ಇದು ಬೆಂಗಳೂರು ಸಿಟಿಯಲ್ಲ, ಬೊಮ್ಮಾಯಿ ಬ್ಯಾನರ್ ಸಿಟಿ: ಹೈಕೋರ್ಟ್ ಆದೇಶಕ್ಕೆ ಕಿಮ್ಮತ್ತು ಇಲ್ಲ
ಬೆಂಗಳೂರು, ಸೆ. 04: ''ನನಗೆ ಝೀರೋ ಟ್ರಾಫಿಕ್ ಬೇಡ, ನನಗೆ ಯಾವ ಪೊಲೀಸ್ ಎಸ್ಕಾರ್ಟ್ ಬೇಡ'' ಎಂದು ತಿರಸ್ಕರಿಸುವ ಮೂಲಕ ಸುದ್ದಿಯಾಗಿದ್ದ ಸಿಎಂ ( ಕಾಮನ್ ಮ್ಯಾನ್) ಬಸವರಾಜ ಬೊಮ್ಮಾಯಿ ಅವರ ಪ್ರಚಾರದ ಗೀಳಿಗೆ ಬೆಂಗಳೂರು ನಗರ ಬೊಮ್ಮಾಯಿ ಬ್ಯಾನರ್ ಸಿಟಿಯಾಗಿ ರೂಪಾಂತರಗೊಳ್ಳುತ್ತಿದೆ. ಸಾರ್ವಜನಿಕ ಪ್ರದೇಶದಲ್ಲಿ ಸಂಚಾರಕ್ಕೆ ಅಡ್ಡಿ ಪಡಿಸುವ ರೀತಿಯಲ್ಲಿ ಬ್ಯಾನರ್ ಹಾಕುವುದು ಹೈಕೋರ್ಟ್ ಆದೇಶದ ಉಲ್ಲಂಘನೆ ಎಂಬುದನ್ನು ಕಾಮನ್ ಮ್ಯಾನ್ ಮರೆತೇ ಬಿಟ್ಟಿದ್ದಾರೆ.
ಒಮ್ಮೆ ಬೆಂಗಳೂರಿನ ಬಸ್ ನಿಲ್ದಾಣ, ಬಸ್ ಹಿಂಭಾಗ, ಮೆಟ್ರೋ ಪಿಲ್ಲರ್‌ನತ್ತ ಕಣ್ಣು ಆಯಿಸಿ ನೋಡಿ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದು ಎರಡು ತಿಂಗಳು ಕಳೆದಿವೆ ಅಷ್ಟೇ. ಒಂದೇ ಒಂದು ಕಡೆ ಯಡಿಯೂರಪ್ಪ ಅವರ ಚಿತ್ರವಿಲ್ಲ! ಎಲ್ಲೆಲ್ಲೂ ಬಸವರಾಜ ಬೊಮ್ಮಾಯಿ ಅವರ ಜಾಹೀರಾತು ಫಲಕಗಳು ರಾರಾಜಿಸುತ್ತಿವೆ.
ರಾಜಧಾನಿಯ ಬಸ್‌ಗಳ ಮೇಲೆ ಬಸವರಾಜ ಬೊಮ್ಮಾಯಿ ಜಾಹೀರಾತುಗಳು. ಬಸ್ ನಿಲ್ದಾಣಗಳಲ್ಲಿ ಕಾಮನ್ ಮ್ಯಾನ್ ಚಿತ್ರಗಳು. ಸರ್ಕಾರದ ಕಾರ್ಯಕ್ರಮಗಳಲ್ಲಿ ಬ್ಯಾನರ್ ಗಳು. ಮೈಸೂರು ದಸರಾ ಹಬ್ಬಕ್ಕೆ ಸಂಬಂಧಿಸಿದ ಬ್ಯಾನರ್ - ಬಂಟಿಂಗ್‌ಗಳು. ಇದರ ಜತೆಗೆ ರಾಜರಾಜೇಶ್ವರಿ ನಗರ ವ್ಯಾಪ್ತಿಗೆ ಒಳಪಟ್ಟಿರುವ ಮಲ್ಲತಹಳ್ಳಿ, ಬೆಂಗಳೂರು ವಿಶ್ವ ವಿದ್ಯಾಲಯ, ನಾಗರಭಾವಿ ದೀಪಾ ಕಾಂಪ್ಲೆಸ್, ಕೊಟ್ಟಿಗೆಪಾಳ್ಯದಲ್ಲಿ ಕಾಮನ್ ಮ್ಯಾನ್ ಬ್ಯಾನರ್‌ಗಳು ಮಿಂಚುತ್ತಿವೆ. ರಸ್ತೆ ವಿಭಜಕಗಳಲ್ಲಿ ಸಂಚಾರಕ್ಕೂ ಅಡ್ಡಿಯಾಗುವ ನೂರಾರು ಜಾಹೀರಾತು ಫಲಕಗಳನ್ನು ಹಾಕಲಾಗಿದೆ. ಫುಟ್ ಪಾತ್‌ನಲ್ಲಿ ಜನ ಸಾಮಾನ್ಯರು ಓಡಾಡದ ರೀತಿಯಲ್ಲಿ ಕಾಮನ್ ಮ್ಯಾನ್ ಪೋಟೋಗಳನ್ನು ಹಾಕಿ ಮೆರೆಸಲಾಗುತ್ತಿದೆ. ಇದು ಹೈಕೋರ್ಟ್ ತೀರ್ಪಿನ ಉಲ್ಲಂಘನೆ ಎಂಬುದನ್ನೇ ಕಾಮನ್ ಮ್ಯಾನ್ ಮರೆತಂತಿದೆ.

ನಾಗರಭಾವಿಯಲ್ಲಿ ಬೊಮ್ಮಾಯಿ ಜಾಹೀರಾತೋತ್ಸವ
ರಾಜರಾಜೇಶ್ವರಿಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿ ಮತ್ತು ಮಲ್ಲತ್ತಹಳ್ಳಿ ಕೆರೆಯ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಚಿವ ಮುನಿರತ್ನ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಭಾನುವಾರ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅತಿಥ್ಯವಿತ್ತು. ಕಾರ್ಯಕ್ರಮಕ್ಕೂ ಮೂರು ದಿನ ಮೊದಲೇ ನಾಗರಭಾವಿ ರಸ್ತೆಯಲ್ಲಿ ಬ್ಯಾನರ್ - ಬಂಟಿಂಗ್ ಬಿಜೆಪಿ ಕೋಲು ಭಾವುಗಳು ತಾಂಡವಾಡಿದವು. ಇದೀಗ ಕಾರ್ಯಕ್ರಮ ಮುಗಿದರೂ ಸಹ ಜಾತ್ರಾ ಮಹೋತ್ಸವವನ್ನೇ ಮೀರಿಸುವ ಜಾಹೀರಾತು ಫಲಕಗಳ ರಸ್ತೆಯ ಮಧ್ಯದಲ್ಲಿಯೇ ರಾರಾಜಿಸುತ್ತಿವೆ. ಸಿಎಂ ಮೇಲಿನ ಅಭಿಮಾನಕ್ಕೆ ಸಚಿವ ಮುನಿರತ್ನ ಬ್ಯಾನರ್, ಬಂಟಿಂಗ್, ಕಟೌಟ್ ರಸ್ತೆಯ ಗಲ್ಲಿ ಗಲ್ಲಿಯಲ್ಲೂ ತುಂಬಿಸಿದ್ದಾರೆ. ಬಹುಶಃ ಇದನ್ನು ನೋಡಿ ಕಾಮನ್ ಮ್ಯಾನ್‌ಗೂ ಖುಷಿಯಾಗಿರಬೇಕು. ನನ್ನ ಮೇಲೆ ಎಷ್ಟು ಅಭಿಮಾನವಿದೆ. ನನ್ನ ಈ ಬ್ಯಾನರ್‌ಗಳನ್ನು ಅದೆಷ್ಟು ಮಂದಿ ಕಣ್ಣು ತುಂಬಿಕೊಳ್ಳಲಿದ್ದಾರೋ ಎಂಬ ಸಂತಸದಲ್ಲಿ ತೇಲಾಡಿರಬೇಕು. ವಾಸ್ತವದಲ್ಲಿ ಇದು ನಿಯಮ ಬಾಹಿರ. ನ್ಯಾಯಾಲಯದ ಆದೇಶ ಸ್ಪಷ್ಟ ಉಲ್ಲಂಘನೆ.

ಜಾಹೀರಾತು ಮಾಫಿಯಾ ವಿರುದ್ಧ ಲೋಕದಲ್ಲಿ ಕೇಸು
ರಾಜಧಾನಿಯಲ್ಲಿ ಕಟೌಟ್, ಬ್ಯಾನರ್, ಬಂಟಿಂಗ್ ಕಟ್ಟುವುದು ಬಹುದೊಡ್ಡ ಮಾಫಿಯಾ ಸ್ವರೂಪ ಪಡೆದುಕೊಂಡಿತು. ಬಿಬಿಎಂಪಿ ಅಧಿಕಾರಿಗಳ ಕೃಪಾ ಪೋಷಿತ ಈ ಜಾಹೀರಾತು ಮಾಫಿಯಾದಿಂದ ವರ್ಷಕ್ಕೆ ಸಾವಿರಾರು ಕೋಟಿ ರೂ. ವಹಿವಾಟು ನಡೆಯುತ್ತಿತ್ತು. ಅಕ್ರಮವಾಗಿ ಸಿಕ್ಕ ಸಿಕ್ಕ ಜಾಗದಲ್ಲಿ ಜಾಹೀರಾತು ಫಲಕ ಹಾಕುವುದು. ಈ ಮೂಲಕ ದುಡ್ಡು ಮಾಡುವುದು. ಬಿಬಿಎಂಪಿ ಅಧಿಕಾರಿಗಳ ಮೂಗಿನ ನೇರಕ್ಕೆ ನಡೆಯುತ್ತಿದ್ದ ದಂಧೆಯಿಂದ ವರ್ಷಕ್ಕೆ ಸಾವಿರಾರು ಕೋಟಿ ವಹಿವಾಟು ನಡೆಯುವುದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ 2015 ರಲ್ಲಿ ದೂರು ದಾಖಲಾಗಿತ್ತು. ಅಂದಿನ ಉಪ ಲೋಕಾಯುಕ್ತರಾಗಿದ್ದ ನ್ಯಾ. ಸುಭಾಷ್ ಬಿ. ಅಡಿ ಅವರು ಪ್ರಕರಣವನ್ನು ಪೊಲೀಸ್ ತನಿಖೆಗೆ ವಹಿಸಿದ್ದರು. ಅಂತಿಮವಾಗಿ ಅಕ್ರಮ ಜಾಹೀರಾತುಗಳನ್ನು ತೆರವುಗೊಳಿಸುವಂತೆ ಬಿಬಿಎಂಪಿಗೆ ಗಡುವು ನೀಡಿದರು.

ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ
ಇನ್ನು ಜಾಹೀರಾತು ಮಾಫಿಯಾ, ಬಿಬಿಎಂಪಿ ಭ್ರಷ್ಟಾಚಾರ, ಬೆಂಗಳೂರಿನ ಅಂದ ಗೆಡಿಸುತ್ತಿರುವ ಈ ಜಾಹೀರಾತು ಫಲಕದ ಮಾಫಿಯಾ ವಿರುದ್ಧ ಸಾಯಿದತ್ತಾ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಇನ್ನೂ ಪೂರ್ಣ ಪ್ರಮಾಣದಲ್ಲಿ ಅರ್ಜಿಗೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿಲ್ಲ. ಈ ಜಾಹೀರಾತಿಗೆ ಸಂಬಂಧಿಸಿದಂತೆ ನೀಡಿರುವ ಮಧ್ಯಂತರ ತೀರ್ಪಿನಲ್ಲಿ ಬೆಂಗಳೂರಿನ ಅಂದಕ್ಕೆ ತೊಂದರೆ ಉಂಟು ಮಾಡುವ ಯಾವುದೇ ಸಾರ್ವಜನಿಕ ಪ್ರದೇಶದಲ್ಲಿ ಬ್ಯಾನರ್, ಬಂಟಿಂಗ್, ಕಟೌಟ್ ಹಾಕುವಂತಿಲ್ಲ. ಪರಿಸರಕ್ಕೆ ಹಾನಿಯೂ ಮಾಡುವಂತಿಲ್ಲ ಎಂದು ಸ್ಪಷ್ಟ ಆದೇಶ ನೀಡಿದೆ. ಹೈಕೋರ್ಟ್ ಮಧ್ಯಂತರ ಆದೇಶದ ನಡುವೆಯೂ ಬೆಂಗಳೂರು ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡು ಅಕ್ರಮ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆಸಿತು. ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಬ್ಯಾನರ್, ಬಂಟಿಂಗ್ ಸೇರಿದಂತೆ ಜಾಹೀರಾತು ಹಾಕುವುದನ್ನು ನಿಷೇಧ ಮಾಡಿ ಆದೇಶ ಹೊರಡಿಸಿದೆ.

ಜಾಹೀರಾತು ಪ್ರಕಟಕ್ಕೆ ಅನುಮತಿ ಕೊಟ್ಟು ವಾಸು
ಕಾಮನ್ ಮ್ಯಾನ್ ಅವರಿಗೆ ಸಿಎಂ ಖುರ್ಚಿ ಬಿಟ್ಟುಕೊಟ್ಟಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅನುಮತಿ ನೀಡಿ ಆದೇಶ ನೀಡಿದ್ದರು. ಯಾವಾಗ ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗಲೇ ಈ ಆದೇಶ ಮಾಡಿದರೂ, ಈ ಕುರಿತು ದಾಖಲೆಗಳನ್ನು ಸಂಗ್ರಹಿಸಿ ದೂರುದಾರ ಸಾಯಿದತ್ತಾ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದರು. ಇದರಿಂದ ಎಚ್ಚೆತ್ತ ನಗರಾಭಿವೃದ್ದಿ ಇಲಾಖೆ ಆದೇಶವನ್ನು ವಾಪಸು ಪಡೆಯಿತು. ಇದ್ಯಾವುದಕ್ಕೆ ಕ್ಯಾರೇ ಎನ್ನದೆ ಬಸವರಾಜ ಬೊಮ್ಮಾಯಿ ಮಾತ್ರ ಬೆಂಗಳೂರಿನಲ್ಲಿ ತನ್ನ ಜಾಹೀರಾತು ಫಲಕಗಳನ್ನು ಪ್ರದರ್ಶನ ಮಾಡಿ ರಾರಾಜಿಸುತ್ತಿದ್ದಾರೆ. ಬೆಂಗಳೂರು ಸಿಟಿ ಬೊಮ್ಮಾಯಿ ಸಿಟಿಯಾಗಿ ಪರಿವರ್ತನೆಯಾಗುತ್ತಿದೆ. ಇದು ನಿಯಮ ಬಾಹಿರ ಎಂದು ಗೊತ್ತಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕೂತಿದ್ದಾರೆ. ಜಾಹೀರಾತು ಪ್ರದರ್ಶನ ವಿಚಾರದಲ್ಲಿ ಕಾಮನ್ ಮ್ಯಾನ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲು ತಯಾರಿ ನಡೆಸಿದ್ದಾರೆ.

ಬೊಮ್ಮಾಯಿ ವಿರುದ್ಧ ನ್ಯಾಯಾಂಗ ನಿಂದನೆ ದೂರು
ಹೈಕೋರ್ಟ್ ತೀರ್ಪನ್ನು ಉಲ್ಲಂಘನೆ ಮಾಡಿ ಬೆಂಗಳೂರಿನ ಸಾರ್ವಜನಿಕ ಪ್ರದೇಶವಲ್ಲದೇ ರಸ್ತೆಗಳಲ್ಲಿ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜಾಹೀರಾತು ಫಲಕ ಹಾಕಲಾಗಿದೆ. ಇದು ಹೈಕೋರ್ಟ್ ತೀರ್ಪು ಉಲ್ಲಂಘನೆ ಎಂದು ಗೊತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳು ಕೈ ಕಟ್ಟಿ ಕೂತಿದ್ದಾರೆ. ಇದರಲ್ಲಿ ಅಧಿಕಾರಿಗಳ ಪಾತ್ರ ಕೂಡ ಇದೆ. ನ್ಯಾಯಾಲಯದ ಆದೇಶಕ್ಕೆ ಅಗೌರವ ತೋರಿ ಹಾಕಿರುವ ಜಾಹೀರಾತು ವಿವರ ಸಂಗ್ರಹಿಸಿದ್ದು ಈ ಕುರಿತು ಸಂಬಂಧ ಪಟ್ಟ ಇಲಾಖೆಗೆ ದೂರು ನೀಡಿದ್ದೇನೆ. ಬಹುಮುಖ್ಯವಾಗಿ ನ್ಯಾಯಾಲಯಕ್ಕೆ ದೂರು ಸಲ್ಲಿಸುತ್ತೇನೆ ಎಂದು ದೂರುದಾರ ಸಾಯಿದತ್ತಾ ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.












Click it and Unblock the Notifications