ವಿ.ನಿಲ್ದಾಣ ವಿರುದ್ಧ ದಂಗೆಯೆದ್ದ ಬಳ್ಳಾರಿ ರೈತರು

ಜಿಲ್ಲಾಧಿಕಾರಿ ಬಿ. ಶಿವಪ್ಪ ಅವರು ಉದ್ಧೇಶಿತ ವಿಮಾನ ನಿಲ್ದಾಣಕ್ಕೆ ಭೂಮಿಯನ್ನು ಕಳೆದುಕೊಳ್ಳುವ ಸಿರವಾರ, ಚಾಗನೂರುನ ಗ್ರಾಮಗಳ ಭೂ ಸಂತ್ರಸ್ತ ರೈತರ ಸಭೆಯನ್ನು ಕರೆದಿದ್ದರು. ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ, ಕಂದಾಯ ನೋಂದಣಿ ದಾಖಲೆಗಳ ಪ್ರಕಾರ ಚಾಗನೂರು ಗ್ರಾಮದ ಭೂಮಿಗಳ ಬೆಲೆ ಪ್ರತಿ ಎಕರೆಗೆ 1,34,230 ರು., ಸಿರವಾರ ಗ್ರಾಮದ ಭೂಮಿ ಬೆಲೆ 1,42,627 ರು. ಆಗಿದೆ. ಆದರೆ, ಕೆಐಡಿಬಿಯು ರಸ್ತೆ ಬದಿಯ ಭೂಮಿಗಳಿಗೆ ಪ್ರತೀ ಎಕರೆಗೆ 16 ಲಕ್ಷ ರು. ಮತ್ತು ರಸ್ತೆಯಿಂದ ದೂರಕ್ಕೆ ಇರುವ ಪ್ರತೀ ಎಕರೆಗೆ 12 ಲಕ್ಷ ರು. ಪರಿಹಾರ ನೀಡಲಿದೆ. ಸಂತ್ರಸ್ತ ರೈತರು, ಭೂ ಮಾಲೀಕರು ತಮ್ಮ ಅಹವಾಲುಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಮುಕ್ತ ಅವಕಾಶ ಇದೆ ಎಂದರು.
ವಿಮಾನ ನಿಲ್ದಾಣ ವಿರೋಧಿ ಗುಂಪಿನ ಹೋರಾಟದ ಸಂಚಾಲಕ, ನ್ಯಾಯವಾದಿ ಮಲ್ಲಿಕಾರ್ಜುನರೆಡ್ಡಿ ಅವರನ್ನು ಸಭಾಭವನದ ಒಳಗಡೆ ಬಿಡಲು ಪೊಲೀಸರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ, ರೈತರು ಅನೇಕರು ತಮಗೆ ಕಾನೂನು, ಇನ್ನಿತರೆಗಳ ಮಾಹಿತಿ ಇಲ್ಲ. ನಾವುಗಳು ಮಲ್ಲಿಕಾರ್ಜುನರೆಡ್ಡಿ ಅವರನ್ನು ನಮ್ಮ ಪರವಾಗಿ ನ್ಯಾಯವಾದಿಯಾಗಿ ನೇಮಕ ಮಾಡಿಕೊಂಡಿದ್ದೇವೆ. ಮಲ್ಲಿಕಾರ್ಜುನರೆಡ್ಡಿ ಸಭೆಯಲ್ಲಿ ಬಂದಲ್ಲಿ ಮಾತ್ರ ನಾವು ಮಾತನಾಡುತ್ತೇವೆ. ಇಲ್ಲವಾದಲ್ಲಿ ಸಭೆಯನ್ನು ಬಹಿಷ್ಕರಿಸುತ್ತೇವೆ' ಎಂದು ವಾದ ಮಂಡಿಸಿದರು. ಆಗ, ರೈತರಿಂದ ಲಿಖಿತ ಹೇಳಿಕೆಯನ್ನು ಪಡೆದು ಮಲ್ಲಿಕಾರ್ಜುನರೆಡ್ಡಿಯನ್ನು ಸಭೆಯ ಒಳಗಡೆ ಬಿಡಲಾಯಿತು.
ಭೂಮಿಯನ್ನು ಪರಭಾರೆ ಮಾಡುವುದರ ಪರವಾದ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಇದ್ದ ಕಾರಣ ವಿರೋಧಿ ಗುಂಪಿನ ಧ್ವನಿ ಕ್ಷೀಣವಾಗಿತ್ತು. ಮತ್ತು ಪರ ಗುಂಪು ನಾವು ಲಕ್ಷಾಂತರ ರುಪಾಯಿ ಸಾಲ ಮಾಡಿಕೊಂಡಿದ್ದೇವೆ. ಭೂಮಿಯಿಂದ ನಮಗೇನು ಲಾಭ ಇಲ್ಲ. ಒಳ್ಳೆಯ ರೇಟ್ ಬಂದಿದೆ. ನಾವು ಕೊಡುತ್ತೇವೆ' ಎಂದೇ ವಾದ ಮಂಡಿಸಿದರು. ಸಭೆಯ ನಂತರ ಹೊರಗಡೆ ಪಟಾಕಿ ಸಿಡಿಸಿ ಸಂಭ್ರಮಿಸಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂತ್ರಸ್ತ ರೈತರ ಪರವಾಗಿ ಮಾತನಾಡಿದ ಮಲ್ಲಿಕಾರ್ಜುನರೆಡ್ಡಿ, ಸರ್ಕಾರ ಎಷ್ಟೇ ಹಣ ಕೊಟ್ಟರೂ ಕೂಡ ನಾವು ಭೂಮಿಯನ್ನು ನೀಡುವುದಿಲ್ಲ. ನಾವು ನಿರಾಶ್ರಿತರಾಗುವುದಿಲ್ಲ. ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಸ್ಪಷ್ಟಪಡಿಸಿದರು. ಹೋರಾಟದಲ್ಲಿ ಪಾಲ್ಗೊಂಡಿದ್ದ ರೈತರು ಕೂಡ ಧ್ವನಿಗೂಡಿಸಿದರು.












Click it and Unblock the Notifications