ಬಳ್ಳಾರಿ ಒಣ ಮೆಣಸಿನಕಾಯಿ ಶ್ರೀನಿವಾಸಪುರದಲ್ಲಿ ಅರ್ಧ ಬೆಲೆಗೆ ಮಾರಾಟ
ಶ್ರೀನಿವಾಸಪುರ, ಜೂನ್ 22: ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಬೀದಿಗಳಲ್ಲಿ ಬಳ್ಳಾರಿ ಮೆಣಸಿನಕಾಯಿ ಘಾಟು ಹೊಡೆಯುತ್ತದೆ. ಅಲ್ಲಿ ಮೆಣಸಿನಕಾಯಿ ಬೆಲೆ ನೆಲ ಕಚ್ಚಿರುವ ಕಾರಣಕ್ಕೆ ಅಲ್ಲಿಂದ ಇಲ್ಲಿಗೆ ಕೆಲವರು ಮೆಣಸಿನಕಾಯಿ ಮಾರಾಟ ಮಾಡುವ ಸಲುವಾಗಿಯೇ ವಲಸೆ ಬಂದಿದ್ದಾರೆ. ಈ ರೀತಿಯ ವಲಸೆ ಸ್ಥಳೀಯರ ಪಾಲಿಗೂ ಇದೇ ಪ್ರಥಮ ಎನ್ನಲಾಗುತ್ತಿದೆ.
ಅಂದಹಾಗೆ ಅಲ್ಲಿಂದ ಬಂದವರು ನಿಗದಿ ಮಾಡಿರುವ ಧಾರಣೆ 50 ರುಪಾಯಿಗಳು. ಇದೇ ಸರಕು ಸ್ಥಳೀಯವಾಗಿ 90ರಿಂದ 110 ರುಪಾಯಿಗಳಿವೆ. ಇಷ್ಟು ಅಗ್ಗದಲ್ಲಿ ಒಣಮೆಣಸಿನಕಾಯಿ ದೊರೆಯುವುದೆಂದು ಕನಸಿನಲ್ಲಿಯೂ ನಿರೀಕ್ಷಿಸಿರದ ಜನಸಾಮಾನ್ಯರು ಚೌಕಾಸಿ ಮಾಡದೆ ಮುಗಿಬಿದ್ದು ಕೊಳ್ಳುತ್ತಿದ್ದಾರೆ.

ಐದು ದಿನಗಳಿಂದ ದಿನವೊಂದಕ್ಕೆ 35ರಿಂದ 40 ಕೆಜಿಗಳ 8ರಿಂದ 10ಮೂಟೆಗಳ ಸರಕು ಮಾರಾಟವಾಗುತ್ತಿರುವುದಾಗಿ ಹೇಳಲಾಗುತ್ತಿದೆ. ಇದರಿಂದ ಸ್ಥಳೀಯ ಜನಕ್ಕೆ ಕಡಿಮೆ ಬೆಲೆಯೆಂಬ ಖುಷಿಯಾದರೆ, ಮಾರಾಟಗಾರರಿಗೆ ತೀರಾ ನಷ್ಟವಲ್ಲ ಎಂಬ ಸಮಾಧಾನ ಉಂಟಾಗಿದೆ.

ಅಗತ್ಯವು ಎಲ್ಲ ಅನ್ವೇಷಣೆಗಳ ಮಹಾತಾಯಿ ಎಂಬ ಮಾತು ಸುಮ್ಮನೆ ಸೃಷ್ಟಿಯಾದದ್ದಲ್ಲ ಎಂಬುದು ಈ ಮಾರಾಟಗಾರರನ್ನು ನೋಡಿದಾಗ ತೋಚುತ್ತದೆ. ಆದರೆ ಇಂಥ ಸನ್ನಿವೇಶ ಯಾವ ರೈತರಿಗೂ ಬಾರದಿರಲಿ ಅಂತ ಮಾತ್ರ ಹೇಳಬಹುದು.












Click it and Unblock the Notifications