ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಬಂದ್; ಕರ್ನಾಟಕದ ಎಲ್ಲೆಲ್ಲಿ ಪ್ರತಿಭಟನೆ ನಡೆಯುತ್ತಿದೆ?

By Lekhaka
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 25: ಎಪಿಎಂಸಿ ಹಾಗೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಭಾರತ್ ಬಂದ್ ಗೆ ಇಂದು ಕರೆ ನೀಡಿದ್ದು, ಹಲವು ಕಡೆ ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಇಂದು ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಸೇರಿದಂತೆ 10ಕ್ಕೂ ಹೆಚ್ಚು ಸಂಘಟನೆಗಳಿಂದ ಬಂದ್ ಗೆ ಕರೆ ನೀಡಲಾಗಿತ್ತು. ರಾಜ್ಯದಾದ್ಯಂತ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ತಡೆ ಚಳವಳಿಗೆ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ-ಕರ್ನಾಟಕದ ಕರೆ ನೀಡಿತ್ತು. ಆದರೆ ಸೆಪ್ಟೆಂಬರ್ 25ರಂದು ಉದ್ದೇಶಿತ ಬಂದ್ ಹಿಂಪಡೆಯಲಾಗಿದೆ. ಕರ್ನಾಟಕದಲ್ಲಿ ಮಸೂದೆ ಮಂಡನೆಯಾದರೆ ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್ ಆಚರಿಸಲಾಗುವುದು ಎಂದು ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದರು. ಹೀಗಾಗಿ ಇಂದು ಸಾಂಕೇತಿಕ ಪ್ರತಿಭಟನೆ ನಡೆದಿದೆ. ಕೆಲವೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಯಾವ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯಿತು? ಮುಂದೆ ಓದಿ...

 ಮೈಸೂರಿನಲ್ಲಿ ರೈತಪರ ಸಂಘಟನೆಗಳ ಹೋರಾಟ

ಮೈಸೂರಿನಲ್ಲಿ ರೈತಪರ ಸಂಘಟನೆಗಳ ಹೋರಾಟ

ಕೃಷಿ ವಿರೋಧಿ ಭೂಸುಧಾರಣೆ ತಿದ್ದುಪಡಿ ಕಾಯ್ದೆ 2020 ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ 2020, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020, ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ 2020 ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆ ಮುಂತಾದ ಸುಗ್ರೀವಾಜ್ಞೆಗಳನ್ನು ವಾಪಸ್ ಪಡೆಯಬೇಕು. ಅವುಗಳನ್ನು ಶಾಸನಗಳನ್ನಾಗಿ ರೂಪಿಸುವ ಪ್ರಯತ್ನಗಳನ್ನು ತಕ್ಷಣವೇ ಕೈಬಿಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ ಸೇರಿದಂತೆ ಸಂಘಟನೆಗಳು ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ರಸ್ತೆ ತಡೆ ಚಳವಳಿ ನಡೆಸಿದವು.

ಬೆಂಗಳೂರಿಗೆ ಸೆ. 25ರಿಂದಲೇ ಬಂದ್ ಬಿಸಿ, ಸಂಚಾರ ಅಸ್ತವ್ಯಸ್ತ!ಬೆಂಗಳೂರಿಗೆ ಸೆ. 25ರಿಂದಲೇ ಬಂದ್ ಬಿಸಿ, ಸಂಚಾರ ಅಸ್ತವ್ಯಸ್ತ!

 ಬೆಂಗಳೂರಿನಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ

ಬೆಂಗಳೂರಿನಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ

ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ರೈತರು ಬಾರುಕೋಲು ಬೀಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಶುಕ್ರವಾರ ಬೆಂಗಳೂರಿನಲ್ಲಿ ನೂರಾರು ರೈತರು ಜವಾವಣೆಗೊಂಡಿದ್ದರು. ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವಾರು ರೈತ ಮುಖಂಡರು ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ರೈತರು ಪ್ರತಿಭಟನೆ ಮಾಡುತ್ತಿದ್ದು, ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೆಂಗಳೂರು ನಗರ ಸಂಚಾರಿ ಪೊಲೀಸರು ಸಂಚಾರ ವ್ಯವಸ್ಥೆ ಸುಗಮಗೊಳಿಸಲು 700 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.

 ಹುಬ್ಬಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ

ಹುಬ್ಬಳ್ಳಿಯಲ್ಲಿಯೂ ರೈತರು ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಳಸಾ ಬಂಡೂರಿ ಹೋರಾಟ ಸಮಿತಿ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ರಸ್ತೆ ಮಧ್ಯ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೂತನ ಕಾಯ್ದೆಗಳು ರೈತರಿಗೆ ಮಾರಕವಾಗಿವೆ.‌ ಅತಿವೃಷ್ಟಿ, ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರಿಗೆ ಮತ್ತಷ್ಟು ಸಂಕಷ್ಟಗಳನ್ನು ತಂದಿಡಲಿವೆ. ಕೆಲವೇ ಕೆಲವು ವ್ಯಾಪಾರಿಗಳು ಮತ್ತು ಬಂಡವಾಳ ಶಾಹಿಗಳು ಅಮಾಯಕರ ಸುಲಿಗೆ ಮಾಡಲಿದ್ದಾರೆ ಎಂದು ಆರೋಪಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಜನ‌ ವಿರೋಧಿ ಕಾಯ್ದೆಗಳನ್ನು‌ ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಹುಬ್ಬಳ್ಳಿ ತಹಶೀಲ್ದಾರ್ ಮುಖಾಂತರ ಸಿಎಂ‌ಗೆ ಮನವಿ ಸಲ್ಲಿಸಿದರು.

ರೈತರ ಬೃಹತ್ ಪ್ರತಿಭಟನೆ; ಬಾರುಕೋಲು ಬೀಸಿ ಆಕ್ರೋಶರೈತರ ಬೃಹತ್ ಪ್ರತಿಭಟನೆ; ಬಾರುಕೋಲು ಬೀಸಿ ಆಕ್ರೋಶ

 ಕೋಲಾರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ

ಕೋಲಾರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ

ಕೋಲಾರದಲ್ಲಿ ರೈತ ಸಂಘದ ನೂರಾರು ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಹೊರಹೊಲಯದ ವಡ್ಡಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75 ತಡೆದು ಪ್ರತಿಭಟನೆ ಕೈಗೊಂಡು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಸ್ಥಳಕ್ಕೆ ಬಂದ ಮುಳಬಾಗಿಲು ತಹಶೀಲ್ದಾರ್ ರಾಜಶೇಖರ್ ಗೆ ತರಕಾರಿ ಹಾಗೂ ಹಣ್ಣು ಕೊಟ್ಟು ಧಿಕ್ಕಾರ ಕೂಗಿದರು. ಇನ್ಮುಂದೆ ಕಾರ್ಪೊರೇಟ್ ಕಂಪನಿಗಳು ಬೆಳೆಯುವ ತರಕಾರಿ ಹಾಗೂ ಹಣ್ಣು ತಿನ್ನಿ ಎಂದು ಧಿಕ್ಕಾರ ಕೂಗಿದರು.

 ಈ ಜಿಲ್ಲೆಗಳಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ

ಈ ಜಿಲ್ಲೆಗಳಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಸಾಂಕೇತಿಕ ಪ್ರತಿಭಟನೆಯನ್ನು ಮಾತ್ರ ಕೈಗೊಳ್ಳಲಾಗಿದೆ. ಉತ್ತರ ಕನ್ನಡ ಜಿಲ್ಲೆ, ಚಿಕ್ಕಮಗಳೂರು, ಚಿತ್ರದುರ್ಗ, ಬೆಳಗಾವಿ ಜಿಲ್ಲೆಗಳಲ್ಲಿ ಯಾವುದೇ ಪ್ರತಿಭಟನೆ ನಡೆದಿಲ್ಲ. ಈ ಜಿಲ್ಲೆಗಳಲ್ಲಿ ಇಂದು ಜನಜೀವನ ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ಬಾಗಲಕೋಟೆಯಲ್ಲಿ ಜನಜೀವನ ಯಥಾಸ್ಥಿತಿಯಂತಿದೆ. ಇಳಕಲ್ ಹಾಗೂ ಜಮಖಂಡಿ ರೈತರು ಇಂದು ಬೆಳಿಗ್ಗೆ ಸಾಂಕೇತಿಕ ಪ್ರತಿಭಟನೆಯನ್ನಷ್ಟೇ ನಡೆಸಿದ್ದಾರೆ. ಅಂಗಡಿಮುಂಗಟ್ಟುಗಳು ತೆರೆದಿದ್ದು, ಬಸ್ ಸಂಚಾರ ಎಂದಿನಂತೆ ಆರಂಭವಾಗಿದೆ. 28ರ ಬಂದ್ ಗೆ ಜಿಲ್ಲೆಯನ್ನು ಸಂಪೂರ್ಣ ಬಂದ್ ಮಾಡಲು ಸಂಘಟನೆಗಳು ನಿರ್ಧರಿಸಿವೆ. ಹೀಗಾಗಿ ಇಂದು ಕೇಂದ್ರ ಸರ್ಕಾರದ ವಿರುದ್ಧ ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತಿದೆ.

ಬಳ್ಳಾರಿಯಲ್ಲಿ ಬೊಬ್ಬೆ ಹೊಡೆದು ಪ್ರತಿಭಟನೆ

ಬಳ್ಳಾರಿಯಲ್ಲಿ ಬೊಬ್ಬೆ ಹೊಡೆದು ಪ್ರತಿಭಟನೆ

ರೈತ ವಿರೋಧಿ ಕಾಯ್ದೆಯನ್ನು ವಿರೋಧಿಸಿ ಬಳ್ಳಾರಿಯಲ್ಲಿ ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಣಕು ಶವಯಾತ್ರೆ ಮಾಡಿ ತಮಟೆ, ವಾದ್ಯಗಳ ಮೂಲಕ ಬೋಬ್ಬೆ ಹೊಡೆದು ನಗರ ಪ್ರದಕ್ಷಿಣೆ ಮಾಡಿದರು. ರೈತ ವಿರೋಧಿ ನಿಲುವಿಗೆ ಆಕ್ರೋಶ ವ್ಯಕ್ತಪಡಿಸಿದ ರೈತರು, ಸರ್ಕಾರದ ವಿರುದ್ಧ ಮತ್ತು ಕಾಯ್ದೆಗೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಬಳ್ಳಾರಿ ಮತ್ತು ಸಂಡೂರಿನಲ್ಲೂ ರೈತರ ಪ್ರತಿಭಟನೆಗೆ ವಿವಿಧ ಪ್ರಗತಿಪರ ಸಂಘಗಳು ಸಾಥ್ ನೀಡಿದವು.

ಶಿವಮೊಗ್ಗ-ಹೊನ್ನಾಳಿ ರಸ್ತೆ ತಡೆದು ಪ್ರತಿಭಟನೆ

ಶಿವಮೊಗ್ಗ-ಹೊನ್ನಾಳಿ ರಸ್ತೆ ತಡೆದು ಪ್ರತಿಭಟನೆ

ರಾಜ್ಯ ರೈತ ಸಂಘ, ಎಸ್ ಡಿಪಿಐ, ಎನ್ ಎಸ್ ಯುಐ, ದಲಿತ ಸಂಘಟನೆ ಹಾಗೂ ಇತರೆ ಸಂಘಟನೆಗಳು ನಗರದಲ್ಲಿ ಶಿವಮೊಗ್ಗ - ಹೊನ್ನಾಳಿ ರಸ್ತೆಯಲ್ಲಿ ರಸ್ತೆ ತಡೆಯ ಮೂಲಕ ಪ್ರತಿಭಟನೆ ನಡೆಸಿದರು.

ಶಿಕಾರಿಪುರ, ಭದ್ರಾವತಿ, ಸಾಗರ‌ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ರಸ್ತೆ ತಡೆ ಮೂಲಕ‌ ಪ್ರತಿಭಟನೆಯನ್ನು ನಡೆಸಲಾಯಿತು. ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡ ಹೆಚ್.ಆರ್.ಬಸವರಾಜಪ್ಪ, ಸಂಘದ ಜಿಲ್ಲಾ ಗೌರವಾಧ್ಯಕ್ಷ ಈಶಣ್ಣ, ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಇ.ಬಿ.ಜಗದೀಶ್, ಕವಿರಂನ ಕೆ.ಎಲ್ ಅಶೋಕ್ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಇದ್ದರು.

English summary
More than 10 farmer organisations called bharath bandh today in karnataka opposing agriculture related bills land reform and apmc act. Here is a report on districts response to bharath bandh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X