Madikeri Tourist Places: ಮಡಿಕೇರಿಯಲ್ಲಿ ಮಂಜಿನ ಆಟಕ್ಕೆ ಬೆರಗಾಗದವರಿಲ್ಲ..ಯಾಕೆ ಗೊತ್ತಾ?
ಬೂಮಿನ್ ತಬ್ಬಿದ್ ಮೋಡ್ ಇದ್ದಂಗೆ
ಬೆಳ್ಳಿ ಬಳದಿದ್ ರೋಡ್ ಇದ್ದಂಗೆ
ಸಾಫಾಗ್ ಅಳ್ಳ ತಿಟ್ಟಿಲ್ದಂಗೆ
ಮಡಿಕೇರಿಲಿ ಮಂಜು...
ಇದು ಮಡಿಕೇರಿಯ ಮಂಜಿನ ಕುರಿತು ಕವಿ ಜಿ.ಪಿ.ರಾಜರತ್ನಂರವರು ಬರೆದ ಕವನದ ಸಾಲು... ಇದು ಮಡಿಕೇರಿಗೆ ಹೋಗವ ಮಂದಿಯನ್ನು ಸದಾ ಗುನುಗುವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ ಮಂಜಿನ ಚಿತ್ತಾರಕ್ಕೆ ಈ ಕವನದ ಸಾಲು ನಮ್ಮ ಮುಂದೆ ಹಾದು ಹೋಗುತ್ತಲೇ ಇರುತ್ತದೆ.. ಮುಂಜಾನೆಯ ಮಂಜಿನ ಆಟ ಇಂತಹ ತಮ್ಮೊಳಗೆ ಹತ್ತಾರು ಕವನಗಳಿಗೆ ಸ್ಪೂರ್ತಿ ತುಂಬುತ್ತದೆ.. ತಮಗೆ ಗೊತ್ತಿಲ್ಲದಂತೆ ಕ್ಯಾಮರಾಗಳಲ್ಲಿ ದೃಶ್ಯಗಳು ಸೆರೆಯಾಗುತ್ತವೆ.

ಹಾಗೆನೋಡಿದರೆ ಮಂಜಿನ ನಗರಿ ಮಡಿಕೇರಿ ಇತರೆ ನಗರಗಳಿಗೆ ಹೋಲಿಸಿದರೆ ಹಲವು ವೈವಿಧ್ಯತೆಗಳನ್ನು ಹೊಂದಿ ವಿಶಿಷ್ಟವಾಗಿಯೂ, ವಿಭಿನ್ನವಾಗಿಯೂ ಗಮನಸೆಳೆಯುತ್ತವೆ. ಮಡಿಕೇರಿಗೊಂದು ಸುತ್ತು ಹೊಡೆದರೆ ಇಲ್ಲಿಂದ ಕಂಡು ನಿಸರ್ಗದ ಸುಂದರತೆ ಮತ್ತು ಅದರೊಂದಿಗೆ ಬೆರೆತು ಮಂಜು ನಮಗೆ ಹೊಸದೊಂದು ಲೋಕವನ್ನು ತೆರೆದಿಡುತ್ತಾ ಹೋಗುತ್ತದೆ. ಹಾಗೆ ಸುಮ್ಮನೆ ಕಣ್ಣು ಹಾಯಿಸಿದರೆ ನಮ್ಮ ಮುಂದೆ ಬರುವ ನೋಟಗಳು ಒಂದಾ... ಎರಡಾ... ನೂರಾರು.
ಒಂದನ್ನು ಮತ್ತೊಂದು ಮೀರಿಸುವಂತೆ ನಿಂತ ಬೆಟ್ಟಗುಡ್ಡಗಳು ಅವುಗಳ ನಡುವೆ ಒತ್ತೊತ್ತಾಗಿ ಬೆಳೆದು ನಿಂತ ಮರಗಿಡಗಳು... ದೂರದ ಬೆಟ್ಟ ಕಣಿವೆಗಳಲ್ಲಿ ಬೆಳೆದ ಹಸಿರು ವನದ ರಾಶಿ... ಹೀಗೆ ಒಂದೇ ಎರಡೇ ನಿಸರ್ಗ ಪ್ರೇಮಿಗಳಿಗೆ ರಸದೌತಣ. ಇನ್ನು ಪ್ರವಾಸಿಗರು ವೀಕ್ಷಿಸಲಾರ್ಹ ಹತ್ತು ಹಲವು ತಾಣಗಳೂ ಇಲ್ಲಿವೆ. ಅವುಗಳೆಂದರೆ ಕೋಟೆ, ಅರಮನೆ, ಗದ್ದುಗೆ, ಓಂಕಾರೇಶ್ವರ ದೇವಸ್ಥಾನ, ರಾಜಾಸೀಟ್ ಹೀಗೆ... ಇನ್ನು ಮಳೆಗಾಲದಲ್ಲಿ ಭೋರ್ಗರೆದು ಸುರಿಯುವ ಮಳೆ. ಚಳಿಗಾಲದಲ್ಲಿ ಮೈಕೊರೆಯುವ ಚಳಿ. ಬೇಸಿಗೆಯಲ್ಲಿ ತಂಪು ಹವೆ.

ಮಡಿಕೇರಿಯಲ್ಲಿ ಮಂಜಿನ ಲೋಕ
ಇದೆಲ್ಲದರ ನಡುವೆ ಇಡೀ ನಗರವನ್ನಾವರಿಸುವ ಮಂಜು ಸ್ವರ್ಗಲೋಕವನ್ನು ಸೃಷ್ಟಿಸಿ, ಅಲ್ಲಿಯೇ ಹೆಜ್ಜೆಯಿಡುತ್ತಿದ್ದೇವೆಯೇನೋ ಎಂಬಂತೆ ಮಾಡಿಬಿಡುತ್ತದೆ. ಈ ಬಾರಿ ಭಾರೀ ಮಳೆ ಸುರಿದಿದೆ ಜಿಟಿ...ಜಿಟಿ... ಯಿಂದ ಆರಂಭವಾಗಿ ಧೋ ಎನ್ನುವ ತನಕ ಮಳೆ ಸುರಿದಿದೆ. ಇದೆಲ್ಲದರ ನಡುವೆ ಮೈಕೊರೆಯುವ ಚಳಿ. ಸದಾ ಮಳೆ ಮೋಡದ ಮುಸುಕು ಹೊದ್ದು ಕುಳಿತಂತಿರುವ ವಾತಾವರಣ ಗಮನಸೆಳೆಯುತ್ತಿದ್ದು, ಸದ್ಯ ಸುಂದರ ಕಿನ್ನರಲೋಕವನ್ನೇ ಸೃಷ್ಟಿ ಮಾಡಿ ನಿಂತಿದೆ.
ಮುಂಜಾವು ಮಡಿಕೇರಿ ನಗರದಲ್ಲಿ ಹೆಜ್ಜೆಯಿಡುತ್ತಿದ್ದರೆ ಪುರಾಣದ ಸ್ವರ್ಗಲೋಕ ನೆನಪಾಗಿ ಅಲ್ಲಿಯೇ ನಡೆದಾಡುತ್ತಿದ್ದೇವೆಯೇನೋ ಎಂಬಂತೆ ಭಾಸವಾಗದಿರದು. ನಮ್ಮನ್ನು ಮುಸುಕು ಹಾಕಿ ತೇಲಿ ಹೋಗುವ ಮಂಜಿನ ತೆರೆಗಳು ಏರು-ತಗ್ಗು ಹಳ್ಳ- ಕೊಳ್ಳಗಳನ್ನೆಲ್ಲಾ ತುಂಬಿ ಕಣ್ಣು ಹಾಯಿಸಿದೆಡೆಗಳಲೆಲ್ಲಾ ಬರೀ ಮಂಜೇ ತುಂಬಿ ತುಳುಕುತ್ತಾ ಒಂದು ಕ್ಷಣ ತಬ್ಬಿಬ್ಬುಗೊಳಿಸಿ ಬಿಡುತ್ತದೆ. ಒಬ್ಬರಿಗೆ ಮತ್ತೊಬ್ಬರು ಕಾಣದಷ್ಟು ದಟ್ಟವಾಗಿ ಆವರಿಸಿಕೊಳ್ಳುವ ಮಂಜು ಬೆಟ್ಟಗುಡ್ಡ ಕಣಿವೆಗಳನ್ನೆಲ್ಲಾ ಒಂದು ಮಾಡಿ ಮಂಜಿನಸಾಗರವನ್ನೇ ಸೃಷ್ಟಿಸಿ ಬಿಡುತ್ತದೆ.

ಮಂಜಿನ ಓಟಕ್ಕೆ ಮನಸೋಲದವರಿಲ್ಲ
ಹೆಮ್ಮರಗಳೆಡೆಗೆ ನುಸುಳಿ ಝರಿ ಮೇಲಿನ ಪೊದೆಗಳ ಮೇಲೆ ಬಣ್ಣದ ಚಿತ್ತಾರ ಬಿಡಿಸಿ ಸೂರ್ಯ ರಶ್ಮಿ ಮೈಮೇಲೆ ಬೀಳುತ್ತಿದ್ದಂತೆಯೇ ನೆಗೆದು ಓಡುವ ಓಟ ಮನಮೋಹಕವಾಗಿರುತ್ತದೆ. ಒಮ್ಮೊಮ್ಮೆ ಇಡೀ ನಗರವನ್ನು ಬೆಳ್ಳಿ ಪರದೆಯೊಳಗೆ ಬಂಧಿಸಿ ಆಕಾಶ ಭೂಮಿಯನ್ನು ಒಂದು ಮಾಡಿ ನಿಂತು ಬಿಡುತ್ತದೆ. ಇನ್ನು ರಾಜಾಸೀಟಿನತ್ತ ಹೆಜ್ಜೆಹಾಕಿದರೆ ಅಲ್ಲಿ ಕಾಣಸಿಗುವ ನಯನ ಮನೋಹರ ದೃಶ್ಯ ನಿಸರ್ಗ ಆಸ್ವಾದಕರನ್ನು ಪುಳಕಗೊಳಿಸುವುದರೊಂದಿಗೆ ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ.
ಗುಡ್ಡದಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ಹಸಿರ ಮರಗಳ ಮೇಲೆಲ್ಲಾ ಬೆಳ್ಳಿಸುರಿದು ಬಿಡುವ ಮಂಜು ಬೀಸುವ ಗಾಳಿಗೆ ಲಾಗ ಹೊಡೆಯುತ್ತಿರುತ್ತದೆ. ಮಂಜಿನ ಪರದೆಯಲ್ಲಿ ಅಡಗಿದ ಮರಗಳು ಆಗೊಮ್ಮೆ ಈಗೊಮ್ಮೆ ಪರದೆ ಸರಿಸಿ ಇಣುಕಿ ತುಂಟ ನೋಟ ಬೀರುತ್ತವೆ. ಗಿಡ ಮರಗಳ ಮೇಲೆಲ್ಲಾ ಹರಡಿ ನಿಂತ ಮಂಜು ಹನಿಗಳು ಪಟಪಟನೆ ತೊಟ್ಟಿಕ್ಕುತ್ತಿದ್ದರೆ ಮಜವೋ ಮಜಾ. ಆ ಗುಡ್ಡ ಈ ಗುಡ್ಡ ಮಧ್ಯದ ಕಣಿವೆಗೆ ಸೇತುವೆ ಕಟ್ಟಿ ಒಂದೆಡೆಯಿಂದ ಮತ್ತೊಂದೆಡೆಗೆ ತುರ್ತು ಕೆಲಸವಿರುವಂತೆ ಓಡುತ್ತಿರುತ್ತವೆ.
ಮಂಜಿನಲ್ಲಿ ಮಿಂದೇಳುವ ಪ್ರವಾಸಿಗರು
ಕಣಿವೆಗಳ ನಡುವಿನ ಹಾವು ಸರಿದಂತಿರುವ ರಸ್ತೆಯಲ್ಲಿ ಸಾಗಿಬರುವ ವಾಹನಗಳ ಮಂದ ದೀಪ ಹೊಸ ಅನುಭವ ನೀಡುತ್ತದೆ. ಸೂರ್ಯೋದಯದ ಹೊತ್ತಿಗೆ ತನ್ನ ಮೇಲೆ ಬೀಳುವ ಸೂರ್ಯರಶ್ಮಿಯಲ್ಲಿ ಬಗೆಬಗೆಯ ಚೆಲುವು ಪ್ರದರ್ಶಿಸುವ, ಸೂರ್ಯನ ಪ್ರಖರತೆ ಹೆಚ್ಚಾಗುತ್ತಿದ್ದಂತೆಯೇ ಪರದೆ ಕಳಚಿ ಮಾಯವಾಗಿ ಬಿಡುವ ಮಂಜು ಕೆಲವೊಮ್ಮೆ ಇಡೀ ದಿನವಿದ್ದು, ವಾಹನಗಳು ದೀಪ ಉರಿಸಿಕೊಂಡೇ ಓಡಾಡುವಂತೆ ಮಾಡಿ ಬಿಡುತ್ತದೆ.
ಈ ಬಾರಿಯಂತು ಮಳೆಯ ಜತೆಗೆ ಮಂಜು ಸೇರಿ ಇಲ್ಲಿನ ಕೃಷಿಕರಿಗೂ ಸಂಚಕಾರ ತಂದಿದೆ. ಪರಿಣಾಮ ಕಾಫಿ ಫಸಲು ಉದುರುತ್ತಿದೆ. ಕರಿಮೆಣಸಿಗೆ ಮಾರಕವಾಗುತ್ತಿದೆ. ಅದು ಏನೇ ಇರಲಿ ಮಡಿಕೇರಿಗೆ ಮಂಜು ಕಳೆಕಟ್ಟುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮುಂದಿನ ದಿನಗಳಲ್ಲಿ ಮಳೆ ಕಡಿಮೆಯಾಗಿ ಮಂಜಿನ ಆಟವೇ ಮುಂದುವರೆಯಲಿದೆ. ಹೀಗಾಗಿ ಈ ಸುಂದರ ವಾತಾವರಣದಲ್ಲಿ ಮಂಜಿನಲ್ಲಿ ಮಿಂದೇಳಲೆಂದೇ ಪ್ರವಾಸಿಗರು ಹೆಚ್ಚೆಚ್ಚು ಆಗಮಿಸುವುದು ಸಾಮಾನ್ಯವಾಗಿದೆ.












Click it and Unblock the Notifications