ತೆಂಗಿನ ಮರ ಹತ್ತುವವರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ಇದಕ್ಕೆ ಒಂದು ಸಣ್ಣ ಉದಾಹರಣೆಯೆಂದರೆ ಕರಾವಳಿಯಲ್ಲಿ ತೆಂಗು ಬೆಳೆ ಒಂದು ಕಾಲದಲ್ಲಿ ಯೆಥೇಚ್ಚಾಗಿಯೇ ಇತ್ತು. ರೈತನ ಮನೆಗೆ ಯಾರೇ ಅತಿಥಿಗಳು ಹೋದರೂ ತೆಂಗಿನ ಮರದಿಂದ ಎಳನೀರು ಕೊಡುವುದು ಸಂಪ್ರದಾಯವಾಗಿತ್ತು. ಅಂದರೆ ರೈತರು ತೆಂಗು ಬೆಳೆಸುತ್ತಿದ್ದರು ಎನ್ನುವುದಷ್ಟೇ ಅಲ್ಲ, ಯಾವ ಕ್ಷಣದಲ್ಲಿ ಅತಿಥಿಗಳು ಬಂದರೂ ಮರಹತ್ತಿ ಎಳನೀರು ಕೀಳಲು ಆ ಮನೆಯವರಲ್ಲಿ ಒಬ್ಬರಲ್ಲದಿದ್ದರೆ ಒಬ್ಬರಿಗೆ ಗೊತ್ತಿತ್ತು ಅಥವಾ ಆ ಮನೆಯ ಗದ್ದೆ ಕೆಲಸಕ್ಕೆ ಬರುತ್ತಿದ್ದ ಆಳುಗಳಿಗಾದರೂ ಗೊತ್ತಿತ್ತು.
ಈಗ ತೆಂಗಿನ ಮರ ಹತ್ತಲು ವೃತ್ತಿನಿರತರನ್ನೇ ಅವಲಂಬಿಸಬೇಕು. ಈಗ ಮೊಬೈಲ್ ಬಂದಮೇಲಂತೂ ಅವರಿಗೆ ಬಾರೀ ಡಿಮ್ಯಾಂಡ್. ಮರದಿಂದ ತೆಂಗಿನ ಕಾಯಿ ಕೀಳುವುದಿತ್ತು ಯಾವಾಗ ಬರುತ್ತೀರಿ? ಎಂದು ಅವರ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ. ಕರೆ ಸ್ವೀಕರಿಸಿದ ವೃತ್ತಿ ನಿರತನಿಂದ ಬರುವ ಉತ್ತರ ಇನ್ನೊಂದು ವಾರ ಪುರುಸೋತ್ತಿಲ್ಲ, ಯಾವುದಕ್ಕೂ ಮುಂದಿನ ವಾರ ಕರೆ ಮಾಡಿ ಹೇಳುತ್ತೇನೆ ಎನ್ನುತ್ತಾನೆ. ನೀವು ನಾಳೆಯೇ ಬರಬೇಕು ಅಂದರೆ ಟೈಮಿಲ್ಲ, ಬೇರೆಯವರಿಂದ ಕಾಯಿ ಕೀಳಿಸಿಕೊಳ್ಳಿ ಎಂದೇಳಿ ಕರೆ ಕಟ್ ಮಾಡಿಬಿಡುತ್ತಾನೆ.
ಬೇರೆ ಗತಿಯಿಲ್ಲದೆ ವಾರ ಕಳೆದು ಕಾಡಿ ಬೇಡಿ ಅವನನ್ನು ತೆಂಗಿನಕಾಯಿ ಕೀಳಿಸಲು ಕರೆದುತರುವಲ್ಲಿ ಸಫಲರಾದಿರಿ ಅಂದುಕೊಳ್ಳಿ. ಒಂದು ಮರಕ್ಕೆ 35 ರೂಪಾಯಿ ಕೊಡಬೇಕು. ಮರ ಭಾರೀ ಎತ್ತರದಲ್ಲಿದ್ದರೆ ಇನ್ನೂ ಹತ್ತು ರೂಪಾಯಿ ಹೆಚ್ಚು. ಎಳತು-ಬಲಿತದ್ದು ಅಂತೇನಾದರೂ ಕೆಳಗೆ ನಿಂತು ರಾಗ ತೆಗೆದರೆ ಸರ್ರನೆ ಮರ ಇಳಿದು ಬೇರೆಯವರಿಂದ ಕಾಯಿ ಕೀಳಿಸಿ ಎಂದೇಳಿ ಹೋಗುತ್ತಾನೆ ಹುಷಾರ್.
ಇದು ಕಟ್ಟು ಕಥೆಯಲ್ಲ, ಕರಾವಳಿಯ ವಸ್ತುಸ್ಥಿತಿ. ಅದೆಷ್ಟೋ ತೆಂಗಿನ ತೋಟಗಳಲ್ಲಿ ತೆಂಗಿನಕಾಯಿ ಕೀಳಲು ವೃತ್ತಿನಿರತರು ಸಿಗದೆ ತಾನಾಗಿಯೇ ಉದುರುವತನಕ ತೋಟದ ಮಾಲೀಕ ಕಾಯುತ್ತಿರಬೇಕು. ಹಿಂದೆ ಹೀಗಿರಲಿಲ್ಲ ಮಾಲೀಕ ಬೇಕೆನಿಸಿದಾಗ ತೆಂಗಿನಮರ ಹತ್ತಿಸಲು ಆಳುಗಳಿರುತ್ತಿದ್ದರು. ಅಂದರೆ ಅಂದು ತೆಂಗಿನ ಮರ ಹತ್ತುವುದು, ಕಾಯಿ ಕೀಳುವುದು ವೃತ್ತಿಯಾಗಿರಲಿಲ್ಲ ಅದು ಅವರ ಬದುಕಿನ ಅಂಗವಾಗಿತ್ತು, ಹವ್ಯಾಸವೂ ಆಗಿತ್ತು ಅಲ್ಲವೇ?












Click it and Unblock the Notifications