ಈ ದೇವಾಲಯದಲ್ಲಿ ಪ್ರಾರ್ಥಿಸಿದರೆ ಮಳೆ ಖಚಿತ: ಕಾಫಿ ಬೆಳೆಗಾರರು ನಂಬಿದ ಕ್ಷೇತ್ರದ ವಿಶೇಷತೆಯೇನು?

ಮಡಿಕೇರಿ, ಮಾರ್ಚ್ 04: ಕೊಡಗಿನ ಕಾಫಿ ಬೆಳೆಗಾರರು ಈ ಸಮಯದಲ್ಲಿ ಮಳೆಯನ್ನು ನಿರೀಕ್ಷೆ ಮಾಡುತ್ತಾರೆ. ಕಾಫಿ ಕೊಯ್ಲು ಆದ ಬಳಿಕ ಮಾರ್ಚ್ ತಿಂಗಳಲ್ಲಿ ಮಳೆ ಸುರಿದರೆ ಕಾಫಿಗಿಡಗಳಲ್ಲಿ ಮೊಗ್ಗು ಹೂವಾಗಿ ಮುಂದಿನ ವರ್ಷಕ್ಕೆ ಉತ್ತಮ ಫಸಲು ಪಡೆಯಲು ಸಹಕಾರಿಯಾಗುತ್ತದೆ. ಸಾಮಾನ್ಯವಾಗಿ ಇಷ್ಟರಲ್ಲೇ ಮಳೆ ಸುರಿಯುತ್ತಿತ್ತು. ಆದರೆ ಇದುವರೆಗೆ ಮಳೆ ಬರುವ ಲಕ್ಷಣಗಳು ಕಾಣದ ಹಿನ್ನಲೆಯಲ್ಲಿ ಮಳೆಗಾಗಿ ದೇವರಿಗೆ ಮೊರೆಹೋಗುವುದು ಅನಿವಾರ್ಯವಾಗಿದೆ.

ಕೊಡಗಿನಲ್ಲಿ ಮಳೆಗಾಗಿ ಮೊರೆಹೋಗುವುದು ಇವತ್ತು ನಿನ್ನೆಯದಲ್ಲ. ಕೆಲವು ಅರಣ್ಯ ಪ್ರದೇಶಗಳಲ್ಲಿ ನಿಸರ್ಗ ನಿರ್ಮಿತ ದೇಗುಲಗಳಿದ್ದು, ಇಲ್ಲಿರುವ ಶಿವಲಿಂಗಗಳು ಉದ್ಭವ ಲಿಂಗಗಳಾಗಿವೆ. ಈ ದೇವರನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತಿದ್ದು, ಪ್ರಕೃತಿ ನಡುವೆ ಉದ್ಭವಗೊಂಡು ಪೂಜಿಸಲ್ಪಡುವ ಈ ದೇವರಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಪ್ರಾರ್ಥಿಸಿದರೆ ಮಳೆಯನ್ನು ದೇವರು ದಯಪಾಲಿಸುತ್ತಾನೆ ಎಂಬ ನಂಬಿಕೆಯಿದೆ.

What Are The Speciality of Madikeri Hulithala Botlappa Temple

ಇಂತಹ ನಂಬಿಕೆಯನ್ನು ಹೊಂದಿರುವ ನಿಸರ್ಗ ದೇಗುಲದ ಪೈಕಿ ಹುಲಿತಾಳ ಬೊಟ್ಲಪ್ಪ ದೇಗುಲವೂ ಒಂದಾಗಿದೆ.

ಇದು ಕೊಡಗಿನ ಮುಖ್ಯಪಟ್ಟಣ ಮಡಿಕೇರಿಯಿಂದ ಸುಮಾರು ಹತ್ತು ಕಿ.ಮೀ. ದೂರಲ್ಲಿದೆ. ಬೆಟ್ಟಗಳ ನಡುವೆ ನಿರ್ಮಾಣಗೊಂಡ ಸುಂದರ ತಾಣವಾಗಿರುವ ಹುಲಿತಾಳವು ಬೃಹತ್ ಬಂಡೆಕಲ್ಲುಗಳಿಂದ ಸೃಷ್ಟಿಕೊಂಡ ಪ್ರಾಕೃತಿಕ ದೇಗುಲವಾಗಿದೆ. ಈ ದೇಗುಲವಿದ್ದ ಸ್ಥಳವು ಹಿಂದೆ ಬೆಟ್ಟಗುಡ್ಡ ಕಾಡುಗಳಿಂದ ಕೂಡಿತ್ತಾದರೂ ಬದಲಾದ ಕಾಲಘಟ್ಟದಲ್ಲಿ ಜನವಸತಿ ಮತ್ತು ಕಾಫಿ ತೋಟಗಳಿಂದ ಆವೃತವಾಗಿದ್ದರೂ ದೇಗುಲದ ಸುತ್ತಲೂ ಇವತ್ತಿಗೂ ಅರಣ್ಯ ಪ್ರದೇಶವಿದೆ.

ಸುತ್ತಮುತ್ತಲ ಜನರ ಪಾಲಿಗೆ ಮಳೆ ದೇವರು

ದೇಗುಲದ ಬಗ್ಗೆ ಹೇಳಬೇಕೆಂದರೆ ಹೆಬ್ಬಂಡೆಗಳು ಒಂದಕ್ಕೊಂದು ಆಧಾರವಾಗಿ ನಿಂತು ಅದರ ನಡುವಿನ ಜಾಗದಲ್ಲಿ ಶಿವಲಿಂಗ ಉದ್ಭವಗೊಂಡಿದೆ. ಈ ದೇಗುಲವನ್ನು ಸ್ಥಳೀಯರು ಬೊಟ್ಲಪ್ಪ ಎಂದು ಕರೆಯುತ್ತಾರೆ. ಈಶ್ವರ ಇಲ್ಲಿನ ಆರಾಧ್ಯ ದೈವನಾಗಿದ್ದು, ಸುತ್ತಮುತ್ತಲಿನವರ ಪಾಲಿಗೆ ಮಳೆ ದೇವರು ಕೂಡ ಹೌದು. ದೇವಾಲಯದ ಪ್ರಾಂಗಣದ ಮುಂದೆ ವಿಶಾಲ ಬಂಡೆಯಿದ್ದು ಅದರ ನಡುವೆ ಒಬ್ಬ ವ್ಯಕ್ತಿ ಮಾತ್ರ ತೂರಿಕೊಂಡು ಹೋಗುವಷ್ಟು ಸ್ಥಳವಿದ್ದು ಅದರೊಳಗೆ ನಡೆದರೆ ವಿಶಾಲ ಸ್ಥಳವಿದೆ. ಅದುವೇ ದೇಗುಲದ ಗರ್ಭಗುಡಿಯಾಗಿದೆ. ಇಲ್ಲಿ ಉದ್ಭವ ಲಿಂಗವಿದ್ದು, ಶಿವಪಾರ್ವತಿಯರ ಮೂರ್ತಿಯಿದ್ದು ಇದಕ್ಕೆ ಕೊಡಗಿನ ರಾಜರ ಕಾಲದಿಂದಲೇ ನಿತ್ಯಪೂಜೆ ನಡೆಯುತ್ತಾ ಬರುತ್ತಿದೆ.

What Are The Speciality of Madikeri Hulithala Botlappa Temple

ಇಲ್ಲಿಗೆ ತೆರಳುವವರಿಗೆ ಪ್ರಕೃತಿಯ ಸುಂದರ ನೋಟ ಲಭ್ಯವಾಗುತ್ತದೆ. ದಟ್ಟ ಕಾನನದ ನಡುವೆ ಬೀಸುವ ತಂಗಾಳಿ ಮುದನೀಡಿದರೆ ಹೆಬ್ಬಂಡೆಗಳ ನಡುವೆ ಹರಿಯುವ ಝರಿ ಖುಷಿಕೊಡುತ್ತದೆ. ಇದಾರಚೆಗೆ ಹಕ್ಕಿಗಳ ಚಿಲಿಪಿಲಿ ಹೊರತು ಪಡಿಸಿ ಸದ್ದುಗದ್ದಲವಿಲ್ಲದ ಪ್ರಶಾಂತತೆ ಮೈಮನವನ್ನು ಮುದಗೊಳಿಸುತ್ತದೆ. ಈ ತಾಣದ ಬಗ್ಗೆ ತಿಳಿಯುತ್ತಾ ಹೋದರೆ ಇದರ ಹಿಂದಿನ ರೋಚಕ ಇತಿಹಾಸಗಳು ಹೊರಬರುತ್ತವೆ.

ದೇಗುಲ ಪತ್ತೆಯಾದದ್ದು ಹೇಗೆ ಗೊತ್ತಾ?

ಹಿಂದಿನ ಕಾಲದಲ್ಲಿ ಕೊಡಗನ್ನು ಆಳುತ್ತಿದ್ದ ರಾಜ ಬೇಟೆಯಾಡುವ ಸಲುವಾಗಿ ಈ ಸ್ಥಳಕ್ಕೆ ಬರುತ್ತಾನೆ. ದಟ್ಟ ಕಾಡುಗಳಿಂದ ಕೂಡಿದ ಸ್ಥಳದಲ್ಲಿ ಬೇಟೆಗಾಗಿ ಮುಂದೆ ಸಾಗುತ್ತಿರಬೇಕಾದರೆ ಅಚ್ಚರಿಯ ದೃಶ್ಯವನ್ನು ಕಾಣುತ್ತಾನೆ. ಅದು ಏನೆಂದರೆ ಘರ್ಜಿಸುತ್ತಾ ಬಂದ ಹುಲಿಯೊಂದು ಈ ಶಿಲಾ ದೇಗುಲದ ಬಳಿ ಮಂಡಿಯೂರಿ ನಮಿಸಿ ಮುಂದೆ ಸಾಗುತ್ತದೆ. ಹುಲಿ ನಮಿಸಿದ ಸ್ಥಳದಲ್ಲಿ ಏನೋ ಮಹಿಮೆಯಿದೆ ಎಂಬುದು ರಾಜನ ಅರಿವಿಗೆ ಬರುತ್ತದೆ. ಹೀಗಾಗಿ ಹುಲಿ ಹೊರಟು ಹೋದ ಬಳಿಕ ಅಲ್ಲಿಗೆ ಹೋಗಿ ನೋಡಿದ ರಾಜನಿಗೆ ಹೆಬ್ಬಂಡೆಗಳ ನಡುವೆ ಉದ್ಭವ ಲಿಂಗ ಕಾಣುತ್ತದೆ. ಕೂಡಲೇ ಇಲ್ಲಿನ ಮಹಿಮೆಯನ್ನು ಅರಿತು ಅರ್ಚಕರನ್ನು ನೇಮಿಸಿ ನಿತ್ಯವೂ ಪೂಜೆ ಮಾಡುವ ವ್ಯವಸ್ಥೆ ಮಾಡಿಸುತ್ತಾನೆ. ಅಂದಿನಿಂದ ಇಂದಿನವರೆಗೂ ಇಲ್ಲಿಗೆ ಪೂಜಾ ಕೈಂಕರ್ಯಗಳು ನಡೆಯುತ್ತಲೇ ಬರುತ್ತದೆ.

What Are The Speciality of Madikeri Hulithala Botlappa Temple

ಅವತ್ತು ನೇಮಕವಾದ ಅರ್ಚಕರ ಕುಟುಂಬ ಇಂದಿಗೂ ಇದ್ದು ಈಗಿನ ತಲೆಮಾರಿನವರು ಪೂಜಾ ಕೈಂಕರ್ಯಗಳನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಇನ್ನು ಇಲ್ಲಿಗೆ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಮನೆಗಳಲ್ಲಿ ಪ್ರಾಣಿಗಳ ಸಂತತಿ ವೃದ್ಧಿಯಾಗದಿದ್ದರೆ ಹರಕೆ ಮಾಡಿಕೊಂಡು ಮಣ್ಣಿನ ನಾಯಿ, ಹಸು ಮುಂತಾದವುಗಳನ್ನು ಅರ್ಪಿಸುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಹಲವು ಮಣ್ಣಿನ ಪ್ರಾಣಿಗಳ ಮೂರ್ತಿಗಳು ಇಲ್ಲಿ ಕಂಡು ಬರುತ್ತವೆ.

ಋಷಿ ಮುನಿಗಳು ತಪಸ್ಸು ಮಾಡಿದ ಸ್ಥಳ

ಹಿಂದೆ ಋಷಿ ಮುನಿಗಳು ಈ ತಾಣದಲ್ಲಿ ತಪ್ಪಸ್ಸು ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ದೇವಾಲಯದ ಎಡಬದಿಯ ಬಂಡೆಯ ತಳಭಾಗದಲ್ಲಿ ಗುಹೆಯೊಂದನ್ನು ಕಾಣಬಹುದಾಗಿದ್ದು, ಇದು ಹುಲಿಯ ವಾಸಸ್ಥಾನವೆಂಬ ನಂಬಿಕೆಯೂ ಇದೆ. ಬಹುಶಃ ಹಿಂದೆ ಹುಲಿಯ ವಾಸಸ್ಥಾನವಾಗಿದ್ದ ಹುಲಿತಾಣ ಕ್ರಮೇಣ ಹುಲಿತಾಳವಾಗಿರಬಹುದೇನೋ? ಇಲ್ಲಿನ ಈಶ್ವರನಿಗೆ ಪ್ರತಿನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತವೆಯಾದರೂ ಶಿವರಾತ್ರಿ ಸಂದರ್ಭ ವಿಶೇಷ ಪೂಜೆಗಳು ನಡೆಯುತ್ತವೆ.

ಹುಲಿತಾಳದ ಬೊಟ್ಲಪ್ಪ ದೇಗುಲಕ್ಕೆ ತೆರಳುವವರು ಮಡಿಕೇರಿಯಿಂದ ಚೆಟ್ಟಳ್ಳಿ ಮಾರ್ಗವಾಗಿ ಹೊರಟರೆ ಸುಮಾರು ಎಂಟು ಕಿ.ಮೀ. ದೂರದಲ್ಲಿ ಕಡಗದಾಳು ಸಿಗುತ್ತದೆ. ಅಲ್ಲಿಂದ ಬಲಕ್ಕೆ ಕಗ್ಗೋಡ್ಲು ಕಡೆಗಿನ ರಸ್ತೆಯಲ್ಲಿ ಸ್ವಲ್ಪ ದೂರ ಸಾಗಿ ಮತ್ತೆ ಎಡಕ್ಕೆ ತಿರುಗಬೇಕು ಹೀಗೆ ಸುಮಾರು ಎರಡು ಕಿ.ಮೀ.ನಷ್ಟು ಸಾಗಿದರೆ ಒಂದೆಡೆ ಕಾಫಿ ಏಲಕ್ಕಿ ತೋಟ ಮತ್ತು ಅರಣ್ಯಗಳ ಹಚ್ಚಹಸಿರಿನ ನಿಸರ್ಗದೊಳಗೆ ಹುಲಿತಾಳದ ಬೊಟ್ಲಪ್ಪ ಶಿಲಾದೇಗುಲದ ದರ್ಶನವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+