ಯುಪಿ: ಮೊದಲ ಹಂತದ ಚುನಾವಣೆಗೆ ಪಕ್ಷಗಳ ಭರ್ಜರಿ ತಯಾರಿ

ಲಕ್ನೋ ಫೆಬ್ರವರಿ 07: ಉತ್ತರ ಪ್ರದೇಶದ ಪ್ರಸ್ತುತ ವಿಧಾನಸಭೆಯ ಅವಧಿಯು 14 ಮಾರ್ಚ್ 2022 ರಂದು ಮುಕ್ತಾಯಗೊಳ್ಳುತ್ತದೆ. ಹೀಗಾಗಿ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಲಿದ್ದು ಫೆಬ್ರವರಿ 10 ರಂದು ಮತದಾನ ಆರಂಭವಾಗಲಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ), ಸಮಾಜವಾದಿ ಪಕ್ಷ (ಎಸ್‌ಪಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಕಾಂಗ್ರೆಸ್, ಎಎಪಿ ಮತ್ತು ಹಲವಾರು ಸಣ್ಣ ಪಕ್ಷಗಳು ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ 403 ಸ್ಥಾನಗಳ ಕಣದಲ್ಲಿವೆ.

ರಾಜ್ಯದ ಪ್ರಮುಖ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲಲು ಸಣ್ಣ ರಾಜಕೀಯ ಪಕ್ಷಗಳನ್ನು ಓಲೈಸಿ ಮೈತ್ರಿ ಮಾಡಿಕೊಂಡಿವೆ. ಈ ಜಾತಿ-ಕೇಂದ್ರಿತ ಸಣ್ಣ ಪಕ್ಷಗಳು ಬಿಜೆಪಿ, ಎಸ್‌ಪಿ ಮತ್ತು ಕಾಂಗ್ರೆಸ್‌ನಂತಹ ದೊಡ್ಡ ಪಕ್ಷಗಳಿಗೆ ಅಮೂಲ್ಯವಾದ ಬಲವನ್ನು ನೀಡಿವೆ. ಸಣ್ಣ ಪಕ್ಷಗಳ ಸಾವಿರ ಮತಗಳು ಅಭ್ಯರ್ಥಿಗಳಿಗೆ ಅವಕಾಶವನ್ನು ನೀಡಬಹುದು ಅಥವಾ ಹಾಳು ಕೂಡ ಮಾಡಬಹುದು.

2017 ರ ರಾಜ್ಯ ಚುನಾವಣೆಯಲ್ಲಿ, ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ, ವಿವಿಧ ಪಕ್ಷಗಳ ಎಂಟು ಅಭ್ಯರ್ಥಿಗಳು 1000 ಕ್ಕಿಂತ ಕಡಿಮೆ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಫೆಬ್ರವರಿ 10 ರಂದು ನಡೆಯುವ ಉತ್ತರಪ್ರದೇಶ ಮೊದಲ ಹಂತದ ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳು ಅಧಿಕಾರ ಪಡೆಯಲು ಹೇಗೆ ಪ್ರಯತ್ನಿಸುತ್ತಿವೆ ಎಂಬುದನ್ನು ಇಲ್ಲಿ ನೋಡಿ.

ಮತ್ತೆ ಅರಳುತ್ತಾ ಕಮಲ?

ಮತ್ತೆ ಅರಳುತ್ತಾ ಕಮಲ?

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರದ ಗದ್ದುಗೆ ಏರಲು ಪಣತೊಟ್ಟು ನಿಂತಿದೆ. ಉತ್ತರ ಪ್ರದೇಶದಲ್ಲಿ 35 ವರ್ಷಗಳ ಹಿಂದಿನ ಜಂಜಾಟವನ್ನು ದಾಟಿ ಎರಡನೇ ಅವಧಿಗೆ ಮರಳುತ್ತದೆಯೇ ಎನ್ನುವ ಭಾರೀ ಕುತೂಹಲ ಮೂಡಿದೆ. ಬಿಜೆಪಿಗೆ ಪುಷ್ಠಿ ನೀಡುವಂತೆ ಇತ್ತೀಚೆಗೆ ನಡೆದು ಬಹುತೇಕ ಸಮೀಕ್ಷೆಗಳು ಬಿಜೆಪಿ ಪಕ್ಷಕ್ಕೆ ಇತರರಿಗಿಂತ ಹೆಚ್ಚಿನ ಸ್ಥಾನವನ್ನು ನೀಡಿವೆ.

2017 ರಲ್ಲಿ ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ 403 ಸ್ಥಾನಗಳಲ್ಲಿ 312 ಸ್ಥಾನಗಳನ್ನು ಗೆದ್ದು 14 ವರ್ಷಗಳ ನಂತರ ಅಧಿಕಾರಕ್ಕೆ ಬಂದಿತು. ಇನ್ನೂ 2017 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 40%, ಎಸ್‌ಪಿ ಮತ್ತು ಬಿಎಸ್‌ಪಿ ತಲಾ 22% ಮತ್ತು ಕಾಂಗ್ರೆಸ್ 6% ಮತಗಳನ್ನು ಗಳಿಸಿದವು. ಈ ಬಾರಿ ಯೋಗಿ ಆದಿತ್ಯನಾಥ್ ಅವರು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಮತ್ತು ಮಾಯಾವತಿ ಅವರ ಬಹುಜನ ಸಮಾಜವಾದಿ ಪಕ್ಷದಂತಹ ಪ್ರಬಲ ಪ್ರತಿಪಕ್ಷಗಳ ವಿರುದ್ಧ ತೀವ್ರ ಹೋರಾಟದಲ್ಲಿ ತೊಡಗಿದ್ದಾರೆ. ಇನ್ನೂ ಪ್ರಿಯಾಂಕಾ ಗಾಂಧಿ ನೇತೃತ್ವದ ಕಾಂಗ್ರೆಸ್ ತನ್ನ ಸಂಖ್ಯೆಯನ್ನು ಸುಧಾರಿಸಲು ನೋಡುತ್ತಿದೆ.

ಸಿಎಂ ಆದಿತ್ಯನಾಥ್ ಅವರ ನಾಯಕತ್ವ ಜೊತೆಗೆ ಪಿಎಂ ನರೇಂದ್ರ ಮೋದಿಯವರ ಜನಪ್ರಿಯ ಮನವಿ ಬಿಜೆಪಿಗೆ ಪ್ಲಸ್ ಆಗಿದೆ. ಆದರೆ ಪ್ರತಿಪಕ್ಷಗಳು ಅವರ ವಿರುದ್ಧ ನಿರುದ್ಯೋಗ ಸಮಸ್ಯೆಯನ್ನು ಎತ್ತಿ ಹಿಡಿಯುತ್ತಿವೆ. ಅನೇಕರು 2022ರ ಯುಪಿ ಚುನಾವಣೆಯನ್ನು 2024 ರ ಸಾರ್ವತ್ರಿಕ ಚುನಾವಣೆಗೆ ಸೆಮಿಫೈನಲ್ ಫಲಿತಾಂಶ ಎಂದು ಭಾವಿಸುತ್ತಿದ್ದಾರೆ. ಹೀಗಾಗಿ ಈ ಬಾರಿಯ ಗೆಲುವು ಬಿಜೆಪಿಯ ಭವಿಷ್ಯಕ್ಕೆ ದೊಡ್ಡ ಬಲವನ್ನು ನೀಡುತ್ತದೆ.

ಬಿಜೆಪಿಯೊಂದಿಗೆ ಮೈತ್ರಿ

ಬಿಜೆಪಿಯೊಂದಿಗೆ ಮೈತ್ರಿ

ಅಪ್ನಾದಳ್ (ಸೋನೆಲಾಲ್) ಪಕ್ಷ ಮುಖ್ಯವಾಗಿ ವಾರಣಾಸಿ ಪ್ರದೇಶದಲ್ಲಿ ಕುರ್ಮಿ ​​ಸಮುದಾಯದಲ್ಲಿ ಅಧಿಕ ಬಲವನ್ನು ಹೊಂದಿದೆ. ಅಪ್ನಾದಳ್ (ಸೋನೆಲಾಲ್) ಅಪ್ನಾ ದಳದ ಒಡೆದ ಪಕ್ಷವಾಗಿದ್ದು, ಇದನ್ನು 1995 ರಲ್ಲಿ ಡಾ. ಸೋನೆ ಲಾಲ್ ಪಟೇಲ್ ಸ್ಥಾಪಿಸಿದರು. ಅಪ್ನಾ ದಳ (ಸೋನೆಲಾಲ್) ಅನ್ನು ಜವಾಹರ್ ಲಾಲ್ ಪಟೇಲ್ ಅವರು ಸ್ಥಾಪಿಸಿದರು. ಜವಾಹರ್ ಲಾಲ್ ಪಟೇಲ್ ಅವರು ಅಪ್ನಾ ದಳದ ಸ್ಥಾಪಕ ಸದಸ್ಯರೂ ಆಗಿದ್ದರು. ಪಕ್ಷದ ಪ್ರಸ್ತುತ ಅಧ್ಯಕ್ಷರಾದ ಅನುಪ್ರಿಯಾ ಪಟೇಲ್ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಅಪ್ನಾ ದಳ (ಸೋನೆಲಾಲ್) 2017 ರಲ್ಲಿ 11 ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಒಂಬತ್ತು ಸ್ಥಾನಗಳನ್ನು ಗೆದ್ದಿದೆ.

ಸಂಜಯ್ ನಿಶಾದ್ ಇದರ ಸ್ಥಾಪಕ

ಸಂಜಯ್ ನಿಶಾದ್ ಇದರ ಸ್ಥಾಪಕ

ನಿಶಾದ್ ಪಕ್ಷವನ್ನು 2016 ರಲ್ಲಿ ಸ್ಥಾಪಿಸಲಾಯಿತು. ನಿಶಾದ್, ಕೇವಟ್ಸ್, ಬಿಂದ್, ಮಲ್ಲಾಹ್, ಕಶ್ಯಪ್, ಮಾಂಝಿ, ಗೊಂಡ್ ಮತ್ತು ಇತರ ಸಮುದಾಯಗಳ ಸಬಲೀಕರಣಕ್ಕಾಗಿ ಪಕ್ಷವನ್ನು ರಚಿಸಲಾಗಿದೆ. ಅವರ ಸಾಂಪ್ರದಾಯಿಕ ಉದ್ಯೋಗಗಳು ನದಿಗಳ ಸುತ್ತ ಕೇಂದ್ರೀಕೃತವಾಗಿವೆ. ಉದಾಹರಣೆಗೆ ದೋಣಿ ನಡೆಸುವವರು ಅಥವಾ ಮೀನುಗಾರರು. ಬಹುಜನ ಸಮಾಜ ಪಕ್ಷದ ಮಾಜಿ ಸದಸ್ಯ ಸಂಜಯ್ ನಿಶಾದ್ ಇದರ ಸ್ಥಾಪಕರು. ನಿಶಾದ್ ಪಕ್ಷವು 2017 ರಲ್ಲಿ 72 ಸ್ಥಾನಗಳಲ್ಲಿ ಸ್ಪರ್ಧಿಸಿತು ಮತ್ತು ಜ್ಞಾನಪುರ ಕ್ಷೇತ್ರವನ್ನು ಮಾತ್ರ ಗೆದ್ದುಕೊಂಡಿತು. ಈ ವರ್ಷ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಯುಪಿಯಲ್ಲಿ ಗೆಲುವಿನ ವಾತಾವರಣ ನಿರ್ಮಾಣ

ಯುಪಿಯಲ್ಲಿ ಗೆಲುವಿನ ವಾತಾವರಣ ನಿರ್ಮಾಣ

ಸಮಾಜವಾದಿ ಪಕ್ಷವು ಪ್ರಸ್ತುತ ವಿಧಾನಸಭೆಯಲ್ಲಿ ಪ್ರಮುಖ ಪ್ರತಿಪಕ್ಷವಾಗಿದೆ. ಈ ಪಕ್ಷವನ್ನು 1992 ರಲ್ಲಿ ಮುಲಾಯಂ ಸಿಂಗ್ ಯಾದವ್ ಸ್ಥಾಪಿಸಿದರು ಮತ್ತು 2017 ರ ಜನವರಿಯಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಿಂದ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು. ನಂತರ ಈಗ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪಕ್ಷದ ನೇತೃತ್ವ ವಹಿಸಿದ್ದಾರೆ.

2012 ರಲ್ಲಿ ಮಾಯಾವತಿಯವರ ಬಿಎಸ್‌ಪಿ ವಿರುದ್ಧ ಸಮಾಜವಾದಿ ಪಕ್ಷ ಅದ್ಭುತ ಗೆಲುವಿನಿಂದ ಯುಪಿಯಲ್ಲಿ ಪ್ರಾಬಲ್ಯ ಹೊಂದಿತ್ತು. ಆದರೆ 2022 ರಲ್ಲಿ ಎಸ್‌ಪಿ ರಾಷ್ಟ್ರೀಯ ಲೋಕದಳ ಮತ್ತು ಕೆಲವು ಸಣ್ಣ ಪಕ್ಷಗಳೊಂದಿಗೆ ಒಟ್ಟಾಗಿ ಸ್ಪರ್ಧಿಸಲಿದೆ.

ಅಖಿಲೇಶ್ ಅವರು ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ ಅವರ ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ) ಜೊತೆ ಎಸ್ಪಿ ಮೈತ್ರಿಯನ್ನು ದೃಢಪಡಿಸಿದರು. ಸಣ್ಣ ಪ್ರಾದೇಶಿಕ ಪಕ್ಷಗಳನ್ನು ಎಸ್‌ಪಿ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್ ಮತ್ತು ಬಿಎಸ್‌ಪಿಯಂತಹ ದೊಡ್ಡ ಪಕ್ಷಗಳೊಂದಿಗೆ ಎಸ್‌ಪಿ ಯಾವುದೇ ಮೈತ್ರಿ ಮಾಡಿಕೊಂಡಿಲ್ಲ.

ಈ ವರ್ಷದ ಏಪ್ರಿಲ್‌ನಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಎಸ್‌ಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಸ್ವಾಮಿ ಪ್ರಸಾದ್ ಮೌರ್ಯರಂತಹ ಯಾದವೇತರ OBC ನಾಯಕರ ಇತ್ತೀಚಿನ ವಲಸೆ, ಕೋವಿಡ್-19 ಬಿಕ್ಕಟ್ಟನ್ನು ತಪ್ಪಾಗಿ ನಿರ್ವಹಿಸಿದ ಕಾರಣದಿಂದ ಬಿಜೆಪಿ ಮೇಲೆ ಮತದಾರರ ಅತೃಪ್ತಿ ಮತ್ತು ಆರ್ಥಿಕ ಹಿನ್ನಡೆಗಳು 2022 ರಲ್ಲಿ ಬಿಜೆಪಿಯನ್ನು ಪದಚ್ಯುತಗೊಳಿಸುವ SP ಯ ಆಶಯವನ್ನು ಹೆಚ್ಚಿಸಿವೆ.

ಎಸ್‌ಪಿಯೊಂದಿಗೆ ಮೈತ್ರಿ

ಎಸ್‌ಪಿಯೊಂದಿಗೆ ಮೈತ್ರಿ

ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್ ಚೌಧರಿ ಅವರಿಗೆ ಮೊದಲ ಚುನಾವಣೆ ಇದಾಗಿದೆ. ಮೇ ತಿಂಗಳಲ್ಲಿ COVID-19 ಗೆ ಬಲಿಯಾದ ಅವರ ತಂದೆ ಅಜಿತ್ ಸಿಂಗ್ ಅವರ ಮಾರ್ಗದರ್ಶನವಿಲ್ಲದೆ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ರೈತ ನಾಯಕ ಮತ್ತು ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಮೊಮ್ಮಗ ಚೌಧರಿ ಅವರು 2014 ರ ಲೋಕಸಭಾ ಚುನಾವಣೆಯಿಂದ ಬಿಜೆಪಿ ಸೇರಿದ್ದರು. ಈ ಬಾರಿ ಪಶ್ಚಿಮ ಉತ್ತರ ಪ್ರದೇಶದ ನಿರ್ಣಾಯಕ ಜಾಟ್ ಮತ ಬ್ಯಾಂಕ್ ಅನ್ನು ಮರಳಿ ಪಡೆಯುವ ಸವಾಲನ್ನು ಎದುರಿಸಲಿದ್ದಾರೆ.

ಜಯಂತ್ ಅವರು ಅಖಿಲೇಶ್ ಯಾದವ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಎಸ್‌ಪಿ ಮತ್ತು ಆರ್‌ಎಲ್‌ಡಿ ತಮ್ಮ 2012ರ ಯಶಸ್ಸನ್ನು ಪುನರಾವರ್ತಿಸಲು ಸರ್ವಪ್ರಯತ್ನ ನಡೆಸುತ್ತಿದ್ದು, ಇಬ್ಬರೂ ಪ್ರತ್ಯೇಕವಾಗಿ ಸ್ಪರ್ಧಿಸಿ ಅಲಿಘರ್ ಜಿಲ್ಲೆಯ ಎಲ್ಲಾ ಏಳು ಸ್ಥಾನಗಳನ್ನು ಗೆದ್ದಿದ್ದರು.

ಅಪ್ನಾ ದಳ(ಕೆ)

ಅಪ್ನಾ ದಳ(ಕೆ)

ಮಹಾನ್ ದಳವನ್ನು 2008 ರಲ್ಲಿ ಕೇಶವ್ ದೇವ್ ಮೌರ್ಯ ಅವರು ಪ್ರಾರಂಭಿಸಿದರು. ಇದು ರೋಹಿಲ್‌ಖಂಡ್ ಮತ್ತು ಪಶ್ಚಿಮ ಯುಪಿ ಪ್ರದೇಶಗಳಲ್ಲಿ ಪ್ರಭಾವ ಬೀರುವ ಸಾಧ್ಯತೆಯಿದೆ. ಮಹಾನ್ ದಳವು ಮೌರ್ಯರು, ಶಾಕ್ಯರು, ಕುಶ್ವಾಹಗಳು, ಸೈನಿಗಳು ಮತ್ತು ಕಾಂಬೋಜ್‌ಗಳಂತಹ ಇತರ ಹಿಂದುಳಿದ ವರ್ಗಗಳ ಬೆಂಬಲವನ್ನು ಹೊಂದಿದೆ. ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ.

ಅಪ್ನಾ ದಳ(ಕೆ) ಕೂಡ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ. ಸೀಟು ಹಂಚಿಕೆಯಲ್ಲಿ ಇತ್ತೀಚಿನ ಒತ್ತಡಗಳಿಗೆ ಇದು ಒಳಗಾಗಿತ್ತು. ಅಪ್ನಾ ದಳ(ಕೆ) ತನಗೆ ಮಂಜೂರು ಮಾಡಿದ ಸೀಟುಗಳನ್ನು ಎಸ್‌ಪಿಗೆ ವಾಪಸ್‌ ನೀಡಿದೆ. ಆದರೆ ಎಸ್‌ಪಿಯೊಂದಿಗೆ ನಡೆಯುವುದಾಗಿ ಹೇಳಿಕೊಂಡಿದೆ.

ದಲಿತರ ನಡುವೆ ಐಕ್ಯತೆಗೆ ಕರೆ

ದಲಿತರ ನಡುವೆ ಐಕ್ಯತೆಗೆ ಕರೆ

2007 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದ ಪ್ರದರ್ಶನವನ್ನು ಪುನರಾವರ್ತಿಸುವ ಪ್ರಯತ್ನದಲ್ಲಿ, ರಾಜ್ಯದ ಮಾಜಿ ಮುಖ್ಯಮಂತ್ರಿ ಮಾಯಾವತಿ ಬ್ರಾಹ್ಮಣ ಸಮುದಾಯವನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ದಲಿತರ ನಡುವೆ ಐಕ್ಯತೆಗೆ ಕರೆ ನೀಡಿದ್ದಾರೆ.

403 ಸದಸ್ಯ ಬಲದ ಯುಪಿ ವಿಧಾನಸಭೆಯಲ್ಲಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಎಸ್‌ಪಿ 2007ರಲ್ಲಿ ಸ್ವಂತ ಬಲದಿಂದ ಸರ್ಕಾರ ರಚಿಸಿತ್ತು. ದಲಿತ-ಬ್ರಾಹ್ಮಣ ಏಕತೆಯನ್ನು ರೂಪಿಸುವ ಮೂಲಕ ಮಾಯಾವತಿ ಜಯ ಸಾಧಿಸಿದ್ದರು. ಈ ಬಾರಿ ಅಧಿಕಾರಕ್ಕೆ ಬಂದರೆ ತಮ್ಮ ಸರ್ಕಾರ ಸಮಾಜದ ಎಲ್ಲಾ ವರ್ಗಗಳ ಭದ್ರತೆ, ಗೌರವ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡುತ್ತದೆ ಎಂದು ಮಾಯಾವತಿ ಭರವಸೆ ನೀಡಿದ್ದಾರೆ.

ಕೈ ಹಿಡಿತಾರಾ ಮತದಾರರು?

ಕೈ ಹಿಡಿತಾರಾ ಮತದಾರರು?

ಉತ್ತರ ಪ್ರದೇಶದಲ್ಲಿ ಒಂದು ಕಾಲದಲ್ಲಿ ಕಾಂಗ್ರೆಸ್ ಪ್ರಬಲ ಶಕ್ತಿಯಾಗಿತ್ತು. ಈಗ ಸತತ ಚುನಾವಣೆಗಳಲ್ಲಿ ಭಾರೀ ಸೋಲುಗಳೊಂದಿಗೆ, ಅದು ಹೆಚ್ಚು ಅಳಿವಿನಂಚಿನಲ್ಲಿದೆ. 2017 ರಲ್ಲಿ ಪಕ್ಷವು ಒಟ್ಟು 403 ಸ್ಥಾನಗಳಲ್ಲಿ ಕೇವಲ ಏಳು ಸ್ಥಾನಗಳನ್ನು ಗೆದ್ದಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಇದು ಒಟ್ಟು 80 ರಲ್ಲಿ ಕೇವಲ 1 ರಲ್ಲಿ ಗೆದ್ದಿತು. ಮಾತ್ರವಲ್ಲದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುಟುಂಬದ ಭದ್ರಕೋಟೆಯಾದ ಅಮೇಥಿಯಿಂದಲೂ ಸೋತರು.

ಈ ಬಾರಿ ಪಕ್ಷದ ಉಸ್ತುವಾರಿಯನ್ನು ಪ್ರಿಯಾಂಕಾ ಗಾಂಧಿ ವಹಿಸಿದ್ದಾರೆ. ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಅವರು ಯುಪಿಯಲ್ಲಿ ಪಕ್ಷದ ಜಯ ಸಾಧಿಸುವ ಬಗ್ಗೆ ಕಾದು ನೋಡಬೇಕಿದೆ.

ಗೆದ್ದರೆ ಇಬ್ಬರು ಸಿಎಂ ಭರವಸೆ

ಗೆದ್ದರೆ ಇಬ್ಬರು ಸಿಎಂ ಭರವಸೆ

ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್, ಜನ್ ಅಧಿಕಾರ್ ಪಾರ್ಟಿ, ಭಾರತ್ ಮುಕ್ತಿ ಮೋರ್ಚಾ, ಜನತಾ ಕ್ರಾಂತಿ ಪಕ್ಷ ಮತ್ತು ಭಾರತೀಯ ವಂಚಿತ್ ಸಮಾಜ ಪಕ್ಷವು ಎಲ್ಲಾ 403 ಸ್ಥಾನಗಳಲ್ಲಿ ಸ್ಪರ್ಧಿಸಲು ಕೆಲವೇ ವಾರಗಳ ಹಿಂದೆ ಒಂದು ಮುಂಭಾಗವನ್ನು ರಚಿಸಿದವು. ಇವು ಮುಸ್ಲಿಮರು, ಇತರೆ ಹಿಂದುಳಿದ ವರ್ಗಗಳು (OBCಗಳು) ಮತ್ತು ದಲಿತರ ಬೆಂಬಲದ ನೆಲೆಯನ್ನು ಹೊಂದಿರುವ ಪಕ್ಷಗಳಾಗಿವೆ.

ಯುಪಿಯಲ್ಲಿ ಗೆದ್ದರೆ ದಲಿತ ಮತ್ತು ಓರ್ವ ಒಬಿಸಿ ನಾಯಕ ಇಬ್ಬರು ಮುಖ್ಯಮಂತ್ರಿಗಳನ್ನು ಮಾಡುವುದಾಗಿ ಹೇಳಿಕೆ ನೀಡಿದೆ. ಜೊತೆಗೆ ಮೂವರು ಉಪಮುಖ್ಯಮಂತ್ರಿಗಳು, ಅವರಲ್ಲಿ ಒಬ್ಬರು ಮುಸ್ಲಿಮರು ಎಂದು ಓವೈಸಿ ಘೋಷಿಸಿದ್ದಾರೆ. ಈ ಭರವಸೆಯಿಂದ ಎಷ್ಟು ಜನಬೆಂಬಲ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+