ಮೋದಿ ಸರ್ಕಾರದಿಂದ ದಲಿತರು, ರೈತರಿಗೂ ಅನ್ಯಾಯ: ದಿನೇಶ್ ಟೀಕೆ
ಬೆಂಗಳೂರು, ಆಗಸ್ಟ್ 13: ಸರ್ವರ ಹಿತ ಕಾಯುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ದಲಿತರ , ಮಹಿಳೆಯರ ಅಲ್ಪ ಸಂಖ್ಯಾತರ ಹಾಗೂ ಬಡವರ ವಿರೋಧಿಯಾಗಿ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.
ಬೀದರ್‌ನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತನ್ನ ಒಡೆದು ಆಳುವ ನೀತಿಯಿಂದ ದಲಿತ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕಡಿಮೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಇತ್ತೀಚಿನ ದಿನಗಳಲ್ಲಿ ರೈತರ ವಿರೋಧಿಯಾಗಿ ವರ್ತಿಸುತ್ತಿದೆ.
ದೇಶದಲ್ಲಿ ಅಭದ್ರತೆ ಹಾಗೂ ಅಸುರಕ್ಷತೆ ಹೆಚ್ಚಾಗಿದ್ದು ದಿನನಿತ್ಯ ದೌರ್ಜನ್ಯಗಳು ಹೆಚ್ಚುತ್ತಲೇ ಇದೆ. ಹೀಗಾಗಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಸೋಲಿಸಲು ಈಗ ಕಾಲ ಕೂಡಿಬಂದಿದೆ ಎಂದು ಹೇಳಿದರು.

ಸಬ್‌ಕಾ ಸಾಥ್ ಸಬಕಾ ವಿಕಾಸ್ ಎನ್ನುವ ಘೋಷ ವಾಖ್ಯದೊಂದಿಗೆ ಅಧಿಕಾರಕ್ಕೆ ಬಂದ ಮೋದಿ ಕೇವಲ ಜಾತಿ, ಧರ್ಮದ ಮೇಲೆಯೇ ತಾರತಮ್ಯ ಮಾಡದೆ ರಾಜ್ಯ ರಾಜ್ಯಗಳ ನಡುವೆ ಭಿನ್ನಾಭಿಪ್ರಾಯ ನೀತಿ ಅನುಸರಿಸುತ್ತಿದೆ. ಬಿಜೆಪಿಯೇತರ ರಾಜ್ಯಗಳಲ್ಲಿ ಜನರ ಸಂಕಷ್ಟಗಳಿಗೆ ಕೇಂದ್ರಸರ್ಕಾರ ಸ್ಪಂದಿಸುತ್ತಿಲ್ಲ.
ಕರ್ನಾಟಕದ ಕಾವೇರಿ ಹಾಗೂ ಕೃಷ್ಣಾ ಕಣಿವೆಯ ಹಲವು ನೀರಾವರಿ ಯೋಜನೆಗಳ ಬಗೆಗೆ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಮಹಾದಾಯಿ ವಿಚಾರದಲ್ಲಿ ಮೋದಿ ಮಧ್ಯಸ್ಥಿಕೆ ವಹಿಸದೆ ಜಾಣ ಕುರುಡು ನೀತಿ ಅನುಸರಿಸಿದ್ದಾರೆ. ಒಂದು ವೇಳೆ ಮಹಾದಾಯಿ ನ್ಯಾಯಮಂಡಳಿಯ ತೀರ್ಪು ಕರ್ನಾಟಕಕ್ಕೆ ವ್ಯತಿರಿಕ್ತವಾಗಿ ಬಂದರೆ ಅದಕ್ಕೆ ಮೋದಿಯೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications