ನಾಲೆಗಳಿಗೆ ಭದ್ರಾ ಡ್ಯಾಂ ನೀರು ಹರಿಸಿ: ದಾವಣಗೆರೆಯಲ್ಲಿ ರೈತ ಒಕ್ಕೂಟ ಒತ್ತಾಯ
ದಾವಣಗೆರೆ, ಡಿಸೆಂಬರ್, 21: ಕೂಡಲೇ ಭದ್ರಾ ಐಸಿಸಿ ಸಭೆ ಕರೆದು ನಾಲೆಗಳಲ್ಲಿ ನೀರು ಹರಿಸುವಂತೆ ಒತ್ತಾಯಿಸಿ ಭಾರತೀಯ ರೈತ ಒಕ್ಕೂಟವು ಅಪರ ಜಿಲ್ಲಾಧಿಕಾರಿ ಲೋಕೇಶ್ ಅವರಿಗೆ ಮನವಿ ಸಲ್ಲಿಸಿತು.
ದಾವಣಗೆರೆ ಜಿಲ್ಲೆಯ ಜೀವನಾಡಿ ಭದ್ರಾ ಜಲಾಶಯದಲ್ಲಿ ಪ್ರಸ್ತುತ 151 ಅಡಿ 5 ಇಂಚು ನೀರು ಸಂಗ್ರಹ ಇದೆ. ಅಂದ್ರೆ ಜಲಾಶಯದ ಗರಿಷ್ಠ ಸಂಗ್ರಹಣೆ ಸಾಮರ್ಥ್ಯ 71.535 ಇದ್ದು, ಪ್ರಸ್ತುತ ಸಂಗ್ರಹ ಪ್ರಮಾಣ 35.37 ಟಿಎಂಸಿ ಇದೆ. ಇದರಲ್ಲಿ 13.83 ಟಿಎಂಸಿ ಪ್ರಮಾಣದಷ್ಟು ಡೆಡ್ ಸ್ಟೋರೇಜ್ ಇದ್ದು, ಬಳಕೆಗೆ ಬರುವುದಿಲ್ಲ.
ಇನ್ನುಳಿದ 21.54 ಟಿಎಂಸಿ ನೀರು ಬಳಕೆಗೆ ಬರುತ್ತದೆ. ಅಧಿಕಾರಿಗಳು ಇದರಲ್ಲಿ ಕುಡಿಯುವ ನೀರಿಗಾಗಿ ಮತ್ತು ಕೈಗಾರಿಕೆಗಳಿಗೆಂದು ನೆಪ ಮಾಡಿಕೊಂಡು ಪೋಲು ಮಾಡುತ್ತಾರೆ. ಇದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ನಾಲೆಯಲ್ಲಿ ನೀರು ಹರಿಸಿದಾಗ ಕುಡಿಯುವ ನೀರಿಗಾಗಿ ದಾವಣಗೆರೆ ಟಿವಿ ಸ್ಟೇಷನ್ ಕೆರೆ ಮತ್ತು ಕುಂದುವಾಡದ ಕೆರೆ ತುಂಬಿಸಿಕೊಳ್ಳಬಹುದು. ಆದ್ದರಿಂದ ಬಳಸಬಹುದಾದ 21.54 ಟಿಎಂಸಿ ನೀರನ್ನು 72 ದಿನ ನಾಲೆಯಲ್ಲಿ ಹರಿಸಬಹುದು.

ಆದ್ದರಿಂದ ತಕ್ಷಣ ಐಸಿಸಿ ಸಭೆ ನಡೆಸಿ, ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸಬೇಕು. ಇದರಿಂದ ರೈತರು ನೀರು ಹರಿಸುವ ವೇಳಾಪಟ್ಟಿ ನೋಡಿಕೊಂಡು ಯಾವ ಬೆಳೆ ಬೆಳೆಯಬೇಕು ಎಂದು ಅವರೇ ತೀರ್ಮಾನಿಸಿಕೊಳ್ಳುತ್ತಾರೆ. ಕೆಲವು ರೈತರು ತೋಟ ಉಳಿಸಿಕೊಳ್ಳುತ್ತಾರೆ. ಕೆಲವು ರೈತರು ಅರೆ ನೀರಾವರಿ ಬೆಳೆ ಬೆಳೆದುಕೊಳ್ಳುತ್ತಾರೆ. ಹೆಚ್ಚುವರಿ ನೀರಿನ ಸೌಲಭ್ಯ ಹೊಂದಿರುವ ಇನ್ನು ಕೆಲವು ರೈತರು ಭತ್ತ ಬೆಳೆಯುತ್ತಾರೆ ಎಂದು ತಿಳಿಸಿದೆ.
ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಭದ್ರಾ ನೀರು ಅವಲಂಬಿಸಿಕೊಂಡಿರುವ ದಾವಣಗೆರೆ ಮತ್ತು ಇತರೆ ನಗರಗದವರು ನಾಲೆಯಲ್ಲಿ ನೀರು ಹರಿಸಿದಾಗ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಿಕೊಳ್ಳಲು ಅವಕಾಶವಾಗುವುದರಿಂದ ಅವುಗಳ ನೀರಿನ ದಾಹವನ್ನು ತೀರಿಸಬಹುದಾಗಿದೆ ಎಂದು ಹೇಳಿದೆ.
ತಕ್ಷಣ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆದು 72 ದಿನ ನೀರು ಹರಿಸುವ ವೇಳಾಪಟ್ಟಿ ನಿರ್ಣಯಿಸಿ, ಪ್ರಕಟಣೆ ಮಾಡಬೇಕು. ಭದ್ರಾ ಜಲಾಶಯದಲ್ಲಿ ಪ್ರತಿದಿನ ನೀರಿನ ಸೋರಿಕೆಯಾಗುತ್ತಿದ್ದು, ನಿತ್ಯ ಸುಮಾರು 300ರಿಂದ 400 ಕ್ಯೂಸೆಕ್ಸ್ ನೀರು ಪೋಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಶೀಲಿಸಿ, ಸೋರಿಕೆ ನಿಯಂತ್ರಿಸಬೇಕು.
ಭದ್ರಾ ನೀರು ಹರಿಸಿದಾಗ ಹಿರೇಕೋಗಲೂರು ಸೂಪರ್ ಪ್ಯಾಸೇಜ್ ಒಡೆದು ಮತ್ತು ಬೆಳ್ಳಿಗನೂಡು, ಮತ್ತಿ, ಸಂತೇಬೆನ್ನೂರು ಮುಂತಾದ ಕಡೆಗಳಲ್ಲಿ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗಳು ಶಿಥಿಲಗೊಂಡು ಬಹಳಷ್ಟು ಪ್ರಮಾಣದ ನೀರು ರಸ್ತೆಯಲ್ಲಿ ಹರಿದು ಪೋಲಾಗುತ್ತಿದೆ. ಇದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ತಕ್ಷಣವೇ ಕ್ರಮ ಕೈಗೊಂಡು, ನಾಲೆಯಲ್ಲಿ ಹರಿಯುವ ನೀರು ಪೋಲಾಗದಂತೆ ದುರಸ್ಥಿ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಮನವಿ ಸಲ್ಲಿಸುವ ವೇಳೆ ಮಾತನಾಡಿದ ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್ ಅವರು, ಹಿಂದಿನ ಹಂಗಾಮಿನಲ್ಲಿ ಡ್ಯಾಂನಲ್ಲಿ ನೀರು ಇದೆ ಹರಿಯಲು ಬಿಡಿ ಎಂದು ಹೇಳಿದಾಗ ನಮ್ಮನ್ನು ನೀರು ಎಲ್ಲಿದೆ ಎಂದು ಅಪಹಾಸ್ಯ ಮಾಡಿದರು. ನಾವು ಹೋರಾಟ ಮಾಡಿ, ನೀರು ಬಿಡಿಸಿದೆವು. ರೈತರು ಭತ್ತದ ನಾಟಿ ಬೆಳೆ ಬೆಳೆದರು. ಇಳುವರಿ ಚೆನ್ನಾಗಿ ಬಂತು ಮತ್ತು ಒಳ್ಳೆಯ ಬೆಲೆ ಸಿಕ್ಕಿತು ಎಂದರು.
ಬೆಳವನೂರು ನಾಗೇಶ್ವರರಾವ್ ಮಾತನಾಡಿ ಈಗ ಬೇಸಿಗೆಯಲ್ಲಿ ನೀರು ಹರಿಸಿದ್ರೆ ರೈತರು ನೀರಿನ ಲಭ್ಯತೆ ನೋಡಿಕೊಂಡು ಯಾವುದಾದರೂ ಬೆಳೆ ಬೆಳೆಯುತ್ತಾರೆ ಮತ್ತು ಬೋರ್ ವೆಲ್ ರಿಚಾರ್ಜ್ ಆಗುತ್ತವೆ ಎಂದರು.
ಧನಂಜಯ ಕಡ್ಲೆಬಾಳ್ ಮಾತನಾಡಿ, ಹಿಂದಿನ ಹಂಗಾಮಿನಲ್ಲಿ ಕೊಳ್ಳೇನಹಳ್ಳಿ ಬಿ.ಎಂ.ಸತೀಶ್, ಬೆಳವನೂರು ನಾಗೇಶ್ವರರಾವ್ ಮುಂತಾದವರ ಹೋರಾಟದಿಂದ ನೀರು ಲಭಿಸಿ ರೈತರು ಒಳ್ಳೆಯ ಭತ್ತದ ಇಳುವರಿ ಮತ್ತು ದರ ಪಡೆದರು. ರೈತ ಸಮುದಾಯದ ಪರವಾಗಿ ಅವರಿಗೆ ಧನ್ಯವಾದ ಅರ್ಪಿಸಿದರು.
ರೈತ ಮುಖಂಡರಾದ ಕೊಳೇನಹಳ್ಳಿ ಬಿ.ಎಂ.ಸತೀಶ್, ಬೆಳವನೂರು ನಾಗೇಶ್ವರರಾವ್, ಧನಂಜಯ ಕಡ್ಲೆಬಾಳ್, ಬಲ್ಲೂರು ಬಸವರಾಜ್, ಕುಂದುವಾಡದ ಗಣೇಶಪ್ಪ, ಬೆಳಲಗೆರೆ ಶಿವಣ್ಣ, ಕನ್ನಡಪರ ಹೋರಾಟಗಾರ ಎನ್.ಹೆಚ್.ಹಾಲೇಶ್, ಬಾತಿ ವಿರೇಶ್ ದೊಗ್ಗಳ್ಳಿ, ರೇವಣಸಿದ್ದಪ್ಪ, ಬಿ.ಕೆ. ಶಿವಕುಮಾರ್, ಮಳಲ್ಕೆರೆ ಕಲ್ಲಪ್ಪಗುಡ್ಡದ್ರ, ಕಾಶಿಪುರ ಸುರೇಶ್, ನಿಜಲಿಂಗಪ್ಪ, ಕಲ್ಪನಹಳ್ಳಿ ಉಜ್ಜಪ್ಪ, ಸತೀಶ್, ಆರನೇಕಲ್ಲು ವಿಜಯಕುಮಾರ, ಹೊಸಹಳ್ಳಿ ಶಿವಮೂರ್ತಿ, ವಾಸನ ಬಸವರಾಜ, ಮತ್ತಿ ಜಯಣ್ಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications