Vande Bharat Express: ಬೆಂಗಳೂರು- ಹೈದರಾಬಾದ್ ರೈಲಿನ ಸಮಯ ಬದಲಾವಣೆ ಮಾಡಿ, ಐಟಿ ಉದ್ಯೋಗಿಗಳು ಈ ನಿರ್ಧಾರಕ್ಕೆ ಬಂದಿದ್ದೇಕೆ?
ಬೆಂಗಳೂರು, ಅಕ್ಟೋಬರ್, 16: ಹೈದರಾಬಾದ್, ಬೆಂಗಳೂರು ಇವೆರಡು ಕೂಡ ಐಟಿ ನಗರಗಳಾಗಿದ್ದು, ಈ ನಗರಗಳ ನಡುವೆ ಐಟಿ ಉದ್ಯೋಗಿಗಳು, ವ್ಯಾಪಾರಸ್ಥರು ಸೇರಿದಂತೆ ಜನಸಾಮಾನ್ಯರು ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಆದ್ದರಿಂದ ಈ ಮಾರ್ಗದಲ್ಲಿ ಸಂಚರಿಸುತ್ತಿರುವ ವಂದೇ ಭಾರತ್ ಕಾಚಿಗುಡ ಎಕ್ಸ್ ಪ್ರೆಸ್ ರೈಲಿನ ಸಮಯ ಬದಲಾವಣೆ ಮಾಡುವಂತೆ ಐಟಿ ಉದ್ಯೋಗಿಗಳು ಭಾರತೀಯ ರೈಲ್ವೆಗೆ ಮನವಿ ಮಾಡಿದ್ದಾರೆ.
ಬೆಂಗಳೂರು-ಹೈದರಾಬಾದ್ ನಡುವೆ ಸಂಚರಿಸುವ ವಂದೇ ಭಾರತ್ ಕಾಚಿಗುಡ ಎಕ್ಟ್‌ಪ್ರೆಸ್ ರೈಲು ಜನಪ್ರಿಯತೆ ಪಡೆದಿದ್ದು, ಈ ರೈಲಿನಲ್ಲಿ 610 ಕಿಲೋ ಮೀಟರ್ ದೂರವನ್ನು ಕೇವಲ 8 ಗಂಟೆಗಳಲ್ಲಿ ತಲುಪಬಹುದಾಗಿದೆ. ಸೆಪ್ಟಂಬರ್ 24ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ವಂದೇ ಭಾರತ್ ರೈಲಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದರು. ಆದರೆ ಇದೀಗ ಐಟಿ ಕಂಪನಿಗಳ ಉದ್ಯೋಗಿಗಳು ರೈಲು ಹೊರಡುವ ಮತ್ತು ತಲುಪುವ ಸಮಯ ಬದಲಾವಣೆ ಮಾಡುವಂತೆ ಆಗ್ರಹಿಸಿದ್ದಾರೆ.

ಈ ರೈಲಿನ ಸಮಯ ಬದಲಾವಣೆ ಆದರೆ ಬರೀ ಐಟಿ ಕಂಪನಿಗಳ ಉದ್ಯೋಗಿಗಳು ಮಾತ್ರವಲ್ಲದೆ, ಜನರಿಗೂ ಕೂಡ ಅನುಕೂಲ ಆದಂತಾಗುತ್ತದೆ. ಬೆಂಗಳೂರು -ಹೈದರಾಬಾದ್ ನಡುವೆ ಐಟಿ ಉದ್ಯೋಗಿಗಳು ಪ್ರತಿನಿತ್ಯ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಅಲ್ಲದೆ, ವ್ಯಾಪಾರಿಗಳು, ಪ್ರವಾಸಿಗರು, ಖಾಸಗಿ ಕಂಪನಿ ಉದ್ಯೋಗಿಗಳು ಕೂಡ ಈ ಎರಡು ನಗರಗಳ ನಡುವೆ ಸಂಪರ್ಕ ಇಟ್ಟುಕೊಂಡಿದ್ದಾರೆ.
ವಂದೇ ಭಾರತ್ ರೈಲು ವಾರದಲ್ಲಿ 6 ದಿನ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ನಡುವೆ ಸಂಚಾರ ಮಾಡುತ್ತದೆ. ವಿಶೇಷವಾಗಿ ಐಟಿ ಉದ್ಯೋಗಿಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ಆರಂಭಿಸಲಾಗಿದೆ ಎಂದು ರೈಲ್ವೇ ಮೂಲಗಳು ಹೇಳುತ್ತವೆ. ಕಾಚಿಗುಡ ಮತ್ತು ಯಶವಂತಪುರ ನಡುವೆ ಈ ರೈಲು ಸಂಚರಿಸುತ್ತದೆ. ಇದು ಗಂಟೆಗೆ ಸರಾಸರಿ 71 ಕಿಲೋ ಮೀಟರ್ ದೂರವನ್ನು ಕ್ರಮಿಸುತ್ತದೆ.
ಈ ಎರಡೂ ನಿಲ್ದಾಣಗಳ ದೂರ 610 ಕಿಲೋ ಮೀಟರ್ ಆಗಿದ್ದು, 8.30 ಗಂಟೆಯಲ್ಲಿ ವಂದೇ ಭಾರತ್ ರೈಲು ತಲುಲುತ್ತದೆ. ಐಟಿ ಉದ್ಯೋಗಿಗಳು ಸೇರಿದಂತೆ ಎಲ್ಲರಿಗೂ ಈ ರೈಲು ಸಂಚಾರದಿಂದ ಅನುಕೂಲ ಆಗಿದೆ. ಇನ್ನು ಇದೆ ಪ್ರಯಾಣ ದರವನ್ನು ನೋಡುವುದಾದರೆ, ದರ್ಜೆಯ ಆಧಾರದ ಮೇಲೆ 1,540 ರಿಂದ 2,865 ರೂಪಾಯಿವರೆಗೆ ನಿಗದಿಪಡಿಸಲಾಗಿದೆ. ಮತ್ತೊಂದೆಡೆ ರಾಜಧಾನಿ ಎಕ್ಸ್‌ಪ್ರೆಸ್ ಸೇರಿದಂತೆ ಇತರೆ ರೈಲುಗಳು 12 ಗಂಟೆ ಸಮಯವನ್ನು ತೆಗೆದುಕೊಳ್ಳುತ್ತಿದ್ದವು. ಆದರೆ ಈ ರೈಲಿನ ವೇಗ ಸ್ವಲ್ಪ ಜಾಸ್ತಿಯೇ ಇದೆ.
ಈ ರೈಲು ಹಗಲಿನಲ್ಲಿ ಸಂಚರಿಸುವುದರಿಂದ ಒಂದು ದಿನದ ರಜೆ ಹಾಕಿಕೊಳ್ಳಬೇಕಾಗುತ್ತದೆ ಎಂದು ಐಟಿ ಉದ್ಯೋಗಿಗಳ ಹೇಳಿಕೆಯಾಗಿದೆ. ಇತರ ವರ್ಗಗಳ ಉದ್ಯೋಗಿಗಳ ಅಭಿಪ್ರಾಯವೂ ಇದೇ ಆಗಿದೆ. ಪ್ರಸ್ತುತ ವಂದೇ ಭಾರತ್ ಬೆಳಗ್ಗೆ 5:30ಕ್ಕೆ ಹೊರಟರೆ ಯಶವಂತಪುರ ನಿಲ್ದಾಣವನ್ನು ಮಧ್ಯಾಹ್ನ 2 ಗಂಟೆಗೆ ತಲುಪುತ್ತದೆ. ಆರಂಭದಿಂದ ನೋಡುವುದಾದರೆ ಮೆಹಬೂಬ ನಗರ(6:50), ಕರ್ನೂಲ್(8:35), ಅನಂತಪುರ(10:45), ಧರ್ಮಾವರಂ(11:15) ಮುಟ್ಟುತ್ತದೆ.
ವಾಪಾಸ್ ಆಗುವ ವೇಳೆಯೂ ಇದೇ ರೀತಿ ಇದೆ. ಯಶವಂತಪುರ ನಿಲ್ದಾಣದಿಂದ ಮಧ್ಯಾಹ್ನ 2:45ಕ್ಕೆ ಹೊರಟರೆ ಕಾಚಿಗುಡವನ್ನು ತಡರಾತ್ರಿ 11:45ಕ್ಕೆ ತಲುಪುತ್ತದೆ. ಯಶವಂತಪುರವನ್ನು ತಲುಪುವ ಸಮಯ ನೋಡಿದರೆ ಮನೆ ತಲುಪುವುದು ಕಷ್ಟ ಆಗುತ್ತದೆ. ಇಡೀ ದಿನ ಟ್ರಾಫಿಕ್‌ನಲ್ಲೇ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತದೆ. ಹಾಗೆಯೇ ಕಾಚಿಗುಡವನ್ನು ಆ ವೇಳೆಯಲ್ಲಿ ವಂದೇ ಭಾರತ್ ರೈಲು ತಲುಪುತ್ತದೆ.
ತಡರಾತ್ರಿ ರೈಲೂ ತಲುಪುವುದರಿಂದ ಕಾಚಿಗುಡದಿಂದ ಅಕ್ಕಪಕ್ಕದ ಪಟ್ಟಣ ಅಥವಾ ಗ್ರಾಮಗಳಿಗೆ ತಲುಪುವುದು ಕಷ್ಟಸಾಧ್ಯ. ಯಶವಂತಪುರ ನಿಲ್ದಾಣವನ್ನು 12 ಗಂಟೆಯೊಳಗೆ ತಲುಪಬೇಕು. ಹಾಗೆಯೇ ಕಾಚಿಗುಡವನ್ನೂ 2 ಗಂಟೆ ಮುಂಚಿತವಾಗಿ ಅಂದರೆ 10 ಗಂಟೆ ಸುಮಾರಿಗೆ ಮುಟ್ಟಬೇಕು. ಈ ಸಮಯಕ್ಕೆ ವಂದೇ ಭಾರತ್ ರೈಲಿನ ಸಮಯವನ್ನು ಸರಿಪಡಿಸಿಕೊಂಡರೆ ನಿರಂತರವಾಗಿ ಪ್ರಯಾಣಿಸುವ ಉದ್ಯೋಗಿಗಳಿಗೆ ಅನುಕೂಲ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications