Mysore Tourism: ನುಗು ವನ್ಯಧಾಮವೆಂಬ ಮೈಸೂರಿನ ನಿಸರ್ಗದ ಸ್ವರ್ಗ: ಏನಿದರ ವಿಶೇಷತೆ?
ಮೈಸೂರು, ಅಕ್ಟೋಬರ್ 19: ನಿಸರ್ಗದ ಒಡನಾಟದಲ್ಲಿ ಒಂದಷ್ಟು ಸಮಯ ಕಳೆಯಬೇಕೆಂದು ಬಯಸುವವರಿಗೆ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಹೆಡಿಯಾಲ ಉಪವಿಭಾಗದ ನುಗು ವನ್ಯಧಾಮ ಸುಂದರ ಮತ್ತು ಆಕರ್ಷಣೀಯ ತಾಣವಾಗಿದ್ದು, ಇಲ್ಲಿನ ಪ್ರಾಕೃತಿಕ ಸೌಂದರ್ಯ ಗಮನಾರ್ಹವಾಗಿದ್ದು, ತನ್ನ ನಿಸರ್ಗ ಸುಂದರತೆಯಿಂದ ತನ್ನೆಡೆಗೆ ಸೆಳೆಯುತ್ತದೆ.
ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವ ಕಾರಣದಿಂದಾಗಿ ಕಾಡಿನ ನಡುವಿನ ಜಲಮೂಲಗಳು ಸಮೃದ್ಧವಾಗಿದ್ದು, ಗಿಡಮರಗಳೆಲ್ಲವೂ ಹಚ್ಛ ಹಸಿರಿನಿಂದ ಕಂಗೊಳಿಸುತ್ತಿದ್ದು ಇದರ ನಡುವೆ ವನ್ಯಪ್ರಾಣಿಗಳು ಕೂಡ ಎಲ್ಲೆಂದರಲ್ಲಿ ಅಲೆದಾಡುತ್ತಾ ಖುಷಿಯಾಗಿವೆ. ಅದರಲ್ಲೂ ನುಗು ವನ್ಯಧಾಮವಂತು ತನ್ನದೇ ವಿಶೇಷತೆ ಹೊಂದಿರುವುದರಿಂದ ಹೆಚ್ಚೆಚ್ಚು ಪ್ರಾಣಿಗಳು ಕಂಡು ಬರುತ್ತವೆ.

ಹಾಗೆನೋಡಿದರೆ ಈ ಪ್ರದೇಶದಲ್ಲಿ ಸಫಾರಿ ಕೇಂದ್ರ ತೆರೆಯಲು ಈ ಹಿಂದೆಯೇ ಅರಣ್ಯ ಇಲಾಖೆ ಯೋಚಿಸಿತ್ತಾದರೂ ಅದಕ್ಕೆ ಹಲವು ನಿರ್ಬಂಧಗಳು ಇದ್ದ ಕಾರಣಗಳಿಂದ ಹಸಿರು ನಿಶಾನೆ ಸಿಗಲಿಲ್ಲ. ಒಂದು ವೇಳೆ ಸಿಕ್ಕಿದ್ದರೆ ಬಂಡೀಪುರದಂತೆ ಇಲ್ಲಿಗೂ ಪ್ರವಾಸಿಗರ ದಂಡು ಹರಿದು ಬರುತ್ತಿತ್ತು. ಈ ಹಿಂದೆ ಅಂದರೆ ಸುಮಾರು ಮೂವತ್ತು ವರ್ಷಗಳ ಹಿಂದೆ ಸಫಾರಿ ನಡೆಸಲಾಗುತ್ತಿತ್ತಾದರೂ 1994ರಲ್ಲಿ ನಿಲ್ಲಿಸಲಾಯಿತು.
ಸಫಾರಿಯನ್ನು ನಿಲ್ಲಿಸಲು ಕಾರಣವೇನು?
ಇಷ್ಟಕ್ಕೂ ನುಗು ಮತ್ತು ಗುಂಡ್ರೆಯಲ್ಲಿ ಸಫಾರಿಯನ್ನು ಅರಣ್ಯ ಇಲಾಖೆ ಹಿಂಪಡೆಯಲು ಬಲವಾದ ಕಾರಣವೂ ಇತ್ತು. ಅದು ಏನೆಂದರೆ ಈ ಅರಣ್ಯ ಪ್ರದೇಶಗಳು ಮೈಸೂರು ಜಿಲ್ಲೆಗೆ ಸೇರಿದ್ದರೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುತ್ತಿತ್ತು ಹೀಗಾಗಿ ಸಫಾರಿಯನ್ನು ಹಿಂಪಡೆಯಲಾಗಿತ್ತು. ಕಳೆದ ಕೆಲವು ವರ್ಷಗಳ ಹಿಂದೆ ನುಗು ವನ್ಯಧಾಮದಲ್ಲಿ ಸಫಾರಿ ಆರಂಭಿಸುವ ಚಿಂತನೆ ಮಾಡಲಾಯಿತಾದರೂ ಅದು ಸಾಧ್ಯವಾಗಲಿಲ್ಲ.

ನುಗು ವನ್ಯಧಾಮದಲ್ಲಿ ಸುಮಾರು 21ಕಿ.ಮೀ ರಸ್ತೆಯಿದ್ದು, ನುಗು ವಲಯ ಕಚೇರಿಯಿಂದ ಆನಂದಿ ಕೆರೆವರೆಗಿನ ಎಂಟು ಕಿ.ಮೀ. ಹಾಗೂ ನುಗು ಜಲಾಶಯದ ಹಿನ್ನೀರಲ್ಲಿ ನವಿಲಾಡಿ ಕೆರೆಯಿಂದ ನುಗು ವಲಯ ಕಚೇರಿ ವರೆಗೆ ಎಂಟು ಕಿ.ಮೀ. ದೂರದ ರಸ್ತೆಯಿದೆ. ಇದು ಅರಣ್ಯ ಪ್ರದೇಶದಲ್ಲಿ ಹಾದು ಹೋಗಿದೆ. ಇದರಲ್ಲಿ ಸಾಗುವಾಗ ಅರಣ್ಯ ಸಿಬ್ಬಂದಿಗೆ ವನ್ಯ ಪ್ರಾಣಿಗಳ ದರ್ಶನವಾಗುವುದು ಸಾಮಾನ್ಯವಾಗಿದೆ.
ಕರಿಚಿರತೆ ನುಗುವನ್ಯಧಾಮದ ವಿಶೇಷತೆ
ನುಗು ವನ್ಯಧಾಮವು 30.32 ಚದರ ಕಿಲೋ ಮೀಟರ್ ಇದ್ದು, ಈ ಪ್ರದೇಶವು ಉತ್ತಮ ಅರಣ್ಯ ಪ್ರದೇಶವನ್ನು ಹೊಂದಿದ್ದು, ಇಲ್ಲಿ ಹುಲಿ, ಚಿರತೆ, ಆನೆಗಳು, ಜಿಂಕೆಗಳು ಹೀಗೆ ಹಲವು ಪ್ರಬೇದದ ಜೀವ ಜಂತುಗಳಿವೆ. ಈ ಪೈಕಿ ಕರಿ ಚಿರತೆ ಪ್ರಮುಖ ಆಕರ್ಷಣೆಯಾಗಿದೆ. ಇಷ್ಟೇ ಅಲ್ಲದೆ ನುಗು ಜಲಾಶಯದ ಹಿನ್ನೀರು ಪ್ರದೇಶವಾಗಿರುವುದರಿಂದ ಇಲ್ಲಿ ತಂಪಾದ ಗಾಳಿ, ಸದಾ ಅಲೆಯಾಡುವ ಹಿನ್ನೀರು ನಿಸರ್ಗದ ಸುಂದರತೆಯಾಗಿದೆ.

ಹಿನ್ನೀರು ಪ್ರದೇಶವಾಗಿರುವ ಕಾರಣ ನೀರು ಕುಡಿಯಲು ಇತ್ತ ಕಾಡಾನೆ, ಹುಲಿ, ಚಿರತೆ, ಕರಡಿ. ಕಾಡೆಮ್ಮೆ, ಕಾಡುಹಂದಿ, ಜಿಂಕೆ, ಸೀಳುನಾಯಿ, ನೀರುನಾಯಿ ಹಾಗೂ ವಿವಿಧ ಬಗೆಯ ಪಕ್ಷಿಗಳು ಬರಲಿದ್ದು ಅವುಗಳು ಸಾಮಾನ್ಯವಾಗಿ ನೋಡುಗರ ಕಣ್ಣಿಗೆ ಬೀಳುತ್ತಿರುತ್ತವೆ. ಈ ವ್ಯಾಪ್ತಿಯು ಅರಣ್ಯ ಪ್ರದೇಶಗಳನ್ನು ಹೊಂದಿರುವುದು ವಿಶೇಷವಾಗಿದೆ.
ನಿಸರ್ಗ ಸುಂದರತೆಯ ನುಗು ವನ್ಯಧಾಮ
ನುಗು ವನ್ಯಧಾಮವು ನಾಗರಹೊಳೆ ಮತ್ತು ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಂತಿದ್ದು, ಸುತ್ತಮುತ್ತ ಪ್ರವಾಸಿ ತಾಣಗಳಾದ ಚಿಕ್ಕದೇವಮ್ಮನ ಬೆಟ್ಟ, ಕಬಿನಿ ಮತ್ತು ನುಗು ಜಲಾಶಯವಿದೆ. ಸಫಾರಿಗೆ ತೆರಳುವವರು ಬಂಡೀಪುರದ ಮೆಲುಕಾಮನಹಳ್ಳಿಯಲ್ಲಿ ನಡೆಯುವ ಸಫಾರಿಗೆ ತೆರಳಿ ವನ್ಯಪ್ರಾಣಿಗಳನ್ನು ನೋಡಬಹುದಾಗಿದೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ಪ್ರತಿವರ್ಷವೂ ನೀರಿನ ಸಮಸ್ಯೆಯಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಾಣಿಗಳು ನೀರು ಅರಸಿಕೊಂಡು ಹೋಗುವುದು ಸಾಮಾನ್ಯ. ಆದರೆ ನುಗು ವನ್ಯಧಾಮ ಪ್ರದೇಶದಲ್ಲಿ ನೀರಿರುವ ಕಾರಣ ಪ್ರಾಣಿಗಳು ಇತ್ತ ಧಾವಿಸುತ್ತವೆ. ಹೀಗಾಗಿ ವರ್ಷ ಪೂರ್ತಿ ವನ್ಯ ಪ್ರಾಣಿಗಳು ಇಲ್ಲಿ ಕಾಣಸಿಗುತ್ತವೆ.












Click it and Unblock the Notifications