ಶಿವಮೊಗ್ಗ-ಬಳ್ಳಾರಿ-ಚೆನ್ನೈ ರೈಲು ಮತ್ತೆ ಓಡಿಸಲು ಆಗ್ರಹ
ಶಿವಮೊಗ್ಗ, ನವೆಂಬರ್ 07; ಶಿವಮೊಗ್ಗ-ಬಳ್ಳಾರಿ ಮೂಲಕ ಚೆನ್ನೈಗೆ ವಾರದಲ್ಲಿ ಎರಡು ದಿನ ಸಂಚಾರ ನಡೆಸುತ್ತಿದ್ದ ರೈಲು ಸೇವೆ ಮತ್ತೆ ಆರಂಭಿಸಬೇಕು ಎಂದು ಒತ್ತಾಯಿಸಲಾಗಿದೆ. ಈ ಕುರಿತು ಜನಪ್ರತಿನಿಧಿಗಳು ನೈಋತ್ಯ ರೈಲ್ವೆ ಮೇಲೆ ಒತ್ತಡ ಹೇರಬೇಕು ಎಂದು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಆಗ್ರಹಿಸಿದೆ.
ಒಂದು ವರ್ಷದಿಂದ ಸಂಚಾರ ನಡೆಸುತ್ತಿದ್ದ ಶಿವಮೊಗ್ಗ-ಬಳ್ಳಾರಿ-ಚೆನ್ನೈ ವಾರದ ಎರಡು ದಿನದ ರೈಲು ಸೇವೆ ಹೆಚ್ಚು ಉಪಯುಕ್ತವಾಗಿದೆ. ಈ ರೈಲು ಸೇವೆಯಿಂದ ಶಿವಮೊಗ್ಗ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಯ ಪ್ರಯಾಣಿಕರಿಗೆ ಅನುಕೂಲವಾಗುತ್ತಿತ್ತು ಎಂದು ವಿವರಿಸಲಾಗಿದೆ.

ರೈಲಿನ ವೇಳಾಪಟ್ಟಿ; ರೈಲು ಸಂಖ್ಯೆ 06223 ಪ್ರತಿ ಭಾನುವಾರ ಮತ್ತು ಮಂಗಳವಾರ ಸಂಜೆ 7 ಗಂಟೆಗೆ ಶಿವಮೊಗ್ಗದಿಂದ ಹೊರಟು, ಮಧ್ಯರಾತ್ರಿ ಬಳ್ಳಾರಿಗೆ ತಲುಪುತ್ತಿತ್ತು. ಮರುದಿನ ಬೆಳಗ್ಗೆ 11 ಗಂಟೆಗೆ ಚೆನ್ನೈನ ಅರಕೋನಣಂ ತಲುಪುತ್ತಿತ್ತು.
ರೈಲು ಸಂಖ್ಯೆ 06224 ಚೆನ್ನೈ-ಬಳ್ಳಾರಿ-ಶಿವಮೊಗ್ಗ ರೈಲು ಸೋಮವಾರ ಮತ್ತು ಬುಧವಾರ ಚೆನ್ನೈನಿಂದ ಹೊರಟು ಬಳ್ಳಾರಿ, ಚಿತ್ರದುರ್ಗ ಮಾರ್ಗವಾಗಿ ಶಿವಮೊಗ್ಗ ತಲುಪುತ್ತಿತ್ತು. ಈ ರೈಲಿನಿಂದ ಮೂರು ಜಿಲ್ಲೆಗಳ ಜನರಿಗೆ ಸಹಾಯಕವಾಗಿದೆ. ಈ ರೈಲನ್ನು ಪುನಃ ಆರಂಭಿಸಿ ಎಂದು ಮನವಿ ಮಾಡಲಾಗಿದೆ.
ಜನರು ಚೆನ್ನೈ ಮತ್ತು ತಿರುಪತಿಗೆ ಹೋಗಿ ಬರಲು ಸಹಾಯಕವಾಗಿತ್ತು. ತಮಿಳುನಾಡು ಮತ್ತು ಬಳ್ಳಾರಿಯ ಹಲವಾರು ಜನರು ಶಿವಮೊಗ್ಗಕ್ಕೆ ಸಂಚಾರ ನಡೆಸಲು ರೈಲು ಸೇವೆ ಸಹಾಯಕವಾಗಿತ್ತು. ಆದ್ದರಿಂದ ಈ ರೈಲು ಪುನಃ ಆರಂಭಿಸಬೇಕು ಎಂದು ಆಗ್ರಹಿಸಲಾಗಿದೆ.
ಅಕ್ಟೋಬರ್ ತಿಂಗಳಿನಿಂದ ರೈಲ್ವೆ ಇಲಾಖೆ ಈ ರೈಲನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಪ್ರಯಾಣಿಕರಿಗೆ ಅನಾನುಕೂಲವಾಗಿದೆ. ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಈ ರೈಲು ಸೇವೆ ಪುನಃ ಆರಂಭಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈಲ್ವೆ ಕ್ರಿಯಾ ಸಮಿತಿ ಒತ್ತಾಯ ಮಾಡಿದೆ.
ಚಿತ್ರದುರ್ಗ ಸಂಸದ, ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಮತ್ತು ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ರೈಲ್ವೆ ಸಚಿವರಿಗೆ ಮತ್ತು ನೈಋತ್ಯ ರೈಲ್ವೆಗೆ ಶಿವಮೊಗ್ಗ-ಬಳ್ಳಾರಿ-ಚೆನ್ನೈ ರೈಲನ್ನು ಪುನಃ ಆರಂಭಿಸಲು ಮನವಿಯನ್ನು ಮಾಡಬೇಕು ಎಂದು ಮನವಿ ಮಾಡಲಾಗಿದೆ.
ಬಳ್ಳಾರಿ ಮಾರ್ಗದ ಮೂಲಕ ಸಾಗುವ ರೈಲನ್ನು ರದ್ದು ಮಾಡುವ ಮೂಲಕ ರೈಲ್ವೆ ಇಲಾಖೆ ಈ ಭಾಗದ ಜನರಿಗೆ ಅನ್ಯಾಯ ಮಾಡಿದೆ. ರೈಲು ಸೇವೆಯನ್ನು ಪುನಃ ಆರಂಭಿಸದಿದ್ದರೆ ಬಳ್ಳಾರಿಯ ರೈಲ್ವೆ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
2022ರಲ್ಲಿ ಶಿವಮೊಗ್ಗ-ಬಳ್ಳಾರಿ-ಚೆನ್ನೈ ನಡುವಿನ ವಾರದಲ್ಲಿ 2 ದಿನ ಸಂಚಾರ ನಡೆಸುವ ರೈಲು ಸೇವೆ ಆರಂಭಿಸಲಾಗಿತ್ತು. ಈ ರೈಲು ತಿರುಪತಿ ಸಮೀಪದ ರೇಣಿಗುಂಟ ತನಕ ಸಾಗುತ್ತಿತ್ತು. ಆದ್ದರಿಂದ ಮಲೆನಾಡು, ಬಳ್ಳಾರಿ ಭಾಗದ ತಿರುಪತಿಯ ಭಕ್ತರು ಸಂಚಾರ ನಡೆಸಲು ಸಹ ಸಹಾಯಕವಾಗಿತ್ತು.
ಈ ರೈಲನ್ನು ಕಾಯಂಗೊಳಿಸಿರಲಿಲ್ಲ. ಪ್ರಾಯೋಗಿಕವಾಗಿ ಓಡಿಸಲಾಗುತ್ತಿತ್ತು. ಆದರೆ ಈಗ ಅಕ್ಟೋಬರ್‌ನಲ್ಲಿ ರೈಲು ಸಂಚಾರ ನಿಲ್ಲಿಸಲಾಗಿದೆ ಎಂದು ರೈಲ್ವೆ ಕ್ರಿಯಾ ಸಮಿತಿ ಹೇಳಿದೆ. ನೈಋತ್ಯ ರೈಲ್ವೆ ರೈಲು ಸೇವೆ ಮತ್ತೆ ಆರಭಿಸುವ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications