ಒಂದಲ್ಲ ಎರಡಲ್ಲ ಜಮೀನಿಗೆ ಲಗ್ಗೆ ಇಟ್ಟ 17ಕ್ಕೂ ಹೆಚ್ಚು ಆನೆಗಳು: ಧಂಗಾದ ಗಡಿಭಾಗದ ರೈತರು
ಚಾಮರಾಜನಗರ, ಡಿಸೆಂಬರ್, 27: ಒಂದಲ್ಲ, ಎರಡರಲ್ಲ 17ಕ್ಕೂ ಅಧಿಕ ಆನೆಗಳ ಹಿಂಡು ಜಮೀನುಗಳಿಗೆ ಲಗ್ಗೆ ಇಟ್ಟು ರೈತರಿಗೆ ಆತಂಕ ಸೃಷ್ಟಿ ಮಾಡಿರುವ ಘಟನೆ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಅರಳವಾಡಿಯಲ್ಲಿ ನಡೆದಿದೆ.
ತಮಿಳುನಾಡಿನ ಅರಳವಾಡಿ ಹಾಗೂ ಚಾಮರಾಜನಗರ ಗಡಿಗೂ ಕೇವಲ 6-7 ಕಿಲೋ ಮೀಟರ್ ದೂರವಿದ್ದು, ಸದ್ಯ ಬೆಳೆ ನಷ್ಟದ ಆತಂಕದಲ್ಲಿ ರೈತರಿದ್ದಾರೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟಿರುವ ಆನೆ ಹಿಂಡನ್ನು ಕಂಡ ರೈತರು ಕಂಗಲಾಗಿದ್ದು, ಅವುಗಳನ್ನು ಮತ್ತೇ ಕಾಡಿಗಟ್ಟಲು ಹರಸಾಹಸವನ್ನೇ ಪಡುತ್ತಿದ್ದಾರೆ.

ಕರ್ನಾಟಕ ಹಾಗೂ ತಮಿಳುನಾಡು ಗಡಿಯಲ್ಲಿ ಅರಣ್ಯ ಪ್ರದೇಶವಿದ್ದು, ಯಾವುದೇ ಆನೆ ಕಂದಕ ನಿರ್ಮಾಣ ಮಾಡದಿರುವುದರಿಂದ ಆಗಾಗ್ಗೆ ಜಮೀನುಗಳತ್ತ ಕಾಡನೆಗಳು ಲಗ್ಗೆ ಹಾಕಲಿವೆ. ಅಲ್ಲಿನ ಅರಣ್ಯ ಇಲಾಖೆಯವರು ಕಾಡಿಗಟ್ಟುವ ಪ್ರಯತ್ನ ಮಾಡುತ್ತಿದ್ದಾರೆ.
ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ 7 ಜನರಿಗೆ ದಂಡ
ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಸಂಹಾರ ಮಾಡಿ ಅವುಗಳನ್ನು ಮಾರಾಟ ಮಾಡುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹಾಗೆಯೇ ಇದೀಗ ಚುಕ್ಕೆ ಜಿಂಕೆಗಳನ್ನು ಬೇಟೆಯಾಡಿ ಅವುಗಳ ಮಾಂಸವನ್ನು ಮಾರಾಟ ಮಾಡಿದ ಆರೋಪದ ಮೇಲೆ 7 ಜನರಿಗೆ ತಲಾ 50,000 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಡೆಂಕಣಿಕೋಟೆ ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಚೆಲ್ಲಪ್ಪನ್ (65), ರಾಮರಾಜ್ (31), ರಾಜೀವ್ (31), ನಾಗರಾಜ್ (28), ಶಿವರಾಜಕುಮಾರ್ (31), ಮರಿಯಪ್ಪನ್ (65) ಮತ್ತು 18 ವರ್ಷದ ಬಾಲಕ ಆರೋಪಿಗಳಾಗಿದ್ದಾರೆ.
ಬೆಂಗಳೂರಿನಿಂದ ಸುಮಾರು 38 ಕಿ.ಮೀ. ದೂರದಲ್ಲಿರುವ ಹೊಸೂರು ಬಳಿಯ ಜುಜುವಾಡಿ ಗ್ರಾಮದ ಸಾರ್ವಜನಿಕ ಕೆರೆಯಲ್ಲಿ ಚುಕ್ಕೆ ಜಿಂಕೆ ಸಾವನ್ನಪ್ಪಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಲಭಿಸಿದೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಚುಕ್ಕೆ ಜಿಂಕೆಯ ಮೃತದೇಹವನ್ನು ಹೊರತೆಗೆದಿದ್ದಾರೆ.
ಇನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತಲುಪುವ ಮೊದಲೇ ಆರೋಪಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡದೆ ಚುಕ್ಕೆ ಜಿಂಕೆಯ ಶವವನ್ನು ಹೊರತೆಗೆದು ತುಂಡರಿಸಿದ್ದರು. ಚುಕ್ಕೆ ಜಿಂಕೆಯನ್ನು ಬೇಟೆಯಾಡಿರುವುದು ಅರಣ್ಯ ಇಲಾಖೆಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಳಿಕ ಅರಣ್ಯ ಇಲಾಖೆ ಏಳು ಮಂದಿಯನ್ನು ಹಿಡಿದು ತಲಾ 50,000 ರೂಪಾಯಿ ದಂಡ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ. ಕಾಡು ಪ್ರಾಣಿಗಳನ್ನು ಬೇಟೆಯಾಡಿದರೆ ಅಥವಾ ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಹೊಂದಿದ್ದರೆ ವನ್ಯಜೀವಿ ಕಾಯಿದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಎಚ್ಚರಿಕೆ ರವಾನೆ ಮಾಡಿದೆ.












Click it and Unblock the Notifications