಗಾರರು ತೀವ್ರ ನಷ್ಟವನ್ನೇ ಅನುಭವಿಸಿದ್ದಾರೆ.
ಅಲ್ಲದೇ ಜಡಿಮಳೆಯಿಂದ ಭೂಮಿಯಲ್ಲಿ ಅತಿಯಾದ ತೇವಾಂಶ ಉಂಟಾದ ಪರಿಣಾಮ ಆಲೂಗಡ್ಡೆ ಬಿತ್ತನೆಗೆ ರೈತರು ಮುಂದೂಡಿದ್ದರು. ಇದರಿಂದ ಡಿಸೆಂಬರ್ ತಿಂಗಳ ಅಂತ್ಯದವರೆಗೂ ಆಲೂಗಡ್ಡೆ ಬಿತ್ತನೆ ಹಿನ್ನೆಡೆಗೆ ಕಾರಣವಾಗಿದೆ. ಕೆಲವು ಕಡೆ ಈಗಲೂ ಬಿತ್ತನೆ ನಡೆಯುತ್ತಿದ್ದರೆ, ಮತ್ತೆ ಕೆಲವು ಕಡೆ ಬೆಳೆ ಕೊಯ್ಲು ಹಂತವನ್ನು ತಲುಪಿದೆ. ಸತತವಾಗಿ ಎಡಬಿಡದೆ ಸುರಿದ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ ಹೂ ಬಿಡುವ ಮುನ್ನವೇ ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ಆವರಿಸಿದೆ. ಅಂಗಮಾರಿ ರೋಗಬಾಧಿತ ಗಿಡದ ಎಲೆಗಳು ಕಂದು ಮತ್ತು ಕಪ್ಪು ಬಣ್ಣಕ್ಕೆ ತಿರುಗಿ ಬೆಳೆ ನಾಶವಾಗುತ್ತಿದ್ದು, ರೈತರು ನಷ್ಟದ ಹಾದಿಯನ್ನು ಹಿಡಿಯುವಂತಾಗಿದೆ.

ಆತಂಕ್ಕೊಳಗಾದ ರೈತರು
ಆಲೂ ಬೆಳೆಯಲ್ಲಿ ಅಂಗಮಾರಿ ರೋಗ ನಿಯಂತ್ರಣಕ್ಕೆ ರೈತರು ವಿವಿಧ ಬಗೆಯ ಕೀಟನಾಶಕ ಸಿಂಪಡಿಸಿದ್ದಾರೆ. ಈ ಮೂಲಕ ಬೆಳೆಯನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ ರೋಗ ಹತೋಟಿಗೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಕೀಟನಾಶಕ ಸಿಂಪಡಿಸಿ ಮೂರು ದಿನ ಕಳೆಯುವಷ್ಟರಲ್ಲಿ ಪುನಃ ರೋಗ ಆವರಿಸಿಕೊಳ್ಳುತ್ತಿದೆ. ಅಕ್ಕಪಕ್ಕದ ಜಮೀನಿನಲ್ಲಿ ಬಿತ್ತನೆ ಮಾಡಿರುವ ಆಲೂಗಡ್ಡೆ ಬೆಳೆಗೂ ಸಹ ರೋಗ ಹಬ್ಬುತ್ತಲೇ ಇದೆ. ಇದರಿಂದ ರೈತರು ದಿಕ್ಕು ತೋಚದೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಆಗಿದೆ.

ಔಷಧಿಗೆ ಖರ್ಚಾಗುವ ಹಣ ಎಷ್ಟು?
ಒಂದು ಹೆಕ್ಟೇರ್ ಆಲೂಗಡ್ಡೆ ಬಿತ್ತನೆ ಮಾಡಲು ರೈತರಿಗೆ 60 ರಿಂದ 80 ಸಾವಿರ ರೂಪಾಯಿ ತಗುಲಲಿದೆ. ಮೂರು ದಿನಕ್ಕೊಮ್ಮೆ ಅಂಗಮಾರಿ ರೋಗ ನಿಯಂತ್ರಣಕ್ಕೆ 2 ರಿಂದ 3 ಸಾವಿರ ರೂಪಾಯಿ ಔಷಧಿ ವೆಚ್ಚ ಬೀಳುತ್ತಿದೆ. ಆದರೆ, ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಕಳೆದ ಹಲವು ದಿನಗಳಿಂದ ಮೋಡ ಕವಿದ ವಾತಾವರಣವಿದೆ. ಇದರಿಂದ ಅಂಗಮಾರಿ ರೋಗ ಮತ್ತಷ್ಟು ಉಲ್ಬಣಗೊಂಡು ಆಲೂಗಡ್ಡೆ ಬೆಳೆ ನಾಶವಾಗುವ ಆತಂಕ ರೈತರಿಗೆ ಎದುರಾಗಿದೆ.
ಉತ್ತಮ ಮಳೆಯಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಹೀಗಾಗಿ ಬಹುತೇಕರು ತೋಟಗಾರಿಕೆ ಬೆಳೆ ಬೆಳೆಯಲು ಆಸಕ್ತಿ ವಹಿಸಿದ್ದಾರೆ. ಆದರೆ, ಬೆಳೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರೋಗಗಳಿಗೆ ದುಬಾರಿ ವೆಚ್ಚ ಮಾಡುವಂತಾಗಿದ್ದು, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಕೈಗೆ ಬಾರದ ಹಾಕಿದ ಬಂಡವಾಳ
ಪ್ರಮುಖವಾಗಿ ಹಿಂದಿನಿಂದಲೂ ಆಲೂಗಡ್ಡೆ ಬೆಳೆಗೆ ಹೆಚ್ಚು ಅಂಗಮಾರಿ ರೋಗ ಕಾಣಿಸಿಕೊಳ್ಳುತ್ತಿತ್ತು. ಆದರೆ, ಇದೀಗ ಟೊಮ್ಯಾಟೋ, ದಪ್ಪ ಮೆಣಸಿನಕಾಯಿ ಬೆಳೆಗಳಿಗೂ ಹೆಚ್ಚು ಅಂಗಮಾರಿ ರೋಗ ಕಾಣಿಸಿಕೊಳ್ಳುತ್ತಿದೆ. ಈ ರೋಗದಿಂದ ಬೆಳೆಗಳ ಇಳುವರಿ ಕಡಿಮೆಯಾಗುತ್ತಿದೆ. ಇದರಿಂದ ರೈತರು ಬೆಳೆಗೆ ಹಾಕಿದ ಬಂಡವಾಳವೂ ಬಾರದೆ ಕೈ ಸುಟ್ಟುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಗಮಾರಿ ರೋಗದಿಂದ ಆಲೂಗಡ್ಡೆ ಗಿಡಗಳ ಎಲೆ ಕಂದು ಮತ್ತು ಕಪ್ಪು ಬಣ್ಣಕ್ಕೆ ತಿರುಗಿ ಒಣಗಿ ಹೋಗುತ್ತಿದೆ. ಮೂರು ದಿನಕ್ಕೊಮ್ಮೆ ಔಷಧಿ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರಿಂದ ರೈತರಿಗೆ ಬೆಳೆ ನಷ್ಟ ಅನುಭವಿಸುವ ಆತಂಕ ಎದುರಾಗಿದೆ. ಅಂಗಮಾರಿ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಸಲಹೆ ನೀಡಬೇಕು ಎಂದು ಬೊಮ್ಮಗಾನಹಳ್ಳಿಯ ಆಲೂಗಡ್ಡೆ ಬೆಳೆಗಾರ ಸೀತಾರಮಪ್ಪ ಮನವಿ ಮಾಡಿಕೊಂಡಿದ್ದಾರೆ.

ಕಂಗಾಲಾದ ಜಿಲ್ಲೆಯ ಅನ್ನದಾತ
ಒಂದು ಹೆಕ್ಟೇರ್‌ಗೆ ಆಲೂಗಡ್ಡೆ ಬೆಳೆಯಲು ಇಲ್ಲಿಯವರೆಗೂ 75 ಸಾವಿರ ರೂಪಾಯಿಗೂ ಹೆಚ್ಚು ಬಂಡವಾಳ ಹಾಕಿದ್ದೇನೆ. ಬಿತ್ತನೆ ಮಾಡಿ ಒಂದೂವರೆ ತಿಂಗಳು ಕಳೆದಿದೆ. ಇದೀಗ ಬೆಳೆಯಲ್ಲಿ ದಿನದಿಂದ ದಿನಕ್ಕೆ ಅಂಗಮಾರಿ ರೋಗ ಹಬ್ಬುತ್ತಿದೆ. ಎಷ್ಟೇ ಔಷಧಿ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ ಎಂದು ಇಡ್ರಹಳ್ಳಿ ಆಲೂಗಡ್ಡೆ ಬೆಳೆಗಾರ ವಿ.ಗಂಗಾದರ ಅಳಲು ತೋಡಿಕೊಂಡಿದ್ದಾರೆ.












Click it and Unblock the Notifications