ರೈತನ ಮಗನ ವಿವಾಹವಾಗುವ ವಧುವಿಗೆ ಸರ್ಕಾರಿ ಕೆಲಸದಲ್ಲಿ ಶೇ.10 ಮೀಸಲಾತಿ ನೀತಿ ಜಾರಿಗೆ ಒತ್ತಾಯ

ದಾವಣಗೆರೆ, ಡಿಸೆಂಬರ್‌, 06: ರೈತನ ಮಗನ ಮದುವೆಯಾಗುವ ವಧುವಿಗೆ ಸರ್ಕಾರಿ ಕೆಲಸದಲ್ಲಿ ಶೇಕಡಾ 10 ಮೀಸಲಾತಿ ನೀಡುವ ನೀತಿ ಜಾರಿಗೆ ತರಬೇಕು. ಈ ಮೂಲಕ ರೈತರ ಮಕ್ಕಳನ್ನು ಅಪಾಯದಿಂದ ಪಾರು ಮಾಡಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದರು. ಇನ್ನು ಇದೇ ವೇಳೆ ರೈತರ ಸಾಲ ಮನ್ನಾ, ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು.

ನವದೆಹಲಿಯಲ್ಲಿ ವರ್ಷಗಳ ಕಾಲ ಹೋರಾಟ ಮಾಡಿದ ರೈತರ ಮೇಲೆ ಹಾಕಿರುವ ಪೊಲೀಸ್ ಮೊಕದಮೆಗಳನ್ನು ವಾಪಸ್ ಪಡೆಯಬೇಕು. ದೇಶದ ರೈತರನ್ನು ಸಂರಕ್ಷಿಸಲು ವಿಶ್ವ ವ್ಯಾಪಾರದ ಒಪ್ಪಂದದಿಂದ ಭಾರತ ಸರ್ಕಾರ ಹೊರ ಬರಬೇಕು.

Demand for 10% reservation in government jobs for brides who marry farmers sons

ಈ ಎಲ್ಲಾ ಒತ್ತಾಯಗಳ ಬಗ್ಗೆ ರಾಜ್ಯದ ರೈತರ ಸಮ್ಮುಖದಲ್ಲಿ, ರಾಷ್ಟ್ರೀಯ ರೈತ ಮುಖಂಡರು ಬೆಂಗಳೂರಿನ ಅಧಿವೇಶನದಲ್ಲಿ ಚರ್ಚೆ ನಡೆಸಿ ರೈತರನ್ನು ಜಾಗೃತಿ ಮಾಡಿ ದೇಶದ ಎಲ್ಲಾ ರೈತರು ರಾಜಕೀಯೇತರವಾಗಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಈ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಡಿಸೆಂಬರ್ 23ರಂದು ರೈತರ ಬೃಹತ್ ರೈತರ ಮಹಾ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ, ಖಾತರಿ ಕಾನೂನು, ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಡಿಸೆಂಬರ್ 23ರಂದು ಬೆಂಗಳೂರಿನಲ್ಲಿ ರೈತರ ರಾಷ್ಟ್ರೀಯ ಮಹಾಧಿವೇಶನ ನಡೆಯಲಿದ್ದು, ಈ ವೇಳೆ ರಾಷ್ಟ್ರೀಯ ರೈತ ಮುಖಂಡರ ಸಮ್ಮುಖದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಗಂಭೀರ ಎಚ್ಚರಿಕೆ ನೀಡಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ ಪ್ರವಾಹ ಹಾನಿ, ಮಳೆಹಾನಿ, ಬರಗಾಲಕ್ಕೆ ತುತ್ತಾಗಿರುವ ರಾಜ್ಯದ ಎಲ್ಲಾ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಕೃಷಿ ಸಾಲ ಪಡೆದ ರೈತರು ಬೆಳೆ ಬೆಳೆಯಲು ಹೂಡಿಕೆ ಮಾಡಿ ಬೆಳೆ ನಾಶವಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದಕ್ಕಾಗಿ ಸಾಲಮನ್ನಾ ಆಗಲೇಬೇಕು ಎಂದರು.

ಕೈಗಾರಿಕೆ, ಉದ್ಯಮಿಗಳಿಗೆ ಸಂಕಷ್ಟದ ನೆರವು ಎಂದು 12 ಲಕ್ಷ ಕೋಟಿ ರೂಪಾಯಿ ಮನ್ನಾ ಮಾಡಿರುವ ರೀತಿ ರೈತರ ಸಾಲ ಮನ್ನಾ ಆಗಬೇಕು. ರೈತರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಒತ್ತಾಯ ಪತ್ರ 23 ರಂದು ಸಲ್ಲಿಸಲಾಗುತ್ತದೆ ಎಂದು ಹೇಳಿದರು.

ರೈತರ ಸಾಲ ಮನ್ನಾ ಆಗದಂತೆ ವಂಚಿಸಲು ಬ್ಯಾಂಕ್‌ಗಳು ಖಾಲಿಪತ್ರಕ್ಕೆ ರೈತರ ಸಹಿ ಪಡೆದು ನವೀಕರಣ ಮಾಡುತ್ತಿದ್ದಾರೆ. ಈ ಬಗ್ಗೆ ರೈತರು ಜಾಗೃತರಾಗಿರಬೇಕು. ಭತ್ತ, ಕಬ್ಬು ಉತ್ಪಾದನೆ ಶೇಕಡ 50ರಷ್ಟು ಕಡಿಮೆಯಾಗಿರುವ ಕಾರಣ ಭತ್ತ ಮಾರಾಟ ಮಾಡದೆ ಉಗ್ರಾಣಗಳಲ್ಲಿ ದಾಸ್ತಾನು ಮಾಡಿ, ದಾಸ್ತಾನು ಚೀಟಿ ನೀಡಿದರೆ ಬ್ಯಾಂಕ್‌ಗಳು 75ರಷ್ಟು ಮುಂಗಡ ಸಾಲ ಕೊಡುತ್ತವೆ. ಅದರ ಉಪಯೋಗ ಪಡೆದು ಬೆಲೆ ಏರಿಕೆ ಆದಾಗ ಮಾರಾಟ ಮಾಡಬಹುದು ಎಂದು ಹೇಳಿದರು.

ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ, ಕಾನೂನು ಜಾರಿ ಆಗಬೇಕು. ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ಪ್ರಧಾನಿಯವರು ರೈತರಿಗೆ ಭರವಸೆ ನೀಡಿದಂತೆ ಕೇಂದ್ರ ಸರ್ಕಾರ ಕೂಡಲೇ ಈ ಕಾನೂನು ಜಾರಿ ಮಾಡಬೇಕು ಎಂದರು.

ರೈತರು ಬರಗಾಲದ ಸಂಕಷ್ಟದಿಂದ ನರಳುತ್ತಿದ್ದಾರೆ. ರಾಜ್ಯ ಸರ್ಕಾರ 2,000 ರೂಪಾಯಿ ಭಿಕ್ಷಾ ರೂಪದ ಪರಿಹಾರ ನೀಡುವುದು ಬೇಡ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬಾರದೆ ರಾಜಕೀಯ ಚೆಲ್ಲಾಟ ಆಡುತ್ತಿದ್ದಾರೆ. ರೈತರಿಗೆ ಎರಡು ಸಾವಿರ ರೂಪಾಯಿ ಭಿಕ್ಷಾರೋಪದ ಪರಿಹಾರ ಬೇಡ ಸಂಪೂರ್ಣ ಬರ ಪರಿಹಾರ ನಷ್ಟ ಎಕರೆಗೆ ಕನಿಷ್ಠ 25,000 ಸಾವಿರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಎಫ್‌ಆರ್‌ಪಿಗೆ ಹೆಚ್ಚುವರಿಯಾಗಿ 300 ರಿಂದ 400 ಕಾರ್ಖಾನೆಗಳೆ ಸ್ವಯಂ ಘೋಷಣೆ ಮಾಡಲಾಗುತ್ತಿದೆ. ಈ ಭಾಗದ ಕಾರ್ಖಾನೆ ರೈತರಿಗೆ ನ್ಯಾಯಯುತ ದರ ನೀಡುವಲ್ಲಿ ಹಾಗೂ ಸಕ್ಕರೆ ಇಳುವರಿಯಲ್ಲಿ ವಂಚಿಸುತ್ತಿದೆ. ಕಬ್ಬು ಉತ್ಪಾದನೆ 50ರಷ್ಟು ಕಡಿಮೆಯಾಗಿದೆ. ಕಾರ್ಖಾನೆಗಳು ಪೈಪೋಟಿಯಲ್ಲಿ ಕಬ್ಬು ಖರೀದಿ ಮಾಡುತ್ತಿವೆ ಎಂದರು.

ಈ ಜಿಲ್ಲೆಯ ಕಾರ್ಖಾನೆ ಎಫ್‌ಆರ್‌ಪಿ ದರ ಮಾತ್ರ ನೀಡುತ್ತಿದೆ. ಇದು ಅನ್ಯಾಯ. ಕೂಡಲೇ ಕನಿಷ್ಠ 300 ಹೆಚ್ಚುವರಿ ನೀಡಬೇಕು. ಇಲ್ಲದಿದ್ದರೆ ರೈತರು ಹೆಚ್ಚು ದರ ನೀಡುವ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುತ್ತಾರೆ ಎಂದು ಎಚ್ಚರಿಸುತ್ತಿದ್ದೇವೆ ಎಂದರು. ಕಬ್ಬಿನ ಬೆಳೆಯನ್ನು ಎಸ್‌ಡಿಆರ್‌ಎಫ್ ಮಾನದಂಡಕ್ಕೆ ಸೇರಿಸಬೇಕು. ಬರ ನಷ್ಟ ಪರಿಹಾರ ಸಿಗುವಂತಾಗಬೇಕು. ರಾಜ್ಯ ಸರ್ಕಾರ ಕಬ್ಬು ಬೇಸಾಯ ಕೂಲಿ ಕಾರ್ಮಿಕರ ಸಮಸ್ಯೆ ತಪ್ಪಿಸಲು ಎಸ್‌ಆರ್‌ಇಜಿ ಯೋಜನೆಯನ್ನು ಲಿಂಕ್ ಮಾಡಬೇಕು ಎಂದರು.

ಬಾಳೆ ಬೇಸಾಯಕ್ಕೆ ನೀಡಿರುವ ರೀತಿ ಎಲ್ಲಾ ಕೃಷಿ ಬೆಳೆಗಳಿಗೂ ಕಡ್ಡಾಯವಾಗಿ ಬೆಳೆ ವಿಮೆಯನ್ನು ಜಾರಿಗೊಳಿಸಬೇಕು. ಬೆಳೆ ವಿಮೆ ಸರಳೀಕರಣಗೊಳಿಸಬೇಕು. ಅತಿವೃಷ್ಟಿ, ಬರ ನಷ್ಟ ಪರಿಹಾರ ಬೆಳೆ ವಿಮೆ ವ್ಯಾಪ್ತಿಯಲ್ಲಿ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ದೇಶದ 140 ಕೋಟಿ ಜನರಿಗೆ ಆಹಾರ ಉತ್ಪಾದಿಸಲು ತಮ್ಮ ಜೀವನವನ್ನೇ ತ್ಯಾಗ ಮಾಡುತ್ತಿರುವ 60 ವರ್ಷ ಪೂರೈಸಿದ ರೈತರಿಗೆ ತಿಂಗಳಿಗೆ ಕನಿಷ್ಠ 5,000 ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು ಎಂದರು.

ಕೃಷಿ ಪಂಪ್ ಸೆಟ್‌ಗಳಿಗೆ ನೀಡುವ ಉಚಿತ ವಿದ್ಯುತ್ ತಪ್ಪಿಸಲು ವಿದ್ಯುತ್ ಖಾಸಗೀಕರಣ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಕೃಷಿ ಪಂಸ್‌ಸೆಟ್‌ಗಳಿಗೆ ಹಗಲು ವೇಳೆ ನಿರಂತರ 10 ಗಂಟೆಗಳ ವಿದ್ಯುತ್ ನೀಡಬೇಕು. ಕೃಷಿ ಪಂಪ್ ಸೆಟ್‌ಗಳಿಗೆ ಸೋಲಾರ್ ವಿದ್ಯುತ್ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ನೀಡುವ ಶೇಕಡಾ 60ರಷ್ಟು ಸಹಾಯಧನ ಕುಸುಮ ಯೋಜನೆಗೆ ರಾಜ್ಯ ಸರ್ಕಾರ ಶೇಕಡಾ 30ರಷ್ಟು ಸೇರಿಸಿ ಸಹಾಯಧನ ನೀಡಲಿ. ಇದರಿಂದ ರೈತರಿಗೆ ಹಗಲು ವೇಳೆ ಯಾವುದೇ ಸಮಸ್ಯೆ ಇಲ್ಲದೆ ವಿದ್ಯುತ್ ಸಿಗುತ್ತದೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಇರುವ ಎಲ್ಲಾ ರೈತ ಸಂಘಟನೆಗಳ ಮುಖಂಡರು, ರೈತರು ಸ್ವಯಂ ಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾಲ ಮನ್ನಾ ಆಂದೋಲನ ಅರ್ಜಿ ಸಲ್ಲಿಸುವ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ರವಿಕುಮಾರ್, ಅಂಜನಪ್ಪ ಪೂಜಾರ, ಮುರುಗೇಂದ್ರಪ್ಪ ಹತ್ತಳ್ಳಿ ದೇವರಾಜ್ ಮತ್ತಿತರರು ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+