ಚಿಕ್ಕಮಗಳೂರು: ಪ್ರವಾಸಿಗರ ಭೇಟಿ ತಾತ್ಕಾಲಿಕವಾಗಿ ನಿರ್ಬಂಧ, ದಿನಾಂಕಗಳು
ಚಿಕ್ಕಮಗಳೂರು, ಡಿಸೆಂಬರ್ 05: ಮುಂದಿನ ವಾರ ಚಿಕ್ಕಮಗಳೂರು ಪ್ರವಾಸ ಕೈಗೊಳ್ಳುವ ಆಲೋಚನೆಯಲ್ಲಿದ್ದರೆ ಅದನ್ನು ಮುಂದೂಡಿಕೆ ಮಾಡುವುದು ಉತ್ತಮ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ ಮತ್ತು ಸುತ್ತಮುತ್ತಲಿನ ಗಿರಿಶ್ರೇಣಿ ಪ್ರದೇಶಗಳಿಗೆ ಪ್ರವಾಸಿಗರ ಭೇಟಿಗೆ ತಾತ್ಕಾಲಿಕ ನಿರ್ಬಂಧವನ್ನು ಹೇರಲಾಗಿದೆ. ಪ್ರವಾಸಿಗರು ಜಿಲ್ಲಾಡಳಿತ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಈ ಕುರಿತು ಚಿಕ್ಕಮಗಳೂರು ಜಿಲ್ಲಾಡಳಿತ ಪ್ರಕಟಣೆ ಮೂಲಕ ಮಾಹಿತಿಯನ್ನು ನೀಡಿದೆ. ಡಿಸೆಂಬರ್ 11ರ ಬುಧವಾರದಿಂದ ಡಿಸೆಂಬರ್ 15ರ ಭಾನುವಾರ ಬೆಳಗ್ಗೆ ತನಕ ಪ್ರವಾಸಿಗರ ಭೇಟಿಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಮತ್ತು ಉದ್ದ ಚಾಸಿಸ್ ವಾಹನಗಳ ಸಂಚಾರವನ್ನು ಸಹ ನಿರ್ಬಂಧಿಸಿ ಆದೇಶವನ್ನು ಹೊರಡಿಸಲಾಗಿದೆ.

ದತ್ತ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ ಮತ್ತು ಸುತ್ತಮುತ್ತಲಿನ ಗಿರಿಶ್ರೇಣಿ ಪ್ರದೇಶಗಳಲ್ಲಿ ದಿನಾಂಕ 11.12.2024 ಬೆಳಿಗ್ಗೆ ಇಂದ 15.12.2024 ಬೆಳಿಗ್ಗೆ ತನಕ ಪ್ರವಾಸಿಗರು ಬರುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಆದೇಶದ ವಿವರಗಳು: ಚಿಕ್ಕಮಗಳೂರು ತಾಲೂಕು ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಯಲ್ಲಿ ದಿನಾಂಕ 12/12/2024 ರಿಂದ ದಿನಾಂಕ 14/12/2024 ರವರೆಗೆ ದತ್ತ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಸದರಿ ಕಾರ್ಯಕ್ರಮಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ವಾಹನಗಳ ಆಗಮಿಸಲಿದ್ದಾರೆ.
ಇಲ್ಲಿಗೆ ತೆರಳುವ ರಸ್ತೆಯು ತುಂಬಾ ಕಿರಿದಾಗಿದ್ದು, ಪ್ರಸಕ್ತ ವರ್ಷದಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಭೂಕುಸಿತ ಉಂಟಾಗಿರುತ್ತದೆ. ಇದರಿಂದ ವಾಹನ ದಟ್ಟಣೆ ಹಾಗೂ ಹೆಚ್ಚಿನ ಜನ ಸಂದಣಿಯಾಗಿ ಅನಾನುಕೂಲವಾಗುವ ಸಂಭವವಿರುತ್ತದೆ.
ಆದ್ದರಿಂದ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆ, ಗಾಳಿಕೆರೆ ಮತ್ತು ಮಾಣಿಕ್ಯಧಾರಾ ತಾಣಗಳಿಗೆ ಪ್ರವಾಸಿಗರು/ ಯಾತ್ರಾರ್ಥಿಗಳು ಬರುವುದನ್ನು/ ಭೇಟಿ ನೀಡುವುದನ್ನು ದಿನಾಂಕ 11/12/2024ರ ಬೆಳಗ್ಗೆ 6 ರಿಂದ ದಿನಾಂಕ 15/12/2024ರ ಬೆಳಗ್ಗೆ 10 ಗಂಟೆ ವರೆಗೆ ತಾತ್ಕಾಲಿಕವಾಗಿ ನಿರ್ಭಂದಿಸಿದೆ.
ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಗೆ ದತ್ತಮಾಲಾಧಾರಿಗಳು, ವಿಶ್ವ ಹಿಂದೂ ಪರಿಷತ್, ಬಜರಂಗದಳ ಮುಖಂಡರು/ ಕಾರ್ಯಕರ್ತರು, ಸುತ್ತಮುತ್ತಲಿನ ವ್ಯಾಪ್ತಿಯ ಸ್ಥಳೀಯರು ಹಾಗೂ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುವವರು ಮತ್ತು ಮೇಲ್ಕಂಡ ಸ್ಥಳಗಳಲ್ಲಿ ಈಗಾಗಲೇ ಹೋಂ ಸ್ಟೇ/ ರೆಸಾರ್ಟ್‌ಗಳನ್ನು ಬುಕಿಂಗ್ ಮಾಡಿಕೊಂಡವರು ಆಗಮಿಸಬಹುದು.
ಲೋಕೋಪಯೋಗಿ ಇಲಾಖೆ ಚಿಕ್ಕಮಗಳೂರು ಇವರ ವರದಿ ಮೇರೆಗೆ ಅತ್ತಿಗುಂಡಿ ಭಾಗದಲ್ಲಿ ಅತಿಯಾದ ಮಳೆಯಿಂದ ಕವಿಕಲ್‌ಗಂಡಿ ಭಾಗದಲ್ಲಿ ರಸ್ತೆಯ ಭಾಗ ಕುಸಿದಿದ್ದು ಈ ಸ್ಥಳದಲ್ಲಿ ರಸ್ತೆಯ ಅಗಲ ಕಡಿಮೆಯಿರುತ್ತದೆ. ಒಂದು ಬಾರಿಗೆ ಕೇವಲ ಒಂದೇ ವಾಹನ ಚಲಿಸಲು ಮಾತ್ರವೇ ಅವಕಾಶವಿರುವುದರಿಂದ ಉದ್ದ ಚಾಸಿ ಇರುವ ವಾಹನಗಳ ಸಂಚಾರವು ಅಪಾಯಕಾರಿ ಆಗಿದೆ.
ಆದ ಕಾರಣ ಕೈಮರ ಚೆಕ್ ಪೋಸ್ಟ್‌ನಿಂದ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಗೆ ತೆರಳುವ ರಸ್ತೆಯಲ್ಲಿ ಉದ್ದ ಚಾಸಿ ವಾಹನಗಳ ಸಂಚಾರವನ್ನು (ಎರಡು ಆಕ್ಸೆಲ್‌ಗಿಂತ ಹೆಚ್ಚಿನ ಆಕ್ಸೆಲ್‌ಗಳನ್ನು ಹೊಂದಿರುವ ಲಾರಿ ಮತ್ತು ಬಸ್ಸುಗಳು) ನಿರ್ಬಂಧಿಸಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಡಳಿತವು ಕೋರಿದೆ.












Click it and Unblock the Notifications