ಇಂದು ಕೇಂದ್ರದಿಂದ ಶುಗರ್ ಬಾಂಬ್ ಎಸೆತ

ಜನಸಾಮಾನ್ಯರಿಗೆ ಹೊರೆಯೆನಿಸುವ ಕೇಂದ್ರದ ಇತ್ತೀಚಿನ ನೀತಿಗಳನ್ನು ವಿರೋಧಿಸಿ ಇದೇ ಶುಕ್ರವಾರ ತೃಣಮೂಲ ಪಕ್ಷವು ದೀದಿಗಿರಿ ನಡೆಸಲು ಸಜ್ಜಾಗಿರುವ ಹೊತ್ತಿನಲ್ಲೇ ಕೇಂದ್ರವು ಅದೇ ಸಬ್ಸಿಡಿ ನೀತಿಯನ್ನು ಮುಂದಿಟ್ಟುಕೊಂಡು ಸಕ್ಕರೆ ಬೆಲೆಯನ್ನು ವಿಪರೀತವಾಗಿ ಏರಿಸಲು ಸಜ್ಜಾಗಿದೆ.
ಗಮನಾರ್ಹವೆಂದರೆ ಕಳೆದೊಂದು ದಶಕದಿಂದ (2002ರ ಮಾರ್ಚ್) ನ್ಯಾಯ ಬೆಲೆ ಅಂಗಡಿಗಳಲ್ಲಿ ಸಕ್ಕರೆಯ ಬೆಲೆ ಕೆಜಿಗೆ 15 ರೂಪಾಯಿ ಒಳಗೇ ಇದೆ. ಅದೇ ಮುಕ್ತ ಮಾರುಕಟ್ಟೆಯಲ್ಲಿ ಇದರ ಬೆಲೆ ಯಾವಾಗಲೋ ದುಪ್ಪಟ್ಟಾಗಿದೆ. ಆದರೂ ಯಾವುದೇ ಸರಕಾರ ಜನಸಾಮಾನ್ಯನ ಪಡಿತರ ಸಕ್ಕರೆಯ ಬೆಲೆಯನ್ನು ಏರಿಸುವ ಗೋಜಿಗೆ ಹೋಗಿರಲಿಲ್ಲ.
ಕಾದಿದೆ ಸಕ್ಕರೆ ಬೆಲೆ ಏರಿಕೆ ಕಹಿ: ಆದರೆ ಈಗ ಕಾಂಗ್ರೆಸ್ ನೇತೃತ್ವದ ಯುಪಿಎ-2 ಪಡಿತರ ಸಕ್ಕರೆಗೆ ನೀಡುತ್ತಿರುವ ಸಹಾಯ ಧನವನ್ನು ಕಟ್ ಮಾಡುವ ಮಾತನ್ನಾಡಿದೆ. ಹಾಗಾಗಿ ಸಬ್ಸಿಡಿ ನಿಂತರೆ ಪಡಿತರ ಸಕ್ಕರೆಯ ಬೆಲೆಯೂ ಮುಕ್ತ ಮಾರುಕಟ್ಟೆ ಬೆಲೆಯ ಅಂಚಿಗೆ ಬರಲಿದೆ.
PDS ಮೂಲಕ ಕೇಂದ್ರವು ಪ್ರತಿ ವರ್ಷ 27 ಲಕ್ಷ ಟನ್ ಸಕ್ಕರೆಯನ್ನು ವಿತರಿಸುತ್ತಿದೆ. ಆದರೆ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ವಾಣಿಜ್ಯ ವ್ಯವಹಾರಗಳ ಕೇಂದ್ರ ಸಚಿವ ಸಂಪುಟ ಸಮಿತಿಯು ಸಬ್ಸಿಡಿ ಹಣ ಉಳಿತಾಯ ಮಂತ್ರ ಜಪಿಸುತ್ತಾ ಈ ಸಕ್ಕರೆಯ ಬೆಲೆಯನ್ನು ಕೆಜಿಗೆ 25 ರೂಪಾಯಿಗೆ ಹೆಚ್ಚಿಸುವ ಸಲಹೆ ನೀಡಿಯಾಗಿದೆ. ಒಂದು ವೇಳೆ ಕೆಜಿ ಸಕ್ಕರೆಯನ್ನು ಈ ಬೆಲೆಗಿಂತ (ಕೆಜಿಗೆ 25 ರೂ) 1 ರೂಪಾಯಿ ಕಡಿಮೆ ಬೆಲೆಗೆ ಮಾರಿದರೂ ಸರಕಾರದ ಮೇಲೆ ವಾರ್ಷಿಕ 270 ಕೋಟಿ ರೂ. ಹೊರೆ ಬೀಳಲಿದೆ.
ಕಳೆದ ಹಂಗಾಮಿನಲ್ಲಿ ಕೇಂದ್ರವು ಶುಗರ್ ಮಿಲ್ ಗಳಿಗೆ ಸುಮಾರು ಕೆಜಿಗೆ 20 ರೂಪಾಯಿ ನೀಡಿ ಸಕ್ಕರೆಯನ್ನು ಸಂಗ್ರಹಿಸಿದೆ. ಲೆವಿ ನೀತಿಯಡಿ ಶುಗರ್ ಮಿಲ್ ಗಳು ತನ್ನ ಉತ್ಪಾದನೆಯಲ್ಲಿ ಶೇ. 10ರಷ್ಟನ್ನು ಕಡಿಮೆ ದರದಲ್ಲಿ ಸರಕಾರಕ್ಕೆ ನೀಡಬೇಕು.
ಹೀಗೆ ಉತ್ಪಾದನಾ ವೆಚ್ಚದ ಶೇ. 60 ದರದಲ್ಲಿ ಸರಕಾರಕ್ಕೆ ಸಕ್ಕರೆಯನ್ನು ನೀಡುವುದರ ಮೂಲಕ ಶುಗರ್ ಮಿಲ್ ಗಳು ವಾರ್ಷಿಕ 2,500-3,000 ಕೋಟಿ ರೂ. ನಷ್ಟ ಅನುಭವಿಸುತ್ತಿವೆ. ದೇಶದಲ್ಲಿ ವಾರ್ಷಿಕ ಸಕ್ಕರೆ ಬೇಡಿಕೆ ಪ್ರಮಾಣ 22 ದಶಲಕ್ಷ ಟನ್ ನಷ್ಟಿದೆ. ಕಳೆದ ಹಂಗಾಮಿನಲ್ಲಿ ಶುಗರ್ ಮಿಲ್ ಗಳು 26 ದಶಲಕ್ಷ ಟನ್ ಸಕ್ಕರೆಯನ್ನು ಉತ್ಪಾದಿಸಿವೆ.


Click it and Unblock the Notifications
