'ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ' ಎಂದ ತಾಲಿಬಾನ್
ಕಾಬೂಲ್, ಸೆಪ್ಟೆಂಬರ್ 03: ತಾಲಿಬಾನ್ ಭಾರತದ ವಿರುದ್ದ ದಾಳಿ ನಡೆಸಲು ಉಗ್ರ ಸಂಘಟನೆಗಳಿಗೆ ಸಹಕಾರ ನೀಡುತ್ತಿದೆ ಎಂಬ ವರದಿಗಳ ಬೆನ್ನಲ್ಲೇ, "ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ," ಎಂದು ತಾಲಿಬಾನ್ ಹೇಳಿಕೊಂಡಿದೆ.
"ನಮಗೆ ವಿಶ್ವದ ಯಾವ ದೇಶದ ಮುಸ್ಲಿಮರ ಪರವಾಗಿ ಧ್ವನಿ ಎತ್ತುವ ಹಕ್ಕು ಇದೆ. ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ," ಎಂದು ತಾಲಿಬಾನ್ ಹೇಳಿದೆ. ಆದರೆ ಈ ಸಂದರ್ಭದಲ್ಲೇ "ಯಾವುದೇ ರಾಷ್ಟ್ರದ ವಿರುದ್ದ ಈ ವಿಚಾರದಲ್ಲಿ ಶಸ್ತ್ರ ಪ್ರಯೋಗ ಮಾಡುವ ನೀತಿ ನಮ್ಮಲ್ಲಿ ಇಲ್ಲ," ಎಂದು ಸ್ಫಷ್ಟಣೆ ನೀಡಿದೆ.
ಬಿಬಿಸಿ ಉರ್ದು ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ತಾಲಿಬಾನ್ ವಕ್ತಾರ ಸುಹೈಲ್ ಶಾಹಿನ್, "ನಾನು ಮುಸ್ಲಿಮರಾಗಿರುವ ಕಾರಣ ಕಾಶ್ಮೀರದ, ಭಾರತದ ಹಾಗೂ ವಿಶ್ವದ ಯಾವುದೇ ದೇಶದ ಮುಸ್ಲಿಮರ ಪರವಾಗಿ ಧ್ವನಿ ಎತ್ತುವ ಹಕ್ಕಿದೆ," ಎಂದು ಹೇಳಿದ್ದಾರೆ. "ನಾವು ನಮ್ಮ ಧ್ವನಿಯನ್ನು ಎತ್ತುತ್ತೇವೆ ಹಾಗೂ ಮುಸ್ಲಿಮರು ಎಲ್ಲರೂ ನಿಮ್ಮ ಜನರು ಎಂದು ಹೇಳುತ್ತೇವೆ. ಹಾಗೆಯೇ ಮುಸ್ಲಿಮರು ಕೂಡಾ ನಿಮ್ಮ ನಾಗರಿಕರು ಎಂದು ನಾವು ಹೇಳುತ್ತೇವೆ. ಎಲ್ಲಾ ದೇಶಗಳಲ್ಲಿಯೂ ಮುಸ್ಲಿಮರಿಗೆ ಸಮಾನವಾದ ಹಕ್ಕು ಆ ದೇಶದ ಕಾನೂನಿನ ಅಡಿಯಲ್ಲಿ ಸಿಗಬೇಕು," ಎಂದು ಈ ಸಂದರ್ಭದಲ್ಲೇ ತಾಲಿಬಾನ್ ವಕ್ತಾರ ಸುಹೈಲ್ ಶಾಹಿನ್ ಆಗ್ರಹ ಮಾಡಿದ್ದಾರೆ.

ಈ ಹಿಂದೆ ಕಾಶ್ಮೀರ ಭಾರತದ ಆಂತರಿಕ ವಿಚಾರ ಎಂದಿದ್ದ ತಾಲಿಬಾನ್
ಇನ್ನು ಕಾಶ್ಮೀರದ ವಿಚಾರದಲ್ಲಿ ಈ ಹಿಂದೆ ತಾಲಿಬಾನ್ ವಕ್ತಾರರು ನೀಡಿದ ಹೇಳಿಕೆಗಿಂತ ಭಿನ್ನವಾದ ಹೇಳಿಕೆಯನ್ನು ನೀಡಿದ್ದಾರೆ. ಕಾಬೂಲ್ ಅನ್ನು ತನ್ನ ವಶಕ್ಕೆ ಪಡೆದುಕೊಂಡ ಕೆಲವು ದಿನಗಳ ನಂತರ ತಾಲಿಬಾನ್, "ಕಾಶ್ಮೀರದ ವಿಚಾರದ ಭಾರತಕ್ಕೆ ಸಂಬಂಧಿಸಿದ ಆಂತರಿಕ ವಿಚಾರ," ಎಂದು ಹೇಳಿತ್ತು. "ಕಾಶ್ಮೀರ ವಿಚಾರ ಎರಡು ದೇಶಗಳಿಗೆ ಬಿಟ್ಟಿದ್ದು, ಭಾರತ-ಪಾಕಿಸ್ತಾನ ಕುಳಿತು ಬಗೆಹರಿಸಿಕೊಳ್ಳಲಿ," ಎಂದು ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ. ಪಾಕಿಸ್ತಾನ ನಮಗೆ ಎರಡನೇ ಮನೆ ಇದ್ದಂತೆ ಆದರೆ ಎರಡು ದೇಶಗಳ ನಡುವಿನ ವಿಚಾರಕ್ಕೆ ನಾವು ತಲೆ ಹಾಕುವುದಿಲ್ಲ ಅದನ್ನು ಅವರೇ ಬಗೆಹರಿಸಿಕೊಳ್ಳಲಿ ಎಂದಿದ್ದರು. ಈಗಿನ ಅಫ್ಘಾನಿಸ್ತಾನ ಆಡಳಿತವು ಪಾಕಿಸ್ತಾನವನ್ನು ತನ್ನ ಎರಡನೇ ಮನೆ ಎಂದು ಭಾವಿಸಿದೆ. ಹೀಗಾಗಿ ಆ ದೇಶದ ವಿರುದ್ಧದ ಚಟುವಟಿಕೆಗಳಿಗೆ ಅಫ್ಘಾನಿಸ್ತಾನದ ನೆಲದಲ್ಲಿ ಅವಕಾಶ ನೀಡುವುದಿಲ್ಲ ಎಂದು ಮುಜಾಹಿದ್ ಸಂದರ್ಶನದಲ್ಲಿ ಹೇಳಿರುವುದಾಗಿ ಐಎಎನ್‌ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಾಶ್ಮೀರದಲ್ಲಿ ತಾಲಿಬಾನ್ ಆತಂಕ ಬೇಡ ಎಂದ ಸೇನೆ
"ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಯು ನಮ್ಮ ಹಿಡಿತದಲ್ಲಿದೆ ಹಾಗೂ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡ ತಾಲಿಬಾನ್ ನೆರವಿನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ದಾಳಿ ನಡೆಯಲಿದೆ ಎಂಬ ಬಗ್ಗೆ ಯಾವುದೇ ಆತಂಕ ಬೇಡ," ಎಂದು ಸೇನೆಯು ಸ್ಪಷ್ಟನೆ ನೀಡಿದೆ. ಶ್ರೀನಗರದಲ್ಲಿ ನಡೆದ ಕಾರ್ಯಕ್ರಮ ಒಂದರ ಸಂದರ್ಭದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸೈನ್ಯದ 15 ಕಾರ್ಪ್‌ಗಳ ಕಮಾಂಡಿಂಗ್ ಜನರಲ್ ಆಫೀಸರ್, ಲೆಫ್ಟಿನೆಂಟ್ ಜನರಲ್ ಡಿ ಪಿ ಪಾಂಡೆ, "ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಯು ನಮ್ಮ ಹಿಡಿತದಲ್ಲಿದೆ, ಯಾವುದೇ ಆತಂಕ ಬೇಡ," ಎಂದು ನುಡಿದಿದ್ದಾರೆ. "ಇದು ಆಟದ ಮೈದಾನ ಹಾಗೂ ನಾನು ಹೊರಗಿನವರ ಬಗ್ಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಆದರೆ ನೆನಪಿಟ್ಟು ಕೊಳ್ಳಿ ಇಲ್ಲಿನ ಭದ್ರತಾ ವ್ಯವಸ್ಥೆಯು ನಮ್ಮ ಹಿಡಿತದಲ್ಲಿದೆ ಹಾಗೂ ಈ ವಿಚಾರದಲ್ಲಿ ಯಾವುದೇ ಆತಂಕ ಬೇಡ," ಎಂದು ಹೇಳಿದ್ದಾರೆ. ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ಬಳಿಕ ಭಾರತದ ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳಿಗೆ ಎದುರಾಗಿರುವ ಸಮಸ್ಯೆಯ ಬಗ್ಗೆ ಪ್ರಶ್ನೆ ಮಾಡಿದಾಗ ಈ ಪ್ರತಿಕ್ರಿಯೆಯನ್ನು ಲೆಫ್ಟಿನೆಂಟ್ ಜನರಲ್ ಡಿ ಪಿ ಪಾಂಡೆ ನೀಡಿದ್ದಾರೆ.

ತಾಲಿಬಾನ್ ಉಗ್ರರಿಗೆ ಭಾರತದ ಸ್ಪಷ್ಟ ಸಂದೇಶ
''ಅಫ್ಘಾನಿಸ್ತಾನವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲಿಯೂ ಬಳಸಿಕೊಳ್ಳಬಾರದು,'' ಎಂಬ ಮಾತನ್ನು ಭಾರತವು ಪುನರುಚ್ಚರಿಸಿದೆ. ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ತನ್ನ ಅಧಿಕೃತ ಸರ್ಕಾರವನ್ನು ನಡೆಸಲು ಎಲ್ಲಾ ಸಿದ್ದತೆಗಳನ್ನು ಮಾಡುತ್ತಿರುವ ಬೆನ್ನಲ್ಲೇ ಈ ಸಂದೇಶವನ್ನು ಭಾರತ ನೀಡಿದೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅರಿಂದಮ್ ಬಾಗ್ಚಿ, ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ವಿವರಗಳು ಭಾರತಕ್ಕೆ ತಿಳಿದಿಲ್ಲ ಎಂದಿದ್ದಾರೆ. ''ಅಫ್ಘಾನಿಸ್ತಾನದಲ್ಲಿ ಯಾವ ರೀತಿ ಸರ್ಕಾರ ರಚನೆಯಾಗುತ್ತದೆ ಎಂಬ ಕುರಿತು ನಮಗೆ ಯಾವುದೇ ವಿವರ ತಿಳಿದಿಲ್ಲ. ಅದನ್ನು ಊಹಿಸಲು ಆಗುವುದಿಲ್ಲ'' ಎಂದು ಹೇಳಿದ್ದಾರೆ.

ಭಾರತದ ಮೇಲೆ ದಾಳಿ ನಡೆಸಲು ಜೈಶ್ ಉಗ್ರರ ಸಂಚು
ತಾಲಿಬಾನ್ ಅಫ್ಘಾನಿಸ್ತಾನಕ್ಕೆ ದಾಳಿ ಮಾಡಿದ ಸಂದರ್ಭದಲ್ಲಿ ಅಲ್ಲಿನ ಜೈಲಿನಲ್ಲಿದ್ದ ಉಗ್ರರನ್ನು ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ತಾಲಿಬಾನ್ ಭಯೋತ್ಪಾದಕರು ಅಫ್ಘಾನ್ ಜೈಲುಗಳಿಂದ 100 ಕ್ಕೂ ಅಧಿಕ ಜೈಶ್-ಎ-ಮೊಹಮ್ಮದ್ (ಜೆಎಎಮ್) ಸಂಘಟನೆಯ ಉಗ್ರರನ್ನು ಕೂಡಾ ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಈ ಎಲ್ಲಾ ಉಗ್ರರು ಜೊತೆಗೂಡಿದ್ದು, ಭಾರತದ ಮೇಲೆ ದಾಳಿ ಮಾಡಲು ಸಂಚು ಹೂಡುತ್ತಿದ್ದಾರೆ ಎಂದು ವರದಿಗಳು ತಿಳಿಸಿದೆ. ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರದ ಮೇಲೆ ದಾಳಿ ನಡೆಸಲು ಈ ಜೈಶ್-ಎ-ಮೊಹಮ್ಮದ್ ಉಗ್ರರು ಮುಂದಾಗಿದ್ದಾರೆ ಎಂದು ಭದ್ರತಾ ಸಂಸ್ಥೆಗಳಿಗೆ ಮಾಹಿತಿ ದೊರೆತಿದೆ ಎಂದು ಹೇಳಲಾಗಿದೆ. "ಜೈಶ್-ಎ-ಮೊಹಮ್ಮದ್ ಹಾಗೂ ತಾಲಿಬಾನ್ ಉಗ್ರ ಸಂಘಟನೆಗಳ ಹಿರಿಯ ನಾಯಕರುಗಳು ಈಗಾಗಲೇ ಜೊತೆ ಸೇರಿ ಸಭೆ ನಡೆಸಿದ್ದಾರೆ. ಭಾರತದ ಮೇಲೆ ಗುರಿಯಾಗಿಸಿಕೊಳ್ಳುವ ತಮ್ಮ ಎಲ್ಲಾ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಜೈಶ್-ಎ-ಮೊಹಮ್ಮದ್ ಹಾಗೂ ತಾಲಿಬಾನ್ ಉಗ್ರ ಸಂಘಟನೆಗಳ ನಾಯಕರುಗಳು ಚರ್ಚೆ ನಡೆಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ನಡೆದ ಬೆಳವಣಿಗೆಗಳು ಪಾಕಿಸ್ತಾನದ ಈ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಇನ್ನಷ್ಟು ಉತ್ತೇಜನ ನೀಡಿದ್ದಂತಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದಿರುವುದು ಈ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗೆ ಧೈರ್ಯ ತುಂಬಿದೆ. ಭಾರತಕ್ಕೆ ಒಳ ನುಸುಳುವ ಎಲ್ಲಾ ಕಾರ್ಯ ಯೋಜನೆಯನ್ನು ಈ ಸಂಘಟನೆಗಳು ಮಾಡುತ್ತಿದೆ," ಎಂದು ಭದ್ರತಾ ಸಂಸ್ಥೆಗಳ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications