Cardamom: ಕೊಡಗಿನಿಂದ ಸಂಬಾರ ರಾಣಿ ಏಲಕ್ಕಿ ಮರೆಯಾಗಿದ್ದು ಹೇಗೆ..?
ಮಡಿಕೇರಿ, ಜೂನ್ 13: ಮೋಡ ಕವಿದ ವಾತಾವರಣದೊಂದಿಗೆ ಮೈನಡುಕ ಹುಟ್ಟಿಸುವ ಚಳಿ ಜತೆಗೆ ಆಗಾಗ್ಗೆ ಸುರಿಯುವ ಮಳೆ ಕೊಡಗಿನಲ್ಲಿ ಮುಂಗಾರಿನ ವಾತಾವರಣವನ್ನು ಸೃಷ್ಟಿ ಮಾಡಿದೆ. ಈ ಸಮಯದಲ್ಲಿ ಜಿಲ್ಲೆಯ ಬೆಳೆಗಾರರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈ ನಡುವೆ ಕೊಡಗಿನಿಂದ ಹಲವು ಕೃಷಿ ಬೆಳೆಗಳು ನಿಧಾನವಾಗಿ ನೇಪಥ್ಯಿಕ್ಕೆ ಸರಿಯುತ್ತಿರುವುದು ಗೋಚರಿಸುತ್ತಿದೆ. ಅದರಲ್ಲಿ ಏಲಕ್ಕಿಯೂ ಒಂದಾಗಿದೆ.
ಮೂರು ದಶಕಗಳ ಹಿಂದೆ ಈ ಸಮಯದಲ್ಲಿ ಕೃಷಿಕರು ಏಲಕ್ಕಿ ಕೃಷಿಗೆ ಹೆಚ್ಚಿನ ಒತ್ತು ನೀಡಿದ್ದರು. ಅವತ್ತು ಸುರಿಯುತ್ತಿದ್ದ ಮಳೆ ಮತ್ತು ಚಳಿಯ ವಾತಾವರಣಕ್ಕೆ ಏಲಕ್ಕಿ ಬೆಳೆ ಹೊರತು ಪಡಿಸಿ ಬೇರೆ ಬೆಳೆಯನ್ನು ಬೆಳೆಯುವುದು ಕಷ್ಟವಾಗಿತ್ತು. ಹೀಗಾಗಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಏಲಕ್ಕಿ ಕೃಷಿಯನ್ನು ಮಾಡಲಾಗಿತ್ತು. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಮೊದಲೇ ನರ್ಸರಿಯಲ್ಲಿ ನೆಟ್ಟು ಬೆಳೆಸಿದ್ದ ಏಲಕ್ಕಿ ಗಿಡಗಳನ್ನು ತೋಟದಲ್ಲಿ ನೆಡುತ್ತಿದ್ದ ದೃಶ್ಯಗಳು ಕಂಡು ಬರುತ್ತಿದ್ದವು. ಪ್ರತಿ ವರ್ಷವೂ ತೋಟದ ನಡುವೆ ಸತ್ತು ಹೋದ ಅಥವಾ ರೋಗಕ್ಕೆ ತುತ್ತಾದ ಗಿಡಗಳನ್ನು ತೆರವುಗೊಳಿಸಿ ಅಲ್ಲಿಗೆ ಹೊಸ ಗಿಡಗಳನ್ನು ನೆಡಲಾಗುತ್ತಿತ್ತು.

ಮುಂಜಾನೆ ವೇಳೆಯಲ್ಲಿ ಗದ್ದೆಯಲ್ಲಿ ಉಳುಮೆ ಮತ್ತಿತರ ಕೆಲಸಗಳನ್ನು ಮುಗಿಸಿ ಆ ನಂತರ ಏಲಕ್ಕಿ ತೋಟಗಳಲ್ಲಿ ಕೆಲಸವನ್ನು ಮಾಡುತ್ತಿದ್ದರು. ಈ ರೀತಿಯ ದೃಶ್ಯಗಳು ಪ್ರತಿ ವರ್ಷವೂ ಸಾಮಾನ್ಯವಾಗಿತ್ತು. ಅವತ್ತು ಕೊಡಗಿನಲ್ಲಿ ಏಲಕ್ಕಿಯದ್ದೇ ಸಾಮ್ರಾಜ್ಯವಾಗಿತ್ತು. ಏಲಕ್ಕಿಗೆ ಉತ್ತಮ ದರ ದೊರೆಯುತ್ತಿದ್ದರಿಂದ ಏಲಕ್ಕಿ ಬೆಳೆಯುತ್ತಿದ್ದ ಬೆಳೆಗಾರನನ್ನು ಶ್ರೀಮಂತನೆಂದೇ ಭಾವಿಸಲಾಗುತ್ತಿತ್ತು. ಕನಿಷ್ಠ ಏನಿಲ್ಲವೆಂದರೂ ಒಂದು ಕೆಜಿ ಏಲಕ್ಕಿಗೆ ಸುಮಾರು 500ರಿಂದ 1000 ರೂ. ತನಕ ಬೆಲೆ ದೊರೆಯುತ್ತಿತ್ತು.
ಬೆಳೆಗಾರರ ಬದುಕು ಹಸನು ಮಾಡಿದ್ದ ಏಲಕ್ಕಿ
ಬೆಳೆಗಾರರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಕೊಡುತ್ತಿದ್ದ ಕೃಷಿಯಾಗಿ ಏಲಕ್ಕಿ ಬೆಳೆಗಾರರ ಕೈಹಿಡಿದಿತ್ತು. ಮಳೆಗಾಲದಲ್ಲಿ ಗಿಡ ನೆಟ್ಟು ಒಂದಷ್ಟು ಆರೈಕೆ ಮಾಡಿದರೆ ಒಂದೆರಡು ವರ್ಷದಲ್ಲಿ ಫಸಲು ನೀಡುತ್ತಿತ್ತು. ಇಲ್ಲಿ ಹೆಚ್ಚು ಕಾಡು ಇತ್ತು. ಅಲ್ಲದೆ ಯಥೇಚ್ಛವಾಗಿ ಮಳೆ ಸುರಿಯುತ್ತಿದ್ದರಿಂದ ಆ ಹವಾಗುಣಕ್ಕೆ ಏಲಕ್ಕಿ ಹೊರತುಪಡಿಸಿ ಬೇರೆ ಕೃಷಿ ಮಾಡುವುದು ಕಷ್ಟದ ಕೆಲಸವಾಗಿತ್ತು. ಇದಲ್ಲದೆ ಕಾಫಿ ಬೆಳೆಯೋಣ ಎಂದರೆ ಸಾಮಾನ್ಯರಿಗೆ ಅದನ್ನು ಬೆಳೆಯುವುದು ಸಾಧ್ಯವಿರಲಿಲ್ಲ. ಅದು ಸಂಪೂರ್ಣ ಕಾಫಿ ಮಂಡಳಿಯ ಹಿಡಿತದಲ್ಲಿತ್ತು. ಪರವಾನಗಿ ಮೂಲಕವೇ ಕಾಫಿ ಬೆಳೆಯಬೇಕಾಗಿತ್ತು. ಹೀಗಾಗಿ ಅದರ ಉಸಾಬರಿ ಬೇಡವೆಂದು ಎಲ್ಲರೂ ಏಲಕ್ಕಿಯನ್ನೇ ಬೆಳೆಯುತ್ತಿದ್ದರು.

ಏಲಕ್ಕಿಯನ್ನು ಬೆಳೆದು ಜೋಪಾನವಾಗಿ ಮನೆಯಲ್ಲಿಟ್ಟುಕೊಳ್ಳುತ್ತಿದ್ದ ರೈತ ತನಗೆ ಹಣದ ಅವಶ್ಯಕತೆಯಿದ್ದಾಗ ಮಾತ್ರ ಮಾರಾಟ ಮಾಡುತ್ತಿದ್ದನು. ಒಟ್ಟಾರೆ ಆ ದಿನಗಳು ಏಲಕ್ಕಿ ಬೆಳೆಗಾರನ ಪಾಲಿಗೆ ಸುವರ್ಣಮಯ ದಿನಗಳಾಗಿದ್ದವು. ಆದರೆ ಅವತ್ತಿನ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ಸಂಬಾರ ರಾಣಿ ಏಲಕ್ಕಿ ಇದೀಗ ಕೊಡಗಿನಲ್ಲಿ ಸಂಪೂರ್ಣ ಮರೆಯಾಗಿದೆ. ಅದರ ಜಾಗವನ್ನು ಕಾಫಿ ಆಕ್ರಮಿಸಿಕೊಂಡಿದೆ. ಜಿಲ್ಲೆಗೊಂದು ಸುತ್ತುಹೊಡೆದರೆ ಹಿಂದೆ ಏಲಕ್ಕಿ ತೋಟಗಳಾಗಿದ್ದದ್ದು ಕಾಫಿ ತೋಟವಾಗಿ ಮಾರ್ಪಟ್ಟಿರುವುದು ಕಾಣಸಿಗುತ್ತವೆ. ಕೆಲವೇ ಕೆಲವು ಸ್ಥಳಗಳಲ್ಲಿ ಮಾತ್ರ ಏಲಕ್ಕಿ ಕಂಡು ಬರುತ್ತಿದೆಯಾದರೂ ಶೇಕಡ 10ರಷ್ಟು ಭಾಗವೂ ಏಲಕ್ಕಿ ತೋಟ ಇಲ್ಲದಿರುವುದು ಮಾತ್ರ ದುರಂತ.
ಬೆಳೆಗಾರ ಏಲಕ್ಕಿಯತ್ತ ಆಸಕ್ತಿ ಕಳೆದುಕೊಂಡಿದ್ದೇಕೆ?
ಏಲಕ್ಕಿಯತ್ತ ಕೃಷಿಕ ಆಸಕ್ತಿ ಕಳೆದುಕೊಳ್ಳಲು ಕಾರಣಗಳು ಹಲವು ಇದೆ. ಅದರಲ್ಲೂ ಪ್ರಮುಖವಾಗಿ ಅದಕ್ಕೆ ತಗುಲಿದ ಕಟ್ಟೆರೋಗ, ಅದಾದ ನಂತರ ದರ ಇಳಿಕೆಯಾಗಿದ್ದು, ವಾತಾವರಣದಲ್ಲಿ ಏರುಪೇರು, ಮುಂಗಾರು ಮಳೆಯ ಕೊರತೆ, ಕಾಡುಗಳು ನಾಶವಾಗಿದ್ದು, ಕಾಫಿಯ ಬೆಳೆಯತ್ತ ಆಸಕ್ತಿ, ಇದೆಲ್ಲವೂ ಏಲಕ್ಕಿ ಕೊಡಗಿನಿಂದ ಮರೆಯಾಗಲು ಕಾರಣವಾಗಿದೆ ಎಂದರೆ ತಪ್ಪಾಗುವುದಿಲ್ಲ. ಇವತ್ತು ಏಲಕ್ಕಿ ಬೆಳೆಯನ್ನು ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಬೆಳೆಯಲಾಗುತ್ತಿದೆ. ಆದರೆ ಮೊದಲಿನಷ್ಟು ಇಳುವರಿ ಪಡೆಯುವುದು ಕಷ್ಟವಾಗಿದೆ.

ಒಂದು ಕಾಲದಲ್ಲಿ ಏಲಕ್ಕಿಯನ್ನಷ್ಟೆ ಬೆಳೆಯುತ್ತಿದ್ದ ದಟ್ಟ ಕಾಡಿನಿಂದ ಕೂಡಿದ್ದ ಪ್ರದೇಶಗಳಲ್ಲಿ ಇವತ್ತು ಮರಕಾಡುಗಳನ್ನು ತೆರವುಗೊಳಿಸಿ ಅಲ್ಲಿ ಕಾಫಿ ತೋಟವನ್ನು ನಿರ್ಮಿಸಲಾಗಿದೆ. ಏಲಕ್ಕಿ ಬೆಳೆಯಬೇಕಾದರೆ ತೇವಾಂಶದಿಂದ ಕೂಡಿದ ಮಣ್ಣು ಮತ್ತು ಶೀತ ವಾತಾವರಣ ಬಹು ಮುಖ್ಯವಾಗಿದೆ. ಜತೆಗೆ ನೀರಿನ ವ್ಯವಸ್ಥೆಯೂ ಅಗತ್ಯವಿದೆ. ಮೊದಲಾದರೆ ಬೇಸಿಗೆಯಲ್ಲಿ ಆಗೊಮ್ಮೆ ಈಗೊಮ್ಮೆ ಸಕಾಲದಲ್ಲಿ ಮಳೆಯಾಗುತ್ತಿತ್ತು. ಹೀಗಾಗಿ ಏಲಕ್ಕಿ ಗಿಡಗಳು ಬದುಕಿ ಉಳಿಯುತ್ತಿದ್ದವು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಮಳೆಯಿಲ್ಲದೆ ಉಷ್ಣಾಂಶ ಹೆಚ್ಚುತ್ತಿರುವುದರಿಂದ ಬೇರು ಭೂಮಿ ಆಳಕ್ಕೆ ಹೋಗುವ ಕಾಫಿ ಗಿಡಗಳೇ ಸಾಯುತ್ತಿವೆ.
ಭವಿಷ್ಯದಲ್ಲಿ ಏಲಕ್ಕಿ ಕಣ್ಮರೆಯಾದರೂ ಅಚ್ಚರಿಯಿಲ್ಲ
ಇನ್ನು ಮಣ್ಣಿನ ಮೇಲ್ಭಾಗದಲ್ಲಿ ಬೇರು ಬಿಟ್ಟು ಬೆಳೆಯುವ ಏಲಕ್ಕಿ ಉಳಿಯುವುದು ಕಷ್ಟಸಾಧ್ಯವೇ. ಒಂದೆಡೆ ರೋಗ ಮತ್ತೊಂದೆಡೆ ದರ ಕುಸಿತ ಹೀಗಾಗಿಯೇ ಇದರತ್ತ ಆಸಕ್ತಿ ಕಳೆದುಕೊಂಡು ಕಾಫಿ ಬೆಳೆಯತ್ತ ಬೆಳೆಗಾರರು ಒತ್ತು ನೀಡಿದ್ದರಿಂದ ಕಾಫಿ ತೋಟದ ವಿಸ್ತಾರ ಹೆಚ್ಚಾಗಿದೆ. ಆದರೆ ಏಲಕ್ಕಿ ಬೆಳೆಯನ್ನು ಉಳಿಸಿಕೊಳ್ಳುವತ್ತ ಕೆಲವು ಕೃಷಿಕರು ಇನ್ನೂ ಕೂಡ ಶ್ರಮ ವಹಿಸುತ್ತಿದ್ದಾರೆ. ಮಡಿಕೇರಿ ತಾಲೂಕಿನ ಅಪ್ಪಂಗಳದಲ್ಲಿರುವ ಏಲಕ್ಕಿ ಕೃಷಿ ಸಂಶೋಧನಾ ಕೇಂದ್ರ ಏಲಕ್ಕಿ ಕೃಷಿ ಬಗ್ಗೆ ಹಲವು ಸಂಶೋಧನೆಗಳನ್ನು ಮಾಡುತ್ತಾ ಬಂದಿದೆ.
ಇವತ್ತು ಏಲಕ್ಕಿ ಕೆಜಿವೊಂದಕ್ಕೆ 3500 ಬೆಲೆಯಿದ್ದು, ಈಗ ಅಳಿದುಳಿದ ಕಡೆಗಳಲ್ಲಿ ಮಾತ್ರ ಏಲಕ್ಕಿ ತೋಟಗಳು ಕಂಡು ಬರುತ್ತಿದೆಯಾದರೂ ಅದನ್ನು ಆಸಕ್ತಿಯಿಂದ ಬೆಳೆಸುವವರ ಸಂಖ್ಯೆ ಕಡಿಮೆಯಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಕೇರಳದ ವೈನಾಡ್ ವ್ಯಾಪ್ತಿಯಲ್ಲಿ ಏಲಕ್ಕಿಯ ನೆಲ್ಯಾಣಿ ಎಂಬ ತಳಿಯನ್ನು ಬೆಳೆಸಲಾಗುತ್ತಿದೆ. ಈ ತಳಿ ಸಾಂಪ್ರದಾಯಿಕ ತಳಿಗಿಂತ ಹತ್ತು ಪಟ್ಟು ಇಳುವರಿ ನೀಡುತ್ತದೆ. ಕೊಡಗಿನಲ್ಲಿ ಎಕರೆಗೆ ಹೆಚ್ಚೆಂದರೆ ಐವತ್ತರಿಂದ ನೂರು ಕೆಜಿ ಬೆಳೆದರೆ ಕೇರಳದಲ್ಲಿ ಐನೂರು ಕೆಜಿ ಬೆಳೆಯುತ್ತಿದ್ದಾರಂತೆ. ಅದು ಏನೇ ಇರಲಿ ಭವಿಷ್ಯದಲ್ಲಿ ಕೊಡಗಿನಲ್ಲಿ ಏಲಕ್ಕಿ ಅಳಿದು ಹೋದರೂ ಅಚ್ಚರಿ ಪಡಬೇಕಿಲ್ಲ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications