• search
  • Live TV
keyboard_backspace

ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆಯಾಗಿ ನಾಲ್ಕು ವರ್ಷದಲ್ಲಿ ಮಾಡಿದ್ದೇನು ?

ಬೆಂಗಳೂರು, ಜನವರಿ 05: ರಾಜಕಾರಣಿಗಳಿಗೆ ಕಂಟಕ ಪ್ರಾಯವಾದ ಹಿನ್ನೆಲೆಯಲ್ಲಿ ಲೋಕಾಯುಕ್ತರ ಅಧೀನದಲ್ಲಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು ಪ್ರತ್ಯೇಕಮಾಡಿ ರಾಜ್ಯದಲ್ಲಿ ನಾಲ್ಕು ವರ್ಷ ಮುಗಿದಿದೆ. ಸರ್ಕಾರದ ಅಧೀನದಲ್ಲಿ ಬರುವ ಭ್ರಷ್ಟಾಚಾರ ನಿಗ್ರಹ ದಳ ಕಳೆದ ನಾಲ್ಕು ವರ್ಷದಲ್ಲಿ ಒಟ್ಟು 1495 ಪ್ರಕರಣಗಳನ್ನು ದಾಖಲಿಸಿದೆ.

ಎಸಿಬಿ ಪ್ರಾರಂಭವಾಗಿ ನಾಲ್ಕು ವರ್ಷ ಕಳೆದಿದೆ. 2016 ಮಾರ್ಚ್ ನಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತರ ಅಧೀನದಲ್ಲಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು ಲೋಕಾಯುಕ್ತ ಸಂಸ್ಥೆಯಿಂದ ಬೇರ್ಪಡಿಸಿ ಪ್ರತ್ಯೇಕ ಎಸಿಬಿ ರಚನೆಗೆ ಆದೇಶಿಸಿತ್ತು. ಜನ ಪ್ರತಿನಿಧಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ ಸಂಸ್ಥೆಯಲ್ಲಿಯೇ ಬೆಳಕಿಗೆ ಬಂದ ಹಗರಣ ಮುಂದಿಟ್ಟುಕೊಂಡು ಸರ್ಕಾರದ ಅಧೀನಕ್ಕೆ ಒಳಪಡುವ ಭ್ರಷ್ಟಾಚಾರ ನಿಗ್ರಹ ದಳವನ್ನು ರಚಿಸಲಾಗಿತ್ತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧೀನಕ್ಕೆ ಒಳಪಡುವ ಎಸಿಬಿ ಸದ್ಯ ಸರ್ಕಾರದ ಅಧೀನದಲ್ಲಿದೆ. ಈ ಮೊದಲು ಭ್ರಷ್ಟಾಚಾರ ನಿಗ್ರಹ ದಳ ಲೋಕಾಯುಕ್ತ ಸಂಸ್ಥೆಯ ಒಂದು ಪ್ರಮುಖ ಭಾಗವಾಗಿತ್ತು. ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದ ಲೋಕಾಯುಕ್ತರ ತೀರ್ಮಾನಗಳಿಗೆ ಈ ದಳ ಒಳಪಡುತ್ತಿತ್ತು.

ಹೊಸ ವರ್ಷದ ಹೊಸ್ತಿಲಿನಲ್ಲಿ ಮರೆಯಲಾರದ ಬೆಂಗಳೂರಿನ ಅಪರಾಧ ಲೋಕದ ಹೆಜ್ಜೆಗಳು !

ನ್ಯಾ. ವೆಂಕಟಾಚಲ ಆಸ್ಪತ್ರೆ, ಸರ್ಕಾರಿ ಕಚೇರಿಗಳಿಗೆ ಏಕಾ ಏಕಿ ದಾಳಿ ಮಾಡಿ ಲೋಕಾಯುಕ್ತ ಸಂಸ್ಥೆಯ ಆಸ್ತಿತ್ವ ತೋರಿಸಿಕೊಟ್ಟಿದ್ದರು. ಆನಂತರ ಲೋಕಾಯುಕ್ತರಾಗಿ ಬಂದ ನ್ಯಾ. ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತ ಸಂಸ್ಥೆಯ ನಿಜವಾದ ಪವರ್ ದೇಶಕ್ಕೆ ತೋರಿಸಿದ್ದರು. ರಾಜ್ಯವನ್ನಾಳಿದ ಮುಖ್ಯಮಂತ್ರಿಗಳನ್ನೇ ಲೋಕಾಯುಕ್ತ ಸಂಸ್ಥೆ ಜೈಲಿಗೆ ಕಳುಹಿಸಿತ್ತು. ಗಣಿ ದೊರೆಗಳ ಅಟ್ಟಹಾಸ ಮುರಿದಿತ್ತು. ಲಂಚ ಬಾಕ, ಅಧಿಕಾರ ದಾಹಿ ಜನ ಪ್ರತಿನಿಧಿಗಳ ವಿರುದ್ಧ ಸರಣಿ ಕೇಸು ದಾಖಲಿಸಿತ್ತು. ವಿಪರ್ಯಾಸವೆಂದರೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಎನ್‌.ಕೆ ಸುಧೀಂದ್ರ ರಾವ್ ಅವರು ಕಾರ್ಯ ನಿರ್ವಹಿಸಿದ ಅವಧಿಯಲ್ಲಿ ರಾಜ್ಯದ ರಾಜಕಾರಣಿಗಳು ನೆಮ್ಮದಿ ನಿದ್ದೆ ಮಾಡುತ್ತಿರಲಿಲ್ಲ. ರಾಜಕಾರಣಿಗಳ ಕನಸಿನಲ್ಲಿಯೂ ಲೋಕಾಯುಕ್ತ ಕಾಣುವಂತಾಗಿತ್ತು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಹಾಲಿ ಸಚಿವ ವಿ. ಸೋಮಣ್ಣ, ಎಸ್.ಆರ್. ವಿಶ್ವನಾಥ್‌, ಡಿ.ಕೆ. ಶಿವಕುಮಾರ್, ಕೆ.ಎಸ್‌. ಈಶ್ವರಪ್ಪ ಬಿ.ಎಸ್. ಯಡಿಯೂರಪ್ಪ, ಬಾಬುರಾವ್ ಚುಂಚನಸೂರ್, ಆರ್. ಅಶೋಕ್, ಲೇಔಟ್‌ ಕೃಷ್ಣಪ್ಪ, ಬಿ. ಜನಾರ್ಧನರೆಡ್ಡಿ, ಕಟ್ಟಾ ಸುಬ್ರಮಣ್ಯ ನಾಯ್ಡು ಹೀಗೆ ಸಾಲು ಸಾಲು ರಾಜಕಾರಣಿಗಳು ಲೋಕಾಯುಕ್ತ ತನಿಖೆ ಎದುರಿಸಬೇಕಾಯಿತು. ರಾಜಕಾರಣ ಮಾಡುವುದಕ್ಕಿಂತಲೂ ಇವರಿಗೆ ಲೋಕಾ ಸಂಕಷ್ಟದಲ್ಲಿ ಪಾರಾಗಲು ಚಿಂತನೆ ನಡೆಸಲು ಸಮಯ ಇಲ್ಲವಾಗಿತ್ತು. ಆದರೆ, ನ್ಯಾ. ಭಾಸ್ಕರರಾವ್ ಅವರ ಪುತ್ರ ಅಶ್ವಿನ್ ತಂಡ ಕಟ್ಟಿಕೊಂಡು ಲೋಕಾಯುಕ್ತ ಸಂಸ್ಥೆ ಹೆಸರಿನಲ್ಲಿ ಅಧಿಕಾರಿಗಳಿಗೆ ಹೆದರಿಸಿ ಹಣ ವಸೂಲಿ ಮಾಡಿದ್ದ. ಇಂಜಿನಿಯರ್ ಬಳಿ ಹಣ ಕೇಳಿದ ಪ್ರಕರಣ ಹೊರ ಬಂತು. ವಿಪರ್ಯಾಸವೆಂದರೆ ಲೋಕಾಯುಕ್ತ ಸಂಸ್ಥೆಯೇ ಇದರ ತನಿಖೆ ಆರಂಭಿಸಿ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸುವ ಬೆಳವಣಿಗೆ ನಡೆಯಿತು. ಇದೇ ಅವಕಾಶಕ್ಕೆ ಕಾಯುತ್ತಿದ್ದ ಸರ್ವ ಪಕ್ಷ ನಾಯಕರು

ಬದುಕಿ ಸತ್ತಂತೆ ಇರುವ ವ್ಯಕ್ತಿಯ ಸ್ಥಿತಿಯನ್ನು ಲೋಕಾಯುಕ್ತ ಸಂಸ್ಥೆಗೆ ತಂದು ಕೊಟ್ಟರು. ಲೋಕಾಯುಕ್ತ ಸಂಸ್ಥೆಯ ಹೃದಯದಂತಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು ಪ್ರತ್ಯೇಕಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅದೇಶಿಸಿದರು. ಇದರ ಭಾಗವಾಗಿಯೇ 2016 ರಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಅಸ್ತಿತ್ವಕ್ಕೆ ಬಂತು.

ಇನ್ನು ಎಸಿಬಿಯ ನಾಲ್ಕು ವರ್ಷದ ಕಾರ್ಯ ವೈಖರಿ ನೋಡುವುದಾದರೆ ವಾರ್ಷಿಕ ಸರಾಸರಿ 350 ಭ್ರಷ್ಟ್ರ ಪ್ರಕರಣಗಳನ್ನು ದಾಖಲಿಸಿದೆ. 2020 ನೇ ಸಾಲಿನಲ್ಲಿ ರಾಜ್ಯದೆಲ್ಲೆಡೆ 186 ಭ್ರಷ್ಟರು ಲಂಚ ಸ್ವೀಕರಿಸಿ ಬಲೆಗೆ ಬಿದ್ದ ಪ್ರಕರಣ ದಾಖಲಾಗಿದ್ದು, ಕೇವಲ 20 ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಾಗಿವೆ. ಉಳಿದಂತೆ, ಐದು ಖಾಸಗಿ ದೂರು, 25 ದಿಢೀರ್ ದಾಳಿ ನಡೆಸಿ ಶೋಧ ನಡೆಸಿದ ಪ್ರಕರಣ, ಸರ್ಕಾರ ಆದೇಶಿಸಿದ 4 ಪ್ರಕರಣ, ಇತರೆ 56 ಪ್ರಕರಣ ದಾಖಲಾಗಿವೆ. ಬಿಡಿಎ ಅಧಿಕಾರಿ ಸುಧಾ ಅವರ ಅಕ್ರಮ ಆಸ್ತಿ ಪ್ರಕರಣ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮ್ಯಾನೇಜರ್ ಲಂಚ ಸ್ವೀಕಾರ ವೇಳೆ 80 ಲಕ್ಷ ರೂ. ನಗದು ಪತ್ತೆ ಪ್ರಕರಣ, ಮಂಡೂರು ಕಸ ವಿಲೇವಾರಿ ಈ ವರ್ಷದಲ್ಲಿ ಸದ್ದು ಮಾಡಿದ ಭ್ರಷ್ಟಾಚಾರ ಪ್ರಕರಣ. ಕರೋನಾ ಬಿಸಿ ಎಸಿಬಿಗೂ ತಟ್ಟಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ 2020 ನೇ ಸಾಲಿನಲ್ಲಿ ಎಸಿಬಿ ಅಧಿಕಾರಿಗಳು ದಾಖಲಿಸಿರುವ ಪ್ರಕರಣಗಳು ತೀರಾ ಕಡಿಮೆ. 2019 ನೇ ಸಾಲಿನಲ್ಲಿ ಒಟ್ಟು 379 ಪ್ರಕರಣ ದಾಖಲಿಸಿದ್ದು, ಅದರಲ್ಲಿ 252 ಲಂಚ ಸ್ವೀಕಾರ ಪ್ರಕರಣ, 15 ಅಕ್ರಮ ಆಸ್ತಿ ಗಳಿಕೆ ಪ್ರಕರಣ, 17 ಖಾಸಗಿ ದೂರು, 46 ಶೋಧ ಪ್ರಕರಣಗಳು ದಾಖಲಾಗಿವೆ. ಇನ್ನು 2018 ರಲ್ಲಿ ಒಟ್ಟು 378 ಪ್ರಕರಣ, 2017 ರಲ್ಲಿ 289 ಪ್ರಕರಣ, 2016 ರಲ್ಲಿ ಒಟ್ಟು 153 ಪ್ರಕರಣಗಳನ್ನು ಎಸಿಬಿ ದಾಖಲಿಸಿ ತನಿಖೆ ನಡೆಸುತ್ತಿದೆ. ಸೀಮಂತ್ ಕುಮಾರ್ ಸಿಂಗ್ ನೂತನ ಎಡಿಜಿಪಿಯಾಗಿ ಇತ್ತೀಚೆಗೆ ವರ್ಗಾವಣೆಯಾಗಿದ್ದಾರೆ. ಈ ಮೊದಲು ಎಡಿಜಿಪಿಯಾಗಿದ್ದ ಟಿ. ಸುನೀಲ್ ಕುಮಾರ್ ನಿವೃತ್ತಿಯಾಗಿ ಆ ಹುದ್ದೆ ತೆರವಾಗಿತ್ತು. ಡಿಜಿಪಿಯಾಗಿದ್ದ ಚಂದ್ರಶೇಖರ್ ಆರ್. ಕೇಂದ್ರ ವಲಯಕ್ಕೆ ವರ್ಗಾವಣೆಯಾಗಿದ್ದರು.

English summary
Anti corruption bureau complete 4 years. What they did in last 4 years. Know more:
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X