ಗೋವರ್ಧನಗಿರಿ ಗೋಪಾಲಸ್ವಾಮಿ ಬೆಟ್ಟ ಆಗಿದ್ದು ಹೇಗೆ?, ಇಲ್ಲಿನ ವಿಶೇಷತೆಗಳೇನು?, ಮಾಹಿತಿ
ಚಾಮರಾಜನಗರ, ಜೂನ್, 20: ಇಷ್ಟು ದಿನ ಬಿಸಿಲಿನ ಬೇಗೆಯಿಂದ ಬೆಂದಿದ್ದ ಚಾಮರಾಜನಗರ ಜಿಲ್ಲೆಗೆ ಇದೀಗ ಮುಂಗಾರು ಮಳೆ ತಂಪೆರೆದಿದೆ. ಇದಕ್ಕೂ ಮುಂಚೆ ಸುರಿದ ಸಾಧಾರಣ ಮಳೆಗೆ ಇಲ್ಲಿನ ಗಿಡಮರಗಳು ಅಚ್ಚಹರಿನಿಂದ ಕಂಗೊಳಿಸುತ್ತಿದ್ದು, ಈ ವಾತಾವರಣ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಲೇ ಇದೆ. ಹಾಗೆಯೇ ಇಲ್ಲಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರಯಾಣ ಮಾಡಲು ಈ ಸಮಯ ಸೂಕ್ತವಾಗಿದೆ. ಹಾಗಾದರೆ ಮತ್ತೇಕೆ ತಡ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಸಿದ್ಧರಾಗಿ..
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಉದ್ಯಾನವನದ ವನಸಿರಿಯಲ್ಲಿ ಬೆರೆತು ಹೋಗಿರುವ ತಾಣವೇ ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟ. ಹಸಿರು ಸಿರಿಯ ನಡುವೆ ಕಂಗೊಳಿಸುವ ಈ ಬೆಟ್ಟ ಬರೀ ತಂಪಾದ ಗಾಳಿ ಬೀಸಿ ಸ್ವಾಗತಿಸುವುದಿಲ್ಲ. ಬದಲಿಗೆ ಹಿಮದ ಮಳೆಗರೆದು ತನ್ನತ್ತ ಸೆಳೆದೇ ಬಿಡುತ್ತದೆ.

ಅದರಲ್ಲೂ ಈಗಂತೂ ಮುಂಗಾರು ಆರಂಭದ ದಿನಗಳಾಗಿರುವುದರಿಂದ ಇಲ್ಲಿನ ಪ್ರಕೃತಿ ರಮಣೀಯ ದೃಶ್ಯಗಳು ಭೇಟಿ ನೀಡುವ ಪ್ರತಿಯೊಬ್ಬರ ಮನವನ್ನು ಬಡಿದೆಬ್ಬಿಸುತ್ತವೆ. ಅಷ್ಟೇ ಅಲ್ಲದೆ ಇಲ್ಲಿನ ಪ್ರಕೃತಿ ಮಡಿಲಲ್ಲಿನ ಸುಂದರ ದೃಶ್ಯಗಳು ಪ್ರವಾಸಿಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತವೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೊಳಪಡುವ ಈ ಬೆಟ್ಟದ ತಪ್ಪಲಿನ ದ್ವಾರದಿಂದ ಬೆಟ್ಟದ ಮೇಲಿನ ದೇಗುಲದ ತನಕದ ಏರು ತಗ್ಗಿನ, ಅಂಕುಡೊಂಕಿನ ಕಡಿದಾದ ರಸ್ತೆಯ ಪ್ರಯಾಣ ರೋಮಾಂಚನಕಾರಿ ಅನುಭವ ನೀಡುತ್ತದೆ. ಹೀಗೆ ಸಾಗುವಾಗ ದಾರಿ ನಡುವೆ ದರ್ಶನ ನೀಡುವ ಕಾಡಾನೆ, ಜಿಂಕೆಗಳು, ಪ್ರಾಣಿ ಪಕ್ಷಿಗಳು ನೋಡುಗಳನ್ನು ತನ್ನತ್ತ ಸೆಳೆಯುತ್ತವೆ. ಕೆಲವೊಮ್ಮೆ ದೂರದಲ್ಲಿ ಹುಲಿ, ಚಿರತೆ, ಕರಡಿ, ಜಿಂಕೆಗಳು, ಆನೆಗಳು ಕಾಣಿಸಿಕೊಂಡು ನಾವು ಸಫಾರಿಗೆ ಹೊರಟಿದ್ದೇವೆಯಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿ ಬಿಡುತ್ತವೆ.
ಮೈಮನ ಪುಳಕಿಸುವ ರಮಣೀಯ ನೋಟ
ಕಾಡಾನೆಗಳು ಬೆಟ್ಟದ ಮೇಲಿನ ದೇಗುಲದ ಆವರಣಕ್ಕೆ ಲಗ್ಗೆಯಿಡುತ್ತವೆ. ಕೆಲವು ವರ್ಷಗಳ ಹಿಂದೆ ಕಾಡಾನೆಯೊಂದು ಪ್ರತಿದಿನವೂ ದೇವಾಲಯಕ್ಕೆ ತೆರಳಿ ನಮಿಸಿ ಹೋಗುತ್ತಿದ್ದ ದೃಶ್ಯ ಕಂಡುಬಂದಿತ್ತು. ಇನ್ನು ದೇವಾಲಯ ಆವರಣದಲ್ಲಿ ಅಡ್ಡಾಡುತ್ತಿದ್ದರೆ ತಂಗಾಳಿ ನಮ್ಮನ್ನು ಪುಳಕಗೊಳಿಸಿಬಿಡುತ್ತದೆ. ಈಗಂತೂ ಪ್ರವಾಸಿಗರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಲಗ್ಗೆಯಿಡುತ್ತಲೇ ಇದ್ದಾರೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಬಗ್ಗೆ ಹೇಳಬೇಕೆಂದರೆ ಇದು ಸುಮಾರು 1,450 ಅಡಿ ಎತ್ತರದಲ್ಲಿದ್ದು, ಇಲ್ಲಿ ಶ್ರೀ ಗೋಪಾಲಸ್ವಾಮಿಯ ಸುಂದರ ದೇಗುಲವಿರುವುದು ವಿಶೇಷವಾಗಿದೆ. ಚಾರಣ ಪ್ರಿಯರಿಗೆ ಹುರುಪಿನ ತಾಣವಾಗಿಯೂ, ನಿಸರ್ಗ ಪ್ರೇಮಿಗಳಿಗೆ ಮುದ ನೀಡುವ, ಭಕ್ತರಿಗೆ ಇಷ್ಟಾರ್ಥ ನೆರವೇರಿಸುವ ಕ್ಷೇತ್ರವಾಗಿದೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ. ಪ್ರಮುಖ ಪ್ರವಾಸಿ ತಾಣವಾಗಿರುವ ಇಲ್ಲಿಗೆ ಸದಾ ಒತ್ತಡಗಳಿಂದ, ಪೇಟೆ, ಪಟ್ಟಣಗಳ ಗೌಜುಗದ್ದಲಗಳಲ್ಲಿ ಬದುಕು ಕಟ್ಟಿಕೊಂಡವರು ಬಂದು ಹಿಮದಿಂದ ಆವೃತವಾದ ಬೆಟ್ಟದ ರಮಣೀಯ ನೋಟವನ್ನು ಕಣ್ತುಂಬಿಕೊಂಡು ಹಿಂದಿರುಗುತ್ತಾರೆ.
ಗೋವರ್ಧನಗಿರಿ ಗೋಪಾಲಸ್ವಾಮಿ ಬೆಟ್ಟವಾಯಿತು
ಅತೀ ಎತ್ತರದ ವಿಶಾಲ ಪ್ರದೇಶವನ್ನು ಹೊಂದಿ ತಂಗಾಳಿಯೊಂದಿಗೆ ಮುಂಜಾನೆ ಹಾಗೂ ಸಂಜೆ ಸದಾ ಹಿಮದಿಂದ ಆವೃತವಾಗುವುದು ಈ ಬೆಟ್ಟದ ವಿಶೇಷವಾಗಿದೆ. ಜೊತೆಗೆ ಇಲ್ಲಿ ಗೋಪಾಲಸ್ವಾಮಿ ನೆಲೆ ನಿಂತಿದ್ದಾನೆ. ಹೀಗಾಗಿ ಹಿಮ ಮತ್ತು ಗೋಪಾಲಸ್ವಾಮಿ ಸೇರಿ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರು ಬಂದಿದೆ ಎಂದರೆ ತಪ್ಪಾಗಲಾರದು.
ಆದರೆ ಈ ಬೆಟ್ಟಕ್ಕೆ ಗೋಪಾಲಸ್ವಾಮಿ ಬೆಟ್ಟ ಎಂಬ ಹೆಸರು ಹೇಗೆ ಬಂತೆಂಬುದಕ್ಕೆ ಪ್ರಚಲಿತದಲ್ಲಿರುವ ಕೆಲವರು ಕತೆಗಳನ್ನು ನಮ್ಮ ಮುಂದೆ ಬಿಚ್ಚಿಡುತ್ತಾರೆ. ಈ ಬೆಟ್ಟಕ್ಕೆ ಹಿಂದೆ ಗೋವರ್ಧನಗಿರಿ ಎನ್ನುತ್ತಿದ್ದರಂತೆ. ಇದಕ್ಕೆ ಕಾರಣ ಬೆಟ್ಟ ದೂರದಿಂದ ನೋಡಲು ಹಸುವಿನ ರೀತಿ ಕಾಣುತ್ತದೆಯಂತೆ. ಅಷ್ಟೇ ಅಲ್ಲದೆ ಹಸಿರ ಸಂಪತ್ತಿನಿಂದ ಕಂಗೊಳಿಸುತ್ತಿದ್ದ ಬೆಟ್ಟಕ್ಕೆ ಹಿಂದಿನ ಕಾಲದಲ್ಲಿ ಗೋಪಾಲಕರು ದನ ಮೇಯಿಸಲು ಬರುತ್ತಿದ್ದರಂತೆ. ಆಗಿನಿಂದ ಇದು ಗೋವರ್ಧನಗಿರಿ ಗೋಪಾಲಸ್ವಾಮಿ ಬೆಟ್ಟವಾಯಿತಂತೆ.
ಹೊಯ್ಸಳರ ಕಾಲದ ದೇವಾಲಯ
ಗೋಪಾಲಸ್ವಾಮಿ ಬೆಟ್ಟವು ತ್ರಯಂಬಕಾದ್ರಿ, ನೀಲಾದ್ರಿ, ಮಂಗಳಾದ್ರಿ, ಶಂಖರಾದ್ರಿಗಿರಿ, ಹಂಸಾದ್ರಿ, ಗರುಡಾದ್ರಿ, ಪಲ್ಲವಾದ್ರಿ, ಮಲ್ಲಿಕಾರ್ಜುನಗಿರಿ ಮೊದಲಾದ ಬೆಟ್ಟಗಳಿಂದ ಸುತ್ತುವರೆದಿದ್ದು, ಹಂಸತೀರ್ಥ, ಪದ್ಮತೀರ್ಥ, ಶಂಖ ತೀರ್ಥ, ಚಕ್ರ ತೀರ್ಥ, ಗದಾ ತೀರ್ಥ, ಶಜ್ಞಾತೀರ್ಥ, ವನಮೂಲಿಕಾ ತೀರ್ಥ, ತೊಟ್ಲು ತೀರ್ಥ ಎಂಬ ಅಷ್ಟ ತೀರ್ಥಗಳಿವೆ. ಮಕ್ಕಳಿಲ್ಲದವರು ತೊಟ್ಲು ತೀರ್ಥದಲ್ಲಿ ಸ್ನಾನ ಮಾಡಿದರೆ ಮಕ್ಕಳಾಗುತ್ತವೆಂಬ ನಂಬಿಕೆಯೂ ಇಲ್ಲಿದೆ.
ಇಲ್ಲಿರುವ ಹಿಮವದ್ ಗೋಪಾಲಸ್ವಾಮಿ ದೇಗುಲದ ಬಗ್ಗೆ ಹೇಳುವುದಾದರೆ ಇದಕ್ಕೆ ಸುಮಾರು ಏಳು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ ಎನ್ನಲಾಗಿದೆ. ಈ ಇತಿಹಾಸದ ಪ್ರಕಾರ ಹೊಯ್ಸಳ ದೊರೆ ಚೋಳ ಬಲ್ಲಾಳ ಈ ದೇವಾಲಯವನ್ನು ನಿರ್ಮಿಸಿದ್ದಾನೆ ಎಂದು ಹೇಳುತ್ತಿದ್ದಾರೆ. ಆದರೆ ಬಳಿಕ ದಿನಕಳೆದಂತೆ ಮೈಸೂರಿನ ಒಡೆಯರ ಕಾಲದಲ್ಲಿ ಇದನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲಾಯಿತು ಎನ್ನಲಾಗಿದೆ.
ದೇಗುಲದಲ್ಲಿ ರುಕ್ಮಿಣಿ, ಸತ್ಯಭಾಮೆಯರ ಸಹಿತ ಇಲ್ಲಿ ನೆಲೆಸಿರುವ ಶ್ರೀ ಕೃಷ್ಣನನ್ನು ಸಂತಾನ ಗೋಪಾಲಕೃಷ್ಣ ಅಂತಲೂ ಕರೆಯಲಾಗುತ್ತದೆ. ಇಲ್ಲಿನ ಮೂಲ ಮೂರ್ತಿಯನ್ನು ಅಗಸ್ತ್ಯ ಮಹರ್ಷಿಗಳು ಪ್ರತಿಷ್ಠಾಪಿಸಿದ್ದಂತೆ. ಒಂದೇ ಸುತ್ತುಪೌಳಿಯಲ್ಲಿ ನಿರ್ಮಾಣ ಆಗಿರುವ ದೇವಾಲಯ ವಿಶಾಲ ಆವರಣವನ್ನು ಹೊಂದಿದ್ದು, ಮುಖಮಂಟಪದಲ್ಲಿ ದಶಾವತಾರದ ಕೆತ್ತನೆಗಳು, ಬಲಿಪೀಠ, ಧ್ವಜ ಸ್ತಂಭಗಳು ಗಮನಸೆಳೆಯುತ್ತವೆ.
ಖಾಸಗಿ ವಾಹನಗಳಿಗೆ ಅವಕಾಶವಿಲ್ಲ
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ತನ್ನದೇ ಮಹತ್ವ ಹಾಗೂ ಸಂಪ್ರಾದಾಯವನ್ನು ಉಳಿಸಿಕೊಂಡು ಬಂದಿದೆ. ಅರಣ್ಯ ಇಲಾಖೆ ಈ ಪ್ರದೇಶವನ್ನು ವನ್ಯಜೀವಿ 1972ರ ಅನ್ವಯ ವನ್ಯಜೀವಿ ವಲಯ ಎಂದು ಘೋಷಣೆ ಮಾಡಿದ್ದು, ಭಾರತದಲ್ಲಿ ಅತೀ ಹೆಚ್ಚು ಹುಲಿ ಹೊಂದಿರುವ ಅರಣ್ಯದ ಪಟ್ಟಿಯನ್ನು ಈ ಬೆಟ್ಟವೂ ಕೂಡ ಒಂದಾಗಿದೆ.
ಹಾಗೆಯೇ ರಾಜ್ಯ-ಹೊರರಾಜ್ಯಗಳ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಈ ತಾಣಕ್ಕೆ ಯಾರೇ ಬಂದರೂ ಅವರದೇ ಭಾಷೆಯಲ್ಲಿ ಇಲ್ಲಿ ಕಾರ್ಯನಿರ್ವಹಿಸುವ ಅರ್ಚಕ ವೃಂದ ಮಾಹಿತಿ ನೀಡುತ್ತದೆ ಎನ್ನುವುದೇ ವಿಶೇಷವಾಗಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿಗೆ ಸಮೀಪವಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ರಾಜಧಾನಿ ಬೆಂಗಳೂರಿನಿಂದ 220 ಕಿಲೋ ಮೀಟರ್ ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನಿಂದ 74 ಕಿ.ಮೀ. ದೂರದಲ್ಲಿದೆ. ಗುಂಡ್ಲುಪೇಟೆಯಿಂದ 20 ಕಿ.ಮೀ. ಊಟಿ ರಸ್ತೆಯಲ್ಲಿ ಸಾಗಿದರೆ ಅಲ್ಲಿ ಹಂಗಳ ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಬಲಗಡೆ ಸಾಗಿದರೆ ಶ್ರೀ ಗೋಪಾಲಸ್ವಾಮಿ ಬೆಟ್ಟವನ್ನು ತಲುಪಬಹುದು. ಇಲ್ಲಿಗೆ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ. ಪ್ರವಾಸಿಗರಿಗಾಗಿ ಸರ್ಕಾರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ವಇಲ್ಲಿಗೆ ಪ್ರವೇಶ ನೀಡುವ ಸಮಯದ ವಿವರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ಮುನ್ನ ಸಮೀಪದ ಹಂಗಳ ಗ್ರಾಮದಲ್ಲಿ ತಮಗೆ ಬೇಕಾದ ತಿಂಡಿ ತಿನಿಸುಗಳನ್ನು ತೆಗೆದುಕೊಳ್ಳಬಹುದು. ಬೆಟ್ಟದಲ್ಲಿ ಯಾವುದೇ ತಿನಿಸುಗಳು ಸಿಗುವುದಿಲ್ಲ. ಜೊತೆಗೆ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಿದ್ದು, ಕಸಗಳನ್ನು ಎಲ್ಲೆಂದರಲ್ಲಿ ಎಸೆಯದೆ ಸ್ವಚ್ಛತೆಗೆ ಕೈಜೋಡಿಸಬೇಕಿದೆ. ಮುಖ್ಯವಾಗಿ ಗಮನಿಸಬೇಕಾದ ವಿಚಾರ ಏನೆಂದರೆ ಹೊತ್ತಲ್ಲ ಹೊತ್ತಿನಲ್ಲಿ ಇಲ್ಲಿಗೆ ಪ್ರವೇಶವಿಲ್ಲ. ಬೆಳಗ್ಗೆ 8 ರಿಂದ ಸಂಜೆ 4.30ರೊಳಗೆ ತೆರಳಲು ಅವಕಾಶ ಮಾಡಿಕೊಡಲಾಗಿದೆ.












Click it and Unblock the Notifications