
ಕಲಬುರಗಿಯ ಆ ಪ್ರಕೃತಿ ಸೌಂದರ್ಯ ಸವಿಯಲು ಈ ರೈಲು ಏರಿ
ಕಲಬುರಗಿ, ಆಗಸ್ಟ್ 16: ರೈಲು ಪ್ರಯಾಣ ಎಂದರೆ ಒಂದು ರೀತಿ ಮಜಬೂತ್. ಅದರಲ್ಲೂ ವಿಸ್ಟಾಡೋಮ್ ಬೋಗಿಗಳಲ್ಲಿ ಪ್ರಕೃತಿ ಸೌಂದರ್ಯ ಸವಿಯುತ್ತಾ ಸಾಗಿದರೆ ಸ್ವರ್ಗಕ್ಕೆ ಮೂರೇ ಗೇಣು. ಪ್ರಕೃತಿ ಒಡಲಿನಲ್ಲಿ ಸಾಗುವ ರೈಲಿನಲ್ಲಿ ಪರಿಸರದ ಸೌಂದರ್ಯ ಸವಿಯುವುದಕ್ಕೆ ಎರಡು ಕಣ್ಣು ಸಾಲದು. ಕಲಬುರಿ ಮಂದಿಗೆ ಭಾರತೀಯ ರೈಲ್ವೆ ಇದೀಗ ಅಂಥದ್ದೇ ಆಫರ್ ಕೊಟ್ಟಿದೆ.
ಕಲಬುರಗಿ ಜಿಲ್ಲೆಯಲ್ಲಿ ಹಾದು ಹೋಗುವ ಜನಶತಾಬ್ದಿ ರೈಲಿಗೆ ವಿಸ್ಟಾಡೋಮ್ ಕೋಚ್ ಅಳವಡಿಕೆ ಮಾಡಲಾಗಿದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ವಿಸ್ಟಾಡೋಮ್ ಕೋಚ್ ಅನ್ನು ಪುಣೆ ಮತ್ತು ಸಿಕಂದರಾಬಾದ್ ನಡುವೆ ಸಂಚರಿಸುವ ಜನಶತಾಬ್ದಿ ರೈಲಿಗೆ ಅಳವಡಿಸಲಾಗಿದೆ.
ಕರ್ನಾಟಕದಲ್ಲಿ ವಿಸ್ಟಾಡೋಮ್ ರೈಲು; ಮಾರ್ಗ, ದರಪಟ್ಟಿ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ವಿಸ್ಟಾಡೋಮ್ ಕೋಚ್ ಪ್ರಯಾಣಿಕರಿಗೆ ಹೇಗೆ ಖುಷಿ ಕೊಡುವುದು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಜನ ಶತಾಬ್ದಿ ರೈಲ್ವೆ ಸಂಚಾರದ ಮಾರ್ಗದ ಮಾಹಿತಿ
ಪುಣೆ ಮತ್ತು ಸಿಕಂದರಾಬಾದ್ ನಡುವೆ ಸಂಚರಿಸುವ ಜನಶತಾಬ್ದಿ ರೈಲಿಗೆ ವಿಸ್ಟಾಡೋಮ್ ಕೋಚ್ ಅಳವಡಿಕೆ ಮಾಡಲಾಗಿದೆ. ಮಂಗಳವಾರ ಹೊರತುಪಡಿಸಿ ಉಳಿದೆಲ್ಲ ದಿನವೂ ಈ ರೈಲು ಸಂಚರಿಸಲಿದೆ. ಬೆಳಗ್ಗೆ 6 ಗಂಟೆಗೆ ಪುಣೆಯಿಂದ ಹೊರಡುವ ರೈಲು ಅದೇ ದಿನ ಬೆಳಗ್ಗೆ 10.38ರ ಹೊತ್ತಿಗೆ ಕಲಬುರಗಿಗೆ ತಲುಪಲಿದ್ದು, ಮಧ್ಯಾಹ್ನ 2.20ಕ್ಕೆ ಸಿಕಂದರಾಬಾದ್ ಮುಟ್ಟಲಿದೆ. ಇನ್ನು ಅದೇ ದಿನ ಮಧ್ಯಾಹ್ನ 2.45ಕ್ಕೆ ಸಿಕಂದರಾಬಾದ್ ಮೂಲಕ ಹೊರಡುವ ರೈಲು ಸಂಜೆ 5.57ಕ್ಕೆ ವಾಪಸ್ ಕಲಬುರಗಿ ಹಾಗೂ ರಾತ್ರಿ 11.10ರ ಹೊತ್ತಿಗೆ ಪುಣೆಗೆ ತಲುಪಲಿದೆ. ಅಂದರೆ ಒಂದು ದಿನದಲ್ಲಿ ಪುಣೆಯಿಂದ ಸಿಕಂದರಾಬಾದ್ ಹಾಗೂ ಸಿಕಂದರಾಬಾದ್ ನಿಂದ ವಾಪಸ್ ಪುಣೆಗೆ ಪ್ರಯಾಣಿಸಲು ಸಾಧ್ಯವಾಗುತ್ತದೆ.

ವಿಸ್ಟಾಡೋಮ್ ರೈಲು ಹತ್ತಿದವರಿಗೆ ನೋಡಲು ಸಿಗುವುದೇನು?
ಪುಣೆ-ಸಿಕಂದರಾಬಾದ್ ಜನಶತಾಬ್ದಿ ರೈಲು ಏರುವ ಪ್ರಯಾಣಿಕರು ಉಜನಿ ಹಿನ್ನೀರು ಮತ್ತು ಭಿಗ್ವಾನ್ ಬಳಿಯ ಅಣೆಕಟ್ಟೆಯ ವಿಹಂಗಮ ನೋಟವನ್ನು ಸವಿಯಬಹುದು. ಇದರ ಜೊತೆ ವಲಸೆ ಹಕ್ಕಿಗಳಿಗೆ ಫೇಮಸ್ ಆಗಿರುವ ವಿಕರಾಬಾದ್ ಸಮೀಪದ ಅನಂತಗಿರಿ ಬೆಟ್ಟಗಳ ಕಾಡಿನ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳುವ ಅವಕಾಶ ಇರುತ್ತದೆ. ಕಲಬುರಗಿ ಮತ್ತು ಮರತೂರು ನಡುವಿನಲ್ಲಿ ಆಗಾಗ ಗೋಚರಿಸುವ ನವಿಲುಗಳನ್ನು ನೋಡಬಹುದು.

ನಾಲ್ಕು ತಿಂಗಳಿನಲ್ಲಿ 3.99 ಕೋಟಿ ರೂ. ಕಲೆಕ್ಷನ್
ವಿಸ್ಟಾಡೋಮ್ ಕೋಚ್ ಪ್ರಯಾಣಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿಎಸ್ಎಂಟಿ-ಮಡಗಾಂವ್ ಜನಶತಾಬ್ದಿ, ಪ್ರಗತಿ ಎಕ್ಸ್ ಪ್ರೆಸ್, ಡೆಕ್ಕನ್ ಕ್ವೀನ್ ರೈಲುಗಳಿಗೆ ವಿಸ್ಟಾಡೋಮ್ ಕೋಚ್ ಅಳವಡಿಸಲಾಗಿದ್ದು, ಪ್ರಯಾಣಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಳೆದ ನಾಲ್ಕು ತಿಂಗಳಿನಲ್ಲಿ 31821 ಪ್ರಯಾಣಿಕರಿಂದ 3.99 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಇದರಿಂದ ಪ್ರೇರಣೆಯನ್ನು ಪಡೆದುಕೊಂಡು ಪುಣೆ-ಸಿಕಂದರಾಬಾದ್ ರೈಲಿಗೆ ವಿಸ್ಟಾಡೋಮ್ ಕೋಚ್ ಅಳವಡಿಸಲಾಗಿದೆ ಎಂದು ಸೋಲಾಪುರ್ ವಿಭಾಗದ ಮಾಧ್ಯಮ ವಕ್ತಾರರು ತಿಳಿಸಿದ್ದಾರೆ.

ಈ ವಿಸ್ಟಾಡೋಮ್ ರೈಲಿನ ವಿಶೇಷತೆ ಏನು?
ಜನಶತಾಬ್ದಿ ರೈಲಿಗೆ ಅಳವಡಿಸಿರುವ ವಿಸ್ಟಾಡೋಮ್ ಬೋಗಿಯ ಬಹುತೇಕ ಭಾಗ ಪಾರದರ್ಶಕವಾಗಿ ಇರಲಿದೆ. 360 ಡಿಗ್ರಿ ಸೆಲ್ಸಿಯಸ್ ತಿರುಗುವ 44 ಸೀಟ್ ಅನ್ನು ಹೊಂದಿರುತ್ತವೆ. ಒಳಾಂಗಣ ವಿನ್ಯಾಸ ಆಕರ್ಷಕವಾಗಿರಲಿದ್ದು, ವೈಫೈ ಮತ್ತು ಸಿಸಿಟಿವಿ ಸೌಲಭ್ಯವಿರುತ್ತದೆ. ಪ್ರತಿಸೀಟ್ ಎದುರು ಮೊಬೈಲ್ ಚಾರ್ಜರ್ ಹಾಗೂ ಜಿಪಿಎಸ್ ವ್ಯವಸ್ಥೆಯಿತ್ತು. ಫ್ರಿಡ್ಜ್, ಎಲ್ಇಡಿ ಪರದೆ, ಲಗೇಜ್ ಬಾಕ್ಸ್, ಕಾಫಿ ತಯಾರಿಕೆ ಯಂತ್ರ, ವಾಶ್ ಬೇಸಿನ್ ಸೌಕರ್ಯಗಳನ್ನು ಹೊಂದಿರುತ್ತದೆ.