ಮೈಮನ ರೋಮಾಂಚನಗೊಳಿಸುವ ಶಿವನಸಮುದ್ರ: ಇಲ್ಲಿನ ವಿಶೇಷತೆ ಬರೀ ಜಲಪಾತವಲ್ಲ..!

ಮೈಸೂರು, ಜುಲೈ 25: ಶಿವನಸಮುದ್ರ ಎಂದಾಕ್ಷಣ ಧುಮ್ಮಿಕ್ಕುವ ಭರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತಗಳು ನಮ್ಮ ಕಣ್ಮುಂದೆ ಹಾದು ಹೋಗುತ್ತವೆ, ಆದರೆ ನಿಜವಾಗಿ ಹೇಳಬೇಕೆಂದರೆ ಶಿವನಸಮುದ್ರ ಎನ್ನುವುದೇ ಮೈಮನ ರೋಮಾಂಚನಗೊಳಿಸುವ ಒಂದು ಸುಂದರ ತಾಣವಾಗಿದ್ದು, ಏಷ್ಯಾದಲ್ಲಿಯೇ ಪ್ರಥಮ ಬಾರಿಗೆ ವಿದ್ಯುತ್ ತಯಾರಿಸಲ್ಪಟ್ಟ ಕೇಂದ್ರವಾಗಿ ಇತಿಹಾಸ ನಿರ್ಮಿಸಿದೆ. ಹೀಗಾಗಿ ಇಲ್ಲಿನ ವಿಶೇಷತೆಗಳನ್ನು ತಿಳಿದುಕೊಳ್ಳುವುದೇ ಖುಷಿಕೊಡುವ ಸಂಗತಿಯಾಗಿದೆ.

ಈಗ ಮಳೆ ಸುರಿಯುತ್ತಿದೆ ಹೀಗಾಗಿ ಕಬಿನಿ ಮತ್ತು ಕೆಆರ್ ಎಸ್ ಜಲಾಶಯದಿಂದ ನೀರನ್ನು ಹೊರಬಿಡಲಾಗುತ್ತಿದ್ದು, ಕಬಿನಿ ನದಿಯು ಕಾವೇರಿಯೊಂದಿಗೆ ತುಂಬಿ ಹರಿಯುತ್ತಾ ಶಿವನಸಮುದ್ರದಲ್ಲಿರುವ ಗಗನಚುಕ್ಕಿ ಮತ್ತು ಭರಚುಕ್ಕಿಯಲ್ಲಿ ಭೋರ್ಗರೆಯುತ್ತಾ ಜಲವೈಭವ ಪ್ರದರ್ಶಿಸುತ್ತಿದ್ದು ಇದನ್ನು ನೋಡುವುದೇ ಮಜಾ... ಈ ಜಲವೈಭವ ನೋಡಲೆಂದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ ಹೆಚ್ಚಿನ ಪ್ರವಾಸಿಗರಿಗೆ ಶಿವನಸಮುದ್ರದ ವಿಶೇಷತೆಯೇ ಗೊತ್ತಿಲ್ಲವಾಗಿದೆ.

Travel News What Is The speciality Of Mysore Shivanasamudra Waterfalls

ಶಿವನಸಮುದ್ರ ಇತಿಹಾಸ ನಿರ್ಮಿಸಿದ ಊರಾಗಿದೆ. ಹೀಗಾಗಿ ವಿದ್ಯುತ್ ಎಂದಾಕ್ಷಣ ನಮ್ಮ ಮುಂದೆ ಶಿವನಸಮುದ್ರ ಬರಲೇ ಬೇಕು. ಅಷ್ಟೇ ಅಲ್ಲದೆ ಅದರ ಖ್ಯಾತಿಯೂ ರಾರಾಜಿಸಬೇಕು. ಏಕೆಂದರೆ ಇತಿಹಾಸದ ಪುಟದಲ್ಲಿ ಶಿವನಸಮುದ್ರ ಅಂತಹದೊಂದು ಅಚ್ಚಳಿಯದೆ ಮುದ್ರೆಯೊತ್ತಿದೆ. ಕಾವೇರಿ ನದಿ ಶಿವನಸಮುದ್ರದಲ್ಲಿ ಧುಮ್ಮಿಕ್ಕಿ ಹರಿಯುತ್ತದೆ. ಸುಮಾರು ನಾನೂರ ಹತ್ತೊಂಬತ್ತು ಅಡಿ ಎತ್ತರದಿಂದ ಕಂದಕಕ್ಕೆ ಧುಮ್ಮಿಕ್ಕುವ ದೃಶ್ಯ ಅದ್ಭುತ. ಇದು ನೋಡುಗರಿಗೆ ವಿಸ್ಮಯ ಮೂಡಿಸುತ್ತಿತ್ತು.

ವಿದ್ಯುತ್ ಸ್ಥಾಪನೆಯಾದ ಕಥೆ ರೋಚಕ

ಮೈಸೂರು ಮಹಾರಾಜರ ಆಡಳಿತ ಕಾಲದಲ್ಲಿ ಅಂದಿನ ಮೈಸೂರು ರಾಜ್ಯದ ಉಪ ಮುಖ್ಯ ಇಂಜಿನಿಯರ್ ಎ.ಜೆ.ಡಿ. ಲಾಬಿನೀರ್ ಅವರು ಇಲ್ಲಿಗೆ ಭೇಟಿ ನೀಡಿದ ವೇಳೆ ವಿದ್ಯುತ್ ರಭಸದಿಂದ ಕಂದಕಕ್ಕೆ ಧುಮ್ಮಿಕ್ಕುತ್ತಿರುವುದು ಅವರಿಗೆ ವಿದ್ಯುತ್ ತಯಾರಿಸಲು ಪ್ರೇರಣೆ ನೀಡಿತಲ್ಲದೆ, ಅವತ್ತು ಶಿವನಸಮುದ್ರದಲ್ಲಿ ಸ್ಥಾಪನೆಯಾದ ವಿದ್ಯುತ್ ಘಟಕ ಇಂದು ಏಷ್ಯಾಖಂಡದಲ್ಲಿಯೇ ಪ್ರಥಮ ವಿದ್ಯುತ್ ಉತ್ಪಾದನಾ ಘಟಕವಾಗಿ ಇತಿಹಾಸ ಸೃಷ್ಟಿಸಿದೆ. ಶಿವನಸಮುದ್ರದಲ್ಲಿ ವಿದ್ಯುತ್ ಸ್ಥಾಪನೆಯಾದ ಕಥೆಯಂತು ರೋಚಕವಾಗಿದೆ.

1896-99ರ ಕಾಲವದು. ಅಂದು ಮೈಸೂರು ರಾಜ್ಯದ ಉಪ ಮುಖ್ಯ ಇಂಜಿನಿಯರ್ ಎ.ಜೆ.ಡಿ.ಲಾಬಿನೀರ್ ಅವರು ಶಿವನಸಮುದ್ರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರಿಗೆ ಅಲ್ಲಿ ಧುಮ್ಮಿಕ್ಕಿ ಹರಿಯುವ ಜಲಪಾತಗಳು ಮುದ ನೀಡಿದರೂ, ಕಾವೇರಿ ನದಿ ರೌದ್ರಾವತಾರ ತಾಳಿ ಕಂದಕಕ್ಕೆ ಧುಮುಕುತ್ತಿರುವ ದೃಶ್ಯ ಗಮನಸೆಳೆದಿತ್ತು. ಆಗ ಅವರಿಗೆ ಮನದಲ್ಲಿಯೇ ಬೆಳಕೊಂದು ಹಾದು ಹೋಗಿತ್ತು. ಆಗಲೇ ಅವರಿಗೆ ಕಂದಕಕ್ಕೆ ಧುಮುಕುತ್ತಿರುವ ನೀರಿನಿಂದ ವಿದ್ಯುತ್ ತಯಾರಿಸುವ ಆಲೋಚನೆ ತಲೆಯಲ್ಲಿ ಬಂದಿತ್ತು.

Travel News What Is The speciality Of Mysore Shivanasamudra Waterfalls

ಪ್ರಪ್ರಥಮ ಜಲವಿದ್ಯುತ್ ಘಟಕವೆಂಬ ಹೆಗ್ಗಳಿಕೆ

ಆ ನಂತರ ಮೈಸೂರಿಗೆ ಹೋದವರೇ ಅಂದಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಭೇಟಿಯಾಗಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು. ಇದನ್ನು ಕೇಳಿದ ಒಡೆಯರ್ಗೆ ಉತ್ಸಾಹ ಮೂಡಿತ್ತು. ನಮ್ಮ ರಾಜ್ಯದಲ್ಲಿ ನೀರಿನಿಂದ ವಿದ್ಯುತ್ ತಯಾರಿಸಿ ಬೆಳಕು ಪಡೆಯುವುದೆಂದರೆ ಅದಕ್ಕಿಂತ ಸಂತೋಷ ಮತ್ತೇನಿದೆ? ಕೂಡಲೇ ಅವರು ಹಸಿರು ನಿಶಾನೆ ನೀಡಿಯೇ ಬಿಟ್ಟರು. ಅದರಂತೆ ಇಂಜಿನಿಯರ್ ಲಾಬಿನೀರ್ಗೆ ಅಂದಿನ ದಿವಾನರಾಗಿದ್ದ ಸರ್.ಕೆ.ಶೇಷಾದ್ರಿ ಅಯ್ಯರ್ ಮಾರ್ಗದರ್ಶನ ನೀಡಿ ಏನು ಬೇಕೋ ಅದನ್ನೆಲ್ಲಾ ಒದಗಿಸುವ ಮೂಲಕ ಪ್ರೋತ್ಸಾಹಿಸಿದರು.

ವಿದ್ಯುತ್ ಯೋಜನೆ ಸ್ಥಾಪನೆಯ ಕಾಮಗಾರಿ ಆರಂಭಗೊಂಡು ಭರದಿಂದ ಸಾಗತೊಡಗಿತು. ವಿದ್ಯುತ್ ಘಟಕ ಸ್ಥಾಪನೆಗೆ ಅಗತ್ಯವಿರುವಂತಹ ಯಂತ್ರೋಪಕರಣಗಳು ದೂರದ ಬ್ರಿಟನ್ ಹಾಗೂ ಅಮೆರಿಕಾದಿಂದ ತರಿಸಿಕೊಳ್ಳಲಾಯಿತು. ಬಳಿಕ ಅವುಗಳನ್ನು ಆನೆ, ಕುದುರೆ, ಎತ್ತಿನಬಂಡಿ ಮೂಲಕ ಆಳವಾದ ಕಂದಕಕ್ಕೆ ಇಳಿಜಾರು ಮಾರ್ಗದಲ್ಲಿ ಕೊಂಡೊಯ್ದು ಜೋಡಿಸುವ ಮೂಲಕ ಸುಮಾರು ಏಳುನೂರು ಕಿಲೋವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕವನ್ನು ನಿರ್ಮಿಸಲಾಯಿತು. ಇದು ಏಷ್ಯಾದಲ್ಲಿಯೇ ಪ್ರಪ್ರಥಮ ಜಲವಿದ್ಯುತ್ ಘಟಕ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.

ಕತ್ತಲೆಯಲ್ಲಿದ್ದ ನಗರಗಳಿಗೆ ಬೆಳಕು

ಇಲ್ಲಿ ಜಲವಿದ್ಯುತ್ ಉತ್ಪಾದನೆ ಕುರಿತಂತೆ ಕಾರ್ಯಚಟುವಟಿಕೆಗಳು ಮುಗಿದ ನಂತರ ಈ ಜಲವಿದ್ಯುತ್ ಘಟಕಕ್ಕೆ 1902ರ ಜೂನ್ 30ರಂದು ಅಂದಿನ ಮೈಸೂರು ರೆಸಿಡೆಂಟ್ ಜನರಲ್ ಡೋನಾಲ್ಡ್ ರಾಬರ್ಟ್ ಸನ್ ರವರು ಚಾಲನೆ ನೀಡಿದರು. ಇಲ್ಲಿಂದ ಕೋಲಾರದ ಚಿನ್ನದ ಗಣಿಗೆ ಸುಮಾರು 35 ಕಿಲೋ ವೋಲ್ಟ್ ಸಾಮರ್ಥ್ಯದ 148ಕಿ.ಮೀ. ಉದ್ದದ ಮಾರ್ಗಕ್ಕೆ ರಾಬರ್ಟ್ ಸನ್ರವರ ಪತ್ನಿ ಶ್ರೀಮತಿ ರಾಬರ್ಟ್ಸನ್ರವರು ಚಾಲನೆ ನೀಡಿದರು. ಈ ಸಂಪರ್ಕ ಅವತ್ತು ಜಗತ್ತಿನಲ್ಲಿಯೇ ಅತಿ ಉದ್ದದ ಪ್ರಸರಣ ಮಾರ್ಗ ಎಂಬ ಖ್ಯಾತಿ ಪಡೆಯಿತು. ಆ ನಂತರದ ವರ್ಷಗಳಲ್ಲಿ ಈ ವಿದ್ಯುತ್ ಘಟಕ ಆಧುನೀಕರಣಗೊಂಡು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಾ ಸಾಗಿತು.

Travel News What Is The speciality Of Mysore Shivanasamudra Waterfalls

1905ರಲ್ಲಿ ಬೆಂಗಳೂರಿಗೂ ಹಾಗೂ 1908ಲ್ಲಿ ಮೈಸೂರಿಗೂ ಈ ಕೇಂದ್ರದಿಂದ ವಿದ್ಯುತ್ ಸಂಪರ್ಕವನ್ನು ಒದಗಿಸುವ ಮೂಲಕ ಕತ್ತಲೆಯಲ್ಲಿ ಮುಳುಗಿದ್ದ ನಗರಗಳು ಬೆಳಕು ಕಂಡವು. ಮುಂದೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಶಿವನಸಮುದ್ರದಲ್ಲಿ ಖಾಸಗಿ ಕಂಪನಿಗಳು ಇಲ್ಲಿ ಕಾರ್ಯನಿರ್ಹಿಸಸುತ್ತಿದ್ದು, ಇವತ್ತು ವಿಶ್ವೇಶ್ವರಯ್ಯ ವಿದ್ಯುತ್ ನಿಗಮ, ಏಟ್ರಿಯಾ ಬೃಂದಾವನ್ ಸೇರಿದಂತೆ ಹತ್ತಾರು ಘಟಕಗಳು ಕಾರ್ಯನಿರ್ವಹಿಸುತ್ತಿರುವುದು ವಿಶೇಷವಾಗಿದೆ.

ಬ್ಲಫ್ ಎಂದು ಕರೆಯುತ್ತಿದ್ದ ಬ್ರಿಟೀಷರು

ಇನ್ನು ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಹರಿಯುವ ಕಾವೇರಿ ನದಿ ಉಪ ನದಿಗಳೊಂದಿಗೆ ಸಂಗಮಗೊಂಡು ಕೆಆರ್ಎಸ್ ತಲುಪುತ್ತಾಳೆ. ಬಳಿಕ ಟಿ.ನರಸೀಪುರ ಬಳಿ ಕಬಿನಿ ಇತರೆ ಉಪನದಿಗಳು ಸಂಗಮವಾಗುತ್ತವೆ. ಈ ಸಂದರ್ಭ ಕಾವೇರಿ ರೌದ್ರತೆಯನ್ನು ತಾಳುತ್ತಾಳೆ. ಬೆಟ್ಟಗುಡ್ಡ, ಕಾಡುಮೇಡುಗಳನ್ನೆಲ್ಲಾ ಕ್ರಮಿಸುತ್ತಾ ಶಿವನಸಮುದ್ರ ತಲುಪುತ್ತಿದ್ದಂತೆಯೇ ಗಗನದೆತ್ತರದಿಂದ ಧುಮುಕಿ ಗಗನಚುಕ್ಕಿಯಾಗಿ, ಬಳಿಕ ಭರದಿಂದ ಹರಿದು ಭರಚುಕ್ಕಿಯಾಗಿ ಧುಮುಕುವುದು ಇಲ್ಲಿನ ವಿಶೇಷವಾಗಿದೆ.

ಜತೆಗೆ ಈ ಜಲಧಾರೆಗಳು ಶಿವನಸಮುದ್ರದ ಮುಕುಟ ಮಣಿಗಳಾಗಿ ಕಂಗೊಳಿಸುತ್ತಿವೆ. ಬಿಟೀಷರು ಶಿವನಸಮುದ್ರ ವಿದ್ಯುತ್ ಉತ್ಪಾದನಾ ಘಟಕವನ್ನು ಬ್ಲಫ್ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಹೀಗಾಗಿ ಕೆಲವರು ಇಂದಿಗೂ ಬ್ಲಫ್ ಎಂದು ಕರೆಯುವುದನ್ನು ಕಾಣಬಹುದಾಗಿದೆ.

ಪ್ರವಾಸಿಗರು ಶಿವನಸಮುದ್ರಕ್ಕೆ ಬೆಂಗಳೂರಿನಿಂದ ರಾಮನಗರ, ಚನ್ನಪಟ್ಟಣ, ಮದ್ದೂರು, ಮಳವಳ್ಳಿ ಮೂಲಕ ಬರಬಹುದಾಗಿದೆ. ಹಾಗೆಯೇ ಮೈಸೂರಿನಿಂದ ಬನ್ನೂರು, ಮಳವಳ್ಳಿ ಅಥವಾ ಚಾಮರಾಜನಗರ, ಕೊಳ್ಳೆಗಾಲ ಮೂಲಕವೂ ಬರಬಹುದು. ಶಿವನಸಮುದ್ರಕ್ಕೆ ತೆರಳಿದರೆ ಸುತ್ತಮುತ್ತಲಿರುವ ತಲಕಾಡು, ಸೋಮನಾಥಪುರ ಮುಂತಾದ ಪ್ರವಾಸಿ ತಾಣಗಳಿಗೂ ಭೇಟಿ ನೀಡ ಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+