ಗುರ್ಜಿ ಅಲ್ಲಾಡಿ ಬಂದೆ.. ಸುರಿ ಮಳೆಯೇ

ಹಳ್ಳ ಕೊಳ್ಳ ಸುತ್ತಾಡಿ ಬಂದೆ,
ಹಳ್ಳ ಕೊಳ್ಳ ಸುತ್ತಾಡಿ ಬಂದೆ,
ಎಲ್ಹೋದ್ಯೋ ಮಳೆರಾಯ"
ಎಂಬ ಸಾಮೂಹಿಕವಾದ ಗಾಯನದೊಂದಿಗೆ ಗುರ್ಜಿ ಹೊತ್ತ ಮಕ್ಕಳ ತಂಡ ಓಣಿಯಲ್ಲಿ ಹೊಂಟರೆ ತಕ್ಷಣಕ್ಕೆ ಮಳೆಯಾಗದಿದ್ದರೂ ರಸ್ತೆ ಮಾತ್ರ ಕೆಸರಾಗುತ್ತದೆ.
ರೈತರ ಪ್ರತಿಯೊಂದು ಮನೆ ಬಾಗಿಲಿಗೂ ಬರುವ ಗುರ್ಜಿಯ ತಲೆಯ ಮೇಲೆ ಕೊಡದಲ್ಲಿ ನೀರು ಸುರಿಯುವ ರೈತರು ತಡವಾದ ಮಳೆ ಇನ್ನಾದರೂ ಸುರಿಯಲಿ ಎಂದು ಮನದಲ್ಲಿಯೇ ಹಾರೈಸುತ್ತಾರೆ. ತಲೆಯ ಮೇಲೆ ತಣ್ಣೀರು ಬೀಳುತ್ತಿದ್ದಂತೆ ತಮ್ಮ ಹಾಡಿನೊಂದಿಗೆ ಗಿರಿಗಿರನೆ ಸುತ್ತುವ ಗುರ್ಜಿ ಹೊತ್ತ ಬಾಲಕ ಮಳೆಯ ಪ್ರತಿರೂಪವನ್ನೇ ಸೃಷ್ಟಿಸುತ್ತಾನೆ.
ಬುಧವಾರ ಸಂಜೆ ಸವಣೂರಿನ ಗೌಡ್ರ ಓಣಿಯಲ್ಲಿ ಆಚರಿಸಲಾದ ಗುರ್ಜಿ ಆಟ ಇತ್ತಿಚಿಗೆ ಅಪರೂಪವಾಗಿದ್ದರೂ, ಮಳೆ ಬೀಳದೆ ಕಂಗಾಲಾಗಿರುವ ರೈತರ ಮನಸ್ಸಿಗೆ ಮಾತ್ರ ತಂಪು ನೀಡಿತು. ಮಳೆಗಾಗಿ ಮಾಡುವ ಕಪ್ಪೆ ಮದುವೆ, ಕತ್ತೆ ಮೆರವಣಿಗೆ, ಮೋಡ ಬಿತ್ತನೆ ಮೊದಲಾದ ಹತ್ತಾರು ಆಚರಣೆ ವಿಧಾನಗಳ ನಡುವೆಯೂ ಗುರ್ಜಿ ಆಟ ಹೊಸತನವನ್ನು ಮೂಡಿಸಿತು.
ಏನಿದು ಗುರ್ಜಿ ? : ಸಕಾಲಿಕವಾದ ಮಳೆ ಬೀಳದ ಸಂದರ್ಭದಲ್ಲಿ ಒಟ್ಟುಗೂಡುವ ರೈತರ ಮಕ್ಕಳು, ಆಕಳ ಸಗಣಿಯಲ್ಲಿ ಗುರ್ಜಿಯನ್ನು (ಗುಪ್ಪೆ) ಸಿದ್ದಪಡಿಸಿಕೊಳ್ಳುತ್ತಾರೆ. ಬಳಿಕ ಕಟ್ಟು ಹಾಕಲಾದ ಬೇವಿನ ಸೊಪ್ಪಿನ ರಾಶಿಯ ಮೇಲೆ ಗುರ್ಜಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.
ಇದಕ್ಕೆ 4-5 ಕಪ್ಪೆಗಳನ್ನೂ ಕಟ್ಟಲಾಗಿರುತ್ತದೆ. ಬಳಿಕ ಗುರ್ಜಿಯನ್ನು ಹೂಗಳಿಂದ ಅಲಂಕರಿಸಿ ಪೂಜೆಯನ್ನೂ ಸಲ್ಲಿಸಲಾಗುತ್ತದೆ. ಬಳಿಕ ಗುರ್ಜಿಯನ್ನು ಸಂಭ್ರಮದಿಂದ ಹೊತ್ತುಕೊಳ್ಳುವ ಮಕ್ಕಳು ಅದನ್ನು ಓಣಿಯಲ್ಲಿನ ಎಲ್ಲ ರೈತರ ಮನೆ ಬಾಗಿಲಿಗೆ ತರುತ್ತಾರೆ.
ಹಾಡಿನ ಕೋರಸ್ ಮುಂದುವರೆಸುವ ಮಕ್ಕಳು,
ಬಣ್ಣ ಕೊಡತೀನಿ ಬಾ ಮಳೆಯೇ
ಸುಣ್ಣ ಕೊಡತೀನಿ ಸುರಿ ಮಳೆಯೇ
ಹಗ್ಗಾ ಕೊಡತೀನಿ ಜಗ್ಗ ಮಳೆಯೇ
ಹಿಟ್ಟ ಕೊಡತೀನಿ ಕುಟ್ಟ ಮಳೆಯೇ
ಎನ್ನುತ್ತಿದ್ದಂತೆ ರೈತರ ಮನೆಗಳಲ್ಲಿ ಸಿದ್ದವಾಗಿ ಇಡಲಾಗಿದ್ದ ಬಿಂದಿಗೆ ನೀರನ್ನು ಗುರ್ಜಿಯ ಮೇಲೆ ಸುರಿಯಲಾಗುತ್ತದೆ. ನೀರು ತಲೆಯ ಮೇಲೆ ಬೀಳುತ್ತಿದ್ದಂತೆ ಗುರ್ಜಿ ಸಮೇತವಾಗಿ ಗಿರಗಿರನೇ ಸುತ್ತು ತಿರುಗುವ ಮಕ್ಕಳು, ಮಳೆಯ ಅನುಭವವನ್ನೇ ಹೊಂದುತ್ತಾರೆ.
ಬಳಿಕ ಮನೆಯವರು ನೀಡುವ ದವಸ ಧಾನ್ಯಗಳನ್ನು ಸಂಗ್ರಹಿಸುವ ಮಕ್ಕಳ ತಂಡ ಮುಂದಿನ ಮನೆಗೆ ಸಾಗುತ್ತದೆ. ಪುನಃ ನೀರಿನ ಅಭಿಷೇಕದೊಂದಿಗೆ ಹಾಡು, ಗಿರಿಗಿರಿ ಸುತ್ತುವಿಕೆ ಮುಂದುವರೆಯುತ್ತದೆ. ಹಲವು ಮನೆಗಳಲ್ಲಿ ಆಗುವ ಅಭಿಷೇಕದ ಬಳಿಕ ಗುರ್ಜಿ ಮತ್ತೊಬ್ಬನ ತಲೆಗೆ ಸ್ಥಳಾಂತರವಾಗುತ್ತದೆ.
ರೈತರ ಓಣಿಗಳಲ್ಲಿ ಮಾತ್ರ ನಡೆಯುವ ಈ ಆಟದ ಬಳಿಕ ಸಂಗ್ರಹಗೊಂಡ ಎಲ್ಲ ಧಾನ್ಯಗಳನ್ನು ಓಣಿಯಲ್ಲಿನ ಗುಡಿಗೆ ತರಲಾಗುತ್ತದೆ. ಅದರಿಂದ ಪ್ರಸಾದ ತಯಾರಿಸಿ ದೇವರಿಗೆ ಸಮರ್ಪಿಸಲಾಗುತ್ತದೆ. ಬಳಿಕ ದೇವರ ಪ್ರಸಾದವನ್ನು ಮನೆ ಮನೆಗೆ ತೆರಳಿ ಹಂಚಲಾಗುತ್ತದೆ. ಇದರೊಂದಿಗೆ ಗುರ್ಜಿ ಆಚರಣೆ ಪೂರ್ಣಗೊಳ್ಳುತ್ತದೆ.
ಕಳೆದ ಮೂರು ನಾಲ್ಕು ವರ್ಷಗಳಿಂದ ಅತಿವೃಷ್ಟಿ ಕಂಡಿರುವ ರೈತ ಸಮೂಹ ಈ ಬಾರಿ ಅನಾವೃಷ್ಟಿಯ ಭೀತಿಯಲ್ಲಿದೆ. ಮಾಡಲಾಗಿರುವ ಬಿತ್ತನೆಯೂ ಮೊಳಕೆಯೊಡೆದಿದ್ದು, ಪ್ರತಿನಿತ್ಯವೂ ಬಿರು ಬಿಸಿಲನ್ನು ಕಾಣುವಂತಾಗಿದೆ.
ಈ ಹಂತದಲ್ಲಿ ಮಳೆ ಸುರಿಯದಿದ್ದಲ್ಲಿ ರೈತ ಸಮೂಹ ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಮುನಿಸಿಕೊಂಡಿರುವ ಮಳೆರಾಯ ಮಕ್ಕಳ ಕೂಗಿಗೂ ಬರುವನೇ ಎಂಬ ನಿರೀಕ್ಷೆ ರೈತ ಸಮುದಾಯದಲ್ಲಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications