ಕಬ್ಬನ್ ಪಾರ್ಕ್ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚನೆ
ಬೆಂಗಳೂರು, ಜೂ. 12 : ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ 'ಭಾನುವಾರದ ವಾಹನ ಸಂಚಾರ ನಿಷೇಧ' ಜಾರಿಗೆ ತಂದಿದ್ದ ತೋಟಗಾರಿಕಾ ಇಲಾಖೆ ಈಗ ಪಾರ್ಕ್ ಅಭಿವೃದ್ಧಿಯತ್ತ ಗಮನ ಹರಿಸಿದೆ. ಕಬ್ಬನ್ ಉದ್ಯಾನದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದಾರೆ.
ಕಬ್ಬನ್ ಉದ್ಯಾನ ನಿರ್ವಹಣಾ ಪ್ರಾಧಿಕಾರ ರಚನೆ ಕುರಿತು ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಅವರು ಪ್ರಾಧಿಕಾರ ರಚನೆಗೆ ಅನುಮತಿ ಕೊಟ್ಟಿದ್ದಾರೆ. ತೋಟಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. [ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರಕ್ಕೆ ಬ್ರೇಕ್]

ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರ ರಚನೆಯಾಗಲಿದೆ. ಪ್ರಾಧಿಕಾರದ ಸ್ವರೂಪ, ಮಾರ್ಗಸೂಚಿ ಮತ್ತಿತರ ವಿಷಯಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ಎರಡೂ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಸಿದ್ಧಪಡಿಸಿ ಮುಖ್ಯಮಂತ್ರಿಯವರಿಗೆ ಸಲ್ಲಿಸಲಿದ್ದಾರೆ. [ಸಂಡೇ ಸಂಚಾರ' ಬಂದ್, ಸಿಹಿ ಹಂಚಿಕೆ]
ಕಬ್ಬನ್ ಉದ್ಯಾನದ ಸಮಗ್ರ ಅಭಿವೃದ್ಧಿ : ಉದ್ಯಾನ ನಿರ್ವಹಣೆ ಮತ್ತು ಸಮಗ್ರ ಅಭಿವೃದ್ಧಿಗಾಗಿ ಖಾಸಗಿ ಸಂಸ್ಥೆಗಳ ನೆರವು ಪಡೆಯಲಾಗುತ್ತದೆ. ಉದ್ಯಾನಕ್ಕೆ ಪ್ರವಾಸಿಗರನ್ನು ಅಧಿಕ ಸಂಖ್ಯೆಯಲ್ಲಿ ಸೆಳೆಯಲು ಪ್ರಾಧಿಕಾರದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಉದ್ಯಾನದ ಅವರಣದಲ್ಲಿರುವ ಬಾಲಭವನ, ಮತ್ಯ್ಯಾಲಯ, ಚಿಣ್ಣರ ಉದ್ಯಾನ ಸೇರಿದಂತೆ ಹಾಲಿ ಇರುವ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಪ್ರಾಧಿಕಾರದಲ್ಲಿ ತೋಟಗಾರಿಕೆ ಮತ್ತು ಪ್ರವಾಸೋದ್ಯಮ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಇರುತ್ತಾರೆ.
ಪ್ರಾಧಿಕಾರ ರಚನೆಯಾದರೂ ಕಬ್ಬನ್ ಉದ್ಯಾನದ ಮಾಲೀಕತ್ವ ತೋಟಗಾರಿಕೆ ಇಲಾಖೆಯದ್ದೇ ಆಗಿರುತ್ತದೆ. ಹಾಲಿ ಇರುವ ಪಾರಂಪರಿಕ ಕಟ್ಟಡಗಳಿಗೆ ಹಾನಿಯಾಗದಂತೆ ಹಾಗೂ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಲಾಗುತ್ತದೆ.
ಸಭೆಯಲ್ಲಿ ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ, ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ, ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಆರ್. ರೋಷನ್ ಬೇಗ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications