ಕಾಫಿನಾಡಿನಲ್ಲಿ ಪ್ರವಾಸಿಗರ ದಂಡು: ನೋಡುಗರನ್ನು ಕೈಬೀಸಿ ಕರೆಯುತ್ತಿದೆ ಬಲ್ಲಾಳರಾಯನ ದುರ್ಗ
ಚಿಕ್ಕಮಗಳೂರು, ಜುಲೈ 17: ಪಶ್ಚಿಮಘಟ್ಟದ ಅನನ್ಯ ಅರಣ್ಯ ಸಂಪತ್ತು ಹೊಂದಿರುವ ಚಿಕ್ಕಮಗಳೂರಿನ ಮಲೆನಾಡು ಭಾಗಗಳಲ್ಲಿ ಮಳೆ ಬಂತೆಂದರೆ ರಮಣೀಯತೆ ಸೃಷ್ಟಿಯಾಗುತ್ತದೆ. ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುವ ರಮಣೀಯ ಸ್ಥಳಗಳಲ್ಲಿ ಒಂದಾದ ಬಳ್ಳಾಲರಾಯನ ದುರ್ಗ ಮತ್ತು ರಾಣಿಝರಿಯ ಸೌಂದರ್ಯವನ್ನು ಸವಿಯಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ನೇತ್ರಾವತಿ ತುತ್ತ ತುದಿಗೆ ಪ್ರವಾಸಿಗರನ್ನು ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕಿನ ಬಲ್ಲಾಳರಾಯನದುರ್ಗ ಮತ್ತು ರಾಣಿಝರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಬಲ್ಲಾಳರಾಯನ ದುರ್ಗದ ತುದಿಯಲ್ಲಿ ನಿಂತು ಮಂಜಿನ ನಡುವೆ ಕಾಣುವ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಗ್ರಾಮಗಳನ್ನು ನೋಡಿ ಪ್ರವಾಸಿಗರು ಪುಳಕಿತರಾಗುತ್ತಿದ್ದಾರೆ.

ಕ್ಷಣಕ್ಕೊಮ್ಮೆ ಬದಲಾಗುವ ತಂಪು ವಾತಾವರಣದ ಜೊತೆ ರಾಣಿಝರಿಯ ಪ್ರಪಾತವನ್ನು ನೋಡಿ ಪ್ರಕೃತಿ ಸಮೃದ್ಧತೆಯನ್ನು ಪ್ರವಾಸಿಗರು ಆಸ್ವಾದಿಸುತ್ತಿದ್ದಾರೆ. ಕಾಫಿನಾಡಿನ ಪ್ರಸಿದ್ಧ ಪ್ರವಾಸಿ ತಾಣಗಳ ಬಳಿ ಜನ ಜಾತ್ರೆಯೇ ನೆರೆದಿದೆ. ಮುಗಿಲೆತ್ತರದ ಬೆಟ್ಟಗುಡ್ಡಗಳು, ವನರಾಶಿ, ತಂಪೆರೆವ ತುಂತುರು ಮತ್ತು ಶುದ್ಧಗಾಳಿಗೆ ಪ್ರವಾಸಿಗರು ಮಾರುಹೋಗಿದ್ದಾರೆ. ನಿತ್ಯದ ಜಂಜಾಟಗಳಿಂದ ದೂರವಾಗಿ ಪ್ರಕೃತಿಯ ಮಡಿಲಿಗೆ ಜನಸ್ತೋಮ ಹರಿದುಬರುತ್ತಿದೆ.
ಮುಳ್ಳಯ್ಯನಗಿರಿಯಲ್ಲಿ ಟ್ರಾಫಿಕ್ ಜಾಮ್
ಇನ್ನು ಮಳೆಗಾಲದ ವಿಕೇಂಡ್ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದೆ. ಅದರಲ್ಲೂ ಇಂದು ಮುಳ್ಳಯ್ಯನಗಿರಿಗೆ ಸಾವಿರಾರು ಪ್ರವಾಸಿಗರು ಒಮ್ಮೆಲೆ ಆಗಮಿಸಿದ್ದು, ಮುಳ್ಳಯ್ಯನಗಿರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮುಳ್ಳಯ್ಯನಗಿರಿಯಿಂದ ಸುಮಾರು 8 ಕಿಮೀ ವರೆಗೂ ವಾಹನಗಳು ಸಾಲು ಗಟ್ಟಿ ನಿಂತಿದ್ದು, ಪ್ರವಾಸಿಗರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮುಳ್ಳಯ್ಯನಗಿರಿ ಭಾಗದಲ್ಲಿ ಕಿರಿದಾದ ರಸ್ತೆಯಿದ್ದು, ವಾಹನಗಳನ್ನು ಚಲಾಯಿಸಲು ಪ್ರವಾಸಿಗರ ಹರಸಾಹಸಪಟ್ಟಿದ್ದಾರೆ.
ರೈತರ ಜಮೀನಿನಲ್ಲಿ ಬೆಳೆದಿದ್ದ ಸಾಗುವಾನಿ ಮರಗಳನ್ನು ಕಳ್ಳತನ ಮಾಡುತ್ತಿದ್ದ ಮೂವರ ಬಂಧನ
ಚಿಕ್ಕಮಗಳೂರು: ರೈತರು ಜಮೀನಿನಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸಾಗುವಾನಿ ಮರಗಳನ್ನ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 10 ಲಕ್ಷ ಮೌಲ್ಯದ ಸಾಗುವಾನಿ ಮರದ ತುಂಡುಗಳು ಸೇರಿದಂತೆ ಕೃತ್ಯಕ್ಕೆ ಬಳಸುತ್ತಿದ್ದ ಒಂದು ಟ್ರ್ಯಾಕ್ಟರ್ ಅನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ನಾಗರಾಜ್, ತಂಗವೇಲು, ವೆಂಕಟೇಶ್ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಬೀರೂರು, ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೈತರ ಜಮೀನಿನಲ್ಲಿ ಬೆಳೆದಿದ್ದ ಲಕ್ಷಾಂತರ ಮೌಲ್ಯದ ಸಾಗುವಾನಿ ಮರಗಳನ್ನು ರಾತ್ರೋರಾತ್ರಿ ಕಡಿದು ಕಳ್ಳತನ ಮಾಡುತ್ತಿದ್ದರು. ತರೀಕೆರೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications