ಕರ್ನಾಟಕದ ಕೌತುಕ ಸ್ಥಳ: ಬೇಸಿಗೆಯಲ್ಲಿ ಹಸಿರಾಗುವ ಈ ನದಿ ಯಾವುದು ಗೊತ್ತಾ..?
ಮೈಸೂರು, ಫೆಬ್ರವರಿ 26: ಮುಂಗಾರು ಕೊಡಗಿನಲ್ಲಿ ಕೈಕೊಟ್ಟ ಪರಿಣಾಮ ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಕುಡಿಯುವ ನೀರಿಗೆ ಈಗಿನಿಂದಲೇ ಸಂಕಷ್ಟ ಎದುರಾಗಿದ್ದು, ಮುಂದಿನ ಬೇಸಿಗೆಯ ದಿನಗಳಲ್ಲಿ ಹನಿ ನೀರಿಗೂ ತಾತ್ವಾರ ಬಂದರೆ ಅಚ್ಚರಿಪಡಬೇಕಾಗಿಲ್ಲ. ಬಹುಶಃ ಮಳೆಗಾಲದಲ್ಲಿ ವಾಡಿಕೆಯ ಮಳೆ ಸುರಿಯದಿದ್ದಾಗಲೇ ಸರ್ಕಾರ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗಿತ್ತು. ಆದರೆ ಆ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ಇವತ್ತು ಜನ ಖಾಲಿ ಬಿಂದಿಗೆ ಹಿಡಿದು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ಈಗ ಲೋಕಸಭಾ ಚುನಾವಣೆ ಕಾವು ಏರುತ್ತಿರುವ ಕಾರಣ ನಮ್ಮ ರಾಜಕೀಯ ನಾಯಕರು ಅದರಲ್ಲೂ ಆಡಳಿತರೂಢರು ಬರದ ಬಗ್ಗೆ ತಲೆಕೆಡಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಚುನಾವಣೆ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಜೀವ ಜಲ ಸದ್ದಿಲ್ಲದೆ ಬತ್ತುತ್ತಿದ್ದರೂ ಆ ಬಗ್ಗೆ ಗಮನಹರಿಸಿದಂತೆ ಕಾಣಿಸುತ್ತಿಲ್ಲ. ಇದರ ಪರಿಣಾಮ ನದಿ, ಕೆರೆ, ಬಾವಿಗಳಲ್ಲಿ ನೀರು ಆರುತ್ತಿದ್ದರೆ, ಜನ ಹನಿ ನೀರಿಗಾಗಿ ಹೋರಾಟ ಮಾಡುವಂತಾಗಿದೆ. ಇದೆಲ್ಲದರ ನಡುವೆ ನದಿಗಳು ಕಲುಷಿತವಾಗುತ್ತಿದ್ದು, ಕಾಯಿಲೆ ತಂದೊಡ್ಡುವ ಭೀತಿ ಶುರುವಾಗಿದೆ.

ಯಾವುದೇ ಸರ್ಕಾರಗಳು ಆಡಳಿತಕ್ಕೆ ಬಂದರೂ ನದಿಗಳ ಸಂರಕ್ಷಣೆ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದ ಕಾರಣದಿಂದ ಇವತ್ತು ನದಿಗಳಲ್ಲಿ ನೀರಿದ್ದರೂ ಅವು ಬೇಸಿಗೆ ಬರುತ್ತಿದ್ದಂತೆಯೇ ಕಲುಷಿತವಾಗಿ ಜನ ಉಪಯೋಗಿಸಲಾಗದಂತಹ ಪರಿಸ್ಥಿತಿಗೆ ಬಂದು ನಿಲ್ಲುವುದು ಸಾಮಾನ್ಯವಾಗುತ್ತಿದೆ. ಇನ್ನು ಈಗಿನ ಪರಿಸ್ಥಿತಿಯಲ್ಲಿ ಕೆಲವು ನದಿಗಳು ಮೈದಾನದಂತೆ ಗೋಚರಿಸುತ್ತಿದ್ದರೆ, ಮತ್ತೆ ಕೆಲವು ಸಂಪೂರ್ಣ ಕಲುಷಿತಗೊಂಡಿವೆ. ಈ ನಡುವೆ ಹುಣಸೂರು ಹೃದಯಭಾಗದಲ್ಲಿ ಹರಿಯುವ ಲಕ್ಷ್ಮಣ ತೀರ್ಥ ನದಿಯಂತು ಸಂಪೂರ್ಣ ಬದಲಾಗಿದ್ದು ಹಸಿರು ಮೈದಾನದಂತೆ ಕಂಗೊಳಿಸುತ್ತದೆ.
ಬೇಸಿಗೆಯಲ್ಲಿ ಹಸಿರಾಗುವ ನದಿ
ಇವತ್ತು ಯಾರಾದರೂ ಲಕ್ಷ್ಮಣತೀರ್ಥ ನದಿಯನ್ನೊಮ್ಮೆ ನೋಡಿದರೆ ಅಚ್ಚರಿ ಪಡುವುದಂತು ಖಚಿತ ಏಕೆಂದರೆ ಮೇಲ್ನೋಟಕ್ಕೆ ಇದನ್ನು ನದಿ ಎಂದು ಒಪ್ಪಿಕೊಳ್ಳುವುದೇ ಕಷ್ಟವಾಗುತ್ತದೆ. ಕಾರಣ ಇಡೀ ನದಿ ಕಲುಷಿತಗೊಂಡಿದ್ದು, ಅದರ ಮೇಲೆ ಜೊಂಡು ಹುಲ್ಲು ಬೆಳೆದು ನಿಂತಿದ್ದು ಹಸಿರು ಕ್ರಾಂತಿ ಸೃಷ್ಟಿಯಾಗಿದೆ. ಪ್ರತಿ ವರ್ಷವೂ ಬೇಸಿಗೆ ಬರುತ್ತಿದ್ದಂತೆಯೇ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಕಲುಷಿತ ನೀರು ನದಿಯನ್ನು ಸೇರುತ್ತಿದ್ದಂತೆಯೇ ಇಂತಹದೊಂದು ಪರಿಸ್ಥಿತಿ ನಿರ್ಮಾಣವಾಗುತ್ತದೆ.

ದುರಂತ ಏನೆಂದರೆ ಈ ಬಗ್ಗೆ ಇದುವರೆಗೆ ಅಧಿಕಾರ ಅನುಭವಿಸಿದ ಶಾಸಕರಾಗಲೀ, ಸ್ಥಳೀಯ ಆಡಳಿತವಾಗಲೀ ನದಿಯನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಮುಂದಾಗಲೇ ಇಲ್ಲ. ಇದರಿಂದ ಮಳೆಗಾಲದಲ್ಲಿ ಮುಂಗಾರು ಚೇತರಿಕೆಯಾಗಿ ನದಿಯಲ್ಲಿ ಪ್ರವಾಹ ಕಾಣಿಸಿದ ಸಂದರ್ಭ ನದಿಯ ಕೊಳಚೆ ಮಾಯವಾಗಿ, ಜೊಂಡು ಹುಲ್ಲು, ಇನ್ನಿತರ ಜನ ಸಸ್ಯಗಳು ಕೊಚ್ಚಿಕೊಂಡು ಹೋಗಿ ಸ್ವಚ್ಛವಾಗುತ್ತದೆಯಾದರೂ ಬಳಿಕ ಬೇಸಿಗೆ ಬರುತ್ತಿದ್ದಂತೆಯೇ ಯಥಾ ಪ್ರಕಾರ ಕಲುಷಿತಗೊಳ್ಳುವುದು ಮಾಮೂಲಿಯಾಗಿದೆ.
ಲಕ್ಷ್ಮಣತೀರ್ಥ ನದಿ ಸಂರಕ್ಷಣೆ ಯಾವಾಗ?
ಜನಪ್ರತಿನಿಧಿಗಳ, ಅಧಿಕಾರಿಗಳ ಮತ್ತು ಜನರ ನಿರ್ಲಕ್ಷ್ಯದಿಂದ ಪ್ರತಿದಿನವೂ ಪಟ್ಟಣದ ತ್ಯಾಜ್ಯ ನದಿಯನ್ನು ಸೇರುತ್ತಿದೆ. ಜತೆಗೆ ಪಾಚಿ, ಜೊಂಡು ಹುಲ್ಲು, ಜಲಸಸ್ಯಗಳು ಬೆಳೆದು ಇರುವ ನೀರು ಕಲುಷಿತವಾಗುತ್ತದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಅದೇ ನೀರನ್ನು ಅದೆಷ್ಟೋ ಮಂದಿ ಬಳಸುತ್ತಿದ್ದಾರೆ. ಹೀಗಾಗಿ ಅವರ ಆರೋಗ್ಯದ ಬಗ್ಗೆಯೂ ಗಮನಹರಿಸಬೇಕಾಗುತ್ತದೆ. ಇದೆಲ್ಲದರ ನಡುವೆ ಕೊಡಗಿನ ಇರ್ಪುನಲ್ಲಿ ಹಾಲ್ನೊರೆಯಂತೆ ಉಕ್ಕುವ ನೀರು ಇದೇನಾ ಎಂಬ ಪ್ರಶ್ನೆ ಮೂಡದಿರದು. ಪ್ರತಿ ವರ್ಷ ಬೇಸಿಗೆ ಬರುತ್ತಿದ್ದಂತೆಯೇ ಲಕ್ಷ್ಮಣತೀರ್ಥ ನದಿ ಹುಣಸೂರು ಪಟ್ಟಣದಲ್ಲಿ ಹರಿಯುವ ವೇಳೆ ಹಸಿರಾಗುತ್ತದೆ. ಆದರೆ ಈ ಬಾರಿ ಬಹುಬೇಗವೇ ಕಲುಷಿತಗೊಂಡಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ಹುಣಸೂರು ಮೂಲಕ ಹರಿದು ಮುಂದೆ ಮಂಡ್ಯದ ಕೆ.ಆರ್.ಪೇಟೆ ಬಳಿ ಕಾವೇರಿ ನದಿಯನ್ನು ಸೇರುವ ಲಕ್ಷ್ಮಣತೀರ್ಥ ನದಿ ಈ ಮಟ್ಟಿಗೆ ಕಲುಷಿತಗೊಂಡರೆ ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೀಗಾಗಿ ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಲಕ್ಷ್ಮಣ ತೀರ್ಥ ನದಿಯ ಸಂರಕ್ಷಣೆಗೆ ಮುಂದಾಗಬೇಕಾಗಿದೆ. ಪಟ್ಟಣದ ತ್ಯಾಜ್ಯವನ್ನೆಲ್ಲ ನದಿಗೆ ಸುರಿಯುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಹಾಗೆಯೇ ತ್ಯಾಜ್ಯ ನೀರು ನದಿ ಸೇರುವುದನ್ನು ತಪ್ಪಿಸಬೇಕಾಗಿದೆ. ಆ ಮೂಲಕ ನದಿಯ ಸ್ವಚ್ಛತೆ ಕಾಪಾಡಬೇಕಾಗಿದೆ. ಇಲ್ಲದೆ ಹೋದರೆ ಜೀವಜಲ ಜೀವತೆಗೆದರೂ ಅಚ್ಚರಿಪಡಬೇಕಾಗಿಲ್ಲ.












Click it and Unblock the Notifications