Get Updates
Get notified of breaking news, exclusive insights, and must-see stories!

ನಾಡಿನ ಜನತೆಗೆ ಮುಖ್ಯಮಂತ್ರಿಗಳ ಕರೆಯೋಲೆ

ಬೆಳಗಾವಿ ನಗರದಲ್ಲಿ ಮಾರ್ಚ್ 11ರಿಂದ 13ರವರೆಗೆ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಮೈಸೂರು ನಗರದಲ್ಲಿ 1985ರಲ್ಲಿ ನಡೆದ ಪ್ರಪ್ರಥಮ ವಿಶ್ವ ಕನ್ನಡ ಸಮ್ಮೇಳನದ ನಂತರ ನಡೆಯುತ್ತಿರುವ ದ್ವಿತೀಯ ವಿಶ್ವ ಕನ್ನಡ ಸಮ್ಮೇಳನ ಇದಾಗಿದೆ. ಸಕಲ ಕನ್ನಡಿಗರ ಆಶಯಗಳಿಗೆ ಕೈಗನ್ನಡಿಯಾಗಿ ಒಡಮೂಡಲಿರುವ ಈ ಸಮ್ಮೇಳನದಲ್ಲಿ ಕರ್ನಾಟಕದ ಸಮಸ್ತ ಜನತೆ ಭಾಗಿಯಾಗಬೇಕೆಂಬುದು ನಮ್ಮ ಬಯಕೆ.

ರಾಷ್ಟ್ರಕವಿ ಕುವೆಂಪು ಕರ್ನಾಟಕವನ್ನು ಹೀಗೆಂದು ಬಣ್ಣಿಸಿದ್ದಾರೆ. ಕರ್ನಾಟಕವೆಂಬುದೇನು ಹೆಸರೇ ಬರಿಯ ಮಣ್ಣಿಗೆ, ಯಂತ್ರ ಕಣಾ, ಶಕ್ತಿ ಕಣಾ, ತಾಯಿ ಕಣಾ, ದೇವಿ ಕಣಾ, ಬೆಂಕಿ ಕಣಾ, ಸಿಡಿಲು ಕಣಾ! ಮಹಾಕವಿಯ ನುಡಿಮುತ್ತಿನಂತೆ ಕರ್ನಾಟಕ ರಾಜ್ಯವು ಈ ಎಲ್ಲಾ ಶಕ್ತಿ, ಭಾವನೆ, ದೈವೀ ಸ್ವರೂಪಗಳ ಸಂಗಮವಾಗಿದೆ.

ಕರ್ನಾಟಕ ಏಕೀಕರಣದ ನಂತರದ ಐವತ್ತೈದು ವರ್ಷಗಳಲ್ಲಿ ನಮ್ಮ ನಾಡು ಹಲವಾರು ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದೆ. ಆರಂಭದ ದಶಕವು ನಾಡಿನ ನೀರಾವರಿ ವಿದ್ಯುತ್ ಇತ್ಯಾದಿ ಮೂಲ ವಲಯಗಳ ಸುಧಾರಣೆಗೆ ನಾಂದಿ ಹಾಡಿದರೆ, ಎರಡನೇ ದಶಕವು ಈ ಯೋಜನೆಗಳ ಸಾಕಾರಕ್ಕೆ ಸಾಕ್ಷಿಯಾಯಿತು. ಮೂರನೇ ದಶಕವು ಭೂ ಸುಧಾರಣೆಗಳಾದ ಉಳುವವನೇ ಹೊಲದೊಡೆಯ ಹಾಗೂ ಸಾಮಾಜಿಕ ಪರಿವರ್ತನೆಯ ಜೀತ ಪದ್ಧತಿ ನಿರ್ಮೂಲನೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇತ್ಯಾದಿ ರಾಷ್ಟ್ರವ್ಯಾಪಿ ಮನ್ನಣೆಯ ಕಾರ್ಯಕ್ರಮಗಳಿಂದ ಗಮನ ಸೆಳೆಯಿತು. ನಾಲ್ಕನೇ ದಶಕವು ಆಡಳಿತ ವಿಕೇಂದ್ರೀಕರಣಕ್ಕೆ ಮುನ್ನುಡಿ ಬರೆಯಿತು. ಐದನೇ ದಶಕವು ನೂತನ ಶತಮಾನದ ಆರಂಭದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಗತ್ತಿನ ಗಮನ ಸೆಳೆದಿದೆ.

ಇದೀಗ ಕಳೆದ ಐದು ದಶಕಗಳ ಸಾಧನೆ-ಪ್ರಗತಿಗಳನ್ನು ಸಮ್ಮಿಲನಗೊಳಿಸಿಕೊಂಡು ಮುನ್ನಡೆಯುವ ಸಂಕ್ರಮಣ ಕಾಲದಲ್ಲಿ ನಾವಿದ್ದೇವೆ. ಹಿಂದಿನ ಪ್ರಗತಿಯನ್ನು ಸಂಭ್ರಮಿಸುವ, ಮುಂದಿನ ಹಾದಿಯನ್ನು ಅನ್ವೇಷಿಸುವ ಪ್ರಯತ್ನಗಳಿಗೆ ವೇದಿಕೆಯಾಗುತ್ತಿರುವ ದ್ವಿತೀಯ ವಿಶ್ವ ಕನ್ನಡ ಸಮ್ಮೇಳನಕ್ಕೆ ನಾಡಿನ ಹಲವಾರು ಸಾಧಕರು, ಪ್ರತಿಭಾನ್ವಿತರು, ಉದ್ಯಮಿಗಳು, ಸಾಹಿತಿ-ಕಲಾವಿದರು, ಆಡಳಿತ ಧುರೀಣರನ್ನು ಆಹ್ವಾನಿಸಲಾಗಿದೆ.

ಗಣ್ಯ ಆಹ್ವಾನಿತರು : ಇನ್‌ಪೋಸಿಸ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟಿರುವ ಡಾ ಎನ್. ಆರ್. ನಾರಾಯಣ ಮೂರ್ತಿ ಅವರನ್ನು ಈ ಎರಡನೇ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆಗೆ ಆಹ್ವಾನಿಸಲಾಗಿದೆ. ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಹಾಗೂ ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ, ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಸುಪ್ರಸಿದ್ಧ ವಿಜ್ಞಾನಿ ಡಾ ಸಿ. ಎನ್.ಆರ್.ರಾವ್, ರಾಷ್ಟ್ರಕವಿ ಡಾ ಜಿ.ಎಸ್. ಶಿವರುದ್ರಪ್ಪ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ ಯು.ಆರ್. ಅನಂತಮೂರ್ತಿ, ಹೆಸರಾಂತ ಕವಿ ಚನ್ನವೀರ ಕಣವಿ, ಪದ್ಮಶ್ರೀ ಡಾ ಕೆ. ಎಸ್. ನಿಸಾರ್ ಅಹಮದ್, ಹೆಸರಾಂತ ಸಾಹಿತಿಗಳಾದ ಡಾ ಚಂದ್ರಶೇಖರ ಕಂಬಾರ, ಬರಗೂರು ರಾಮಚಂದ್ರಪ್ಪ, ಡಾ ಸುಧಾಮೂರ್ತಿ ಮುಂತಾದವರಿಗೆ ಕರೆಯೋಲೆ ಹೋಗಿದೆ.

ಕಲಾವಿದರು, ಕ್ರೀಡಾಪಟುಗಳು : ರಂಗಭೂಮಿ ಕಲಾವಿದ ಏಣಗಿ ಬಾಳಪ್ಪ, ಖ್ಯಾತ ಚಲನಚಿತ್ರ ನಟ ನಟಿಯರಾದ ಅಂಬರೀಶ್, ಬಿ. ಸರೋಜಾದೇವಿ, ಲೀಲಾವತಿ, ಜಯಂತಿ, ಭಾರತಿ ವಿಷ್ಣುವರ್ಧನ್, ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಕ್ರಿಕೆಟ್ ಲೋಕದ ದಿಗ್ಗಜರಾದ ಜಿ.ಆರ್. ವಿಶ್ವನಾಥ್, ಸಯ್ಯದ್ ಕಿರ್ಮಾನಿ ಮತ್ತು ಅನಿಲ್ ಕುಂಬ್ಳೆ, ಅಶ್ವಿನಿ ನಾಚಪ್ಪ, ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕ ವಿಜೇತರಾದ ಆಶ್ವಿನಿ ಚಿದಾನಂದ ಶಿಟ್ಟಿ, ಮಮತಾ ಪೂಜಾರ್, ಪರಿಸರ ರಕ್ಷಕಿ ಸಾಲುಮರದ ತಿಮ್ಮಕ್ಕ, ಜಾನಪದ ತಜ್ಞರಾದ ಸುಕ್ರಿ ಬೊಮ್ಮನಗೌಡ ಹಾಗೂ ಪುಟ್ಟಮಲ್ಲೇಗೌಡ, ಹೆಸರಾಂತ ಉದ್ಯಮಿಗಳಾದ ಡಾ ವಿಜಯ್ ಮಲ್ಯ, ಬಿ.ಆರ್. ಶೆಟ್ಟಿ, ಕ್ಯಾಪ್ಟನ್ ಜಿ.ಆರ್. ಗೋಪಿನಾಥ್, ಮ್ಯಾಗ್‌ಸೆಸ್ಸೇ ಪ್ರಶಸ್ತಿ ವಿಜೇತ ಡಾ. ಎಚ್. ಸುದರ್ಶನ್, ಅಮೆರಿಕಾದ ಅಕ್ಕ ಸಂಸ್ಥೆಯ ಅಮರನಾಥ ಗೌಡ, ಯುನೈಟೆಡ್ ಕಿಂಗ್‌ಡಂನ ಕನ್ನಡ ಬಳಗದ ಡಾ ಭಾನುಮತಿ, ಅವರುಗಳನ್ನು ಆತ್ಮೀಯವಾಗಿ ಆಮಂತ್ರಿಸಲಾಗಿದೆ.

ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡದ ಒಂದು ನೂರು ಮೇರು ಕೃತಿಗಳನ್ನು ಹಾಗೂ ಹಂ.ಪಾ. ನಾಗರಾಜಯ್ಯ ಮತ್ತು ಜಿ.ಎನ್. ಮೋಹನ್ ಸಂಪಾದಕತ್ವದ ಪುನರಾವಲೋಕನ ಸಂದರ್ಭ ಗ್ರಂಥವನ್ನು ಬಿಡುಗಡೆ ಮಾಡಲಾಗುವುದು.

ಮಾರ್ಚ್ 13ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಜ್ಯ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ರಾಜ್ಯ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕಿ ಮೋಟಮ್ಮ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪ, ಎನ್. ಧರ್ಮಸಿಂಗ್, ಎಚ್.ಡಿ. ಕುಮಾರಸ್ವಾಮಿ, ಸಾಹಿತ್ಯ ಕ್ಷೇತ್ರದ ದಿಗ್ಗಜ ನಾಡೋಜ ಡಾ. ದೇ. ಜವರೇಗೌಡ, ಡಾ ಪಾಟೀಲ ಪುಟ್ಟಪ್ಪ ಮತ್ತು ಡಾ. ಜಿ. ನಾರಾಯಣ, ಹೆಸರಾಂತ ವಿಜ್ಞಾನಿ ಡಾ. ಯು.ಆರ್. ರಾವ್, ಖ್ಯಾತ ನಿಘಂಟುಕಾರ ಡಾ. ಜಿ. ವೆಂಕಟಸುಬ್ಬಯ್ಯ, ಹೆಸರಾಂತ ಕ್ರೀಡಾಪಟು ಪ್ರಕಾಶ್ ಪಡುಕೋಣೆ, ಪತ್ರಿಕೋದ್ಯಮ ದಿಗ್ಗಜ ಎಸ್.ವಿ. ಜಯಶೀಲ ರಾವ್ ಅವರೂ ಸೇರಿದಂತೆ ಹಲವು ಗಣ್ಯರನ್ನು ಈ ಐತಿಹಾಸಿಕ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

ವಿಶ್ವ ಕನ್ನಡ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಉಮೇಶ್ ವಿ ಕತ್ತಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹಕಾರ ಸಚಿವ ಲಕ್ಷ್ಮಣ ಸವದಿ ಹಾಗೂ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಸಂಸದ ಪ್ರಭಾಕರ ಕೋರೆ, ಜಿಲ್ಲೆಯ ಸಂಸದರು ಹಾಗೂ ಶಾಸಕರ ಮಾರ್ಗದರ್ಶನದಲ್ಲಿ ಬೆಳಗಾವಿಯ ಜಿಲ್ಲಾಡಳಿತವು ಸಮ್ಮೇಳನದ ಸಕಲ ಕಾರ್ಯಕ್ರಮಗಳನ್ನು ಕರಾರುವಕ್ಕಾಗಿ ಅನುಷ್ಠಾನಗೊಳಿಸಲು ಶ್ರಮವಹಿಸುತ್ತಿದೆ. ಸಮ್ಮೇಳನಕ್ಕೆ ಆಗಮಿಸುವ ಅತಿಥಿ ಗಣ್ಯರು, ಸಾಹಿತಿ-ಕಲಾವಿದರು, ಹೊರನಾಡ ಕನ್ನಡಿಗರು ಹಾಗೂ ಜನಸಾಮಾನ್ಯರಿಗೂ ಉತ್ತಮ ಊಟ ಮತ್ತು ವಸತಿ ಕಲ್ಪಿಸಲು ಯೋಜನಾ ಬದ್ಧ ವ್ಯವಸ್ಥೆ ರೂಪಿಸಲಾಗಿದೆ. [ಬೆಳಗಾವಿ ಸಮ್ಮೇಳನದ ಸುದ್ದಿಬಿಂಬ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+