ಸಚಿವರ ಭೇಟಿ ವಿಚಾರದಲ್ಲಿ ಹಿಂಸಾಚಾರ: 4 ರೈತರು ಸೇರಿ 8 ಮಂದಿ ಸಾವು, ಯುಪಿಗೆ ನಾಯಕರ ದೌಡು
ಲಕ್ನೋ, ಅಕ್ಟೋಬರ್ 04: ಉತ್ತರ ಪ್ರದೇಶದಲ್ಲಿ ಇನ್ನು ಕೆಲವೇ ತಿಂಗಳಿನಲ್ಲಿ ಚುನಾವಣೆ ಬರಲಿದೆ. ಈ ನಡುವೆ ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಭಾನುವಾರ ಹಿಂಸಾಚಾರ ತೀವ್ರ ಸ್ವರೂಪವನ್ನು ಪಡೆದಿದೆ. ಕಳೆದ ಹತ್ತು ತಿಂಗಳಿನಿಂದ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧ ಮಾಡಿ ಪ್ರತಿಭಟನೆ ನಡೆಸುತ್ತಿರುವ ರೈತರು ಭಾನುವಾರ ಉತ್ತರ ಪ್ರದೇಶದಲ್ಲಿ ಇಬ್ಬರು ಸಚಿವರ ಭೇಟಿ ವಿಚಾರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಉಪ ಮುಖ್ಯಮಂತ್ರಿ ಕೇಶವ ಮೌರ್ಯ ಮತ್ತು ಕೇಂದ್ರ ಸಚಿವ ಅಜಯ್ ಮಿಶ್ರಾ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕಾರುಗಳು ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಪ್ರತಿಭಟನಾನಿರತರ ಮೇಲೆಯೇ ಹರಿದಾಡಿದ ಬಳಿಕ ಈ ಪ್ರತಿಭಟನೆ ತೀವ್ರವಾಗಿದೆ ಎಂದು ರೈತರು ಹೇಳಿದ್ದಾರೆ. ವಾಹನಗಳಿಗೆ ಬೆಂಕಿ ಹಚ್ಚಿರುವ ದೃಶ್ಯಗಳು ಕಂಡು ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ರೈತ ಮುಖಂಡ ಡಾ. ದರ್ಶನ್ ಪಾಲ್, "ಸಚಿವರುಗಳ ಭೇಟಿಯನ್ನು ತಡೆಯುವ ನಿಟ್ಟಿನಲ್ಲಿ ರೈತರು ಹೆಲಿಪ್ಯಾಡ್‌ನಲ್ಲಿ ಘೆರವು ಹಾಕಲು ಯೋಜನೆ ರೂಪಿಸಿದ್ದೆವು. ನಮ್ಮ ಆ ಘೆರಾವು ಕಾರ್ಯಕ್ರಮ ಮುಗಿದ ಬಳಿಕ ನಮ್ಮ ಹೆಚ್ಚಿನ ರೈತರು ಹಿಂದಕ್ಕೆ ತೆರಳುತ್ತಿದ್ದೆವು. ಆದರೆ ಆ ಸಂದರ್ಭದಲ್ಲಿ ಮೂರು ಕಾರುಗಳು ಬಂದಿದೆ. ರೈತರುಗಳನ್ನು ತಳ್ಳಿಕೊಂಡು ರೈತರ ಮೇಲೆಯೇ ಆ ಕಾರುಗಳು ಸಾಗಿದೆ. ಈ ವೇಳೆ ಓರ್ವ ರೈತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ," ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಾರಿನಲ್ಲಿ ಸಚಿವರ ಮಗನೂ ಇದ್ದ ಎಂದು ಆರೋಪ ಮಾಡಿದ್ದಾರೆ.

ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರ ಕಾರಿನಲ್ಲಿ?
ಉತ್ತರ ಪ್ರದೇಶದಲ್ಲಿ ಈ ಘಟನೆಯ ಸಂದರ್ಭದಲ್ಲಿ ಕಾರಿನಲ್ಲಿ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರ ಇದ್ದರು ಎಂಬ ಆರೋಪವನ್ನು ಸಚಿವರು ನಿರಾಕರಿಸಿದ್ದಾರೆ. "ನನ್ನ ಪುತ್ರ ಆ ಸಂದರ್ಭದಲ್ಲಿ ಕಾರಿನಲ್ಲಿ ಇರಲಿಲ್ಲ. ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳು ಕೋಲು ಮತ್ತು ಕತ್ತಿಗಳಿಂದ ಹಲ್ಲೆ ಮಾಡಿದ್ದಾರೆ. ನನ್ನ ಮಗ ಅಲ್ಲಿ ಇದ್ದಿದ್ದರೆ, ಆತ ಜೀವಂತವಾಗಿ ಇರುತ್ತಿರಲಿಲ್ಲ," ಎಂದು ಹೇಳಿದ್ದಾರೆ. "ನನ್ನ ಪುತ್ರ ಒಂದು ಕಾರ್ಯಕ್ರಮದಲ್ಲಿ ಇದ್ದ. ನಾನು ಉಪ ಮುಖ್ಯಮಂತ್ರಿಯ ಜೊತೆಗಿದ್ದೆ," ಎಂದು ಕೂಡಾ ಹೇಳಿದ್ದಾರೆ. "ಇನ್ನು ನಮ್ಮ ಕಾರಿನ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಈ ಸಂದರ್ಭದಲ್ಲಿ ಚಾಲಕನಿಗೆ ಗಾಯವಾಗಿದೆ. ಹಾಗಾಗಿ ಚಾಲಕನಿಗೆ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಈ ಬಳಿಕ ಮೂವರು ಕಾರ್ಯಕರ್ತರು ಸಾವನ್ನಪ್ಪಿದ್ದಾರೆ, ಕಾರಿಗೆ ಬೆಂಕಿ ಹಚ್ಚಲಾಗಿದೆ," ಎಂದು ಆರೋಪ ಮಾಡಿದ್ದಾರೆ. "ಇವೆಲ್ಲ ಕೃತ್ಯವನ್ನು ಅವರೇ ಮಾಡಿದ್ದಾರೆ, ಈ ಬಗ್ಗೆ ನಮ್ಮಲ್ಲಿ ವಿಡಿಯೋ ಸಾಕ್ಷಿಯಿದೆ," ಎಂದು ಕೂಡಾ ಹೇಳಿಕೊಂಡಿದ್ದಾರೆ. ಇನ್ನು ಅಜಯ್ ಮಿಶ್ರಾರ ಪುತ್ರ ಆಶಿಶ್ ಕೂಡಾ ತಾನು ಘಟನಾ ಸ್ಥಳದಲ್ಲಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ಘಟನೆ "ದುರದೃಷ್ಟಕರ" ಎಂದ ಮುಖ್ಯಮಂತ್ರಿ
ಇನ್ನು "ಘಟನೆಯಲ್ಲಿ ಕಾರು ಅಪಘಾತಗೊಂಡು ನಾಲ್ವರು ರೈತರು ಸಾವನ್ನಪ್ಪಿದ್ದಾರೆ, ಆರು ಮಂದಿ ಗಾಯಗೊಂಡಿದ್ದಾರೆ," ಎಂದು ಕೂಡಾ ಸಚಿವರು ಹೇಳಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ತೇಜೆಂದರ್ ಎಸ್ ವಿರಾಕ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಘಟನೆಯು "ದುರದೃಷ್ಟಕರ" ಎಂದು ಹೇಳಿದ್ದಾರೆ. "ಈ ವಿಚಾರದಲ್ಲಿ ನಾವು ಸಂಪೂರ್ಣವಾಗಿ ತನಿಖೆಯನ್ನು ನಡೆಸುತ್ತೇವೆ. ಆರೋಪಿಗಳ ವಿರುದ್ದ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಎಲ್ಲರೂ ಶಾಂತಿಯನ್ನು ಕಾಪಾಡುವಂತೆ ಮನವಿ ಮಾಡುತ್ತೇವೆ," ಎಂದು ತಿಳಿಸಿದ್ದಾರೆ. ಪ್ರಸ್ತುತ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇದ್ದು, ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಘಟನೆ ಬೆನ್ನಲ್ಲೇ ತುರ್ತು ಸಭೆ ಕರೆದ ರೈತ ಮುಖಂಡ ನರೇಶ್ ಟಿಕಾಯತ್
ಈ ಘಟನೆ ರಾಕೇಶ್ ಟಿಕಾಯತ್ ರೈತ ಮುಖಂಡ ನರೇಶ್ ಟಿಕಾಯತ್ ತುರ್ತು ಸಭೆ ಕರೆದಿದ್ದಾರೆ. ಈ ವಿಚಾರದಲ್ಲಿ ಮುಂದಿನ ಕ್ರಮದ ಬಗ್ಗೆ ಈ ಸಭೆಯಲ್ಲಿ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ನಡುವೆ ಮಾನ ಹಕ್ಕುಗಳ ಕಾರ್ಯಕರ್ತ ಚಂದ್ರಶೇಖರ್ ಅಜಾದ್ ಹಾಗೂ ಭೀಮ್ ಆರ್ಮಿ ಪಕ್ಷದ ಕಾರ್ಯಕರ್ತರು ಲಖಿಂಪುರ್ ಖೇರಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ಹಲವಾರು ವಿರೋಧ ಪಕ್ಷದ ನಾಯಕರುಗಳು ಕೂಡಾ ಸ್ಥಳಕ್ಕೆ ದೌಡಾಯಿಸಿದ್ದಾರೆ ಎಂದು ವರದಿಯಾಗಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಸ್ಥಳಕ್ಕೆ ತೆರಳಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸೋಮವಾರ ಸ್ಥಳಕ್ಕೆ ತೆರಳುವುದಾಗಿ ಹೇಳಿದ್ದಾರೆ.

ವಿರೋಧ ಪಕ್ಷಗಳಿಂದ ತೀವ್ರ ಖಂಡನೆ ವ್ಯಕ್ತ
ಈ ಘಟನೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನಾಯಕ ರಣ್‌ದೀಪ್ ಸುರ್ಜೇವಾಲಾ, ಕಪಿಲ್ ಸಿಬಲ್, ರಾಹುಲ್ ಗಾಂಧಿ ಮೊದಲಾದವರು ಖಂಡನೆ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಯುಪಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು, "ಈ ವಿಚಾರದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು," ಎಂದು ಆಗ್ರಹಿಸಿದ್ದಾರೆ. "ಸಂತ್ರಸ್ತರಿಗೆ ಉತ್ತಮ ಚಿಕಿತ್ಸೆಯನ್ನು ನೀಡಬೇಕು. ರೈತರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವನ್ನು ಬಿಜೆಪಿಯು ಮಾಡುತ್ತಿದೆ. ಬ್ರಿಟಿಷರಂತೆ ಕ್ರೂರತನವನ್ನು ಪ್ರದರ್ಶನ ಮಾಡುತ್ತಿದೆ," ಎಂದು ತಿಳಿಸಿದ್ದಾರೆ. ರಾಹುಲ್ ಗಾಂಧಿ, "ಮೌನವಾಗಿದ್ದವರು ಸಾವನ್ನಪ್ಪಿದರು," ಎಂದು ಹೇಳಿದ್ದಾರೆ. ಹಾಗೆಯೇ ಈ ಘಟನೆಯು "ಅಮಾನವೀಯ ಹತ್ಯಾಕಾಂಡ," ಎಂದಿದ್ದಾರೆ. "ಈ ಅಮಾನವೀಯ ಹತ್ಯಾಕಾಂಡವನ್ನು ನೋಡಿದ ಬಳಿಕವೂ ಸುಮ್ಮನಿದ್ದವರು ಈಗ ಸಾವನ್ನಪ್ಪಿದ್ದಾರೆ. ಆದರೆ ಅವರ ಈ ಬಲಿದಾನವು ವ್ಯರ್ಥವಾಗಲು ನಾವು ಬಿಡುವುದಿಲ್ಲ, ಕಿಸಾನ್ ಸತ್ಯಾಗ್ರಹ ಜಿಂದಾಬಾದ್," ಎಂದು ಟ್ವೀಟ್ ಮಾಡಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications