ಕೂಲಿ ಕಾರ್ಮಿಕರ ಕೊರತೆ: ಹೊರ ರಾಜ್ಯಗಳಿಂದ ಚಿಕ್ಕಬಳ್ಳಾಪುರಕ್ಕೆ ಯಂತ್ರಗಳು ದಾಂಗುಡಿ- ಸರಕಾರದಿಂದ ದರ ನಿಗದಿಗೆ ಒತ್ತಾಯ!
ಚಿಕ್ಕಬಳ್ಳಾಪುರ ನವೆಂಬರ್ 26: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅನ್ನದಾತರು ಬೆಳೆದಿರುವ ರಾಗಿ ಮತ್ತು ಜೋಳ ಕಟಾವಿಗೆ ಸಿದ್ದಗೊಂಡಿದ್ದು ಕಟಾವು ಮಷಿನ್ ಗಳು ರೈತರ ಜಮೀನಿಗೆ ಲಗ್ಗೆ ಇಟ್ಟಿವೆ. ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಸಹ ರಾಗಿ ಮತ್ತು ಜೋಳ ಯಂತ್ರಗಳ ಸದ್ದು ಜೋರಾಗಿಯೆ ಕಿವಿಗೆ ಬಡಿಯುತ್ತಿದ್ದೂ, ದರ ಕೇಳಿ ಕ್ಷಣ ಕಾಲ ಗರಬಡಿದಂತಾಗುತ್ತಿದ್ದಾರೆ.
ಮಳೆ ಬಿದ್ದರೂ ಕಷ್ಟ, ಬೀಳದೆ ಇದ್ದರೂ ಕಷ್ಟ ಎನ್ನುವಂತಾಗಿದೆ ಜಿಲ್ಲೆಯ ರೈತರ ಸ್ಥಿತಿ. ಹಿಂಗಾರು ಮಳೆಯ ಕೃಪೆಯಿಂದ ರಾಗಿ ಬೆಳೆ ಚೆನ್ನಾಗೇ ಬಂದಿದೆ. ಕೆಲವೆಡೆ ಆಗಲೇ ಕಟಾವು ಶುರುವಾಗಿದೆ. ಆದರೆ ಕಟಾವು ಮಾಡುವುದೇ ಈಗ ರೈತರಿಗೆ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಕಟಾವು ಯಂತ್ರಗಳ ಮಾಲೀಕರು ರೈತರ ಸುಲಿಗೆಗೆ ಇಳಿದಿದ್ದು, ಸಾವಿರಾರು ರೂ. ಕೊಟ್ಟು ಕೊಯ್ದು ಮಾಡಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಜಿಲ್ಲೆಯಲ್ಲಿ ಈ ಬಾರಿ ಹಿಂಗಾರು ಮಳೆ ರೈತರ ಕೈಹಿಡಿ ದಿತ್ತು. ಮುಂಗಾರು ಹಂಗಾಮಿ ನಲ್ಲಿ ಮಳೆ ಕೈಕೊಟ್ಟರೂ ಹಿಂಗಾರಿನಲ್ಲಿ ಮಳೆ ಸುರಿದ ಪರಿಣಾಮ ಜಿಲ್ಲೆಯಲ್ಲಿರಾಗಿ ಬೆಳೆ ರೈತರ ಕೈಹಿಡಿದಿದೆ. ಜಿಲ್ಲೆಯಲ್ಲಿ ಒಟ್ಟು 43 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದ್ದು, ಶೇ.100ರಷ್ಟು ಗುರಿ ಸಾಧನೆ ಮಾಡಲಾಗಿದೆ. ಮುಂಗಾರು ಮಳೆ ಕೊರತೆ ಯಿಂದ ಫಸಲಿನಲ್ಲಿ ಸ್ವಲ್ಪ ಏರುಪೇರಾಗಬಹುದು. ಆದರೆ ಹಿಂಗಾರು ಮಳೆಯ ಅಬ್ಬರದಿಂದ ಉತ್ತಮ ಫಸಲು ರೈತರ ಕೈಸೇರುವಂತಿದೆ.
ಕೂಲಿ ಕಾರ್ಮಿಕರ ಕೊರತೆ, ಸಮಯದ ಅಭಾವ, ದರಗಳ ಏರುಪೇರು, ಹವಾಮಾನ ವೈಪರೀತ್ಯ ಸೇರಿದಂತೆ ಇನ್ನಿತರ ಕಾರಣಗಳಿಂದ ಹಲವು ರೈತರು ಆಧುನಿಕ ಯಂತ್ರಗಳ ಮೊರೆ ಹೋಗಿದ್ದಾರೆ. ಕೆಲವೇ ಗಂಟೆಗಳಲ್ಲಿ ನೋಡ ನೋಡುತ್ತಿದ್ದಂತೆ ಜಮೀನನಲ್ಲಿರುವ ಜೋಳ ಮತ್ತು ರಾಗಿ ಕಟಾವು ಆಗುವುದರ ಜೊತೆಗೆ ರೈತರ ಕೈಗೆ ರಾಗಿ ಹಾಗೂ ಮೆಕ್ಕೆಜೋಳ ಕಾಳುಗಳು ತಕ್ಷಣವೇ ಸಿಗಲಿವೆ.

ರೈತರಿಗೆ ದುಬಾರಿ ಬರೆ:
ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರ ಕೊರತೆ ಮೊದಲಿನಿಂದಲೂ ಇದೆ. ಇದೇ ಕಾರಣಕ್ಕೆ ಕೊಯ್ಲಿಗೆ ಕಾರ್ಮಿಕರು ಹೆಚ್ಚು ಹಣ ಕೇಳುತ್ತಿದ್ದು, ಸಹಜವಾಗಿ ಯಂತ್ರಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಸಂದರ್ಭವನ್ನು ಲಾಭ ಮಾಡಿಕೊಂಡಿರುವ ಕೊಯ್ದು ಯಂತ್ರಗಳ ಮಾಲೀಕರು, ರೈತರಿಂದ ಸಿಕ್ಕಷ್ಟು ಹಣ ವಸೂಲಿಗೆ ಇಳಿದಿದ್ದಾರೆ. ಸದ್ಯ ಕಟಾವಿಗೆ ಬಂದಿರುವ ಬೆಳೆಯನ್ನು ಕಟಾವು ಮಾಡುವುದೇ ಈಗ ದೊಡ್ಡ ಸಮಸ್ಯೆಯಾಗಿದೆ. ದನಗಳಿಗೆ ಒಳ್ಳೆಯ ಮೇವು ಕೂಡಾ ಸಿಗಲಿದ್ದು, ಅನಿವಾರ್ಯವಾಗಿ ಹೆಚ್ಚಿನ ದುಡ್ಡು ಕೊಟ್ಟು ಕೊಯ್ದು ಮಾಡಿಸಬೇಕಿದೆ.
ರಾಗಿ ಮತ್ತು ಮುಸುಕಿನ ಜೋಳ ಹಾಗೂ ಮೆಕ್ಕೆಜೋಳ ಕಟಾವು ಯಂತ್ರಕ್ಕೆ ಗಂಟೆಗೆ ಸರಾಸರಿ 10 ಲೀ ಡೀಸೆಲ್ ಹಾಕಿದರೆ ಕನಿಷ್ಠ 1.2 ಎಕರೆ ಕಟಾವಾಗಲಿದೆ. ದಿನವೊಂದಕ್ಕೆ ಕನಿಷ್ಠ 10 ರಿಂದ 15 ಎಕರೆ ಭೂ ಪ್ರದೇಶದಲ್ಲಿ ಕಟಾವು ನಡೆಯಲಿದೆ. ಗಂಟೆಗೆ 4೦೦೦ ದಿಂದ 4200 ರೂಪಾಯಿ ದರ ನಿಗಧಿಪಡಿಸಲಾಗಿದೆ.
ದುಬಾರಿ ಕೂಲಿ ವೆಚ್ಚ:
ಕೂಲಿ ಕಾರ್ಮಿಕರಿಗೆ ಒಂದು ಏಕರೆ ಮೆಕ್ಕೆಜೋಳ ಮತ್ತು ಮುಸುಕಿನ ಜೋಳ ಕಟಾವಿಗೆ ಒಂದು ಎಕರೆಗೆ ಕನಿಷ್ಠ 15 ರಿಂದ 20 ಜನ ಕೂಲಿ ಕಾರ್ಮಿಕರು ಕೆಲಸ ಮಾಡಲು 5000 ತನಕ ಖರ್ಚು ಬರುತ್ತದೆ. ಜೊತೆಗೆ ಜೋಳದ ತೆನೆಯನ್ನು ಕಾಳನ್ನಾಗಿ ಬೇರ್ಪಡಿಸಲು ಇನ್ನೊಂದು ಯಂತ್ರಕ್ಕೆ ಕ್ವಿಂಟಾಲ್ ಗೆ 50 ರೂ ಹಣ ಕೊಡಬೇಕು ಹೀಗೆ ಅನೇಕ ಕಾರಣಗಳಿಂದ ರಾಗಿ ಕಟಾವಿಗೂ ಎಕರೆಗೆ ಕಡಿಮೆ ಎಂದರೂ 6 ಸಾವಿರ ತನಕ ಕೂಲಿ ಕಾರ್ಮಿಕರ ಖರ್ಚು ಬರುವುದರ ಜೊತೆಗೆ ಹವಾಮಾನ ವೈಪರಿತ್ಯ, ಕೃಷಿ ಬೆಳೆಗಳ ಕಟಾವು ಸಮಯದಲ್ಲಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿರುವುದರಿಂದ ರೈತರು ಗಂಟೆಗೆ 4 ಸಾವಿರ ಜೊತೆಗೆ , ಟ್ಯ್ರಾಕ್ಟರ್ ವೆಚ್ಚ ಸೇರಿದಂತೆ ಇನ್ನಿತರೆ ಖರ್ಚು ಸೇರಿದರೂ 5 ಸಾವಿರ ದಾಟುವುದಿಲ್ಲ. ಒಟ್ಟಾರೆ ಆಧುನಿಕತೆಗೆ ರೈತ ನಿಧಾನವಾಗಿ ಹೊಂದಿಕೊಂಡು ಯಂತ್ರಗಳ ಮೊರೆಹೋಗುವಂತಾಗಿದೆ.
ಬಿತ್ತನೆ ಎಲ್ಲೆಲ್ಲಿ ಎಷ್ಟು :
ಗುಡಿಬಂಡೆ ತಾಲೂಕಿನ ಕಸಬಾ ಮತ್ತು ಸೋಮೇನಹಳ್ಳಿ ಹೋಬಳಿಯಲ್ಲಿ ರಾಗಿ ಅಂದಾಜು 3283 ಹೆಕ್ಟೇರ್. ಮುಸುಕಿನ ಜೋಳ ಮತ್ತು ಮೆಕ್ಕೇ ಜೋಳ ಅಂದಾಜು 5162 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ತಾಲೂಕಿನಲ್ಲಿ ಸುಮಾರು 40 ಕ್ಕೂ ಹೆಚ್ಚಿನ ಯಂತ್ರಗಳು ಬಂದಿಳಿದಿವೆ. ಈ ಯಂತ್ರಗಳ ಬೆಲೆ ಕಳೆದ 2 ವರ್ಷಗಳ ಹಿಂದೆ 30 ಲಕ್ಷ ಇದ್ದು, ಪ್ರಸಕ್ತ ವರ್ಷ ಸುಮಾರು 40 ಲಕ್ಷವಾಗಿದೆ.
ನೆರೆಯವರ ದರ್ಬಾರು:
ಸದ್ದಕ್ಕೆ ಜಿಲ್ಲೆಯಲ್ಲಿ ಆಂಧ್ರಪ್ರದೇಶದಿಂದ ಬಂದಿರುವ ಕಟಾವು ಯಂತ್ರಗಳದ್ದೇ ಆರ್ಭಟ. ಅವರು ನಡೆದದ್ದೇ ದಾರಿ ಎನ್ನುವಂತಾಗಿತ್ತು. ಆಂಧ್ರದ ಪುಟ್ಟಪರ್ತಿ, ಗೋರಂಟ ಸೇರಿದಂತೆ ಹಲವು ಕಡೆ ಭತ್ತದ ಗದ್ದೆಗಳನ್ನು ಕೊಯ್ದು ಮಾಡುವ ಯಂತ್ರಗಳು ರಾಗಿ ಕಟಾವು ಸೀಸನ್‌ಗೆ ಜಿಲ್ಲೆಗೆ ಲಗ್ಗೆ ಇಡುತ್ತವೆ. ಕೆಲವೊಂದು ಭಾಗಗಳಲ್ಲಿ ಯಂತ್ರಗಳನ್ನು ನಿಲ್ಲಿಸಿಕೊಂಡು ಅವರು ಹೇಳಿದ ದರಕ್ಕೆ ಒಪ್ಪಿದರೆ ಮಾತ್ರ ಕಟಾವಿಗೆ ಹೋಗುತ್ತಾರೆ. ಹೀಗಾಗಿ ರೈತರು ಅನಿವಾರ್ಯವಾಗಿ ದುಬಾರಿಯಾದರೂ ಯಂತ್ರಗಳ ಮೊರೆ ಹೋಗುವಂತಾಗಿದೆ.
ಮೇವಿಗೆ ಕೊರತೆ:
ಯಂತ್ರಗಳಿಂದ ಕಟಾವು ಮಾಡುವ ಕಾರಣ ಜಾನುವಾರುಗಳಿಗೆ ನೀಡಲಾಗುವ ಜೋಳದ ಸಪ್ಪೆ ಸಿಗೋದಿಲ್ಲ, ರಾಗಿ ಹುಲ್ಲು ಸಹ ಪೂರ್ಣ ಪ್ರಮಾಣದಲ್ಲಿ ರೈತರ ಬಣವೆ ಸೇರುತ್ತಿಲ್ಲ. ಇದರಿಂದ ಹೈನುಗಾರಿಕೆ ಮಾಡುವ ರೈತರಿಗೆ ಒಂದಿಷ್ಟು ಸಮಸ್ಯೆಯಾಗಲಿದೆ. ಈ ಯಂತ್ರದ ಕಟಾವಿನಿಂದ ಮುಸುಕಿನ ಜೋಳ, ಮೆಕ್ಕೆಜೋಳ, ರಾಗಿ ಹುಲ್ಲು ಸಣ್ಣ ಸಣ್ಣ ಗಾತ್ರದಲ್ಲಿ ಜಮೀನುಗಳಲ್ಲಿಯೇ ತುಂಡುಗಳಾಗಿ ಬೀಳುವುದರಿಂದ ರಾಸುಗಳಿಗೆ ಒಣ ಹುಲ್ಲಿನ ಕೊರತೆ ಸೃಷ್ಟಿಯಾಗಲಿದೆ.
ಜಮೀನುಗಳಿಗೆ ಗೊಬ್ಬರ:
ಯಂತ್ರದ ಕಟಾವಿನಿಂದ ಮುಸುಕಿನ ಜೋಳ , ಮೆಕ್ಕೆಜೋಳ, ರಾಗಿ ದಂಟುಗಳು ಚಿಕ್ಕ ಚಿಕ್ಕ ತುಂಡುಗಳಾಗಿ ಜಮೀನುಗಳಲ್ಲಿ ಬೀಳುವುದರಿಂದ ಜಮೀನು ಹದ ಮಾಡಲು ಟ್ರಾಕ್ಟರ್ ಅಥವಾ ನೇಗಿಲಿನಲ್ಲಿ ಪ್ಲೋ ಹೊಡೆಯುವುದು ಹಾಗೂ ಬೇಸಾಯ ಮಾಡುವುದರಿಂದ ಉತ್ತಮ ಫಲವತ್ತತೆಯ ಗೊಬ್ಬರವಾಗಿ ಪರಿವರ್ತನೆಯಾಗಿ ಮುಂದಿನ ಬೆಳೆಯು ಹೆಚ್ಚಿನ ಇಳುವರಿ ಸಾಧ್ಯವಾಗಲಿದೆ.
ಈ ಬಗ್ಗೆ ಮಾತನಾಡಿದ ಇಡ್ರಹಳ್ಳಿ ರೈತ ಗಂಗಾಧರ್ ಅವರು,' ಹೆಚ್ಚು ಜಮೀನು ಹೊಂದಿರುವ ರೈತರಿಗೆ ಕೂಲಿ ಕಾರ್ಮಿಕರ ಸಮಸ್ಯೆಯಿಂದ ರಾಗಿ ಹೊಲ ಮತ್ತು ಜೋಳ ಕಟಾವು ಮಾಡಲು ತೊಂದರೆ ಉಂಟಾಗುತ್ತಿತ್ತು ದೊಡ್ಡ ರೈತರಿಗೆ ಕಟಾವು ಯಂತ್ರದಾರೆಗಳು ಸಹಕಾರಿ ಆಗಿದೆ. ಸರಕಾರ ಬೆಲೆ ಏರಿಗೆ ಬ್ರೇಕ್ ಹಾಕಬೇಕಿದೆ, ಹಿಂದಿನ ವರ್ಷ ಸರಕಾರ ಗಂಟೆಗೆ 2800 ರೂ ಹಣ ನಿಗಧಿ ಪಡಿಸಿತ್ತು ಈ ವರ್ಷವು ಸಹ ಸರಕಾರ ರೈತರ ನೆರವಿಗೆ ಬಂದು ದರ ನಿಗಧಿಪಡಿಸಲಿ ಬರಬೇಕು' ಎಂದರು.












Click it and Unblock the Notifications