ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ನೂತನ ರೈಲು ಮಾರ್ಗ; ಅಪ್‌ಡೇಟ್
ಶಿವಮೊಗ್ಗ, ಡಿಸೆಂಬರ್ 27; ಮಲೆನಾಡು ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಮಹತ್ವದ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ನೂತನ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ತಾಳಗುಪ್ಪದಿಂದ ಶಿರಸಿ ಮೂಲಕ ಹುಬ್ಬಳ್ಳಿಗೆ ರೈಲು ಮಾರ್ಗ ನಿರ್ಮಾಣವಾಗಬೇಕು ಎಂಬುದು ಹಲವು ವರ್ಷಗಳ ಬೇಡಿಕೆ.
ಗುರುಮೂರ್ತಿ ಹೆಗಡೆ ಎಂಬುವವರು ಆರ್‌ಟಿಐ ಮೂಲಕ ತಾಳಗುಪ್ಪ-ಶಿರಸಿ- ಹುಬ್ಬಳ್ಳಿ ನೂತನ ರೈಲು ಮಾರ್ಗದ ಬಗ್ಗೆ ಮಾಹಿತಿ ಕೇಳಿದ್ದರು. ರೈಲ್ವೆ ಸಚಿವಾಲಯ 14 ನವೆಂಬರ್ 2019ರಲ್ಲಿ ನೂತನ ರೈಲು ಮಾರ್ಗ ನಿರ್ಮಾಣದ ಸಂಬಂಧ ಸಮೀಕ್ಷೆಗೆ ಒಪ್ಪಿಗೆ ನೀಡಿತ್ತು.

ಆರ್‌ಟಿಐ ಮೂಲಕ ನೀಡಿರುವ ಮಾಹಿತಿಯಂತೆ ಹುಬ್ಬಳ್ಳಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ನೈಋತ್ಯ ರೈಲ್ವೆ ವಲಯ 28 ಮಾರ್ಚ್ 2023ರಲ್ಲಿ ನೂತನ ರೈಲು ಮಾರ್ಗದ ಸಮೀಕ್ಷೆಯ ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಿದೆ.
ಆದರೆ ರೈಲ್ವೆ ಸಚಿವಾಲಯ ಹೊಸ ರೈಲ್ವೆ ಮಾರ್ಗಗಳಿಗೆ ಒಪ್ಪಿಗೆ ನೀಡುವ ಮೊದಲು ಅಂತಿಮ ಸ್ಥಳ ಸಮೀಕ್ಷೆ(ಎಫ್ಎಲ್ಎಸ್) ನಡೆಸುತ್ತದೆ. ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ಮಾರ್ಗದ ಎಫ್‌ಎಲ್‌ಎಸ್ ಸಮೀಕ್ಷೆಗೆ ಇನ್ನೂ ಒಪ್ಪಿಗೆ ನೀಡಿಲ್ಲ. ಈ ಸಮೀಕ್ಷೆಯಲ್ಲಿ ಯೋಜನೆಯ ವೆಚ್ಚ, ಸಂಚಾರ ದಟ್ಟಣೆ ಮುಂತಾದ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತದೆ.
ನಿಲ್ದಾಣಗಳ ಮಾಹಿತಿ; ಸದ್ಯದ ಮಾಹಿತಿ ಪ್ರಕಾರ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ನೂತನ ರೈಲು ಮಾರ್ಗ 167 ಕಿ. ಮೀ. ಉದ್ದವಿದೆ. ಪ್ರಾಥಮಿಕ ಸಮೀಕ್ಷೆಯಲ್ಲಿ ಮಾರ್ಗದಲ್ಲಿ ಬರುವ ನಿಲ್ದಾಣಗಳನ್ನು ಸಹ ಗುರುತಿಸಲಾಗಿದೆ. ಆದರೆ ಇದಕ್ಕೆ ರೈಲ್ವೆ ಸಚಿವಾಲಯದ ಅಂತಿಮ ಒಪ್ಪಿಗೆ ಬಾಕಿ ಇದೆ.
ಈ ಮಾರ್ಗದಲ್ಲಿ ತಾಳಗುಪ್ಪ, ಕವಚೂರು, ಸಿದ್ದಾಪುರ, ಮಂಡಿಕೊಪ್ಪ, ತಾಳಗುಂಡ, ಬಿದರಹಳ್ಳಿ, ಶಿರಸಿ, ಅಂಚಹಳ್ಳಿ, ಹರಗನಹಳ್ಳಿ, ಪಾಲಾ, ಸಿದ್ದನಕೊಪ್ಫ, ಮುಂಡಗೋಡ, ಹುನಗುಂದ, ತಡಸ, ಬೆಳಗಲಿ ಮೂಲಕ ರೈಲು ಹುಬ್ಬಳ್ಳಿ ತಲುಪಲಿದೆ.
ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಕೆಲವು ದಿನಗಳ ಹಿಂದೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾಗಿದ್ದರು. ಆಗ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗದ ಬಗ್ಗೆ ಸಹ ಪ್ರಸ್ತಾಪಿಸಿದ್ದರು. ಯೋಜನೆಗೆ ಒಪ್ಪಿಗೆ ನೀಡಿ, ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಿದ್ದರು.
ಬೆಂಗಳೂರು, ಮೈಸೂರು ಸೇರಿ ವಿವಿಧ ನಗರಗಳಿಂದ ಶಿವಮೊಗ್ಗಕ್ಕೆ ಸಂಚಾರ ನಡೆಸುವ ರೈಲುಗಳು ಸಾಗರದ ತಾಳಗುಪ್ಪ ತನಕ ಸಾಗುತ್ತವೆ. ಇದು ಕೊನೆಯ ನಿಲ್ದಾಣವಾಗಿದೆ. ತಾಳಗುಪ್ಪದಿಂದ ಉತ್ತರ ಕನ್ನಡ ಜಿಲ್ಲೆಯ ಮೂಲಕ ಉತ್ತರ ಕರ್ನಾಟಕದ ಹುಬ್ಭಳ್ಳಿಗೆ ಸಂಪರ್ಕ ಕಲ್ಪಿಸಲು ನೂತನ ರೈಲು ಮಾರ್ಗ ನಿರ್ಮಾಣ ಮಾಡಬೇಕು ಎಂಬುದು ಬೇಡಿಕೆಯಾಗಿದೆ.
ನರೇಂದ್ರ ಮೋದಿ ಸಂಪುಟದಲ್ಲಿ ಬೆಳಗಾವಿಯ ಸಂಸದ ದಿ. ಸುರೇಶ್ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದರು. ಆಗ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ನೂತನ ರೈಲು ಮಾರ್ಗದ ಸಮೀಕ್ಷೆ ನಡೆಸಲು ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಈ ಪ್ರಸ್ತಾವನೆಯ ಅನ್ವಯ ಪಿ. ಇ. ಟಿ. ಸರ್ವೇ ಕಾರ್ಯಕ್ಕೆ ಒಪ್ಪಿಗೆ ಕೊಡಲಾಗಿತ್ತು.
ಈ ನೂತನ ರೈಲು ಮಾರ್ಗ ನಿರ್ಮಾಣಗೊಂಡರೆ ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿಯಾಗಲಿದೆ. ಅಲ್ಲದೇ ಮಲೆನಾಡು ಮತ್ತು ಉತ್ತರ ಕರ್ನಾಟಕದ ನಡುವೆ ಸಂಚಾರ ಸುಗಮವಾಗಲಿದೆ.
ಒಂದು ಬಾರಿ ಈ ನೂತನ ರೈಲು ಮಾರ್ಗದ ಸಮೀಕ್ಷೆಗೆ ಅನುದಾನ ಮಂಜೂರಾಗಿತ್ತು. ಬಳಿಕ ಸಮೀಕ್ಷೆ ನಡೆಯದೇ ಅದು ವಾಪಸ್ ಹೋಗಿತ್ತು. ಬಳಿಕ ಜನಪ್ರತಿನಿಧಿಗಳ ಒತ್ತಾಯದ ಕಾರಣ ಹೊಸದಾಗಿ ಸಮೀಕ್ಷೆ ಕೈಗೊಳ್ಳಲಾಗಿದೆ.












Click it and Unblock the Notifications