ರೈತರಿಂದ ಸರ್ಕಾರಕ್ಕೆ ದೊಡ್ಡ ನಮಸ್ಕಾರ!

ಕುಡತಿನಿ ಗ್ರಾಮದ ಆಂಜಿನೇಯ ದೇವಸ್ಥಾನದ ಮುಂಭಾಗದಲ್ಲಿ ಸಭೆ ಸೇರಿದ ಸಂತ್ರಸ್ತರ ಪೈಕಿ ಹಿರಿಯ ರೈತರಾದ ಹುಲುಗಪ್ಪ (60) ಮತ್ತು ಹೋಳಿಗೆ ರಾಮಪ್ಪ (70) ಅವರ ನೇತೃತ್ವದಲ್ಲಿ ಸರ್ಕಾರಕ್ಕೆ ದೊಡ್ಡ ನಮಸ್ಕಾರ' ಹಾಕುವ ಚಳವಳಿಗೆ ಚಾಲನೆ ನೀಡಿದ್ದಾರೆ. ಈ ಚಳವಳಿಯ ಮೊದಲನೇ ದಿನವಾದ ಸೋಮವಾರ 50 ಕ್ಕೂ ಹೆಚ್ಚು ರೈತರು ಸರತಿಯಲ್ಲಿ ನಮಸ್ಕಾರಗಳನ್ನು ಹಾಕುತ್ತಿದ್ದಾರೆ.
ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಪ್ರಾರಂಭವಾಗಿದ್ದು ಎರಡನೇ ದಿನದ ಈ ಚಳವಳಿ ಸಂಜೆಯ ವೇಳೆಗೆ ಅಲ್ಲೀಪುರವ ಮಹಾದೇವ ತಾತನವರ ಮಠದಲ್ಲಿ ವಿಶ್ರಮಿಸಲಿದೆ. ಸೆಪ್ಟಂಬರ್ 22 ರ ಬುಧವಾರ ಬೆಳಗ್ಗೆ ಚಳವಳಿ ಪ್ರಾರಂಭವಾಗಿ ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮ ದೇವಸ್ಥಾನದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯನ್ನು ತಲುಪಲಿದೆ.
ಈ ಕುರಿತು ಮಾತನಾಡಿದ ಹೋರಾಟ ಸಮಿತಿ ಸಂಚಾಲಕ ಬಸವರಾಜ್, ಸರ್ಕಾರ ಪ್ರತೀ ಎಕರೆಗೆ 77.5 ಲಕ್ಷ ರು. ಪರಿಹಾರ ನೀಡಬೇಕು. ಕೇಂದ್ರ ಸರ್ಕಾರ ಜಾರಿ ಮಾಡಿರುವ 2010ರ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆಯನ್ನು ಉಲ್ಲಂಘಿಸಿರುವ ಕರ್ನಾಟಕದ ಮತ್ತು ಬಳ್ಳಾರಿ ಜಿಲ್ಲೆಯ ಅಧಿಕಾರಿಗಳ ವಿರುದ್ಧ, ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ದನರೆಡ್ಡಿ ಅವರ ಬ್ರಹ್ಮಿಣಿ ಕೈಗಾರಿಕೆಗೆ ಅನುಕೂಲ ಮಾಡಲಿಕ್ಕಾಗಿ ಉದ್ದೇಶಪೂರ್ವಕವಾಗಿ ಕಡಿಮೆ ಬೆಲೆ ನಿಗಧಿ ಮಾಡಿರುವ ಅಧಿಕಾರಿಗಳು ಕಾಯ್ದೆ, ಕಾನೂನುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಅಲ್ಲದೇ, ಕೆಐಎಡಿಬಿ ಅಧಿಕಾರಿಗಳು ಸಾರ್ವಜನಿಕ ಹಿತಾಸಕ್ತಿಯ ಅಭಿವೃದ್ಧಿ ಯೋಜನೆಗಳಿಗಾಗಿ ಒತ್ತಾಯಪೂರ್ವಕವಾಗಿ ಭೂಮಿಯನ್ನು, ನಿವೇಶನವನ್ನು ಸ್ವಾಧೀನಕ್ಕೆ ಪಡೆಯಲು ಅಧಿಕಾರ ಇದೆ. ಆದರೆ. ಇಲ್ಲಿ ಕೆಐಎಡಿಬಿ ಅಧಿಕಾರಿಗಳು ಅಧಿಕಾರ ಚಲಾಯಿತಿ, ರೈತರನ್ನು ವಂಚಿಸಿ ಖಾಸಗಿ ಕಂಪನಿಗಳ ಏಜೆಂಟರಂತೆ ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿರುವುದು ಕಾನೂನು ವಿರೋಧಿ ಕ್ರಮ ಎಂದರು.
ಕೈಗಾರಿಕೆಗಳ ನಿರ್ಮಾಣಕ್ಕೆ ರೈತರು ಭೂಮಿ ನೀಡಲು ಒಪ್ಪಿದಾಗ ಮಾತ್ರ ಕೆಐಎಡಿಬಿ ರೈತರ ಮತ್ತು ಖಾಸಗಿ ಕಂಪನಿಗಳ ಮಧ್ಯಸ್ಥಗಾರನಾಗಿ ಸಂಧಾನ ಸಭೆಗಳನ್ನು ನಡೆಸಿ, ರೈತರ ಪರವಾಗಿಯೇ ಬೆಲೆ ನಿಗಧಿ ಮಾಡಬೇಕು. ಆದರೆ. ಕುಡತಿನಿಯ ವಿಷಯದಲ್ಲಿ ಅಧಿಕಾರಿಗಳು ಖಾಸಗಿ ಕಂಪನಿಗಳ ಏಜೆಂಟರಂತೆ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದು ದೂರಿದರು.
ಕರ್ನಾಟಕ ರಾಜ್ಯ ಸರ್ಕಾರ ಕೂಡ ಕೇಂದ್ರ ಸರ್ಕಾರದ ರೀತಿಯಲ್ಲೇ ಭೂ ಸ್ವಾಧೀನ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು. ಭೂ ಸಂತ್ರಸ್ತ ರೈತರ ಪರವಾದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಪ್ರತೀ ಎಕರೆಗೆ 77.5 ಲಕ್ಷ ರು. ಪರಿಹಾರ ನೀಡಿ ಇಲ್ಲವೇ ನಮ್ಮ ಭೂಮಿಯನ್ನು ನಮಗೇ ಬಿಡಿ' ಎಂದು ಹೋರಾಡುತ್ತಿದ್ದೇವೆ ಎಂದು ಹೇಳಿದರು.












Click it and Unblock the Notifications