ಹೋರಾಟಕ್ಕೆ ಬೆಂಬಲವಾಗಿ ಮಹಾರಾಷ್ಟ್ರದಿಂದ ದೆಹಲಿಗೆ 3000 ರೈತರು...
ಮುಂಬೈ, ಡಿಸೆಂಬರ್ 18: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ಕಾವೇರಿದೆ. ಹೋರಾಟನಿರತ ರೈತರಿಗೆ ಬೆಂಬಲ ನೀಡಲು ಮಹಾರಾಷ್ಟ್ರದ ರೈತರೂ ಬೃಹತ್ ಸಂಖ್ಯೆಯಲ್ಲಿ ದೆಹಲಿಗೆ ಜಾಥಾ ಹೊರಡುವುದಾಗಿ ತಿಳಿದುಬಂದಿದೆ.
ಮಹಾರಾಷ್ಟ್ರದ ಸುಮಾರು 3000 ರೈತರು ಡಿ. 21ರಂದು ದೆಹಲಿಗೆ ಜಾಥಾ ಕೈಗೊಂಡಿರುವುದಾಗಿ ಅಖಿಲ ಭಾರತ ಕಿಸಾನ್ ಸಭಾ ಶುಕ್ರವಾರ ಘೋಷಣೆ ಮಾಡಿದೆ.
ಡಿ. 21, ಸೋಮವಾರ ಮಹಾರಾಷ್ಟ್ರದಿಂದ ಅಧಿಕ ಸಂಖ್ಯೆಯಲ್ಲಿ ದೆಹಲಿಗೆ ಹೊರಡುತ್ತಿದ್ದೇವೆ. ಪಾದಯಾತ್ರೆ ಬದಲು ಸೈಕಲ್, ವಾಹನಗಳಲ್ಲಿ ತೆರಳಲಿದ್ದೇವೆ. ಮಹಾರಾಷ್ಟ್ರದಿಂದ ಮಧ್ಯಪ್ರದೇಶಕ್ಕೆ ಹೋಗಿ ಅಲ್ಲಿಂದ ರಾಜಸ್ಥಾನಕ್ಕೆ ತೆರಳಿ ಅಲ್ಲಿಂದ ದೆಹಲಿಯ ಗಡಿ ತಲುಪುತ್ತೇವೆ. ರೈತರಿಗೆ ಬೆಂಬಲವಾಗಿ ಈ ಯಾತ್ರೆ ಕೈಗೊಂಡಿದ್ದೇವೆ" ಎಂದು ಸಂಘದ ಮುಖಂಡ ಅಶೋಕ್ ಧಾವ್ಲೆ ತಿಳಿಸಿದ್ದಾರೆ.

ಸೋಮವಾರ ಮಧ್ಯಾಹ್ ಬೃಹತ್ ಸಾರ್ವಜನಿಕ ಸಭೆ ಹಮ್ಮಿಕೊಂಡು ಅಲ್ಲಿ ಮಹಾರಾಷ್ಟ್ರದ ಹಲವು ಕಡೆಗಳಿಂದ ರೈತರು ಸೇರಲಿದ್ದಾರೆ. ಟೆಂಪೊ, ಟ್ರಾವೆಲ್, ಟ್ರಕ್, ಬಸ್, ಕಾರು, ಸೈಕಲ್ ಗಳಲ್ಲಿ ತೆರಳುತ್ತೇವೆ. ಇದು ವಾಹನಗಳ ಜಾಥಾ ಆಗಲಿದೆ. ಯಾತ್ರೆಯಲ್ಲೇ ಸಭೆ ನಡೆಸಲಾಗುವುದು. ಎಲ್ಲಾ ರಾಜಕೀಯ ಪಕ್ಷಗಳು ನಮ್ಮನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರಿಗೆ ಬೆಂಬಲ ನೀಡುವುದು ನಮ್ಮ ಉದ್ದೇಶ. ಈ ಕಾಯ್ದೆಗಳಿಗೆ ಮಹಾರಾಷ್ಟ್ರದಲ್ಲೂ ವಿರೋಧವಿದೆ. ಇದು ರಾಷ್ಟ್ರಾದ್ಯಂತ ನಡೆಯುತ್ತಿರುವ ಹೋರಾಟ. ನಾವೂ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಹೊರಟಿದ್ದೇವೆ. ಇಲ್ಲಿಂದ ದೆಹಲಿ ಸುಮಾರು 1,300 ಕಿ.ಮೀ ದೂರವಿದೆ. ಇದೇ ಮೊದಲ ಬಾರಿ ಮಹಾರಾಷ್ಟ್ರ ರೈತರು ಈ ರೀತಿ ಜಾಥಾ ಹೊರಡುತ್ತಿದ್ದಾರೆ ಎಂದು ತಿಳಿಸಿದರು.












Click it and Unblock the Notifications