Vande Bharat Express: ಪ್ರಾಯೋಗಿಕ ಸಂಚಾರ ಮುಗಿದು 11 ತಿಂಗಳು, ರೈಲು ಮಾತ್ರ ಇನ್ನೂ ಬಂದಿಲ್ಲ
ಬೆಳಗಾವಿ, ಅಕ್ಟೋಬರ್ 23: ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂಬ ಕೂಗಿದೆ ರೈಲ್ವೆ ಇಲಾಖೆ ಬೇಗನೇ ಸ್ಪಂದಿಸಿತು. ರೈಲಿನ ಪ್ರಾಯೋಗಿಕ ಸಂಚಾರವೂ ಸಹ ಯಶಸ್ವಿಯಾಗಿ ನಡೆಯಿತು. ಆದರೆ ರೈಲು ಮಾತ್ರ ಬರಲಿಲ್ಲ. ಬೆಳಗಾವಿಗೆ ವಂದೇ ಭಾರತ್ ರೈಲು ಯಾವಾಗ? ಎಂದು ಜನರು ಪ್ರಧಾನಿ ನರೇಂದ್ರ ಮೋದಿ ತನಕ ಎಲ್ಲರನ್ನೂ ಕೇಳಿ ಸುಮ್ಮನಾಗಿದ್ದಾರೆ. ರೈಲು ಬರುತ್ತದೆ ಎಂದು 11 ತಿಂಗಳಿನಿಂದ ಕಾದು ಕುಳಿತಿದ್ದಾರೆ.
ರೈಲು ಸಂಖ್ಯೆ 20662/ 20661 ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ಬಿಳಿ ಬಣ್ಣದ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಇದನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿತ್ತು. ರೈಲ್ವೆ ಇಲಾಖೆ ಇದಕ್ಕೆ ಒಪ್ಪಿತು. ನವೆಂಬರ್ 21, 2023ರಂದು ಪ್ರಾಯೋಗಿಕ ಸಂಚಾರ ನಡೆಯಿತು.

ಕೆಎಸ್ಆರ್ ಬೆಂಗಳೂರಿನಿಂದ ಹೊರಟ ರೈಲು ಬೆಳಗಾವಿಗೆ ಯಶಸ್ವಿಯಾಗಿ ತಲುಪಿತು. ಕೆಲವೇ ದಿನಗಳಲ್ಲಿ ವಂದೇ ಭಾರತ್ ರೈಲು ಬೆಳಗಾವಿಗೆ ಆಗಮಿಸಲಿದೆ ಎಂದು ಜನರು ಸಹ ಸಂತಸಗೊಂಡಿದ್ದರು. ಆದರೆ ರೈಲು ಸಂಚಾರ ಆರಂಭವಾಗಲೇ ಇಲ್ಲ. ಈ ಕುರಿತು ಜನರು ಸಂಸದ ಜಗದೀಶ್ ಶೆಟ್ಟರ್ ಇಂದ ಪ್ರಾರಂಭಿಸಿ ಪ್ರಧಾನಿ ನರೇಂದ್ರ ಮೋದಿ ತನಕ ಮನವಿ ಸಲ್ಲಿಸಿದ್ದಾರೆ. ಆದರೆ ರೈಲು ಇನ್ನೂ ಬಂದಿಲ್ಲ.
ಕೆಲವೇ ತಿಂಗಳ ಹಿಂದೆ ತುಮಕೂರು ಸಂಸದ ವಿ. ಸೋಮಣ್ಣ ರೈಲ್ವೆ ಖಾತೆ ರಾಜ್ಯ ಸಚಿವರಾದ ಬಳಿಕ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲಿಗೆ ತುಮಕೂರಿನಲ್ಲಿ ಹೆಚ್ಚುವರಿ ನಿಲುಗಡೆಯನ್ನು ನೀಡಿದ್ದಾರೆ. ಆದರೆ ರೈಲು ಸಂಚಾರ ಬೆಳಗಾವಿಗೆ ಯಾವಾಗ ಆರಂಭವಾಗುತ್ತದೆ? ಎಂದು ಅವರು ಗುಟ್ಟುಬಿಟ್ಟುಕೊಟ್ಟಿಲ್ಲ.
ಪ್ರಾಯೋಗಿಕ ಸಂಚಾರ ಯಶಸ್ವಿ: ಕೆಎಸ್ಆರ್ ಬೆಂಗಳೂರು-ಬೆಳಗಾವಿ ನಡುವಿನ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿತ್ತು. ನವೆಂಬರ್ 21, 2023ರಂದು 8 ಬೋಗಿಯ ಬಿಳಿ ಬಣ್ಣದ ವಂದೇ ಭಾರತ್ ರೈಲು ಬೆಂಗಳೂರಿನಿಂದ ಬೆಳಗ್ಗೆ 5.45ಕ್ಕೆ ಹೊರಟಿತ್ತು, ಬೆಳಗಾವಿಗೆ ಮಧ್ಯಾಹ್ನ 1.40ಕ್ಕೆ ತಲುಪಿತ್ತು. ಬೆಳಗಾವಿಯಿಂದ 2 ಗಂಟೆಗೆ ಹೊರಟ ರೈಲು ರಾತ್ರಿ 10.10ಕ್ಕೆ ಬೆಂಗಳೂರು ನಗರಕ್ಕೆ ವಾಪಸ್ ಆಗಿತ್ತು. ರೈಲು ಗಂಟೆಗೆ ಸುಮಾರು 110 ಕಿ. ಮೀ. ವೇಗದಲ್ಲಿ ಸಂಚಾರವನ್ನು ನಡೆಸಿತ್ತು.
ಈ ಪ್ರಾಯೋಗಿಕ ಸಂಚಾರ ಮುಗಿದು ಅಕ್ಟೋಬರ್ 21, 2024ಕ್ಕೆ 11 ತಿಂಗಳು ಕಳೆದಿದೆ. ಆದರೆ ಕೆಎಸ್ಆರ್ ಬೆಂಗಳೂರು-ಬೆಳಗಾವಿ ನಡುವೆ ರೈಲು ಸಂಚಾರ ಆರಂಭವಾಗಿಲ್ಲ. ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ರೈಲು ಸಂಚಾರವನ್ನು ನಡೆಸುತ್ತಿದೆ. ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ.
ಮೊದಲು ಬೆಳಗಾವಿಯಲ್ಲಿ ವಂದೇ ಭಾರತ್ ರೈಲು ನಿರ್ವಹಣೆ ಮಾಡಲು ಅಗತ್ಯವಾದ ಸೌಲಭ್ಯಗಳಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಆದರೆ 11 ತಿಂಗಳು ಕಳೆದರೂ ಸಹ ಏಕೆ ರೈಲು ಸಂಚಾರ ಆರಂಭವಾಗಿಲ್ಲ ಎಂಬ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ. ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಬೆಳಗಾವಿ ಮೂಲಕ ಸಾಗುತ್ತದೆ. ಆದರೆ ಕೆಎಸ್ಆರ್ ಬೆಂಗಳೂರು-ಬೆಳಗಾವಿ ರೈಲು ಯಾವಾಗ ಎಂದು ಜನರು ಕೇಳುತ್ತಿದ್ದಾರೆ.
ಬೆಳಗಾವಿಗೆ ಆಗಮಿಸುವ ಜನರು ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲಿನಲ್ಲಿ ಆಗಮಿಸಿ ಹುಬ್ಬಳ್ಳಿ ಅಥವ ಧಾರವಾಡದಲ್ಲಿ ಇಳಿದು ಬಳಿಕ ಬಸ್ ಏರಿ ಬೆಳಗಾವಿಗೆ ತಲುಪಬೇಕು. ಬೆಂಗಳೂರಿನಿಂದ ರೈಲು ಬೆಳಗಾವಿ ತನಕ ಸಂಚಾರ ನಡೆಸಿದರೆ ಅನುಕೂಲವಾಗಲಿದೆ ಬೇಗ ರೈಲು ಸಂಚಾರವನ್ನು ಆರಂಭಿಸಿ ಎಂದು ಜನರು ಮನವಿ ಮಾಡುತ್ತಲೇ ಇದ್ದಾರೆ.
ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಕೆಲವು ದಿನಗಳ ಹಿಂದೆ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿ ಬೆಂಗಳೂರು-ಬೆಳಗಾವಿ ನಡುವೆ ರೈಲು ಸೇವೆ ಬೇಗ ಆರಂಭಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಯಾವಾಗ ರೈಲು ಸೇವೆ ಆರಂಭವಾಗಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications