ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದಿಂದ 1 ಕೋಟಿ

41 ವರ್ಷಗಳ ನಂತರ ನಗರದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ 80 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಇದಲ್ಲದೆ ಸುಮಾರು 20 ಸಾವಿರ ಪ್ರತಿನಿಧಿಗಳು ಭಾಗವಹಿಸುತ್ತಿದ್ದು, ಅವರಿಗೆಲ್ಲ ಊಟ, ವಸತಿ ವ್ಯವಸ್ಥೆ ಮಾಡಲಾಗುವುದು ಎಂದು ಕಾರಜೋಳ ಅವರು ಹೇಳಿದರು.
ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಸಮ್ಮೇಳನ ನಡೆಯಲಿದ್ದು, ಪ್ರತಿನಿಧಿಗಳಿಗೆ 250 ರೂಪಾಯಿ ನೋಂದಣಿ ಶುಲ್ಕ ನಿಗದಿ ಮಾಡಲಾಗಿದೆ. ಮೈದಾನದಲ್ಲಿ ಎರಡು ಸಾವಿರ ಜನರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ದೂರಾದ ಊರುಗಳಿಂದ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಭಿಮಾನಿಗಳಿಗೆ ತಾತ್ಕಾಲಿಕವಾಗಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆ ಮತ್ತು ಬಿಬಿಎಂಪಿ ಮಾಡಲಿದೆ ಎಂದು ಸಚಿವರು ಹೇಳಿದರು.
ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ 'ನುಡಿ ತೇರು" ಉತ್ಸವ ನಡೆಯಲಿದ್ದು, ನಗರದ ಎಲ್ಲ ಬಡಾವಣೆಗಳಲ್ಲಿ ಸಮ್ಮೇಳನದ ಕಂಪನ್ನು ಬಿಂಬಿಸುವ ವಾತಾವರಣ ನಿರ್ಮಾಣ ಮಾಡುವುದು ಇದರ ಉದ್ದೇಶವಾಗಿದೆ. ಪ್ರಚಾರ ಕಾರ್ಯಕ್ಕೆ ಎಲ್ಲ ಸಿದ್ಧತೆ ಪೂರ್ಣವಾಗಿದ್ದು, ಈ ನುಡಿನಮನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕಾಕರಜೋಳ ಮನವಿ ಮಾಡಿದರು.
***
ರನ್ನ ಪ್ರತಿಷ್ಠಾನಕ್ಕೆ 12 ಲಕ್ಷ: ಕನ್ನಡದ ರತ್ನತ್ರಯರಲ್ಲಿ ಒಬ್ಬರಾದ 'ಕವಿ ಚಕ್ರವರ್ತಿ ರನ್ನ ಪ್ರತಿಷ್ಠಾನ"ವನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನಲ್ಲಿ ಸ್ಥಾಪಿತವಾಗಿರುವ ಈ ಟ್ರಸ್ಟ್ ಗೆ ಪ್ರತಿ ವರ್ಷ 12 ಲಕ್ಷ ರೂಪಾಯಿ ಅನುದಾನವನ್ನು ಪ್ರತಿಷ್ಠಾನಕ್ಕೆ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಮಂಗಳವಾರ ಇಲ್ಲಿ ತಿಳಿಸಿದರು.
ಬಾಗಲಕೋಟೆ ಜಿಲ್ಲಾಧಿಕಾರಿ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದು, ಪ್ರಜಾವಾಣಿ ಪತ್ರಿಕೆಯ ಸಹ ಸಂಪಾದಕ ಪದ್ಮರಾಜ ದಂಡಾವತಿ, ಮುಧೋಳದ ಎಚ್.ವೈ.ಕಾತರಕಿ, ಲೋಕಾಪುರದ ಎಸ್.ಬಿ.ಕೃಷ್ಣೇಗೌಡ, ಪ್ರಾಧ್ಯಾಪಕ ಶಂಭು ಬಳಿಗಾರ ಪ್ರತಿಷ್ಠಾನದ ಅಧಿಕಾರೇತರ ಸದಸ್ಯರಾಗಿದ್ದಾರೆ.











Click it and Unblock the Notifications