ಮಡಿಕೇರಿ: ಸಾಕಾನೆಗಳ ತಾಣ ದುಬಾರೆಗೆ ತೆರಳುವುದು ಹೇಗೆ? ಹೋಗುವ ಮುನ್ನ ಈ ವಿಚಾರ ನೆನಪಿನಲ್ಲಿಡಿ

ಮಡಿಕೇರಿ, ಡಿಸೆಂಬರ್‌ 12: ಕಾವೇರಿ ನದಿಯಿಂದ ಸೃಷ್ಟಿಯಾದ ದುಬಾರೆ ದ್ವೀಪ ಪ್ರದೇಶವಾಗಿದೆ. ಸುತ್ತಲೂ ಹರಿಯುವ ಕಾವೇರಿ ನದಿ ಅದರ ನಡುವೆ ನೆಲೆನಿಂತಿರುವ ಈ ಸ್ಥಳ ಇವತ್ತು ಆನೆಗಳ ಶಿಬಿರವಾಗಿ, ಪ್ರವಾಸಿ ಕೇಂದ್ರವಾಗಿ, ನಿಸರ್ಗ ಪ್ರಿಯರಿಗೆ ಆನಂದದ ನೆಲೆಯಾಗಿ ಎಲ್ಲರನ್ನು ಆಕರ್ಷಿಸುತ್ತದೆ. ಕೊಡಗಿನಲ್ಲಿರುವ ಪ್ರವಾಸಿ ತಾಣಗಳ ಪೈಕಿ ವಿಭಿನ್ನ ಮತ್ತು ವಿಶಿಷ್ಟವಾಗಿ ಕಂಗೊಳಿಸುವ ದುಬಾರೆ ಪ್ರಾಕೃತಿಕ ಚೆಲುವಿನ ತಾಣ ಎನ್ನುವುದರಲ್ಲಿ ಎರಡು ಮಾತಿಲ್ಲ.

ಸುತ್ತಲೂ ಝುಳುಝುಳು ಶಬ್ಧ ಮಾಡುತ್ತಾ ಹರಿಯುವ ಕಾವೇರಿ ನದಿ. ಅದರೊಳಗೆ ನೀರನ್ನು ಸೀಳುತ್ತಾ ಸಾಗುವ ಯಾಂತ್ರಿಕ ದೋಣಿಗಳು..ನದಿ ದಂಡೆ ತುಂಬಾ ಬ‍್ರಹತ್ ಬೇರುಗಳನ್ನು ಹರಡಿ ಮುಗಿಲತ್ತ ಮುಖ ಮಾಡಿ ನಿಂತ ಹೆಮ್ಮರಗಳು..ಅದರಲ್ಲಿ ಆಶ್ರಯ ಪಡೆದ ಜೀವರಾಶಿಗಳ ಕೂಗಾಟ.. ಅದರಾಚೆಗೆ ಘೀಳಿಡುವ, ನದಿಯಲ್ಲಿ ಆನಂದದಿಂದ ತೇಲಾಡುವ ಸಾಕಾನೆಗಳು.. ಮರಗಿಡಗಳಲ್ಲಿ ನೆಲೆನಿಂತ ಪಕ್ಷಿಗಳ ಚಿಲಿಪಿಲಿ ಇದೆಲ್ಲವೂ ದುಬಾರೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತದೆ.

Travel News: How To Reach Dubare Elephant Camp

ಪ್ರಕೃತಿ ನಡುವೆ ಅಮೂಲ್ಯ ಕ್ಷಣಗಳನ್ನು ಕಳೆಯಲೆಂದೇ ದೂರದ ನಗರಗಳಿಂದ ವಾರಾಂತ್ಯದ ದಿನಗಳಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಹೀಗೆ ಬರುವ ಪ್ರವಾಸಿಗರು ಇಲ್ಲಿನ ಕಾವೇರಿನದಿ ನೀರಿನಲ್ಲಿ ಆಟವಾಡಲು, ಅದರಾಚೆಗೆ ದುಬಾರೆ ಆನೆ ಶಿಬಿರಗಳಲ್ಲಿರುವ ಸಾಕಾನೆಗಳ ದಿನಚರಿ ನೋಡಲು, ಸಫಾರಿ ಮಾಡಲು ಇಷ್ಟಪಡುತ್ತಾರೆ. ಮಳೆಗಾಲದಲ್ಲಿ ಭೋರ್ಗರೆದು ಹರಿಯುವ ಕಾವೇರಿ ನಂತರದ ದಿನಗಳಲ್ಲಿ ಮೌನ ತಾಳುತ್ತಾಳೆ. ಈ ವೇಳೆ ನೀರಿನೊಳಗೆ ಅವಿತುಕೊಂಡಿದ್ದ ಬಂಡೆಗಳೆಲ್ಲವೂ ಹೊರ ಬಂದು ಕರ್ರಗೆ ಕಾಣಿಸುತ್ತವೆ. ಬೇಸಿಗೆಯ ದಿನಗಳಲ್ಲಿ ಈ ಕಲ್ಲಿನ ಮೇಲೆ ಕಾಲಿಟ್ಟು ಹಾರುತ್ತಾ ನದಿ ದಾಟುವ ಖುಷಿ ಮರೆಯಲಾರದ ಅನುಭವ ನೀಡುತ್ತದೆ.

ವರ್ಷಪೂರ್ತಿ ತುಂಬಿ ತುಳುಕುವ ಪ್ರವಾಸಿಗರು

ಮೊದಲೆಲ್ಲ ಮಳೆಗಾಲದ ದಿನಗಳಲ್ಲಿ ದುಬಾರೆಯತ್ತ ಯಾರೂ ಬರುತ್ತಿರಲಿಲ್ಲ. ಮಳೆ ಸುರಿದು ಕಾವೇರಿ ನದಿ ತುಂಬಿ ಹರಿದಾಗ ಇತ್ತ ಯಾರೂ ಸುಳಿಯುತ್ತಿರಲಿಲ್ಲ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಮಳೆಗಾಲದಲ್ಲಿ ರಿವರ್ ರಾಫ್ಟಿಂಗ್ ನಡೆಸುವುದರಿಂದ ಈ ರೋಮಾಂಚನಕಾರಿ ಆಟವಾಡಲು ಜನ ಮುಗಿಬಿದ್ದು ಬರುತ್ತಿದ್ದಾರೆ. ಹೀಗಾಗಿ ವರ್ಷಪೂರ್ತಿ ದುಬಾರೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ.

Travel News: How To Reach Dubare Elephant Camp

ಒಂದು ಕಾಲದಲ್ಲಿ ಕಾಡಿನಿಂದ ನಾಡಿಗೆ ನುಗ್ಗಿ ಪುಂಡಾಟ ನಡೆಸುವ ಕಾಡಾನೆಗಳನ್ನು ಹಿಡಿದು ಪಳಗಿಸುವ ತಾಣವಾಗಿತ್ತು. ಆ ನಂತರ ಸಾಕಾನೆಗಳ ಶಿಬಿರವಾಗಿದ್ದು, ಆನೆಗಳಿಗೆ ತರಬೇತಿ ನೀಡಲಾಗುತ್ತದೆ. ಮೊದಲೆಲ್ಲ ಇಲ್ಲಿನ ಆನೆಗಳನ್ನು ಕಾಡಿನಿಂದ ಕಡಿದ ಮರವನ್ನು ಎಳೆಯಲು ಬಳಸಲಾಗುತ್ತಿತ್ತು. ಆದರೆ ಅದಕ್ಕೆಲ್ಲ ನಿರ್ಬಂಧ ಹೇರಿದ ಮೇಲೆ ಇತ್ತೀಚೆಗಿನ ವರ್ಷಗಳಲ್ಲಿ ಮೈಸೂರು ದಸರಾ ಮತ್ತು ಹುಲಿ ಸೆರೆಹಿಡಿಯುವ, ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತದೆ. ಇಷ್ಟೇ ಅಲ್ಲದೆ, ಸಫಾರಿಗೂ ಬಳಕೆಯಾಗುತ್ತಿವೆ.

ನಿಸರ್ಗದೊಂದಿಗೆ ಕಾಲಕಳೆಯಲು ಅವಕಾಶ

ಇನ್ನು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಶಿಬಿರದಲ್ಲಿ ಸಾಕಾನೆಗಳ ದಿನಚರಿ ನೋಡಲು ಅವಕಾಶವಿದೆ. ಸಾಕಾನೆಗಳನ್ನು ಕಟ್ಟಿ ಹಾಕುವ ಸ್ಥಳದಿಂದ ಕಾವೇರಿ ನದಿಗೆ ಕರೆದೊಯ್ದು ಅಲ್ಲಿ ಸ್ನಾನ ಮಾಡಿಸಿದ ನಂತರ, ಅವುಗಳಿಗೆ ಆಹಾರವನ್ನು ಹೇಗೇಗೆ ತಯಾರಿಸಿ ಕೊಡಲಾಗುತ್ತದೆ? ಅವು ಮಾವುತ ಮತ್ತು ಕಾವಾಡಿಗಳ ಆಜ್ಞೆಯನ್ನು ಹೇಗೆ ಪಾಲಿಸುತ್ತವೆ ಎಂಬಿತ್ಯಾದಿಗಳನ್ನು ನೋಡಲು ಮತ್ತು ಅವುಗಳೊಂದಿಗೆ ಒಂದಷ್ಟು ಸಮಯವನ್ನು ಕಳೆಯಲು ಅವಕಾಶವೂ ದೊರೆಯಲಿದೆ.

Travel News: How To Reach Dubare Elephant Camp

ಸುಮಾರು 12,757 ಎಕರೆ ವಿಸ್ತೀರ್ಣ ಹೊಂದಿರುವ ದುಬಾರೆ ಅರಣ್ಯ ಪ್ರದೇಶದಲ್ಲಿ ತಲತಲಾಂತರದಿಂದ ಗಿರಿಜನರು ವಾಸಿಸುತ್ತಾ ಬಂದಿದ್ದಾರೆ. ಇಲ್ಲಿನ ಅರಣ್ಯಗಳಲ್ಲಿ ಕಾಡೆಮ್ಮೆ, ಚಿರತೆ, ಸೀಳು ನಾಯಿ, ಕರಡಿ, ಜಿಂಕೆ, ನವಿಲು ಸೇರಿದಂತೆ ಹಲವು ಬಗೆಯ ಪಕ್ಷಿಗಳಿದ್ದು, ಹೆಮ್ಮರಗಳಿಂದ ಆವೃತವಾಗಿವೆ. ಹೀಗಾಗಿ ಪ್ರಕೃತಿಯ ಚೆಲುವಿನ ನೋಟ ನೋಡಲೆಂದೇ ಹೆಚ್ಚಿನವರು ಇಲ್ಲಿಗೆ ಬರುತ್ತಾರೆ. ಅದರಲ್ಲೂ ಆನೆಗಳ ಮೇಲೆ ಪ್ರೀತಿಯಿದ್ದವರಂತೂ ಇಲ್ಲಿಗೆ ಆನೆಗಳೊಂದಿಗೆ ಕಾಲಕಳೆಯಲೆಂದೇ ಬರುವುದು ವಿಶೇಷವಾಗಿದೆ.

ಕುಶಾಲನಗರಕ್ಕೆ ಸನಿಹದ ತಾಣ

ದುಬಾರೆ ಆನೆ ಶಿಬಿರ ಕಾವೇರಿ ನದಿಯಿಂದ ಆವೃತವಾಗಿದ್ದು, ನದಿ ದಡದ ಪ್ರದೇಶದಿಂದ ದೋಣಿಗಳ ಸಹಾಯದಿಂದ ಹೋಗ ಬೇಕಾಗುತ್ತದೆ. ಇಲ್ಲಿಗೆ ತೂಗುಸೇತುವೆ ನಿರ್ಮಾಣ ಮಾಡಬೇಕೆಂಬ ಒತ್ತಾಯಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ಅದು ಸಕಾರಗೊಂಡರೆ ಇನ್ನಷ್ಟು ಆಕರ್ಷಣೆ ಪಡೆಯಲಿದೆ. ಕೊಡಗಿನ ಹೆಬ್ಬಾಗಿಲು ಎಂದೇ ಕರೆಯುವ ಕುಶಾಲನಗರದಿಂದ ಸುಮಾರು 18 ಕಿ.ಮೀ. ದೂರದಲ್ಲಿ ದುಬಾರೆಯಿದ್ದು. ಸಿದ್ದಾಪುರ ರಸ್ತೆಯಲ್ಲಿ ಸಾಗಿದಾಗ ಸಿಗುವ ನಂಜರಾಯಪಟ್ಟಣದಿಂದ ಎಡಕ್ಕೆ ತಿರುಗಿದರೆ ಅಲ್ಲಿಂದ ಸುಮಾರು 1ಕಿ.ಮೀ. ದೂರ ಸಾಗಿದರೆ ತಲುಪಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+