ಕೊಡಗಿನ ಬೇಳೂರು ಬಾಣೆಯಲ್ಲಿ ನಿಸರ್ಗ ಪ್ರೇಮಿಗಳಿಗೆ ರಸದೌತಣ: ಇಲ್ಲಿಗೆ ತೆರಳುವಾಗ ಈ ವಿಚಾರ ನೆನಪಿರಲಿ..!
ಮಡಿಕೇರಿ, ನವೆಂಬರ್ 23: ಕೊಡಗಿಗೆ ಆಗಮಿಸುವ ಪ್ರವಾಸಿಗರನ್ನು ಇಲ್ಲಿನ ಬೆಟ್ಟಗುಡ್ಡಗಳು, ಜಲಪಾತಗಳು, ದೇಗುಲಗಳು, ಕೋಟೆ ಕೊತ್ತಲಗಳು, ತಿನಿಸುಗಳು ಹೀಗೆ ಹತ್ತಾರು ವಿಶೇಷತೆಗಳು ಸೆಳೆಯುತ್ತವೆ. ಇದರ ನಡುವೆಯೂ ಪ್ರವಾಸಿ ತಾಣವೊಂದು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ ಅದುವೇ ಬೇಳೂರು ಬಾಣೆ.
ಮೇಲ್ನೋಟಕ್ಕೆ ಇದು ವಿಶಾಲ ಮೈದಾನ ಪ್ರದೇಶವಾಗಿದ್ದು, ಇತ್ತೀಚೆಗಿನ ವರ್ಷಗಳಲ್ಲಿ ಇಲ್ಲಿನ ಸುಂದರ ನೋಟ ಪ್ರವಾಸಿಗರನ್ನು ಸೆಳೆಯುತ್ತಿದ್ದು, ಈ ಮಾರ್ಗದಲ್ಲಿ ಹಾದು ಹೋಗುವ ಪ್ರವಾಸಿಗರು ಇಲ್ಲಿ ಒಂದಷ್ಟು ಸಮಯವನ್ನು ಕಳೆದು ಸುತ್ತಲಿನ ಪ್ರಕೃತಿಯ ಚೆಲುವನ್ನು ಸವಿದು ಮುಂದೆ ಸಾಗುತ್ತಾರೆ. ಇಷ್ಟಕ್ಕೂ ಬೇಳೂರು ಬಾಣೆ ಎಂಬ ಸುಂದರ ನಿಸರ್ಗ ನಿರ್ಮಿತ ತಾಣವು ಕೊಡಗಿನ ಕುಶಾಲನಗರ - ಸೋಮವಾರಪೇಟೆ ಮಾರ್ಗದಲ್ಲಿದ್ದು, ಸೋಮವಾರಪೇಟೆಗೆ ಸಮೀಪದಲ್ಲಿದೆ.

ಕುಶಾಲಗರದಿಂದ ಸೋಮವಾರಪೇಟೆಗೆ ತೆರಳುವ ರಸ್ತೆ ಬದಿಯಲ್ಲಿಯೇ ಬೇಳೂರು ಬಾಣೆ ಇರುವುದರಿಂದ ಇಲ್ಲಿನ ಸೌಂದರ್ಯ ಈ ಮಾರ್ಗದಲ್ಲಿ ಸಂಚರಿಸುವ ಪ್ರತಿಯೊಬ್ಬರಿಗೂ ಲಭ್ಯವಾಗುತ್ತದೆ. ಇತ್ತೀಚೆಗಿನ ತನಕವೂ ಆಗೊಮ್ಮೆ ಈಗೊಮ್ಮೆ ಮಳೆ ಸುರಿಯುತ್ತಿರುವ ಕಾರಣ ಇಡೀ ಪರಿಸರ ಹಸಿರಿನಿಂದ ಕಂಗೊಳಿಸುತ್ತಿದ್ದರೆ ಅದರ ನಡುವೆ ಏರು ಪ್ರದೇಶದಲ್ಲಿ ಪ್ರಕೃತಿಯೇ ನಿರ್ಮಿಸಿರುವ ಹಸಿರು ಹುಲ್ಲಿನಿಂದ ನಿರ್ಮಿತವಾಗಿರುವ ಬಾಣೆ(ಮೈದಾನ ಪ್ರದೇಶ) ಕಣ್ಮನ ಸೆಳೆಯುತ್ತದೆ.
ಬಾಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು
ಕೊಡಗಿನಲ್ಲಿ ವಿಶಾಲವಾದ ಮೈದಾನ ಪ್ರದೇಶವನ್ನು ಬಾಣೆ ಎಂದು ಕರೆಯಲಾಗುತ್ತದೆ. ಹಿಂದಿನ ಕಾಲದಲ್ಲಿ ಭತ್ತದ ಕೃಷಿಯೇ ಪ್ರಧಾನವಾಗಿತ್ತು. ಇಂತಹ ಸಂದರ್ಭದಲ್ಲಿ ಭತ್ತದ ಕೃಷಿಗೆ ಉಳುಮೆಗೆ, ಗೊಬ್ಬರಕ್ಕೆ ದನಕರುಗಳ ಅಗತ್ಯವಿತ್ತು. ತಾವು ಹೊಂದಿರುವ ಭತ್ತದ ಕೃಷಿ ಪ್ರದೇಶಕ್ಕನುಗುಣವಾಗಿ ಎತ್ತು, ಹಸು ಕರುಗಳನ್ನು ಸಾಕಣೆ ಮಾಡುತ್ತಿದ್ದರು.
ಈ ದನಗಳು ಮೇಯಲು ಅನುಕೂಲವಾಗುವಂತೆ ಭತ್ತದ ಗದ್ದೆಗೆ ಹೊಂದಿಕೊಂಡಂತೆ ಮರಗಿಡಗಳಿಲ್ಲದ ವಿಶಾಲ ಮೈದಾನ ಪ್ರದೇಶವನ್ನು ಬಿಟ್ಟುಕೊಳ್ಳುತ್ತಿದ್ದರು. ಇದನ್ನು ಸ್ಥಳೀಯರು ಬಾಣೆ ಎಂದು ಕರೆಯುತ್ತಿದ್ದರು. ಕೆಲವರು ಸ್ವಂತ ಬಾಣೆ ಹೊಂದಿದ್ದರೆ, ಉಳಿದಂತೆ ಸರ್ಕಾರಿ ಬಾಣೆಗಳಿರುತ್ತಿದ್ದವು. ಅಲ್ಲಿ ಊರಿನವರು ದನಗಳನ್ನು ಮೇಯಿಸುತ್ತಿದ್ದರು.

ಇತ್ತೀಚೆಗಿನ ವರ್ಷಗಳಲ್ಲಿ ಭತ್ತದ ಕೃಷಿ ಇಳಿಮುಖವಾಗಿರುವ ಕಾರಣದಿಂದ ದನಕರುಗಳನ್ನು ಸಾಕಣೆ ಮಾಡುವುದು ಕಡಿಮೆಯಾಗಿದೆ. ಗದ್ದೆ ಸೇರಿದಂತೆ ಬಾಣೆ ಪ್ರದೇಶಗಳು ಕಾಫಿ ತೋಟಗಳಾಗಿ ಮಾರ್ಪಟ್ಟಿವೆ. ಇದರಿಂದ ಬಾಣೆಗಳು ಕಣ್ಮರೆಯಾಗುತ್ತಿವೆ. ಹೀಗಾಗಿ ಬೇಳೂರು ಬಾಣೆ ಅಳಿದುಳಿದವುಗಳಲ್ಲಿ ಒಂದಾಗಿ ಪ್ರವಾಸಿ ಕೇಂದ್ರವಾಗಿ ಗಮನಸೆಳೆಯುತ್ತಿದೆ.
ಬೇಸಿಗೆಯಲ್ಲಿ ಹೊಂಬಣ್ಣ... ಮಳೆಗಾಲದಲ್ಲಿ ಹಸಿರು
ವಿಶಾಲವಾದ ಬೇಳೂರು ಬಾಣೆ ಬೇಸಿಗೆಯಲ್ಲಿ ಹುಲ್ಲು ಒಣಗಿ ಹೊಂಬಣ್ಣದಿಂದ ಕಂಡು ಬಂದರೆ ಜೂನ್ ನಿಂದ ಬೇಸಿಗೆಯ ತನಕ ಹಸಿರಿನಿಂದ ಕಂಗೊಳಿಸುತ್ತದೆ. ಅದರಲ್ಲೂ ಈ ಸಮಯದಲ್ಲಿ ಸಂಪೂರ್ಣ ಹಸಿರಿನಿಂದ ಕೂಡಿರುತ್ತದೆ. ಹಸಿರಿನ ನಡುವೆ ಹಾದು ಹೋಗಿರುವ ಕಪ್ಪಗಿನ ರಸ್ತೆ. ಅಲ್ಲಲ್ಲಿ ಗುಂಪಾಗಿ ಮೇಯುವ ದನಕರುಗಳು, ಬೀಸುವ ತಂಗಾಳಿ ಕಣ್ಣು ಹಾಯಿಸಿದುದ್ದಕ್ಕೂ ಹಸಿರ ನೋಟ ಮೈಮನವನ್ನು ಮುದಗೊಳಿಸುತ್ತವೆ.
ಸುಮಾರು 58 ಎಕರೆಗೂ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಬೇಳೂರು ಬಾಣೆ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗುತ್ತದೆ. ಈ ರಸ್ತೆಯಲ್ಲಿ ಹಾದು ಹೋಗುವವರು ಇಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಒಂದಷ್ಟು ಸಮಯ ಕಳೆದು ಬಾಣೆಯಲ್ಲಿ ಆಟವಾಡಿ, ಫೋಟೋಗಳನ್ನು ತೆಗೆದುಕೊಂಡು ಹೋಗುತ್ತಾರೆ. ಇನ್ನು ಇದರ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಹೋಂಸ್ಟೇಗಳಿದ್ದು ಅಲ್ಲಿಗೆ ಬರುವ ಪ್ರವಾಸಿಗರು ಮುಂಜಾನೆ ಮತ್ತು ಸಂಜೆ ಸಮಯಗಳಲ್ಲಿ ಇಲ್ಲಿಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಾರೆ.

ಗಾಲ್ಫ್ ಟೂರ್ನಮೆಂಟ್ ಗಳಿಗೆ ವೇದಿಕೆ
ಹಲವು ದಶಕಗಳ ಹಿಂದೆ ಈ ತಾಣ ದನಗಳು ಮೇಯುವ ಬಾಣೆಯಾಗಿ ಉಳಿದಿತ್ತಾದರೂ ಈಗ ಪ್ರವಾಸಿ ತಾಣವಾಗಿದೆ. ಜತೆಗೆ ಗಾಲ್ಫ್ ಗ್ರೌಂಡ್ ಆಗಿಯೂ ಗಾಲ್ಫ್ ಟೂರ್ನ ಮೆಂಟ್ ಗಳು ನಡೆಯಲು ಕ್ರೀಡಾ ವೇದಿಕೆಯಾಗಿದೆ. ಮುಂಜಾನೆ ಮತ್ತು ಸಂಜೆ ತಂಪಾದ ವಾತಾವರಣ ಹಿತಕರವಾಗಿರುತ್ತದೆ. ಹೀಗಾಗಿಯೇ ಈ ಹೊತ್ತಿನಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆರೆಯುತ್ತಾರೆ. ಉಳಿದಂತೆ ಈ ಪ್ರದೇಶದಲ್ಲಿ ದನಕರುಗಳು ತಮ್ಮ ಪಾಡಿಗೆ ಮೇಯುತ್ತಿರುತ್ತವೆ.
ಬೇಳೂರು ಬಾಣೆಯನ್ನು ರಕ್ಷಿಸುವ ಸಲುವಾಗಿ ರಸ್ತೆಯಿಂದ ಬಾಣೆಗೆ ಯಾವುದೇ ವಾಹನವನ್ನು ತೆಗೆದುಕೊಂಡು ಹೋಗದಂತೆ ನಿರ್ಬಂಧವಿದೆ. ಜೊತೆಗೆ ಸುತ್ತಲೂ ಚರಂಡಿಯನ್ನು ತೆಗೆದು ವಾಹನ ತೆರದಂತೆ ಮಾಡಿದ್ದರೂ ಕೆಲವರು ಒಳಕ್ಕೆ ಬೈಕ್ ಗಳನ್ನು ತೆಗೆದುಕೊಂಡು ಹೋಗಿ ಹುಚ್ಚಾಟವಾಡುತ್ತಿದ್ದಾರೆ. ಈ ರೀತಿ ಮಾಡುವುದು ಪ್ರವಾಸಿಗರಿಗೆ ಶೋಭೆ ತರುವಂತಹದಲ್ಲ. ನಿಸರ್ಗ ನಿರ್ಮಿತ ಈ ತಾಣಕ್ಕೆ ಭೇಟಿ ನೀಡುವವರು ಇಲ್ಲಿನ ಪರಿಸರವನ್ನು ರಕ್ಷಿಸುವ ಕೆಲಸವನ್ನು ಮಾಡುವುದು ಬಹುಮುಖ್ಯವಾಗಿದೆ.
ಬೇಳೂರು ಬಾಣೆಗೆ ಭೇಟಿ ನೀಡಿ
ಇಲ್ಲಿ ಒಂದಷ್ಟು ಸಮಯವನ್ನು ಕಳೆದು ಹೋಗುವವರು ಕಸವನ್ನು ಎಲ್ಲೆಂದರಲ್ಲಿ ಎಸೆದು ಹೋಗದಿದ್ದರೆ ಅದು ಪರಿಸರಕ್ಕೆ ನೀಡುವ ಗೌರವವಾಗುತ್ತದೆ. ಬೇಳೂರು ಬಾಣೆ ನಿಸರ್ಗ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತಿದ್ದು, ಇದು ಹೀಗೆಯೇ ಉಳಿಯ ಬೇಕಾದರೆ ಪ್ರವಾಸಿಗರು ಇಲ್ಲಿನ ಸ್ವಚ್ಛತೆಯನ್ನು ಕಾಪಾಡುವ ಕೆಲಸ ಮಾಡುವುದು ಅಗತ್ಯವಿದೆ. ಅದು ಏನೇ ಇರಲಿ ಕೊಡಗಿಗೆ ಬರುವ ಪ್ರವಾಸಿಗರು ಬೇಳೂರು ಬಾಣೆಗೆ ಭೇಟಿ ನೀಡಲು ಮರೆಯದಿರಿ.












Click it and Unblock the Notifications