ಮೈಸೂರು:ಜಮೀನಿನಲ್ಲಿರುವ ಇದು ಶಿಲೆಯಲ್ಲ..ಶಿಲಾಯುಗದ ಸಮಾಧಿ!
ಮೈಸೂರು, ಜೂನ್ 7: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಬಳಿಯ ಕೊತ್ತವಳ್ಳಿ ಗ್ರಾಮದಲ್ಲಿರುವ ಶಿಲಾಯುಗದ ಸಮಾಧಿಗಳು ಗಮನ ಸೆಳೆಯುತ್ತವೆ. ಏಕೆಂದರೆ ಇವು ಇಂಗ್ಲೆಂಡ್‌ನ ವಿಲ್ಟ್‍ಶೈರ್, ಟಿಬೆಟ್, ಫ್ರಾನ್ಸ್‍ನ ಬ್ರಿಟಾನಿಯದ ಇತರ ರಾಷ್ಟ್ರಗಳಲ್ಲಿ ಕಂಡು ಬರುವಂತಹ ಸಮಾಧಿಗಳಂತೆ ಇವು ಇರುವುದು ವಿಶೇಷವಾಗಿದೆ.
ಇನ್ನು ಸುಮಾರು ಮುನ್ನೂರು ವರ್ಷಗಳ ಹಿಂದಿನದು ಎಂದು ಹೇಳಲಾಗುತ್ತಿರುವ ಈ ಶಿಲಾಯುಗದ ಸಮಾಧಿಗಳನ್ನು ನೋಡಬೇಕೆಂದರ ಕೊತ್ತವಳ್ಳಿ ಗ್ರಾಮದ ಅಗ್ನೇಯ ದಿಕ್ಕಿಗೆ 3 ಕಿ.ಮೀ ದೂರ ಸಾಗಬೇಕಾಗುತ್ತದೆ. ಇವು ಮೇಲ್ನೋಟಕ್ಕೆ ಭಾರೀ ಗಾತ್ರದ ಬಂಡೆಕಲ್ಲುಗಳಂತೆ ಕಾಣುತ್ತವೆ. ಆದರೆ ಇವು ಬರೀ ಕಲ್ಲುಗಳಲ್ಲ ಬೃಹತ್ ಶಿಲಾಯುಗ ಸಂಸ್ಕೃತಿಯ ಸಮಾಧಿಯ ಮಾದರಿಯಾದ 'ಸಾಲುನಿಲಸಕಲ್ಲು' (ಅಲೈನ್‍ಮೆಂಟ್ ಮೆನ್‍ಹಿರ್ಸ್) ಸಮಾಧಿಗಳಾಗಿವೆ. ಇವು ಜಮೀನಿನ ನಡುವೆ ಇದ್ದರೂ ಇವು ಸಮಾಧಿಗಳು ಎನ್ನುವುದು ಗೊತ್ತೇ ಆಗಿರಲಿಲ್ಲ.

ಜನ ಕೂಡ ಈ ಕಲ್ಲುಗಳ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ 2016ರಲ್ಲಿ ಮೈಸೂರಿನ ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಜಿ.ರಾಮದಾಸರೆಡ್ಡಿ, ಮಂಗಳೂರು ವಿಶ್ವವಿದ್ಯಾನಿಲಯದ ಚಿಕ್ಕಅಳುವಾರದ ಸ್ನಾತಕೋತ್ತರ ಕೇಂದ್ರದ ಇತಿಹಾಸ ವಿಭಾಗದ ಉಪನ್ಯಾಸಕರು ಹಾಗೂ ಸಂಶೋಧನಾ ವಿದ್ಯಾರ್ಥಿಯಾದ ಹೆಚ್.ಆರ್.ಅರುಣ್‍ಕುಮಾರ್ ಅವರು ಸಂಶೋಧನೆ ನಡೆಸಿದ ಬಳಿಕ ಇದು ಮಾಮೂಲಿ ಬಂಡೆ ಕಲ್ಲುಗಳಲ್ಲ ಶಿಲಾ ಸಮಾಧಿಗಳು ಎಂಬುದು ಗೊತ್ತಾಗಿದ್ದು, ಇದು ಮೈಸೂರಿನಲ್ಲಿ ನಡೆದ ಮೊದಲ ಮೊದಲ ಶೋಧನೆಯಾಗಿದೆ. ಜೊತೆಗೆ ಕರ್ನಾಟಕದ ಕೆಲವೇ ಸ್ಥಳಗಳಲ್ಲಿ ದೊರಕಿರುವ ಸಾಲುನಿಲಸಕಲ್ಲು ಸಮಾಧಿಗಳು ಬಿಟ್ಟರೆ ಇದು ಪ್ರಮುಖ ಸಮಾಧಿ ನೆಲೆಯಾಗಿದೆಯಂತೆ.
ಕಲ್ಲುಗಳನ್ನು ಪೂಜಿಸುತ್ತಿದ್ದ ಗ್ರಾಮಸ್ಥರು
ಕೊತ್ತವಳ್ಳಿ ಗ್ರಾಮದ ನಿವಾಸಿ ಹೊಲದಪ್ಪ ಅವರ ಒಡ್ಗಲ್ ಹೊಲ ಎಂದು ಕರೆಯುವ ಜಮೀನಿನಲ್ಲಿ, 45 ಅಡಿ ಉದ್ದದ ಜಾಗದಲ್ಲಿ ಬೃಹದಾಕಾರದ ವಿವಿಧ ಅಳತೆಯ ಆರು ಶಿಲಾಸಮಾಧಿಗಳಿದ್ದು, ಸಂಶೋಧನೆಗೆ ಮುನ್ನ ಇದನ್ನು ಗ್ರಾಮಸ್ಥರು ಒಡ್ಗಲ್ಲು, ಪಾಂಡವರ ಕಲ್ಲುಗಳೆಂಬ ಹೆಸರನ್ನಿಟ್ಟು ಸ್ಥಳೀಯರು ಪೂಜಿಸುತ್ತಾ ಬಂದಿದ್ದರು. ಈ ಕಲ್ಲುಗಳ ಪೈಕಿ ಒಂದು ಭೂಮಟ್ಟದಿಂದ 14 ಅಡಿ ಎತ್ತರ, 7 ಅಡಿ ಅಗಲವಿದ್ದರೆ, ಎರಡು 6 ಅಡಿ ಎತ್ತರ 4 ಅಡಿ ಅಗಲ, ಇನ್ನೆರಡು 4 ಅಡಿ ಎತ್ತರ, 4 ಅಡಿ ಅಗಲ ಇವೆ.
ಈ ಕಲ್ಲುಗಳ ಮೇಲೆ ಯಾವುದೇ ಗೀರುಗಳಿಲ್ಲ. ಈ ಎಲ್ಲ ನಿಲಸಕಲ್ಲುಗಳು ಪೂರ್ವ ಪಶ್ಚಿಮವಾಗಿ ಮುಖ ಮಾಡಿದ್ದು ಸ್ಥಳೀಯವಾಗಿ ಸಿಗುವ ಕುರುಚಲು ಗುಡ್ಡಗಳಲ್ಲಿ ದೊರೆಯುವ ಬಿಳಿ ಗ್ರಾನೈಟ್ ಕಲ್ಲನ್ನು ಕತ್ತರಿಸಿಕೊಂಡು ಹಲವಾರು ಟನ್ನು ತೂಕದ ಕಲ್ಲುಗಳನ್ನು ನಯ ಮಾಡದೇ ಹಾಗೆ ನಿಲ್ಲಿಸಲಾಗಿದೆ. ಈ ಕಲ್ಲುಗಳು ತಳಭಾಗದಲ್ಲಿ ಅಗಲವಾಗಿ ಮೇಲೆ ಹೋಗುತ್ತಾ ಚಿಕ್ಕದಾಗುತ್ತಾ ಸಾಗಿವೆ.

ಅಪೂರ್ವ ಶಿಲೆಗಳ ರಕ್ಷಣೆ ಕಾರ್ಯ ನಡೆಯಲಿ
ಈ ನೆಲೆಯ ಸಾಲುನಿಲಸಕಲ್ಲು ಸಮಾಧಿಗಳ ತರಹ ಕೇರಳದ ಕೋಮಲಪರಸ್ಥಲ ಜಿಲ್ಲೆ, ಆಂಧ್ರಪ್ರದೇಶದ ಜಿಲ್ಲೆಗಳಾದ ನಾಲ್ಗೋಂಡ, ಮೆಹಬೂಬ್‍ನಗರ, ಕರ್ನಾಟಕದ ಕಲಬುರ್ಗಿ, ರಾಯಚೂರು, ಚಿತ್ರದುರ್ಗ, ಯಾದಗಿರಿ ಜಿಲ್ಲೆಗಳಲ್ಲಿ ಜೊತೆಗೆ ಹೊರ ರಾಜ್ಯ ಮತ್ತು ಇಂಗ್ಲೆಂಡ್‌ನ ವಿಲ್ಟ್‍ಶೈರ್, ಟಿಬೆಟ್, ಫ್ರಾನ್ಸ್‍ನ ಬ್ರಿಟಾನಿಯದಲ್ಲಿರುವ ಶಿಲಾಯುಗದ ಸಮಾಧಿಗಳನ್ನು ಹೋಲುತ್ತವೆ. ಇದೆಲ್ಲದರ ನಡುವೆ ವಿಶ್ವದಲ್ಲಿಯೇ ಅತಿ ಹೆಚ್ಚು ಅಂದರೆ 3000 ಸಾಲುನಿಲಸಕಲ್ಲುಗಳು ಫ್ರಾನ್ಸ್‍ನ ಬ್ರಿಟಾನಿಯದಲ್ಲಿ ಶೋಧವಾಗಿವೆ.
ಬೆಟ್ಟದಪುರ ಹೋಬಳಿಯ ನಾಲ್ಕು ಕಿ.ಮೀ ದೂರದ ಚಿಕ್ಕ ಮಳಲಿ ಗ್ರಾಮದಲ್ಲಿ ನಾಲ್ಕು, ಬೆಟ್ಟದತುಂಗನ ಕೊಪ್ಪಲುನಲ್ಲಿ ಎರಡು ನಿಲಸಗಲ್ಲುಗಳು ಹಾಗೂ ಕೆ.ಆರ್.ನಗರ ತಾಲ್ಲೂಕಿನಲ್ಲಿ 12 ವಿಶೇಷವಾದ ನಿಲಸಗಲ್ಲುಗಳಿ ಇವೆ.
ಈ ಸಾಲುನಿಲಸಕಲ್ಲುಗಳು ಆದಿ ಕಬ್ಬಿಣಯುಗದ ಬೃಹತ್ ಶಿಲಾ ಸಂಸ್ಕೃತಿ ಸಮುದಾಯದ ಸಮಾಧಿಯ ಗುರುತು ಎನ್ನುವುದು ಕೇರಳದಲ್ಲಿ ನಡೆಸಲಾದ ಉತ್ಖನನಗಳಿಂದ ಖಚಿತಪಟ್ಟಿದೆ. ಕಾಲಮಾನ ಕ್ರಿ.ಪೂ. 800-700 ಶತಮಾನದ್ದಾಗಿರಬಹುದು ಎಂದು ಹೇಳಲಾಗಿದೆ. ಇಂತಹ ಅಪೂರ್ವ ಶಿಲೆಗಳು ಎಲ್ಲೆಡೆಯೂ ಇರಬಹುದು. ಅವುಗಳ ಬಗ್ಗೆ ನಿರ್ಲಕ್ಷ್ಯ ವಹಿಸದೆ ಸಂಬಂಧಿಸಿದ ಸಂಶೋಧಕರಿಗೆ ಮಾಹಿತಿ ನೀಡಿದರೆ ಅವುಗಳ ಬಗ್ಗೆ ಮಹತ್ವ ತಿಳಿಯಲು ಸಾಧ್ಯವಾಗಲಿದೆ.












Click it and Unblock the Notifications