Vehicle Scrappage Policy: ಹೊಸ ಗುಜರಿ ನೀತಿಯಿಂದ ಜನರಿಗೆ ನಿಜವಾಗಿಯೂ ಲಾಭ ಆಗುತ್ತಾ?
ಬೆಂಗಳೂರು, ಆ. 13: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದ ಬಹು ನಿರೀಕ್ಷಿತ "ಭಾರತದ ಗುಜರಿ ಪಾಲಿಸಿ"ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಗುಜರಾತ್‌ನಲ್ಲಿ ಚಾಲನೆ ನೀಡಿದ್ದಾರೆ. ಇಲ್ಲಿ ನಡೆಯುತ್ತಿರುವ ಹೂಡಿಕೆದಾರರ ಸಮಾವೇಶದಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು.
ಪ್ರಸಕ್ತ 2021 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಭಾರತ ಗುಜರಿ ನೀತಿಯನ್ನ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದರು. ಈ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆ ಅಧಿವೇಶನದಲ್ಲಿ ಸಮಗ್ರ ವಿವರ ನೀಡಿದ್ದರು. ಇದೀಗ ಈ ಗುಜರಿ ನೀತಿಗೆ ಗುಜರಾತ್ ನಲ್ಲಿ ಉದ್ಘಾಟಿಸುವ ಮೂಲಕ ಮಹತ್ವದ ಯೋಜನೆಗೆ ಚಾಲನೆ ನೀಡಿದ್ದಾರೆ. ನೂತನ ಗುಜರಿ ನೀತಿ ಪ್ರಕಾರ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ದೇಶದ ಪ್ರತಿ ಆರ್‌ಟಿಓ ಕಚೇರಿಯ 200 ಕಿ.ಮೀ. ಅಂತರದಲ್ಲಿವಾಹನಗಳ ಫಿಟ್ನೆಸ್ ಕೇಂದ್ರಗಳನ್ನು ತೆರೆಯಲಾಗುತ್ತದೆ. ಇನ್ನು ಮುಂದೆ ಈ ನೀತಿ ಅನುಸಾರ ಅವಧಿ ಮುಗಿದ ಹಳೇ ವಾಹನಗಳನ್ನು ಗುಜರಿ ಕೇಂದ್ರಗಳಿಗೆ ಹಾಕಿ ಅದರ ಹಣವವನ್ನು ವಾಹನ ಮಾಲೀಕರು ಪಡೆಯಬಹುದಾಗಿದೆ. ಈ ಮೂಲಕ ಹಳೇ ವಾಹನಗಳಿಂದ ಪರಿಸರ ಮೇಲಿನ ಮಾಲಿನ್ಯ ತಡೆ ಜತೆಗೆ ಆಟೋ ಮೊಬೈಲ್ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಲಿದೆ.

ಗುಜರಿ ಪಾಲಿಸಿ ಅಂದ್ರೆ ಏನು?
ಪಾಶ್ಚಾತ್ಯ ದೇಶಗಳಲ್ಲಿ ಒಂದು ವಾಹನ ಖರೀದಿಸಿ ನೋಂದಣಿಯಾದ ದಿನವೇ ಗುಜರಿ ನೀತಿ ಆ ವಾಹನಕ್ಕೆ ಅನ್ವಯವಾಗುತ್ತದೆ. ಸಾಮಾನ್ಯವಾಗಿ ಜನ ಸಾಮಾನ್ಯರು ವೈಯಕ್ತಿಕ ಬಳಕೆಗೆ ಖರೀದಿಸುವ ವಾಹನವನ್ನು ಹದಿನೈದು ವರ್ಷದ ಬಳಿಕ ಗುಜರಿಗೆ ಹಾಕಬೇಕು. ಹತ್ತು ವರ್ಷ ಮೀರಿದ ಕೂಡಲೇ ವಾಣಿಜ್ಯ ವಾಹನಗಳನ್ನು ಗುಜರಿಗೆ ಹಾಕಬೇಕು. ಈ ಮೂಲಕ ವಾಹನಗಳಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮ ನಿಯಂತ್ರಿಸಲಾಗುತ್ತದೆ. ಹೀಗಾಗಿ ಅವಧಿ ಮುಗಿದ ವಾಹನಗಳನ್ನು ಗುಜರಿಗೆ ಹಾಕಿ ಆ ಕಬ್ಬಿಣ, ಇತರೆ ವಸ್ತುಗಳನ್ನು ಮರು ನವೀಕರಣ ಮಾಡಿ ಬಳಕೆ ಮಾಡಲಾಗುತ್ತದೆ. ಇನ್ನೂ ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಗುಜರಿ ನೀತಿ ಅವಧಿ ಮುಗಿದ ಕೂಡಲೇ ಐಷಾರಾಮಿ ಕಾರುಗಳನ್ನು ಭಾರತದಂತಹ ಬಡ ರಾಷ್ಟ್ರಗಳಿಗೆ ಮಾರಾಟ ಮಾಡುತ್ತಾರೆ. ಇದನ್ನೇ ಗುಜರಿ ನೀತಿ ಎಂದು ಕರೆಯುತ್ತೇವೆ.

ಪಾಲಿಸಿಯ ವಿವರಗಳು
ದೇಶದ ರಸ್ತೆಗಳಲ್ಲಿ ಸಂಚರಿಸುತ್ತಿವ ವಾಣಿಜ್ಯ ವಾಹನಗಳು ಹದಿನೈದು ವರ್ಷದ ಬಳಿಕ ಅವುಗಳ ಅರ್ಹತೆ ಬಗ್ಗೆ ತಪಾಸಣೆ ನಡೆಸಿ ಗುಜರಿಗೆ ಹಾಕುವುದು. ವಾಹನ ಖರೀದಿಸಿದ ಎಂಟು ವರ್ಷದ ಬಳಿಕ ಹದಿನೈದು ವರ್ಷದವರೆಗೂ ವಾಣಿಜ್ಯ ವಾಹನಗಳಿಗೆ ರಸ್ತೆ ತೆರಿಗೆಯ ಶೇ. 10 ರಿಂದ 15 ಪರ್ಸೆಟ್ ಗ್ರೀನ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಮತ್ತು ಸ್ವಂತಕ್ಕೆ ಬಳಸುವ ವೈಟ್ ಬೋರ್ಡ್ ವಾಹನಗಳಿಗೆ ಹದಿನೈದು ವರ್ಷದ ಬಳಿಕ ಶೇ. 50 ರಷ್ಟು ಗ್ರೀನ್ ಟ್ಯಾಕ್ಸ್ ವಿಧಿಸುವ ಪ್ರಸ್ತಾವನೆ ಹೊಂದಿದೆ. ಈ ಮೂಲಕ ಹಳೇ ವಾಹನಗಳನ್ನು ಮಾಲೀಕರು ಸ್ವಯಂ ಪ್ರೇರಿತವಾಗಿ ಗುಜರಿಗೆ ಹಾಕುವಂತಹ ವಾತಾವರಣ ನಿರ್ಮಿಸುವ ಉದ್ದೇಶದೊಂದಿಗೆ ಈ ಯೋಜನೆ ದೇಶದಲ್ಲಿ ಜಾರಿಗೆ ತರಲಾಗುತ್ತಿದೆ. ಅಂದರೆ ಒಂದು ಕಾಲ ಮಿತಿ ಬಳಿಕ ವಾಣಿಜ್ಯ ವಾಹನಗಳಿಗೆ ಇನ್ಮುಂದೆ ಗ್ರೀನ್ ಟ್ಯಾಕ್ಸ್ ಬೀಳಲಿದೆ. ಇದು ತಪ್ಪಿಸಿಕೊಳ್ಳಬೇಕಾದರೆ ವಾಹನವನ್ನು ಗುಜರಿಗೆ ಹಾಕಿ ಹೊಸ ವಾಹನ ಖರೀದಿ ಮಾಡಬೇಕು.

ಈ ಯೋಜನೆ ಸಫಲವಾಗಲಿದೆಯಾ?
ಭಾರತದಲ್ಲಿ ಸಹ ನೂತನ ಗುಜರಿ ನೀತಿಗೆ ಪ್ರಧಾನಿ ಇದೀಗ ಅಧಿಕೃತವಾಗಿ ಚಾಲನೆ ನೀಡಿದ್ದು ದೇಶದಲ್ಲೆಡೆ ಜಾರಿಗೆ ಬರಲಿದೆ. ಪ್ರತಿ ಆರ್‌ಟಿಓ ಕೇಂದ್ರದಿಂದ 200 ಕಿ.ಮೀ. ಅಂತರದಲ್ಲಿ ಗುಜರಿ ಕೇಂದ್ರ ತೆರೆಯಲಿದೆ. ಹಳೇ ವಾಹನಗಳಿಂದ ಪರಿಸರದ ಮೇಲೆ ಆಗುತ್ತಿರುವ ಪರಿಣಾಮವನ್ನು ತಪ್ಪಿಸುವುದು. ಹಳೇ ವಾಹನಗಳನ್ನು ರಸ್ತೆ ಬದಿ ಬಿಡುವ ಬದಲಿಗೆ ಅದನ್ನು ಸದ್ವಿನ್ವಿಯೋಗ ಮಾಡಿಕೊಳ್ಳುವ ಜತೆಗೆ ಹೊಸ ವಾಹನಗಳಿಗೆ ಅವಕಾಶ ಮಾಡಿಕೊಡುವುದು. ಈ ಮೂಲಕ ಭಾರತದ ಆಟೋಮೊಬೈಲ್ ಕ್ಷೇತ್ರವನ್ನು ಪ್ರಗತಿಯತ್ತ ಕೊಂಡೊಯ್ಯಲು ಪ್ರೇರಣೆ ನೀಡುವುದು. ಹೀಗಾಗಿ ವಾಹನಗಳು ಫಿಟ್ ನೆಸ್ ಪ್ರಮಾಣಪತ್ರ ಪಡೆದು ಸಂಚರಿಸಬೇಕು, ಇಲ್ಲವೇ ಗುಜರಿಗೆ ಹಾಕಿ ಹೊಸ ವಾಹನ ಖರೀದಿಸಬೇಕು ಎನ್ನುವ ವಾತಾವರಣ ನಿರ್ಮಾಣವಾಗಲಿದೆ.

ನಿತಿನ್ ಗಡ್ಕರಿ ಹೇಳಿರುವ ಮಾತಿದು
ಭಾರತದಲ್ಲಿ ಜಾರಿಗೆ ತರುತ್ತಿರುವ ನೂತನ ಗುಜರಿ ನೀತಿಯಿಂದಾಗಿ ಸಾರ್ವಜನಿಕರಿಗೆ ಅನೇಕ ಲಾಭವಾಗಲಿದೆ ಎಂದು ಕೇಂದ್ರ ಸಾರಿಗೆ ಮಂತ್ರಿ ನಿತಿನ್ ಘಟ್ಕರಿ ಹೇಳಿದ್ದಾರೆ. ಅದರ ಪ್ರಕಾರ ವಾಹನದ ಎಕ್ಸ್ ಶೋರೂಂ ಬೆಲೆಯ ಶೇ. 4 ರಿಂದ 6 ರಷ್ಟು ಹಣವನ್ನು ಗುಜರಿ ವಾಹನದ ಮಾಲೀಕರಿಗೆ ನೀಡಲಾಗುತ್ತದೆ. ರಸ್ತೆ ತೆರಿಗೆಯಲ್ಲಿ ಶೇ. 25 ರಷ್ಟು ವಿನಾಯಿತಿ ಸಿಗಲಿದೆ. ಗುಜರಿಗೆ ಹಾಕಿದ ವಾಹನದ ಸರ್ಟಿಫಿಕೇಟ್ ಸಮೇತ ಹೊಸ ವಾಹನ ಖರೀದಿ ಮಾಡಿದರೆ ಅದರ ಮೇಲೆ ಶೇ. 5 ರಷ್ಟು ಡಿಸ್ಕೌಂಟ್ ಸಿಗಲಿದೆ. ಹೊಸ ವಾಹನಗಳು ಆರ್‌ಟಿಓ ನೋಂದಣಿ ಶುಲ್ಕ ಪಾವತಿಸುವಂತಿಲ್ಲ.

ಫಿಟ್ನೆಸ್ ಟೆಸ್ಟ್ ಅಂದ್ರೆ ಏನು?
ಒಂದು ವಾಹನ ಪರಿಸರದ ಮೇಲೆ ಹಾನಿ ಮಾಡುತ್ತಿಲ್ಲ ಎಂಬುದನ್ನು ನಿರ್ಣಯಿಸಲು ಸಾರಿಗೆ ಅಧಿಕಾರಿಗಳು ನಡೆಸುವ ಪರೀಕ್ಷೆ. ಬ್ರೇಕ್, ಇಂಜಿನ್ ಕಾರ್ಯ ಕ್ಷಮತೆ, ವಾಹನದ ಗುಣಮಟ್ಟ ಎಲ್ಲವನ್ನೂ ತಪಾಸಣೆ ನಡೆಸುವುದೇ ಫಿಟ್ನೆಸ್ ಪರೀಕ್ಷೆ. ಇದನ್ನು ಸ್ವಯಂ ಚಾಲಿತ ಫಿಟ್ನೆಸ್ ಸೆಂಟರ್‌ಗಳಲ್ಲಿ ತಪಾಸಣೆ ನಡೆಸಲಾಗುತ್ತದೆ. ಈ ಕೇಂದ್ರಗಳನ್ನು ಪ್ರತಿ ಆರ್‌ಟಿಒ ಕೇಂದ್ರದಿಂದ 200 ಕಿ.ಮೀ. ವ್ಯಾಪ್ತಿಯಲ್ಲಿ ತೆರೆಯಲಾಗುತ್ತದೆ. ವಾಣಿಜ್ಯ ವಾಹನಗಳು ಎಂಟು ವರ್ಷದ ಬಳಿಕ ಶೇ. 10 ರಿಂದ 15 ರಷ್ಟು ಗ್ರೀನ್ ಸೆಸ್ ಪಾವತಿಸಬೇಕು. ವಾಹನ ಮರು ನೋಂದಣಿಯಾಗಲು ಗ್ರೀನ್ ಸೆಸ್ ಕಡ್ಡಾಯವಾಗಿ ವಾಹನ ಮಾಲೀಕರು ಪಾವತಿ ಮಾಡಿರಲೇಬೇಕು. ಈ ಫಿಟ್ನೆಸ್ ಪರೀಕ್ಷೆಯಲ್ಲಿ ವಾಹನ ಪಾಸ್ ಆಗದಿದ್ದರೆ ಆ ವಾಹನ ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆ ಪ್ರಕಾರ ಅಪರಾಧ. ಅಂತಹ ವಾಹನ ಮಾಲೀಕರ ಮತ್ತು ಚಾಲಕರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುತ್ತದೆ.

ಗುಜರಿ ನೀತಿ ಬಂದರೆ ಏನಾಗಲಿದೆ?
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ನೂತನ ಗುಜರಿ ನೀತಿಗೆ ಶುಕ್ರವಾರ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಇನ್ನು ಫಿಟ್ನೆಸ್ ಸೆಂಟರ್ ಆರಂಭ ಸೇರಿದಂತೆ ಈ ಯೋಜನೆ ತಳಮಟ್ಟದಿಂದ ಜಾರಿಗೆ ಬರಲು ಕನಿಷ್ಠ ಇನ್ನೂ ಇರಡು ವರ್ಷ ಬೇಕು. 2023 ರಿಂದ ಈ ಗುಜರಿ ನೀತಿ ಜಾರಿಗೆ ಬರಲಿದೆ. ಮೊದಲ ಹಂತದಲ್ಲಿ ವಾಣಿಜ್ಯ ವಾಹನಗಳಿಗೆ ಅನ್ವಯವಾಗಲಿದೆ. 2024 ರಿಂದ ಸ್ವಂತ ಬಳಕೆಯ ಬಿಳಿ ಬೋರ್ಡ್ ನ ವಾಹನಗಳಿಗೆ ಗುಜರಿ ನೀತಿ ಜಾರಿಗೆ ಬರಲಿದೆ ಎಂದೇ ಹೇಳಲಾಗುತ್ತಿದೆ. ಈ ಗುಜರಿ ನೀತಿಯಿಂದ ಸಾರಿಗೆ ಕ್ಷೇತ್ರದಲ್ಲಿ ಭ್ರಷ್ಟಾಚಾರಕ್ಕೆ ನಾಂದಿಯಾಡುವ ಜತೆಗೆ ವಾಹನ ಉತ್ಪಾದಕ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಿದಂತಾಗಿದೆ.

ಗುಜರಿಯಿಂದ ಕೋಟಿ ಕೋಟಿ ಸಂಪತ್ತು ಸೃಷ್ಟಿ
ಸದ್ಯದ ಗುಜರಿ ನೀತಿಯಿಂದ ದೇಶದ ಸಂಪತ್ತು ಎಂದು ಪರಿಗಣಿಸುವ ಹಳೇ ವಾಹನಗಳನ್ನ ಗುಜರಿಗೆ ಹಾಕಬೇಕು. ವಾಹನ ಖರೀದಿಸಿದ ಎಂಟು ವರ್ಷದ ನಂತರ ಹಸಿರು ತೆರಿಗೆ ಪಾವತಿಸಬೇಕು. ಇರುವ ಭಾರ ತಡೆಯಲಾಗದೇ ಹೊಸ ಭಾರ ಹೊರಲಾರದೇ ಟ್ರಾನ್ಸ್ ಪೋರ್ಟ್ ವ್ಯವಸ್ಥೆ ಸ್ಥಗಿತಗೊಳ್ಳಲಿದೆ ಎಂಬ ಮಾತುಗಳು ಟ್ರಾನ್ಸ್ ಪೋರ್ಟ್ ಉದ್ಯಮದಿಂದ ಕೇಳಿ ಬಂದಿರುವ ಮಾತುಗಳು. ಗುಜರಿ ನೀತಿ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಹಳೇ ವಾಹನಗಳಿಗೆ ಸರ್ಕಾರ ಪರಿಹಾರ ನೀಡುವ ಗುಜರಿ ನೀತಿ ಜಾರಿಗೆ ತರಬೇಕು. ಹಳೇ ವಾಹನ ಗುಜರಿಗೆ ಹಾಕುವ ಮಾಲೀಕರಿಗೆ ಜಿಎಸ್‌ಟಿ ತೆರಿಗೆ ವಿನಾಯಿತಿ ಕೊಡಬೇಕು. ಹೊಸ ವಾಹನಕ್ಕೆ ವಾಹನ ಬೆಲೆ ಆಧಾರಿಸಿ ಡಿಸ್ಕೌಂಟ್ ಕೊಡಬೇಕು. ಪ್ರತಿ ಕೆ.ಜಿ. ಗೆ ಕನಿಷ್ಠ 35 ರೂಪಾಯಿ ಮೇಲೆ ನಿಗದಿ ಮಾಡಬೇಕು. ಒಂದು ವೇಳೆ ಗುಜರಿ ನೀತಿ ಕೂಡ ಮಾರಕವಾದಲ್ಲಿ ಎಲ್ಲಾ ವ್ಯಹವಾರ ಸ್ಥಗಿತಗೊಳಿಸಿ ಟ್ರಾನ್ಸ್ ಪೋರ್ಟ್ ಉದ್ಯಮಿಗಳು ಆತ್ಮಹತ್ಯೆಯ ಹಾದಿ ನೋಡಬೇಕಾಗುತ್ತದೆ ಎಂದು ಕರ್ನಾಟಕ ಲಾರಿ ಮಾಲೀಕರ ಫೆಡರೇಷನ್ ಅಧ್ಯಕ್ಷ ಷಣ್ಮುಗಪ್ಪ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ವಾಹನಗಳ ಬೆಲೆ ಗಗನಕ್ಕೆ
ವಾಹನಗಳ ಬೆಲೆ ಗಗನಕ್ಕೇರುತ್ತಿದೆ. ಇವತ್ತಿನ ಬೆಲೆಯಲ್ಲಿ ವಾಹನ ಖರೀದಿ ಮಾಡಿ ವಹಿವಾಟು ನಡೆಸುವುದೇ ದುಬಾರಿಯಾಗಿದೆ. ಸದ್ಯ ದೇಶದಲ್ಲಿರುವ ವಾಹನಗಳು ಕೂಡ ದೇಶದ ಸಂಪತ್ತು. ಹಳೇ ವಾಹನಗಳಿಂದ ಪರಿಸರಕ್ಕೆ ಹಾನಿಯಾಗುವುದಿದ್ದರೆ ಇಂಜಿನ್‌ಗಳನ್ನು ಬದಲಿಸುವ ಕಾರ್ಯ ನೀತಿ ಜಾರಿಗೆ ತರಲಿ. ಇದನ್ನು ಹೊರತು ಪಡಿಸಿ ಹಣ್ಣಿನ ಒಂದು ಭಾಗಕ್ಕೆ ಗಾಯ ಆಗಿದೆ ಎಂದು ಇಡೀ ಹಣ್ಣನ್ನೇ ಬಿಸಾಡುವುದಲ್ಲಿ ಅರ್ಥವಿಲ್ಲ. ಸರ್ಕಾರ ಗುಜರಿ ನೀತಿಯನ್ನು ವೈಜ್ಞಾನಿಕವಾಗಿ ರೂಪಿಸಬೇಕು. ವಾಹನ ಉದ್ಯಮಕ್ಕೆ ಧಕ್ಕೆಯಾಗಬಾರದು. ದೇಶದ ಸಾರಿಗೆ ವ್ಯವಸ್ಥೆ ಕುಸಿದು ಬಿದ್ದರೆ ಇಡೀ ಅರ್ಥ ವ್ಯವಸ್ಥೆಗೆ ನಕಾರಾತ್ಮಕ ಪೆಟ್ಟು ಬೀಳಲಿದೆ. ಮೊದಲು ದೇಶದ ಸಾರಿಗೆ ವ್ಯವಸ್ಥೆಯನ್ನು ಜನರಿಗೆ ಅನುಕೂಲವಾಗುವಂತಾಗಬೇಕು. ದೇಶ ಪ್ರಗತಿಯತ್ತ ಸಾಗುತ್ತಿರುವಾಗ ಸಾರಿಗೆ ಬಳಕೆಯ ವೆಚ್ಚ ಕಡಿಮೆಯಾಗುತ್ತಾ ಹೋಗಬೇಕು. ಆದರೆ ದೇಶದ ಸಾರಿಗೆ ನೀತಿಗಳಿಗೂ ಆರ್ಥಿಕ ಪ್ರಗತಿ ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ಇದರ ಪರಿಣಾಮ ಜನ ಸಾಮಾನ್ಯನಿಗೆ ಹೊರೆಯಾಗುತ್ತದೆ ಎಂದು ಟ್ರಾನ್ಸ್ ಪೋರ್ಟ್ ಉದ್ಯಮಿ ರಾಜೇಶ್ ತನ್ನ ವೈಯಕ್ತಿಕ ಅಭಿಪ್ರಾಯ ವಿವರಿಸಿದರು.












Click it and Unblock the Notifications