ಮಲೆನಾಡಿನ ಅನುಭವ ಈಗ ಚಾಮುಂಡಿ ಬೆಟ್ಟದಲ್ಲಿಯೇ ಲಭ್ಯ:ಹೇಗೆ ಗೊತ್ತಾ?
ಮೈಸೂರು: ಮುಂಗಾರು ಮಳೆಗೆ ಮೈಕೊಡವಿ ಮೇಲೆದ್ದ ನಿಸರ್ಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ತಂಗಾಳಿಗೆ ತಲೆಯಾಡಿಸಿ ನೋಡುಗರನ್ನು ಬರಸೆಳೆದು ಅಪ್ಪಿಕೊಳ್ಳುತ್ತಿದೆ. ಈ ಸುಂದರ ನಿಸರ್ಗದ ಮಡಿಲಲ್ಲಿ ಮೈಮರೆತು ಅಡ್ಡಾಡಲು ಜನ ತವಕಿಸುತ್ತಿದ್ದಾರೆ. ಹೀಗಾಗಿಯೇ ವಾರಾಂತ್ಯದ ದಿನಗಳಲ್ಲಿ ನಿಸರ್ಗದ ಮಡಿಲನ್ನು ಅರಸಿಕೊಂಡು ಹೊರಡುವವರ ಸಂಖ್ಯೆಯೂ ಹೆಚ್ಚುತ್ತಿದೆ.
ಈಗೀಗ ಸಣ್ಣಗೆ ಸುರಿಯುವ ಮಳೆಗೆ ಮೈಕೊಡುವುದು, ಮಂಜಿನ ಮಳೆಯಲ್ಲಿ ಕುಣಿದಾಡುವುದು ಯುವಜನತೆಗೆ ಎಲ್ಲಿಲ್ಲದ ಸಂಭ್ರಮ. ಬಹುಶಃ ಪ್ರಕೃತಿಗೆ ಮೈತೆರೆದು ಸಂಭ್ರಮಿಸುವ ಅವಕಾಶ ಹೆಚ್ಚಿನವರಿಗೆ ಸಿಗುವುದೇ ಇಲ್ಲ. ಒಂದು ವೇಳೆ ಪ್ರಕೃತಿ ಮಡಿಲಲ್ಲಿ ಅಡ್ಡಾಡಿ ಬಂದವರು ಅಂತಹದೊಂದು ಕ್ಷಣಗಳನ್ನು ಎಂದಿಗೂ ಮರೆಯಲಾರರು. ಹೀಗಾಗಿಯೇ ಅಂತಹದೊಂದು ಅನುಭವಕ್ಕಾಗಿ ಪ್ರಕೃತಿಪ್ರೇಮಿಗಳು ಹಾತೊರೆಯುತ್ತಾರೆ.

ಇವತ್ತಿನ ನಗರದ ಜಂಜಾಟದ ಬದುಕಿನಲ್ಲಿ ಕಳೆದು ಹೋದವರಿಗೆ ಪ್ರಕೃತಿ ಮಡಿಲಿನ ಆ ಸುಂದರ ದೃಶ್ಯಗಳು ಅಪರೂಪವೇ... ಇದು ಎಲ್ಲರಿಗೂ ಸಿಗಲಾರದು. ಸಿಕ್ಕವರಿಗಷ್ಟೆ ಇದರ ಮಜಾ ಅರಿವಾಗಿರುತ್ತದೆ. ಮಲೆನಾಡಿನಲ್ಲಿ ಬದುಕು ಕಟ್ಟಿಕೊಂಡವರಿಗೆ ಬೆಟ್ಟಗುಡ್ಡ ಅದರ ಮೇಲಿನ ಮಂಜು, ಮಳೆ, ಮರಕಾಡು ಎಲ್ಲವೂ ಪರಿಚಿತವೇ... ಅದರ ನಡುವೆ ಸದಾ ಬದುಕು ಕಟ್ಟಿಕೊಂಡ ಕಾರಣಕ್ಕೆ ಅದ್ಯಾವುದು ಹೊಸತೇನು ಅನಿಸಲ್ಲ.
ಮಲೆನಾಡಿನ ಅನುಭವ ನೀಡುವ ಚಾಮುಂಡಿಬೆಟ್ಟ
ಇನ್ನು ಪಟ್ಟಣ, ನಗರದಲ್ಲಿ ಬದುಕು ಕಟ್ಟಿಕೊಂಡವರಿಗೆ ದಿನ ನಿತ್ಯ ವಾಹನಗಳ ಸದ್ದು, ಕೆಲಸದ ಜಂಜಾಟ ಹೀಗೆ ಪ್ರಶಾಂತತೆಯಿಂದ ದೂರವಾಗಿ ಸದಾ ಸದ್ದುಗಳ ಮಧ್ಯೆಯೇ ಬದುಕು ಸಾಗುತ್ತಿರುತ್ತದೆ. ಇಂತಹವರು ಪ್ರಶಾಂತ ವಾತಾವರಣವನ್ನು ಸದಾ ಬಯಸುತ್ತಿರುತ್ತಾರೆ. ಆದರೆ ಬಹಳಷ್ಟು ಮಂದಿಗೆ ಪಟ್ಟಣದಿಂದ ಆಚೆ ಹೋಗಿ ಅಂದರೆ ಮಲೆನಾಡಿನಲ್ಲಿ ದಿನಕಳೆದು ಬರುವುದು ಸುಲಭವೇನಲ್ಲ.
ಹೆಚ್ಚಿನವರು ಕೆಲಸದಲ್ಲಿಯೇ ಮುಳುಗಿದ್ದರೂ ಅದೆಲ್ಲವನ್ನು ಬದಿಗೊತ್ತಿ ವಾರಕ್ಕೋ, ತಿಂಗಳಿಗೋ ಊರಿಂದ ಆಚೆ ಹೋಗಿ ಒಂದಷ್ಟು ಸಮಯವನ್ನು ಕಳೆದು ಬರುತ್ತಾರೆ. ಹೀಗೆ ಹೋಗುವವರು ಹೆಚ್ಚಾಗಿ ದೂರದ ಮಲೆನಾಡನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಮಲೆನಾಡಿನ ಕಡೆಗೆ ತೆರಳಲು ಸಾಧ್ಯವಾಗದವರು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದರೂ ಸಾಕು. ಇಲ್ಲಿನ ಬೆಟ್ಟದ ನಡುವಿನ ಅರಣ್ಯ ಮಲೆನಾಡಿನ ಅನುಭವ ನೀಡುತ್ತದೆ.

ಕಣ್ಣು ಹಾಯಿಸಿದಲ್ಲೆಲ್ಲ ಹಸಿರು ಪ್ರಪಂಚ
ಈಗಾಗಲೇ ಮಳೆ ಸುರಿದು ಇಡೀ ಬೆಟ್ಟ ಹಸಿರು ಸೀರೆಯುಟ್ಟು ನಿಂತ ಬೆಡಗಿಯಂತೆ ಕಂಗೊಳಿಸುತ್ತಿದೆ. ಮೈಸೂರು ನಗರದಲ್ಲಿ ನಿಂತು ಚಾಮುಂಡಿಬೆಟ್ಟದ ಕಡೆಗೆ ಕಣ್ಣು ಹಾಯಿಸಿದರೆ ಹಸಿರು ಹೊದ್ದು ಮಲಗಿದಂತೆ ಕಾಣುವ ದೃಶ್ಯ ಮನಮೋಹಕ ಅದರಲ್ಲೂ ಮುಂಜಾನೆ ಇಡೀ ಬೆಟ್ಟವನ್ನು ಆವರಿಸುವ ಮಂಜಿನ ನೋಟ ಚೇತೋಹಾರಿಯಾಗಿರುತ್ತದೆ. ಆದರೆ ಮನಸ್ಸಿಗೆ ಉಲ್ಲಾಸ ಸಿಗಬೇಕಾದರೆ ಮುಂಜಾನೆ ಇತ್ತ ಹೆಜ್ಜೆ ಹಾಕಬೇಕಾಗುತ್ತದೆ. ಆಗ ಮಂಜಿನ ಮಳೆಯಲ್ಲಿ ಮಿಂದೇಳಲು ಸಾಧ್ಯವಾಗುತ್ತದೆ.
ಈಗಂತೂ ಚಾಮುಂಡಿಬೆಟ್ಟ ಮಳೆಯ ಕಾರಣ ಹಸಿರು ಹಚ್ಚಡದೊಂದಿಗೆ ಕಂಗೊಳಿಸುತ್ತಿದ್ದು, ನಿಸರ್ಗ ಪ್ರಿಯರನ್ನು ತನ್ನಡೆಗೆ ಸೆಳೆಯುತ್ತಿದೆ. ಚುಮುಚುಮು ಬೆಳಕಿನಲ್ಲಿ ತಣ್ಣಗೆ ಬೀಸುವ ತಂಗಾಳಿಯಲ್ಲಿ ಮುತ್ತಿಕ್ಕುವ ಮಂಜಿಗೆ ಮೈಕೊಟ್ಟು ಹೆಜ್ಜೆಯಿಡುತ್ತಾ ಸಾಗುವುದು ಎಲ್ಲಿಲ್ಲದ ಖುಷಿಕೊಡುತ್ತದೆ. ಅದರಲ್ಲೂ ಚಿಲಿಪಿಲಿ ಗುಟ್ಟುವ ಹಕ್ಕಿಗಳು. ಕಣ್ಣು ಹಾಯಿಸಿದುದ್ದಕ್ಕೂ ಹಸಿರ ನೋಟ.. ಹೊಸದೊಂದು ಅನುಭವ ನೀಡುತ್ತದೆ.
ಬೆಟ್ಟದಿಂದ ಕಾಣುವ ದೃಶ್ಯ ಮನಮೋಹಕ
ಇಂತಹದೊಂದು ಸುಂದರ ಕ್ಷಣಗಳನ್ನು ಅನುಭವಿಸಿದವರು ಮತ್ತೆ, ಮತ್ತೆ ಆ ಸುಂದರ ಕ್ಷಣಗಳನ್ನು ಅನುಭವಿಸಲೆಂದೇ ಇಲ್ಲಿಗೆ ಬರುವುದು ಮಾಮೂಲಿಯಾಗಿದೆ. ಅರಣ್ಯದ ನಡುವೆ ಬೆಟ್ಟವನ್ನೇರಲು ನಿರ್ಮಿಸಿದ ಮೆಟ್ಟಿಲಲ್ಲಿ ಹೆಜ್ಜೆ ಹಾಕುತ್ತಾ ಅಲ್ಲಲ್ಲಿ ಇರುವ ನಿಸರ್ಗ ನಿರ್ಮಿತ ವೀಕ್ಷಣಾ ತಾಣ (ವ್ಯೂಪಾಯಿಂಟ್) ಗಳಿಂದ ನಿಂತು ಒಮ್ಮೆ ಕಣ್ಣು ಹಾಯಿಸಿದರೆ ಕಾಣಸಿಗುವ ಮೈಸೂರು ನಗರದ ನೋಟ ಮುದನೀಡುತ್ತದೆ. ಜತೆಗೆ ನಿಸರ್ಗದ ನಡುವೆ ಪ್ರಶಾಂತ ವಾತಾವರಣದಲ್ಲಿ ಒಂದಷ್ಟು ಹೊತ್ತು ಕಳೆದು ಹೋದರೆ ನಿತ್ಯದ ಜಂಜಾಟಗಳ ನಡುವೆಯೂ ಮನಸ್ಸು ಹಗುರವಾಗುತ್ತದೆ.

ಚಾಮುಂಡಿಬೆಟ್ಟವು ಸಮುದ್ರ ಮಟ್ಟಕ್ಕಿಂತ 3489 ಅಡಿ ಎತ್ತರದಲ್ಲಿದ್ದು, ಬೆಟ್ಟದ ಪಾದದಿಂದ ದೇವಾಲಯಕ್ಕೆ ಹತ್ತಿಕೊಂಡು ಹೋಗಲು ದೊಡ್ಡದೇವರಾಜ ಒಡೆಯರ್ ಒಂದು ಸಾವಿರ ಮೆಟ್ಟಿಲುಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಸುಮಾರು 700 ಮೆಟ್ಟಿಲುಗಳನ್ನೇರಿದಾಗ ಸಮತಟ್ಟಾದ ಸ್ಥಳ ಸಿಗುತ್ತದೆ. ಮೆಟ್ಟಿಲೇರಿ ಬಂದವರಿಗೆ ಇಲ್ಲೊಂದಿಷ್ಟು ವಿಶ್ರಾಂತಿ ಸಿಗುತ್ತದೆ. ಜತೆಗೆ ಬೀಸಿ ಬರುವ ತಂಗಾಳಿ ಸುಸ್ತಾದ ಮನಕ್ಕೆ ಉಲ್ಲಾಸವನ್ನು ನೀಡುತ್ತದೆ. ಇಲ್ಲಿರುವ ರಸ್ತೆಯಲ್ಲಿ ನಡೆಯುತ್ತಾ ಹಸಿರ ರಾಶಿಯನ್ನು ಕಣ್ತುಂಬಿಕೊಳ್ಳಬಹುದು.
ಬೆಟ್ಟದ ತಪ್ಪಲಿನಲ್ಲಿ ಸುಂದರ ದೇವಿವನ
ವಾರಾಂತ್ಯದ ದಿನಗಳಲ್ಲಿ ಹೆಚ್ಚೆಚ್ಚು ಪ್ರವಾಸಿಗರು ಮೈಸೂರಿನತ್ತ ಬರುತ್ತಿದ್ದು, ಹೀಗೆ ಬರುವ ಪ್ರವಾಸಿಗರು ಮುಂಜಾನೆ ಚಾಮುಂಡಿಬೆಟ್ಟದತ್ತ ತೆರಳಿದರೆ ಮಂಜಿನ ಲಾಸ್ಯವನ್ನು ನೋಡಲು ಸಾಧ್ಯವಾಗುತ್ತದೆ. ಭೂಮಿ ಮತ್ತು ಆಗಸವನ್ನು ಒಂದಾಗಿಸಿ ನಮ್ಮನ್ನು ಅದರೊಳಗೆ ಬಂಧಿಯಾಗಿಸುವ ಆ ನೋಟ ಮತ್ತು ಅನುಭವ ಸದಾ ನೆನಪಾಗಿ ಉಳಿಯುತ್ತದೆ. ಇದೆಲ್ಲದರ ನಡುವೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅಂದರೆ ಮೈಸೂರು ನಗರದಿಂದ ಬೆಟ್ಟಕ್ಕೆ ತೆರಳುವ ಸ್ವಾಗತ ಕಮಾನು ಬಳಿ ಬಲಕ್ಕೆ ತಿರುಗಿದರೆ ಇಲ್ಲೊಂದು ಉದ್ಯಾನವಿದೆ.

ಇದು ಚಾಮುಂಡೇಶ್ವರಿ ದೇವಿ ವನವಾಗಿದೆ. ಇಲ್ಲಿ ಅಡ್ಡಾಡಿದರೆ ಮಲೆನಾಡಿನೊಳಗೆ ಇದ್ದೇವೆ ಏನೋ ಎಂಬ ಅನುಭವ ನೀಡುತ್ತದೆ. ಅಷ್ಟೇ ಅಲ್ಲದೆ ನಿಸರ್ಗದ ಸುಂದರ ನೋಟ ಮರಗಿಡಗಳ ಒಡನಾಟದ ಅನುಭವ ಹತ್ತಿರದಿಂದಾಗುತ್ತದೆ. ಇಲ್ಲಿ ಬೆಳಗ್ಗೆ ವಾಯುವಿಹಾರಿಗಳು ನೆಮ್ಮದಿಯಾಗಿ ವಿಹರಿಸಬಹುದಾಗಿದೆ. ಸುಸ್ತಾದರೆ ಅಲ್ಲಲ್ಲಿ ಕುಳಿತು ವಿಶ್ರಾಂತಿಪಡೆಯಲು ಕಲ್ಲು ಬೆಂಚಿನ ವ್ಯವಸ್ಥೆಯೂ ಇದೆ.
ಚಾಮುಂಡಿಬೆಟ್ಟದತ್ತ ತೆರಳಲು ಮರೆಯಬೇಡಿ
ಇಲ್ಲಿ ಅಡ್ಡಾಡುತ್ತಿದ್ದರೆ ಅರಣ್ಯದ ಮಹತ್ವವೇನು ಎಂಬುದು ಗೊತ್ತಾಗುತ್ತದೆ. ಗೊತ್ತಾಗದವರಿಗೆ ಇಲ್ಲಿ ಅಳವಡಿಸಲಾಗಿರುವ ಫಲಕಗಳು ಹೇಳುತ್ತವೆ. ಬೃಹತ್ ಬಂಡೆಗಳ ರಾಶಿಗಳು ಅಲ್ಲಲ್ಲಿದ್ದು, ಹೆಜ್ಜೆ ಹಾಕುತ್ತಾ ಹೋದರೆ ಗಿಡಮರಗಳು, ಬಿದಿರು ಮೆಳೆಗಳು ಕೈಬೀಸಿ ಕರೆದಂತೆ ಭಾಸವಾಗುತ್ತದೆ. ಅಷ್ಟೇ ಅಲ್ಲದೆ ನಿಸರ್ಗದ ಸ್ವರ್ಗ ಕಣ್ಮುಂದೆ ಬಂದ ಅನುಭವವಾಗುತ್ತದೆ. ಇಷ್ಟೆಲ್ಲವೂ ನಗರದೊಳಗೆ ಸಿಗುತ್ತದೆ ಎನ್ನುವುದಾದರೆ ಇನ್ನೇಕೆ ತಡ ಮೈಸೂರಿನ ಚಾಮುಂಡಿಬೆಟ್ಟದತ್ತ ಹೆಜ್ಜೆ ಹಾಕಿ.












Click it and Unblock the Notifications