Bengaluru-Mysuru expressway: ಒಂದೇ ವಾರ ನಿಮ್ಗೆ ಟೈಂ, NHAIಗೆ ಭೂ ಮಾಲೀಕರು ಹೀಗೆ ಎಚ್ಚರಿಕೆ ನೀಡಿದ್ದೇಕೆ?
ರಾಮನಗರ, ಸೆಪ್ಟೆಂಬರ್, 17: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿರುವ ನಮ್ಮ ಭೂಮಿಗಳಿಗೆ ಇನ್ನೊಂದು ವಾರದಲ್ಲಿ ಪರಿಹಾರ ನೀಡದಿದ್ದರೆ ನಮ್ಮ ಭೂಮಿಯನ್ನು ಸ್ವಾಧೀನಕ್ಕೆ ಪಡೆದುಕೊಳ್ಳುತ್ತೇವೆ ಎಂದು ಹೆದ್ದಾರಿ ನಿರ್ಮಾಣಕ್ಕೆ ಭೂಮಿ ನೀಡಿರುವ ರೈತರು ಎಚ್ಚರಿಸಿದ್ದಾರೆ.
ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಹಾದುಹೋಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಗೆ ಭೂಮಿ ನೀಡಿರುವ ಹಲವಾರು ರೈತರಿಗೆ ಎರಡನೇ ಹಂತದ ಭೂ ಸ್ವಾಧೀನದ ಪರಿಹಾರ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ಭೂಮಿ ಮತ್ತೆ ರೈತರೇ ಸ್ವಾಧೀನ ಪಡಿಸಿಕೊಳ್ಳುವ ತೀರ್ಮಾನ ಕೈಗೊಂಡಿದ್ದಾರೆ.

ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಅಂಡರ್ ಪಾಸ್ ಸಂಪರ್ಕ ಹಾಗೂ ಸರ್ವೀಸ್ ರಸ್ತೆ ಅಗಲೀಕರಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಹೆಚ್ಚುವರಿ ಭೂಮಿಯನ್ನು ರೈತರಿಂದ ವಶಕ್ಕೆ ಪಡೆಯಲಾಗಿದೆ. ಆದರೆ, ಹೆದ್ದಾರಿ ಸಂಚಾರ ಪ್ರಾರಂಭವಾಗಿದ್ದರೂ, ಭೂಮಿ ಕಳೆದುಕೊಂಡ ರೈತರಿಗೆ ಭೂ ಸ್ವಾಧೀನ ಪರಿಹಾರ ಸಿಕ್ಕಿಲ್ಲ.
ರೈತರ ಜಮೀನಲ್ಲಿ ರಸ್ತೆ ನಿರ್ಮಾಣವಾಗಿ ಸಾರ್ವಜನಿಕ ಉಪಯೋಗಕ್ಕೆ ಬಳೆಕೆಯಾಗುತ್ತಿದೆ. ಆದಷ್ಟೂ ಬೇಗ ರೈತರಿಗೆ ಪರಿಹಾರ ನೀಡುವ ಭರವಸೆ ನೀಡಿದ ಹೆದ್ದಾರಿ ನಿರ್ಮಾಣದ ಹೊಣೆ ಹೊತ್ತಿದ್ದ ಗುತ್ತಿಗೆದಾರರು ಕೆಲ ರೈತರ ಜಮೀನುಗಳನ್ನು ವಶಪಡಿಸಿಕೊಂಡು ಕಾಮಗಾರಿ ನಡೆಸಲಾಗಿದೆ. ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನಗಳಿಂದ ಸುಂಕ ವಸೂಲು ಮಾಡುತ್ತಿರುವ ಗುತ್ತಿಗೆದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಮೀನು ಕಳೆದುಕೊಂಡ ರೈತರಿಗೆ ಯಾವುದೇ ಪರಿಹಾರದ ಹಣ ನೀಡಿಲ್ಲ.
ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಕುಣಿಗಲ್ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್‌ಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಟಿ.ಪಿ.ಪುಟ್ಟಸಿದ್ದೇಗೌಡರ ಸರ್ವೇ ನಂ 360, 61ರ ಭೂಮಿಯನ್ನು ಬಳಸಿಕೊಳ್ಳಲಾಗಿದೆ. ಕಾಮಗಾರಿ ಮುಕ್ತಾಯ ಮಾಡಬೇಕಾದರೆ ಹಾಗೂ ಅಂಡರ್ ಪಾಸ್ ಸಂಪರ್ಕಕ್ಕೆ ಈ ಭೂಮಿ ಅನಿವಾರ್ಯವಾಗಿದೆ ಎಂದು ಹೇಳಿದ್ದರು.
ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಸಂಬಂಧಿಸಿದ ಹಲವರ ಮನವಿಯ ಮೇರೆಗೆ ಹಾಗೂ ಈ ಭಾಗದ ಸಾರ್ವಜನಿಕರ ಅನೂಕೂಲದ ಉದ್ದೇಶದಿಂದ ತಮ್ಮ ಭೂಮಿಯಲ್ಲಿ ಅಂಡರ್‌ಪಾಸ್ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ನಡೆಯಲು ಅವಕಾಶ ನೀಡಿದ್ದೆವು. ಅದರೆ ಕಾಮಾಗಾರಿ ಮುಕ್ತಾಯ ಹಂತಕ್ಕೆ ಬಂದರೂ ಪರಿಹಾರ ನೀಡಲು ವಿಳಂಬವಾದ ಹಿನ್ನೆಲೆಯಲ್ಲಿ ತಮ್ಮ ಜಮೀನನ್ನು ಸುಪರ್ದಿಗೆ ಪಡೆಯಲು ನಿರ್ಧರಿಸಿದ್ದೇ ಎಂದು ರೈತರು ದೃಢ ನಿರ್ಧಾರಕ್ಕೆ ಬಂದಿದ್ದಾರೆ.
ನಮ್ಮ ನಿರ್ಧಾರದಿಂದ ಹೆದ್ದಾರಿ ಉದ್ಘಾಟನೆಗೆ ತೊಂದರೆಯಾಗುವುದನ್ನು ಮನಗಂಡ ಪೊಲೀಸ್ ಇಲಾಖೆ ಮಧ್ಯಪ್ರವೇಶ ಮಾಡಿ ಹೆದ್ದಾರಿ ಪ್ರಾಧಿಕಾರಕ್ಕೆ ಪರಿಹಾರದ ಹಣ ನೀಡಲೂ ಮೂರು ತಿಂಗಳ ಕಾಲಾವಕಾಶ ಕೊಡಿಸಲಾಗುತ್ತದೆ ಎಂದಿದ್ದರು. ಆದರೆ, ಈ ಭರವಸೆ ಕೊಟ್ಟು ವರ್ಷ ಸಮೀಪಿಸುತ್ತಿದ್ದರೂ ಇದುವರೆಗೂ ಯಾವುದೇ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ಹಾಗಾಗಿ ನಮ್ಮ ಭೂಮಿಯನ್ನು ವಶಕ್ಕೆ ಪಡೆಯಲು ತಿರ್ಮಾನ ಮಾಡಿದ್ದೇವೆ ಎಂದು ರೈತರು ಅಸಮಾಧಾನ ಹೊರಹಾಕಿದರು.
8 ದಿನಗಳ ಗಡುವು ನೀಡಿದ ರೈತರು
ಚನ್ನಪಟ್ಟಣದಿಂದ ಕುಣಿಗಲ್ ಮುಖ್ಯರಸ್ತೆಗೆ ಸಂಪರ್ಕಕ್ಕೆ ಹೆದ್ದಾರಿಗೆ ಅಂಡರ್ ಪಾಸ್ ನಿರ್ಮಾಣಕ್ಕೆ ಪುಟ್ಟಸಿದ್ದೇಗೌಡರ ಭೂಮಿ ಸೇರಿದಂತೆ ಹಲವು ರೈತರ ಭೂಮಿ ವಶಪಡಿಸಿಕೊಂಡು ಕಾಮಾಗರಿ ಪೂರ್ಣ ಮಾಡಲಾಗಿದೆ. ಆದರೂ ಭೂಮಿ ಕಳೆದುಕೊಂಡ ಭೂಮಾಲೀಕರು ಅಧಿಕಾರಿಗಳ ಮೇಲಿನ ಭರವಸೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಪರಿಹಾರದ ಹಣಕ್ಕೆ ಜಾತಕ ಪಕ್ಚಿಯಂತೆ ಕಾಯ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಪರಿಹಾರದ ಹಣ ಬಿಡುಗಡೆಗೆ ರೈತರನ್ನು ಅಲೆದಾಡಿಸುತ್ತಿರುವ ಅಧಿಕಾರಿಗಳ ನಡೆಯಿಂದ ಬೇಸತ್ತಿರುವ ಭೂಮಿ ಕಳೆದುಕೊಂಡ ರೈತರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಇನ್ನೊಂದು ವಾರದ ಗಡುವು ನೀಡಿದ್ದು, ಅಷ್ಟರಲ್ಲಿ ನಾವು ಕಳೆದುಕೊಂಡಿರುವ ಭೂಮಿಗೆ ಸೂಕ್ತ ಪರಿಹಾರದ ಹಣ ಬಿಡುಗಡೆಯಾಗದಿದ್ದರೆ, ತಮ್ಮ ತಮ್ಮ ಭೂಮಿಯನ್ನು ಪುನಃ ನಾವುಗಳೇ ಸ್ವಾಧೀನಪಡಿಸಿಕೊಳ್ಳುವುದಾಗಿ ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications