ದಿಲ್ಲಿ ಚಲೋ ಹೋರಾಟ ಮತ್ತು ಸುಪ್ರೀಂ ಕೋರ್ಟ್ statement
ದಿಲ್ಲಿಯಲ್ಲಿ ರೈತರ ಹೋರಾಟದ ಹಿನ್ನೆಲೆಯಲ್ಲಿ ಹೋರಾಟಗಾರ ಶಿವಸುಂದರ್, ಕೇಂದ್ರ ಸರ್ಕಾರದ ಹತ್ತು ಸುಳ್ಳುಗಳು ಎಂಬ ಶೀರ್ಷಿಕೆಯ ಲೇಖನವೊಂದನ್ನು ವಾರ್ತಾ ಭಾರತಿ ಪತ್ರಿಕೆಗೆ ಬರೆದಿದ್ದರು. ಅದರಲ್ಲಿ ಎರಡನೆಯ ಸುಳ್ಳು ಹೀಗಿದೆ..
ಸಂವಿಧಾನದ ಏಳನೇ ಶೆಡ್ಯೂಲಿನಲ್ಲಿ ಕೇಂದ್ರ ಹಾಗೂ ರಾಜ್ಯಗಳ ಪರಮಾಧಿಕಾರ ಇರುವ ಮತ್ತು ಕೇಂದ್ರ ಹಾಗೂ ರಾಜ್ಯ ಎರಡೂ ಕೂಡಾ ಕಾನೂನು ಮಾಡಬಹುದಾದ ಬಾಬ್ತುಗಳ ಪಟ್ಟಿಯನ್ನು ನೀಡಲಾಗಿದೆ. ಮೊದಲನೆಯದಾಗಿ ಕೃಷಿಗೆ ಸಂಬಂಧಪಟ್ಟ ಯಾವೊಂದು ವಿಷಯವೂ ಕೇಂದ್ರದ ಪಟ್ಟಿಯಲ್ಲಿಲ್ಲ.

ಸಂಪೂರ್ಣವಾಗಿ ರಾಜ್ಯದ ಪರಮಾಧಿಕಾರ
ರಾಜ್ಯಗಳ ಪಟ್ಟಿಯಲ್ಲಿ 14, 18 ಹಾಗೂ 27ನೇ ಎಂಟ್ರಿಗಳಲ್ಲಿ ಕೃಷಿ ಹಾಗೂ ಭೂಮಿ ಹಿಡುವಳಿ, ಒಡೆತನ, ಗೇಣಿ, ಕೃಷಿ ಮಾರುಕಟ್ಟೆ, ಸಂತೆ ಇತ್ಯಾದಿಗಳೆಲ್ಲವನ್ನೂ ಸಂಪೂರ್ಣವಾಗಿ ರಾಜ್ಯದ ಪರಮಾಧಿಕಾರವಿರುವ ವಿಷಯವೆಂದು ಸ್ಪಷ್ಟಪಡಿಸಲಾಗಿದೆ. ಹೀಗಾಗಿ ಕೃಷಿಯ ಬಗ್ಗೆ ಕಾನೂನು ಮಾಡುವ ಪರಮಾಧಿಕಾರ ಕೇಂದ್ರ ಸರ್ಕಾರಕ್ಕಿದೆ ಎಂಬುದು ಹಸಿ ಸುಳ್ಳು.
ಆದರೆ, ಸಮವರ್ತಿ ಪಟ್ಟಿಯ 33ನೇ ಎಂಟ್ರಿಯಲ್ಲಿ ಸೀಮಿತ ಅರ್ಥದಲ್ಲಿ ಆಹಾರ ಸರಕುಗಳ ವಾಣಿಜ್ಯ ವ್ಯವಹಾರದ ವಿಷಯವನ್ನು ಸೇರಿಸಲಾಗಿದೆ. ಬಿಜೆಪಿ ಸರ್ಕಾರ ಇದನ್ನು ಉಲ್ಲೇಖಿಸುತ್ತಾ ತಾನು ತಂದಿರುವ ಶಾಸನಗಳನ್ನು ಸಮರ್ಥಿಕೊಳ್ಳುತ್ತಿದೆ. ಆದರೆ ಇದು ಅಂತರ ರಾಜ್ಯ ಹಾಗೂ ಅಂತರಾಷ್ಟ್ರೀಯ ವಾಣಿಜ್ಯದ ಬಗ್ಗೆಯೇ ಹೊರತು ರಾಜ್ಯದೊಳಗಿನ ಕೃಷಿ ಮಾರುಕಟ್ಟೆಗೆ ಸಂಬಂಧ ಪಟ್ಟಂತೆ ಅಲ್ಲ.

ಕೇಂದ್ರ ಸರ್ಕಾರಕ್ಕೆ ಅಧಿಕಾರವಿಲ್ಲ
ಅಷ್ಟು ಮಾತ್ರವಲ್ಲ, ಸಂವಿಧಾನದ ಮೂರನೇ ತಿದ್ದುಪಡಿಯ ಮೂಲಕ ಇದನ್ನು ಸೇರಿಸಿದಾಗ ಕೆಲವು ರಾಜ್ಯಗಳಲ್ಲಿ ಆಹಾರ ಅಭಾವದ ಪರಿಸ್ಥಿತಿ ಇತ್ತು. ಹೀಗಾಗಿ ಹೆಚ್ಚುವರಿ ಆಹಾರ ಇರುವ ರಾಜ್ಯಗಳಿಂದ ಅಭಾವ ರಾಜ್ಯಗಳಿಗೆ ಆಹಾರ ಸಾಗಾಟ ಮಾಡಲು ಅನುವು ಮಾಡಿಕೊಡುವ ತಾತ್ಕಾಲಿಕ ವ್ಯವಸ್ಥೆ ಭಾಗವಾಗಿ ಎಂಟ್ರಿ 33 ಅನ್ನು ಸಮವರ್ತಿ ಪಟ್ಟಿಗೆ ಸೇರಿಸಲಾಗಿತ್ತು. ಹೀಗಾಗಿ ಅದು ಕೇಂದ್ರ ಸರ್ಕಾರಕ್ಕೆ ಇಂಥಾ ಮರಣ ಶಾಸನಗಳನ್ನು ಮಾಡುವ ಅಧಿಕಾರ ಕೊಡುವುದಿಲ್ಲ.

ಮೋದಿ ಸರ್ಕಾರ ಸುಳ್ಳು ಹೇಳಿ ಸಿಕ್ಕಿಬಿದ್ದಿದೆ
ಅಷ್ಟು ಮಾತ್ರವಲ್ಲ. ಇತ್ತೀಚೆಗೆ ರೈತ ನಾಯಕರೊಂದಿಗೆ ಮಾತುಕತೆಯ ನಂತರ ಸರ್ಕಾರ ಕಳಿಸಿದ ಅಧಿಕೃತ ಪ್ರಸ್ತಾಪಗಳಲ್ಲಿ ಖಾಸಗಿ ಮಂಡಿಗಳ ರಿಜಿಸ್ಟ್ರೇಷನ್, ವ್ಯಾಜ್ಯಗಳನ್ನು ಸಿವಿಲ್ ನ್ಯಾಯಲಯಗಳ ಪರಿಧಿಗೆ ತರುವ ಸಲಹೆಗಳನ್ನು ರಾಜ್ಯ ಸರ್ಕಾರಗಳಿಗೆ ಸೂಚಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತಲ್ಲವೇ? ಅದರ ಅರ್ಥವೇನು? ಆ ಪರಿಧಿಯಲ್ಲಿ ಕೇಂದ್ರಕ್ಕೆ ಶಾಸನ ಮಾಡುವ ಅಧಿಕಾರ ಇಲ್ಲ ಅಂತಾ ತಾನೇ?
ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸಿದ್ದರೆ ಚೆನ್ನಾಗಿತ್ತು. ಕೃಷಿ ಎಂದಿಗೂ ರಾಜ್ಯದ ವಿಷಯ, ಹಾಗಾಗಿ ಕೇಂದ್ರ ಅದರಲ್ಲಿ ತಲೆಹಾಕುವಂತಿಲ್ಲ ಎಂಬ ಸ್ಪಷ್ಟ ಆದೇಶ ಸರ್ವೋಚ್ಛ ನ್ಯಾಯಾಲಯ ನೀಡಬಹುದಾ ಎಂಬ ನಿರೀಕ್ಷೆಯಲ್ಲಿ ರೈತ ಸಮುದಾಯ ಕಾಯುತ್ತಿದೆ. ಇದು ಒಂದು ವಿಚಾರ.

ಇನ್ನೂ ಕೊಂಚ ಕಾದು ಪ್ರತಿಕ್ರಿಯೆ ನೀಡಬಹುದಾಗಿದೆ
ಇನ್ನೊಂದು ಇದೀಗ ರೈತರು ಪ್ರತಿಭಟಿಸುತ್ತಿರುವುದು ಸರ್ಕಾರದ ಎದುರು. ಸರ್ಕಾರಕ್ಕೆ ಕಾಯಿದೆಗಳನ್ನು ವಾಪಸ್ ಪಡೆಯಿರಿ ಎಂದು ತಾಕೀತು ಮಾಡುತ್ತಿದ್ದಾರೆ. ಏತನ್ಮಧ್ಯೆ ಈ ವಿಷಯದ ಬಗ್ಗೆ ಕಾಳಜಿ ಉಳ್ಳ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅದರ ವಿಚಾರಣೆಯ ಅಂಗವಾಗಿ ಇಂದು ಸರ್ವೋಚ್ಛ ನ್ಯಾಯಾಲಯ ಕೇಂದ್ರಕ್ಕೆ " ನೀವು ಹಿಂಪಡೆಯುತ್ತೀರೋ. ಇಲ್ಲವೇ ನಾವೇ ಏನಾದರೂ ಮಾಡಬೇಕೋ.." ಎಂದು ಹೇಳಿದೆ. ಇದು ಈಗ ನಡೆಯುತ್ತಿರುವ ರೈತ ಚಳವಳಿಗೆ ಪೂರಕವಾದ ಮಾತೇ ಹೊರತು ಸ್ಪಷ್ಟವಾದ ಆದೇಶವಾಗಲಿ ಅಥವಾ ನಿರ್ದೇಶನವಾಗಲಿ ಇದರಲ್ಲಿಲ್ಲ. ಹಾಗಾಗಿ ಚಳವಳಿಯ ಮುಖಂಡರು ಈ ಬಗ್ಗೆ ಇನ್ನೂ ಕೊಂಚ ಕಾದು ಪ್ರತಿಕ್ರಿಯೆ ನೀಡಬಹುದಾಗಿದೆ.












Click it and Unblock the Notifications