Kodagu: ದಟ್ಟಕಾಡಿನ ಮಧ್ಯೆ ಸೃಷ್ಟಿಯಾದ ಕೊಡಗಿನ ‘ಹನಿವ್ಯಾಲಿ’ಯ ಯಶೋಗಾಥೆ!

ಕೊಡಗಿನ ತಡಿಯಂಡಮೋಳ್ ಬೆಟ್ಟದ ತಪ್ಪಲಿನ ಯುವಕಪಾಡಿಯಲ್ಲಿರುವ ಹನಿವ್ಯಾಲಿ ನಿಸರ್ಗದ ಸೌಂದರ್ಯವನ್ನೇ ತನ್ನೆಡೆಗೆ ಸೆಳೆದುಕೊಂಡು ನಿಂತ ತಾಣವಾಗಿದೆ. ಇಲ್ಲಿ ಏನಿದೆ? ಏನಿಲ್ಲ? ಎಂದು ಹೇಳುವುದೇ ಕಷ್ಟವಾಗುತ್ತದೆ. ಇಂತಹದೊಂದು ಅದ್ಭುತ ತಾಣ ಸೃಷ್ಟಿಯಾಗಿದ್ದರ ಹಿಂದೆ ಒಂದು ಯಶೋಗಾಥೆಯಿದೆ.

ಹನಿವ್ಯಾಲಿ ಎನ್ನುವುದು ಈಗ ಚಿರಪರಿಚಿತ. ಈ ತಾಣದ ಬಗ್ಗೆ ವಿದೇಶದಲ್ಲಿ ಕೇಳಿದರೂ ಜನ ಗೊತ್ತಿದೆ ಎನ್ನುತ್ತಾರೆ. ಅಷ್ಟೊಂದು ಖ್ಯಾತಿಯಾಗಿದೆ ಎಂದರೆ ಅದಕ್ಕೆ ಕಾರಣ ಕೊಡಗಿನ ಅಪ್ಪಾರಂಡ ಸುರೇಶ್‌ಚಂಗಪ್ಪ, ಪತ್ನಿ ಸುಶೀಲಾ ಸುರೇಶ್ ದಂಪತಿ. ಎರಡು ದಶಕಗಳ ಹಿಂದೆ ಮಾಡಿದ ಅದ್ಭುತ ಸಾಧನೆ.

The Story Behind The Coorg Honey Valley Creation

ತಂಡಿಯಂಡಮೋಳ್ ತಪ್ಪಲಿನ ಹನಿವ್ಯಾಲಿಗೆ ಹೋಗಲು ಇವತ್ತಿಗೂ ಕಷ್ಟಪಡಬೇಕು. ಏರು ತಗ್ಗಿನ ಕಚ್ಛಾ ರಸ್ತೆಯಲ್ಲಿ ಕಾಫಿತೋಟ, ಕಾಡು, ಮೇಡು, ತೊರೆಗಳ ನಡುವಿನ ಹಾದಿಯಲ್ಲಿ ಸಾಗಬೇಕು.

ಇಲ್ಲಿ ನಿಸರ್ಗ ಸೌಂದರ್ಯ ಹೊರತುಪಡಿಸಿ ಮತ್ತೇನು ಕಾಣ ಸಿಗದು. ಹಕ್ಕಿಗಳ ಚಿಲಿಪಿಲಿ, ಜೇನುನೊಣಗಳ ಝೇಂಕಾರವೇ ಇಲ್ಲಿನ ಮುಂಜಾನೆಯ ಸುಪ್ರಭಾತ.. ಮಳೆಗಾಲ ಬಂತೆಂದರೆ ಪ್ರತಿದಿನವೂ ಜಿಟಿ ಜಿಟಿ ಮಳೆಯದ್ದೇ ಹಾಡು. ಇದರಾಚೆಗೆ ಬೆಟ್ಟಗುಡ್ಡ, ಕಾಪಿ, ಕರಿಮೆಣಸು, ಏಲಕ್ಕಿಯ ತೋಟಗಳು, ಕಣ್ಣು ಹಾಯಿಸಿದಲ್ಲೆಲ್ಲ ಹಸಿರು ಚೆಲ್ಲಿದ ನಿಸರ್ಗ ಮನವನ್ನು ಉಲ್ಲಾಸಗೊಳಿಸುತ್ತದೆ.

ಎರಡು ದಶಕಗಳ ಹಿಂದೆಯೇ ಹೋಂಸ್ಟೇ ಸ್ಥಾಪನೆ

ಇಂತಹ ಪ್ರದೇಶದಲ್ಲಿ ನೆಲೆ ನಿಂತು ಬದುಕು ಕಟ್ಟುವುದರೊಂದಿಗೆ ದೇಶವಿದೇಶಗಳಿಗೂ ಈ ಸ್ಥಳವನ್ನು ಪರಿಚಯವಾಗುವಂತೆ ಮಾಡಿದ್ದು ಸುರೇಶ್ ಮತ್ತು ಸುಶೀಲ ದಂಪತಿಗಳು. ಒಂದೆರಡು ದಶಕಗಳ ಹಿಂದೆಯೋ ಹೋಂಸ್ಟೇ ಪರಿಕಲ್ಪನೆಯನ್ನು ಸೃಷ್ಟಿಸಿ ಆ ಮೂಲಕ ವಿದೇಶಿಯರನ್ನು ತಮ್ಮೂರಿನತ್ತ ಸೆಳೆದು ಕಾನನದ ನಡುವಿನ ಬದುಕಿನ ಸುಖವನ್ನು ಉಣಬಡಿಸಿದ್ದು, ಅಲ್ಲಿಂದ ಇಲ್ಲಿವರೆಗೂ ಅದನ್ನೇ ಮಾಡುತ್ತಿದ್ದಾರೆ.

The Story Behind The Coorg Honey Valley Creation

ಹನಿವ್ಯಾಲಿಗೆ ಹೋಗಬೇಕೆಂದರೆ ಮಡಿಕೇರಿಯಿಂದ ಸುಮಾರು ಇಪ್ಪತ್ತಮೂರು ಕಿ.ಮೀ.ದೂರದಲ್ಲಿರುವ ನಾಪೋಕ್ಲಿಗೆ ತೆರಳಿ ಬಳಿಕ ಕಕ್ಕಬ್ಬೆಯ ಕಬ್ಬಿನಕಾಡಿಗೆ ಹೋಗಿ ಅಲ್ಲಿಂದ ಬಲಕ್ಕೆ ಮಣ್ಣಿನ ರಸ್ತೆಯಲ್ಲಿ ಸುಮಾರು ಮೂರು ಕಿ.ಮೀ. ಸಾಗಬೇಕು. ಏರುರಸ್ತೆಯಲ್ಲಿ ಸಾಗುವುದು ವಿಶಿಷ್ಟ ಅನುಭವ. ಫೋರ್‌ವೀಲ್ ವಾಹನ ಹೊರತುಪಡಿಸಿ ಬೇರೆ ವಾಹನಗಳಲ್ಲಿ ಸಾಗುವುದು ಸ್ವಲ್ಪ ಕಷ್ಟವೇ... ಆದರೂ ಕಷ್ಟಪಟ್ಟು ಸಾಗಿ ಹನಿವ್ಯಾಲಿ ತಲುಪುತ್ತಿದ್ದಂತೆಯೇ ಅಲ್ಲಿನ ನಿಸರ್ಗ ಸೌಂದರ್ಯ ಮೈಮನಗಳನ್ನು ಪುಳಕಗೊಳಿಸುತ್ತದೆ.

ಬೆಟ್ಟಗುಡ್ಡಗಳ ನಿಸರ್ಗ ಸುಂದರ ತಾಣ

ಹಿತವಾಗಿ ಬೀಸುವ ತಂಗಾಳಿ, ಜುಳು ಜುಳು ಹರಿಯುವ ಝರಿಗಳು, ಗುಡ್ಡದ ತಪ್ಪಲಿನ ಕಾಫಿ ತೋಟಗಳು, ಮನೆ ಸುತ್ತಲೂ ಬೆಳೆದು ಹೂಬಿಟ್ಟು ಕಂಗೊಳಿಸುವ ಹೂಗಿಡಗಳು ಮನಸೆಳೆಯುತ್ತವೆ. ಈ ತಾಣ ಸದಾ ತಂಪಾಗಿದ್ದು, ಏಲಕ್ಕಿ ಹಾಗೂ ಜೇನು ಕೃಷಿಗೆ ಪ್ರಶಸ್ತವಾಗಿದೆ. ಇನ್ನು ಸುರೇಶ್ ಚಂಗಪ್ಪ ಅವರ ಬಗ್ಗೆ ಹೇಳಬೇಕೆಂದರೆ ಅವರು ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ತನ್ನೂರಿಗೆ ತೆರಳಿ ಹನಿವ್ಯಾಲಿ ಸೃಷ್ಟಿ ಮಾಡಿದ್ದೇ ಒಂದು ಅದ್ಭುತ ಸಾಧನೆ.

ಸುರೇಶ್‌ ಚಂಗಪ್ಪರವರು ಜೇನು ಕೃಷಿಯಲ್ಲಿ ಮೊದಲಿನಿಂದಲೂ ಅನುಭವಿ. ಜೇನು ಕೃಷಿಯನ್ನು ಆರಂಭ ಮಾಡುವಾಗ ಸುಮಾರು 150 ಜೇನು ಪೆಟ್ಟಿಗೆಗಳಿದ್ದವಾದರೂ ಸುಶೀಲರ ಕೈಹಿಡಿದ ಬಳಿಕ ಅದರ ಸಂಖ್ಯೆ ಹೆಚ್ಚುತ್ತಾ ಹೋಗಿ 500ಕ್ಕೆ ತಲುಪಿತ್ತು. 1994ಕ್ಕೂ ಮೊದಲು ಇವರು ದಿನವೊಂದಕ್ಕೆ 500ಕೆ.ಜಿ.ಯಷ್ಟು ಜೇನನ್ನು ಸಂಗ್ರಹಿಸಿದ್ದೂ ಇದೆ. ಆದರೆ ನಂತರದ ದಿನಗಳಲ್ಲಿ ಜೇನಿಗೆ ವೈರಸ್ ರೋಗ ತಗುಲಿದ್ದರಿಂದ ಉತ್ಪಾದನೆ ಕುಂಠಿತಗೊಂಡಿತ್ತು.

The Story Behind The Coorg Honey Valley Creation

ಕೈಹಿಡಿದ ಹೋಂಸ್ಟೇ ಉದ್ಯಮ

ಅವತ್ತಿನ ದಿನಗಳಲ್ಲಿ ಕಾಫಿಗೆ ಹೆಚ್ಚಿನ ಬೆಲೆಯಿರಲಿಲ್ಲ, ಏಲಕ್ಕಿಯಿಂದ ಹೆಚ್ಚಿನ ಇಳುವರಿ ಸಿಗುತ್ತಿರಲಿಲ್ಲ ಇಂತಹ ಸಂದರ್ಭದಲ್ಲಿ ಸುಶೀಲಾ ಚಂಗಪ್ಪರವರು ಪರ್ಯಾಯವಾಗಿ ನರ್ಸರಿ ಮಾಡಿದರು ಗಿಡಗಳನ್ನು ಬೆಳೆಸಿ ನಾಪೋಕ್ಲಿಗೆ ಕೊಂಡೊಯ್ದು ಮಾರಾಟ ಮಾಡಿದರು, ಹೂವು ಬೆಳೆಸುವುದು, ಕೋಳಿ ಸಾಕಣೆ ಎಲ್ಲವನ್ನೂ ಮಾಡಿದರು ಆದರೆ ಅದ್ಯಾವುದೂ ಅವರ ಕೈಹಿಡಿಯಲಿಲ್ಲ. ಆಗ ಅವರನ್ನು ಕೈಬೀಸಿ ಕರೆದದ್ದು ಹೋಂಸ್ಟೇ ಉದ್ಯಮ.

ನಾಪೋಕ್ಲು ಸುತ್ತಮುತ್ತ ವೀಕ್ಷಣಾರ್ಹ ದೇಗುಲಗಳು... ಚಾರಣರಿಗೆ ಹೇಳಿ ಮಾಡಿಸಿದ ಬೆಟ್ಟಗುಡ್ಡಗಳು... ಮೈಮನ ಸೆಳೆಯುವ ಜಲಪಾತಗಳು ಹೀಗೆ ಹಲವಾರು ವೀಕ್ಷಣಾರ್ಹ ತಾಣಗಳಿವೆ. ಆದರೆ ಇವುಗಳನ್ನು ನೋಡಲು ಆಗಮಿಸುವ ಪ್ರವಾಸಿಗರಿಗೆ ಊಟ ಹಾಗೂ ವಸತಿ ಸಮಸ್ಯೆ ಕಾಡುತ್ತಿತ್ತು. ಇದನ್ನರಿತ ಸುಶೀಲಾ ಸುರೇಶ್‌ರವರು ಪ್ರವಾಸಿಗರಿಗೆ ಪ್ರತ್ಯೇಕ ವಸತಿ, ಊಟದ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ 'ಹೋಂಸ್ಟೇ' ಆರಂಭಿಸಿದರು.

ವಿದೇಶಿಗರೇ ಇಲ್ಲಿನ ಅತಿಥಿಗಳು

ನಿಸರ್ಗ ಸೌಂದರ್ಯವನ್ನು ಹೊಂದಿದ ಹನಿವ್ಯಾಲಿ ತಾಣ ಬಹುಬೇಗ ದೇಶವಿದೇಶಗಳ ಪ್ರವಾಸಿಗರನ್ನು ಸೆಳೆಯತೊಡಗಿತು. ಅಷ್ಟೇ ಅಲ್ಲ ಸುಶೀಲಾ ಸುರೇಶ್ ಹಾಗೂ ಸುರೇಶ್ ಚಂಗಪ್ಪ ದಂಪತಿಗಳು ಅತಿಥಿಗಳನ್ನು ಆದರಿಸುತ್ತಿದ್ದ ರೀತಿಯೂ ಪ್ರವಾಸಿಗರನ್ನು ಸೆಳೆಯುವಲ್ಲಿ ಸಹಕಾರಿಯಾಯಿತು. ಹಾಗಾಗಿ ದೂರದಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹನಿವ್ಯಾಲಿಯತ್ತ ಬರತೊಡಗಿದರು.

ಇಲ್ಲಿಗೆ ಬಂದವರಿಗೆ ನಿಸರ್ಗದ ಸೌಂದರ್ಯ ಬೆಟ್ಟಗುಡ್ಡದ ಟ್ರಕ್ಕಿಂಗ್, ಜಲಪಾತಗಳ ವೀಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಹನಿವ್ಯಾಲಿಯಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿ ಬೆಟ್ಟಗುಡ್ಡಗಳ. ದಟ್ಟ ಕಾನನದ ನಡುವೆ ಬೆಡಗು ಬಿನ್ನಾಣದ ಜಲಪಾತವಿದೆ. ಈ ಜಲಪಾತ ಹನಿವ್ಯಾಲಿಗೊಂದು ಮೆರಗು ನೀಡಿದೆ.

ಇವರದು ಕಾಡಿನ ನಡುವಿನ ಬದುಕು

ನೀಲಕಂಡಿ ಜಲಪಾತದಿಂದ ನೀರನ್ನು ಪೈಪುಗಳ ಮೂಲಕ ಸುಮಾರು ಮೂರು ಕಿ.ಮೀ. ದೂರದ ಹನಿವ್ಯಾಲಿಗೆ ಹರಿಸಿರುವ ಸುರೇಶ್‌ಚಂಗಪ್ಪ ಆ ನೀರಿನಿಂದ ಯಾವುದೇ ಮೋಟಾರ್ ಇಲ್ಲದೆ ಸ್ಪಿಂಕ್ಲರ್ ಮೂಲಕ ನೀರು ಹಾಯಿಸುತ್ತಾರೆ.

ಜಲಪಾತದ ನೀರನ್ನು ಆಧುನಿಕ ತಂತ್ರಜ್ಞಾನ ಬಳಸಿ ವಿದ್ಯುತ್ ತಯಾರಿಸಲು ಸ್ವಿಡ್ಜರ್‌ ಲ್ಯಾಂಡ್‌ನ ಎಲಿಜಬೆತ್ ಅವರು ಸಹಕಾರ ನೀಡಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ ಹನಿವ್ಯಾಲಿ ಸುಂದರ ತಾಣ ವಾಗಿದೆ. ಬೆಟ್ಟಗುಡ್ಡ, ಕಾಡು ಇದರ ನಡುವೆ ಜೀವನ ಸಾಗಿಸುವುದು ಹೇಗಪ್ಪಾ ಎಂದು ಮೂಗು ಮುರಿದುಕೊಂಡು ಪಟ್ಟಣ ಸೇರುವರಿಗೆ ಈ ದಂಪತಿ ತಾವು ಇದ್ದಲ್ಲಿಯೇ ಹೀಗೂ ಬದುಕಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದು ಸಾಧನೆಯಲ್ಲದೆ ಮತ್ತೇನು.?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+