Weekend Getaway: ಚಾಮರಾಜನಗರ ಜಿಲ್ಲೆಯ ಕರಿವರದರಾಜಸ್ವಾಮಿ ಬೆಟ್ಟದಲ್ಲಿವೆ ಮನಮೋಹಕ ದೃಶ್ಯಗಳು, ತಲುಪುವುದೇಗೆ?, ಮಾಹಿತಿ
ಚಾಮರಾಜನಗರ, ಸೆಪ್ಟೆಂಬರ್, 08: ಕೇರಳ ಮತ್ತು ತಮಿಳುನಾಡಿನೊಂದಿಗೆ ಗಡಿ ಹಂಚಿಕೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಹಲವು ಪ್ರವಾಸಿತಾಣಗಳಿದ್ದರೂ ಹೆಚ್ಚಿನವು ಜಿಲ್ಲೆಯ ಮುಖ್ಯಕೇಂದ್ರ ಚಾಮರಾಜನಗರ ಪಟ್ಟಣದಿಂದ ದೂರವಿರುವ ಕಾರಣ ತಕ್ಷಣಕ್ಕೆ ಹೋಗಿ ಬರುವುದು ಕಷ್ಟವಾಗುತ್ತದೆ. ಹೀಗಾಗಿ ಕೆಲವೊಮ್ಮೆ ಚಾಮರಾಜನಗರಕ್ಕೆ ಬರುವವರು ಹತ್ತಿರದಲ್ಲಿ ಯಾವುದಾದರು ಪ್ರವಾಸಿ ತಾಣಗಳಿವೆಯಾ ಎಂದು ಕೇಳುವುದುಂಟು. ಹೀಗೆ ಕೇಳುವವರಿಗೆ ಪಟ್ಟಣದ ಹೊರವಲಯದಲ್ಲಿರುವ ಕರಿವರದರಾಜ ಸ್ವಾಮಿಬೆಟ್ಟದತ್ತ ಕೈ ತೋರಿಸಿದರೆ ಅವರು ನಿಸರ್ಗದ ಮಡಿಲಲ್ಲಿ ಒಂದಷ್ಟು ಸಮಯ ಕಳೆಯಲು ಸಾಧ್ಯವಾಗುತ್ತದೆ.
ಕರಿವರದರಾಜ ಸ್ವಾಮಿಬೆಟ್ಟದ ಬಗ್ಗೆ ಹೇಳಬೇಕೆಂದರೆ ಇದು ಚಾಮರಾಜನಗರ ಪಟ್ಟಣಕ್ಕೆ ನಾಲ್ಕು ಕಿ.ಮೀ.ದೂರದಲ್ಲಿದ್ದು, ಪಟ್ಟಣಕ್ಕೆ ಮುಕುಟ ಮಣಿಯಂತಿದೆ. ಸಮುದ್ರಮಟ್ಟದಿಂದ 480 ಅಡಿ ಎತ್ತರದ ಈ ಬೆಟ್ಟವನ್ನು ಹಿಂದೆ ವೃದ್ದಾಚಲ ಪರ್ವತ ಸ್ತೋಮವೆಂದು ಕರೆಲಾಗುತ್ತಿತ್ತಂತೆ. ಈ ಬೆಟ್ಟದ ಮಧ್ಯ ಭಾಗದಲ್ಲಿ ಸಂಜೀವಿನಿ ಆಂಜನೇಯಸ್ವಾಮಿ ಗುಡಿ ಇದೆ. ಜೊತೆಗೆ ಹೊಯ್ಸಳರ ಕಾಲದ 2.5 ಅಡಿ ಎತ್ತರದ ಕರಿವರದರಾಜ ವೆಂಕಟರಮಣಸ್ವಾಮಿಯ ಸುಂದರ ಮೂರ್ತಿಯೂ ಇಲ್ಲಿದೆ. ಈ ದೇವಸ್ಥಾನ ಕ್ರಿ.ಶ. 1688ರಲ್ಲಿ ನಿರ್ಮಾಣವಾಗಿರಬಹುದು ಅಥವಾ ಜೀರ್ಣೊದ್ದಾರವಾಗಿರಬಹುದೆಂದು ಹೇಳಲಾಗಿದೆ.

ಬೆಟ್ಟವೇರಲು ಸುಮಾರು 400 ಮೆಟ್ಟಿಲುಗಳಿವೆ. ಈ ಮೆಟ್ಟಿಲುಗಳನ್ನು ಶತಮಾನಗಳ ಹಿಂದೆ ಭೇಟಿ ನೀಡಿದ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದರೆಂದು ಹೇಳಲಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರು ಮತ್ತು ಭಕ್ತರಿಗೆ ಅನುಕೂಲವಾಗುವಂತೆ ಕೆಲವು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಆ ಮೂಲಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಗೊಳಿಸುವ ಕೆಲಸ ಮಾಡಲಾಗಿದೆ. ಬೆಟ್ಟದಲ್ಲಿ ಸುತ್ತಲಿನ ಎಡಬೆಟ್ಟ ಹಾಗೂ ಪ್ರಕೃತಿ ಸೌಂದರ್ಯ ವೀಕ್ಷಿಸುವ ಸಲುವಾಗಿ ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿದ್ದು, ಇಲ್ಲಿಂದ ಕಂಡು ಬರುವ ದೃಶ್ಯ ಮನಮೋಹಕವಾಗಿದೆ.
ಸಾಮಾನ್ಯವಾಗಿ ಕೆಲಸದ ಒತ್ತಡದಲ್ಲಿ ಸಿಲುಕಿದವರು ತಮ್ಮೆಲ್ಲ ಜಂಜಾಟಗಳನ್ನು ಮರೆತು ಒಂದಷ್ಟು ಹೊತ್ತು ಸಂತೋಷವಾಗಿದ್ದು ಬರಲು ನಿಸರ್ಗ ರಮಣೀಯ ತಾಣಗಳಿಗೆ ಭೇಟಿ ನೀಡುವುದು ಈಗ ಹೆಚ್ಚಾಗಿದೆ. ಏಕೆಂದರೆ ನಮ್ಮೆಲ್ಲ ಮಾನಸಿಕ ವೇದನೆಯನ್ನು ದೂರಗೊಳಿಸುವ ಅದ್ಭುತ ಶಕ್ತಿಯಿರುವುದು ಪ್ರಕೃತಿಗೆ ಮಾತ್ರ. ಹೀಗಾಗಿ ಪೇಟೆಪಟ್ಟಣದ ಗೌಜು ಗದ್ದಲ, ಕೆಲಸ, ಕಾರ್ಯಗಳ ಒತ್ತಡದಲ್ಲಿ ಸಿಲುಕಿದವರು ಒಂದಷ್ಟು ಸಮಯವನ್ನು ಯಾವುದಾದರೂ ಸುಂದರ ರಮಣೀಯ ಸ್ಥಳದಲ್ಲಿ ಕಳೆದು ಬರಬೇಕೆಂದು ಆಲೋಚಿಸುತ್ತಾರೆ. ಅಂತಹವರಿಗೆ ಕರಿವರದರಾಜ ಸ್ವಾಮಿಬೆಟ್ಟ ವರದಾನವಾಗಿ ಗೋಚರಿಸಿದರೆ ಅಚ್ಚರಿಪಡಬೇಕಾಗಿಲ್ಲ.
ಹಾಗೆನೋಡಿದರೆ ಚಾಮರಾಜನಗರ ಜಿಲ್ಲೆಯಲ್ಲಿ ದೇವರ ಸೃಷ್ಠಿಯೋ? ಪ್ರಕೃತಿಯ ವರದಾನವೋ ಒಂದಲ್ಲ ಒಂದು ರೀತಿಯಲ್ಲಿ ಸುಂದರ ಪ್ರಕೃತಿಯ ರಮಣೀಯ ತಾಣಗಳು ಮನೆ ಮಾಡಿವೆ. ಅವು ಐತಿಹಾಸಿಕ ಮತ್ತು ಪೌರಾಣಿಕವಾಗಿಯೂ ಗಮನಸೆಳೆಯುತ್ತವೆ. ಜೊತೆಗೆ ವನ್ಯಧಾಮಗಳು ಪರಿಸರ ಪ್ರೇಮಿಗಳಿಗೆ ಉತ್ಸಾಹ ತುಂಬುತ್ತಿವೆ. ಇವುಗಳ ನಡುವೆ ಕರಿವರದರಾಜಸ್ವಾಮಿ ಬೆಟ್ಟದತ್ತ ಬರೀ ಭಕ್ತರು ಮಾತ್ರವಲ್ಲದೆ, ಸ್ಥಳೀಯ ಹಾಗೂ ದೂರದ ಪ್ರವಾಸಿಗರು ಬರುತ್ತಿರುವುದು ಈ ತಾಣ ಖ್ಯಾತಿ ಪಡೆದಿರುವುದಕ್ಕೆ ಸಾಕ್ಷಿಯಾಗಿದೆ.
ಇನ್ನು ನಗರದ ಮತ್ತು ಸುತ್ತಮುತ್ತಲಿನ ನಿಸರ್ಗಪ್ರೇಮಿಗಳಿಗೆ ಇದೊಂದು ವರದಾನ ಎಂದರೂ ತಪ್ಪಾಗಲಾರದು. ಇಲ್ಲಿಗೆ ಬರುವವರು ಒಂದಷ್ಟು ಸಮಯಗಳನ್ನು ಪ್ರಕೃತಿಯ ನಡುವೆ ಕಳೆದು ಹೋಗುತ್ತಾರೆ. ನಿಸರ್ಗ ಚೆಲುವು ಸವಿಯಲು ಬರುವ ಪ್ರವಾಸಿಗರಿಗಾಗಲೀ, ಕರಿವರದರಾಜಸ್ವಾಮಿಯ ದರ್ಶನಕ್ಕೆ ಬರುವ ಭಕ್ತರಿಗಾಗಲೀ ಯಾವುದೇ ತೊಂದರೆಯಾಗದಿರಲಿ ಎಂದು ಬೆಟ್ಟದ ಮೇಲಿರುವ. ನೆಲಬಾವಿಗೆ ಸುರಕ್ಷತೆಯ ದೃಷ್ಠಿಯಿಂದ ಕಬ್ಬಿಣದ ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ಕಲ್ಲುಬಂಡೆಗಳ ಗುಡ್ಡ ಹೊಂದಿರುವ ಇಲ್ಲಿಂದ ನಿಂತು ಇಣುಕಿದರೆ ಸುಂದರ ನಿಸರ್ಗ ರಮಣೀಯ ನೋಟ ನಮ್ಮೆಲ್ಲ ಜಂಜಾಟಗಳನ್ನು ಮರೆಸಿ ಮನಸಿಗೆ ಮುದ ನೀಡುತ್ತದೆ.
ಶ್ರಾವಣ ಮಾಸದಲ್ಲಿ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಈ ಸಮಯದಲ್ಲಿ ಕರಿವರದರಾಜಸ್ವಾಮಿಯ ದರ್ಶನ ಮಾಡಿದರೆ ಇಷ್ಟಾರ್ಥ ಲಭಿಸುತ್ತವೆ ಎಂಬ ನಂಬಿಕೆಯೂ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಹೋಗುತ್ತಾರೆ. ಅದು ಏನೇ ಇರಲಿ ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡಿದವರು ಕರಿವರದರಾಜಸ್ವಾಮಿ ಬೆಟ್ಟಕ್ಕೆ ಹೋಗಲು ಮರೆಯದಿರಿ.












Click it and Unblock the Notifications