ಬೆಳಗಾವಿ; ನ. 1ರ ನಂತರ ಕಬ್ಬು ನುರಿಸುವ ಕಾರ್ಯ ಆರಂಭ
ಬೆಳಗಾವಿ, ಅಕ್ಟೋಬರ್ 09; "ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳನ್ನು ಕಾನೂನಾತ್ಮಕ ವ್ಯಾಪ್ತಿಯಲ್ಲಿ ಈಡೇರಿಸಲು ಜಿಲ್ಲಾಡಳಿತ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ರಾಜ್ಯ ಅಥವಾ ಕೇಂದ್ರ ಸರ್ಕಾರದ ಮಟ್ಟದಲ್ಲಿ ಇರುವ ವಿಷಯಗಳನ್ನು ಸಂಬಂಧಿಸಿದವರ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಲಾಗುವುದು" ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭರವಸೆ ನೀಡಿದರು.
2023-24ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸುವ ಕುರಿತು ಸಕ್ಕರೆ ಕಾರ್ಖಾನೆಗಳ ಮಾಲೀಕರು, ವ್ಯವಸ್ಥಾಪಕ ನಿರ್ದೇಶಕರುಗಳ/ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು.

"ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ನವೆಂಬರ್ 1ರ ನಂತರವೇ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಬೇಕು. ಸರ್ಕಾರದ ಆದೇಶವನ್ನು ಎಲ್ಲಾ 27 ಕಾರ್ಖಾನೆಯವರು ಕಡ್ಡಾಯವಾಗಿ ಪಾಲಿಸಬೇಕು" ಎಂದು ನಿತೇಶ್ ಪಾಟೀಲ ಸೂಚನೆ ನೀಡಿದರು.
ಎಫ್‌ಆರ್‌ಪಿ ದರ, ತೂಕದ ವ್ಯವಸ್ಥೆ; ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, "ಎಫ್‌ಆರ್‌ಪಿ ದರದಲ್ಲಿ ರೈತರಿಗೆ ನೀಡುವ ಮೊತ್ತ ಹಾಗೂ ಹೆಚ್&ಟಿ ಮೊತ್ತ ಕಾರ್ಖಾನೆ ನೋಟಿಸ್ ಬೋರ್ಡ್‌ಗೆ ಅಂಟಿಸಬೇಕು. ಈ ಬಗ್ಗೆ ಕಬ್ಬು ಪೂರೈಕೆದಾರ ರೈತರಿಗೆ ಮಾಹಿತಿ ನೀಡಬೇಕು. ಕಬ್ಬಿನ ತೂಕದ ಮಷಿನ್ ದಲ್ಲಿ ಕಡ್ಡಾಯವಾಗಿ ಪಾರದರ್ಶಕ ವ್ಯವಸ್ಥೆ ಅನುಷ್ಠಾನ ಮಾಡಬೇಕು" ಎಂದು ಹೇಳಿದರು.
"ಕಾರ್ಖಾನೆವಾರು ನ್ಯಾಯ ಮತ್ತು ಲಾಭದಾಯಕ ದರಗಳನ್ನು ಆಯಾ ಕಾರ್ಖಾನೆಯ ನೋಟಿಸ್ ಬೋರ್ಡಿಗೆ ಕಡ್ಡಾಯವಾಗಿ ಅಳವಡಿಸಬೇಕು ಮತ್ತು ತೂಕದಲ್ಲಿ ಮೋಸ ಕಂಡುಬಂದರೆ ಕಾರ್ಖಾನೆಯ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.
"ರೈತರೇ ಸರಕಾರದ ಸಹಾಯಧನ ಪಡೆದುಕೊಂಡು ತೂಕಯಂತ್ರ (ವೇಬ್ರಿಡ್ಜ್)ವನ್ನು ಸ್ಥಾಪಿಸಿಕೊಳ್ಳಬಹುದು. ಈ ಬಗ್ಗೆಯೂ ರೈತ ಪ್ರತಿನಿಧಿಗಳು ಚಿಂತನೆ ಮಾಡಬಹುದು. ಒಂದು ವೇಳೆ ಕಬ್ಬು ಪೂರೈಕೆದಾರರು ಹೊರಗಡೆ ತೂಕ ಮಾಡಿಸಿಕೊಂಡು ಬಂದಾಗ ಕಾರ್ಖಾನೆಯವರು ಕಬ್ಬು ನಿರಾಕರಿಸುವಂತಿಲ್ಲ. ಆದರೆ ಕಾರ್ಖಾನೆಯ ತೂಕದಲ್ಲಿ ವ್ಯತ್ಯಾಸ ಕಂಡುಬಂದರೆ ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಲಿದ್ದಾರೆ" ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಅನೀರಿಕ್ಷಿತ ಭೇಟಿ, ತೂಕ ಪರಿಶೀಲನೆ: "ಅನಿರೀಕ್ಷಿತವಾಗಿ ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿ ತಪಾಸಣೆಗೆ ಜಿಲ್ಲಾ ಮಟ್ಟದಲ್ಲಿ ತಂಡ ರಚನೆ ಮಾಡುವುದರ ಜತೆಗೆ ತೂಕ ಹಾಗೂ ರಿಕವರಿ ಪರಿಶೀಲನೆ ಮಾಡಲಾಗುವುದು" ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ್ ಮಾತನಾಡಿ, "ಕಾರ್ಖಾನೆ ಆರಂಭಿಸುವಾಗ ಕಡ್ಡಾಯವಾಗಿ ಪ್ರತಿದಿನ ಒಂದೊಂದು ಕಾರ್ಖಾನೆಯ ತೂಕ ಯಂತ್ರಗಳನ್ನು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಕಬ್ಬು ಪೂರೈಕೆದಾರ ರೈತರು ಹೊರಗಡೆ ತೂಕ ಮಾಡಿಸಿಕೊಂಡು ಬಂದಾಗ ಕಾರ್ಖಾನೆಯವರು ಅವರನ್ನು ಒಳಗೆ ಬಿಡದಿದ್ದರೆ ಅಂತಹ ಕಾರ್ಖಾನೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದರು.
ಸಭೆಯಲ್ಲಿ ಮಾತನಾಡಿದ ವಿವಿಧ ಮುಖಂಡರು, ಕೆಲ ಕಾರ್ಖಾನೆಗಳು ದರ, ತೂಕದಲ್ಲಿ ಮೋಸ ಮಾಡುತ್ತಿರುವುದರಿಂದ ಕಾರ್ಖಾನೆಯ ಬದಲಾಗಿ ಪ್ರತ್ಯೇಕ ಸರ್ಕಾರಿ ತೂಕ ಮಾಡುವ ವ್ಯವಸ್ಥೆಯನ್ನು ಕಲ್ಪಿಸಬೇಕು. ಅಂತಹ ಕೇಂದ್ರಗಳಲ್ಲಿ ನಿಗದಿಪಡಿಸಿದ ತೂಕದ ಪ್ರಕಾರವೇ ಕಾರ್ಖಾನೆಗಳು ಬಿಲ್ ಪಾವತಿಸಬೇಕು ಅಂದಾಗ ಮಾತ್ರ ತೂಕದಲ್ಲಿನ ಮೋಸವನ್ನು ತಡೆಗಟ್ಟುವುದು ಸಾಧ್ಯವಾಗಲಿದೆ ಎಂದು ಸಲಹೆ ಕೊಟ್ಟರು.
ಸಭೆಯಲ್ಲಿ ರೈತ ಮುಖಂಡರ ಜೊತೆ ಚರ್ಚಿಸಿ ದರ ಘೋಷಣೆ ಮಾಡಿ, ಸರ್ಕಾರದ FRPಪ್ರಕಾರ ನಿಗದಿತ ಸಮಯದಲ್ಲಿ ಪಾವತಿ ಮಾಡಬೇಕು. ಶುಗರ್ ಕಂಟ್ರೋಲ್ ಆದೇಶಗಳನ್ನು ಕಡ್ಡಾಯವಾಗಿ ನಿಯಮಾನುಸಾರ ಪಾಲನೆ ಮಾಡಬೇಕು ಎಂದು ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ಈ ಬಾರಿ ಬರಗಾಲ ಘೋಷಣೆಯಾಗಿರುವುದರಿಂದ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಕ್ಕರೆ ಕಾರ್ಖಾನೆಗಳು ಎಫ್ಆರ್‌ಪಿ ದರಕ್ಕಿಂತ ಹೆಚ್ಚುವರಿಯಾಗಿ ದರ ನಿಗದಿಪಡಿಸಬೇಕು ಎಂದು ಜಿಲ್ಲಾಧಿಕಾರಿಗಳು ರೈತರ ಪರವಾಗಿ ಕಾರ್ಖಾನೆಗಳಿಗೆ ಮನವಿ ಮಾಡಿದರು.












Click it and Unblock the Notifications